ಭಾರತ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯು ಮುನ್ನುಗ್ಗುತ್ತಿದ್ದಾಳೆ. ಕೆಲವು ಮಹಿಳೆಯರು ರಾಜಕೀಯ, ಆರ್ಥಿಕ, ಕ್ರೀಡೆ, ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಆದರೆ ಆ ಸಂಖ್ಯೆಯು ಹೆಚ್ಚೇನು ಇಲ್ಲ. ದೇಶದ ಕೆಲವು ಕಡೆಗಳಲ್ಲಿ ಇವತ್ತಿಗೂ ಮಹಿಳೆಯು ಅಡುಗೆ ಮನೆಗೆ ಸೀಮಿತವಾಗಿದ್ದಾಳೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷರಷ್ಟೇ ಸರಿಸಮಾನರಾಗಿ ನಿಲ್ಲಲು ಹೋರಾಟ ನಡೆಸುತ್ತಿದ್ದಾಳೆ. ಹೀಗಾಗಿ ಸರ್ಕಾರವು ಮಹಿಳೆ ಸಬಲೀಕರಣದ ಅಡಿಯಲ್ಲಿ ಮಹಿಳೆಯರಿಗಾಗಿಯೇ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಸಮಾಜದಲ್ಲಿ ಮಹಿಳೆಗೂ ಗೌರವ ಸಿಗಬೇಕು ಎನ್ನುವ ಉದ್ದೇಶಕ್ಕಾಗಿ ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 13 ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ದೇಶದ ಮಹಿಳೆಯರಿಗೆ ಮಾದರಿಯಾಗಿ ಸರೋಜಿನಿ ನಾಯ್ಡು ಅವರು ನಿಲ್ಲುತ್ತಾರೆ. ಫೆಬ್ರವರಿ 13 ರಂದು ಭಾರತದ ಮೊದಲ ಮಹಿಳಾ ರಾಜ್ಯಪಾಲೆ ಸರೋಜಿನಿ ನಾಯ್ಡು ಅವರ ಜನ್ಮದಿನವಾಗಿದೆ. ಸ್ವಾತಂತ್ರ್ಯ ಹೋರಾಟ ಹಾಗೂ ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಸರ್ಕಾರವು ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಣೆ ಮಾಡಿತು. ಸರೋಜಿನಿ ನಾಯ್ಡುರವರು ಭಾರತದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಗೌರವಿಸುವ ಸಲುವಾಗಿ, ಅವರ ಜನ್ಮ ದಿನವನ್ನು ರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ನೀಡುವ ಒಂದು ಬೆಚ್ಚನೆಯ ಆಲಿಂಗನದಲ್ಲಿದೆ ಮ್ಯಾಜಿಕ್
ರಾಷ್ಟ್ರೀಯ ಮಹಿಳಾ ದಿನವು ಪ್ರತಿ ಕ್ಷೇತ್ರದಲ್ಲಿ ಮಹಿಳೆಯ ಯಶಸ್ಸನ್ನು ಸಾಧಿಸಲು ಬೆಂಬಲ ನೀಡುವುದಾಗಿದೆ. ಈ ದಿನದಂದು ಪುರುಷರಷ್ಟೇ ಸ್ತ್ರೀಯರು ಸಮಾನರು ಎನ್ನುವ ನೆಲೆಯಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸರೋಜಿನಿ ನಾಯ್ಡುರವರ ಜೀವನದ ಬಗ್ಗೆ ತಿಳಿಸಲು ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಈಗಾಗಲೇ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತವೆ. ಮಹಿಳಾ ಚಾರಿಟಿಗಾಗಿ ನಿಧಿಯನ್ನು ಸಂಗ್ರಹಿಸುವ ಈ ದಿನ ಹಮ್ಮಿಕೊಳ್ಳಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Mon, 12 February 24