Navaratri 2024: ನವರಾತ್ರಿ ಮೂರನೇ ದಿನ ರವಾ ಕೇಸರಿ ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ, ಇಲ್ಲಿದೆ ರೆಸಿಪಿ
ನವರಾತ್ರಿ ಹಬ್ಬವು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ನಿನ್ನೆಯಿಂದ ಹಬ್ಬದ ಸಂಭ್ರಮವು ಆರಂಭವಾಗಿದೆ. ಈ ದಿನಗಳಲ್ಲಿ ಪ್ರತಿಯೊಬ್ಬರು ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪವನ್ನು ಪೂಜಿಸುತ್ತಾರೆ. ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ಈ ವಿಶೇಷ ದಿನದಂದು ದೇವಿಗೆ ರವಾ ಕೇಸರಿಯನ್ನು ನೈವೇದ್ಯವಾಗಿ ಇಡಬಹುದು. ಹಾಗಾದ್ರೆ ರುಚಿಕರವಾದ ರವಾ ಕೇಸರಿಯನ್ನು ಐದೇ ಐದು ನಿಮಿಷದಲ್ಲಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಬ್ಬ ಬಂತೆಂದರೆ ಸಾಕು, ಸಡಗರ ಸಂಭ್ರಮವು ಜೋರಾಗಿಯೇ ಇರುತ್ತದೆ. ಆದರೆ ನವರಾತ್ರಿಯ ಹಬ್ಬವು ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಈ ಬಾರಿ ಅಕ್ಟೋಬರ್ 3 ರಿಂದ ನವರಾತ್ರಿ ಸಡಗರವು ಆರಂಭವಾಗಿದ್ದು, ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ದುರ್ಗೆಗೆ ವಿವಿಧ ಬಗೆಯ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಮೂರನೇ ದಿನ ದೇವಿಗೆ ರವಾ ಕೇಸರಿಯನ್ನು ನೈವೇದ್ಯವಾಗಿ ಇಡಬಹುದು. ಈ ಸಿಹಿ ಪದಾರ್ಥಗಳಲ್ಲಿ ಕೇಸರಿಬಾತ್ ಮಾಡುವುದು ಸರಳ, ಆದರೆ ಮಾಡುವ ವಿಧಾನ ತಪ್ಪಿದರೆ ಅದರ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ.
ರವಾ ಕೇಸರಿಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು
* ಸಣ್ಣರವೆ
* ತುಪ್ಪ
* ಸನ್‌ಫ್ಲವರ್ ಆಯಿಲ್
* ಎರಡು ಕಪ್ ಸಕ್ಕರೆ
* ಗೋಡಂಬಿ
* ಸ್ವಲ್ಪ ಒಣದ್ರಾಕ್ಷಿ
* ಸ್ವಲ್ಪ ಕೇಸರಿ ಬಣ್ಣ
* ಏಲಕ್ಕಿ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
ರವಾ ಕೇಸರಿ ಬಾತ್ ತಯಾರಿಸುವ ವಿಧಾನ
* ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಿ.
* ಆ ಬಳಿಕ ಮತ್ತೊಂದು ಬಾಣಲೆಗೆ ತುಪ್ಪ ಹಾಗೂ ಎಣ್ಣೆ ಹಾಕಿ ಕಾಯುತ್ತಿದ್ದಂತೆ ರವೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ಆ ಬಳಿಕ ಅಗತ್ಯವಿರುವಷ್ಟು ನೀರು ಸೇರಿಸಿ ಗಂಟಾಗದಂತೆ ಕೈಯಾಡಿಸಿಕೊಳ್ಳಿ. ಇದಕ್ಕೆ ಕೇಸರಿ ಬಣ್ಣ, ಏಲಕ್ಕಿ ಪುಡಿ, ಸಕ್ಕರೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಐದು ನಿಮಿಷಗಳ ಕಾಲ ಬೇಯಲು ಬಿಡಿ.
* ಕೊನೆಗೆ ಫ್ರೈ ಮಾಡಿಟ್ಟ ಗೋಡಂಬಿ ದ್ರಾಕ್ಷಿ ಹಾಕಿದರೆ ರುಚಿಕರವಾದ ರವಾ ಕೇಸರಿ ಸವಿಯಲು ಸಿದ್ಧ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ