
2025 ನೇ ವರ್ಷ ಮುಗಿಯುತ್ತಾ ಬಂತು ಇನ್ನೇನೂ ಹೊಸ ಭರವಸೆ, ಉತ್ಸಾಹದೊಂದಿಗೆ 2026 ಕ್ಕೆ ಕಾಲಿಡುತ್ತಿದ್ದೇವೆ. ಹೆಚ್ಚಿನವರು ಹೊಸ ವರ್ಷವನ್ನು (New Year) ಪಾರ್ಟಿ, ತಮ್ಮ ನೆಚ್ಚಿನ ಸ್ಥಳಕ್ಕೆ ಟ್ರಿಪ್ ಹೋಗುವ ಮೂಲಕ ಅಲ್ಲಿ ಮೋಜಿ-ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಆದ್ರೆ ಕೆಲವರಿಗೆ ಈ ಗದ್ದಲಗಳು ಇಷ್ಟವಾಗುವುದಿಲ್ಲ, ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುವಂತಹ ಕಾರ್ಯಗಳನ್ನು ಮಾಡಲು ಮಾಡಲು ಬಯಸುತ್ತಾರೆ. ನೀವು ಕೂಡ ಈ ಬಾರಿ ತಡರಾತ್ರಿಯ ಮೋಜು-ಮಸ್ತಿನಿಂದ ಕೊಂಚ ದೂರವಿದ್ದು, ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಲು ಬಯಸುತ್ತೀರಾ? ಹಾಗಿದ್ರೆ ನೀವು ಈ ರೀತಿ ಸರಳವಾಗಿ ನ್ಯೂ ಇಯರ್ ಆಚರಿಸಿ.
ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಿರಿ: ಗದ್ದಲಗಳಿಂದ ದೂರವಿದ್ದು, ಶಾಂತ ಮನಸ್ಸಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಸೆಯಿದ್ದರೆ ನೀವು ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಬಹುದು. ಹೊಸ ವರ್ಷದ ದಿನದಂದು ಮುಂಜಾನೆ ಬೇಗ ಎದ್ದು, ಒಂದೊಳ್ಳೆ ಸ್ಥಳಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಬಹುದು, ಉದ್ಯಾನವನ, ಸರೋವರ ಸೇರಿದಂತೆ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಿಯಿ. ಇದು ನಿಮ್ಮ ಮನಸ್ಸಿನ ಒತ್ತಡವನ್ನೆಲ್ಲಾ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.
ಡಿಜಿಟಲ್ ಡಿಟಾಕ್ಸ್: ನಾವು ಫೋನನ್ನು ಬಿಟ್ಟು ಇರುವುದೇ ಇಲ್ಲ. ಹೀಗಿರುವಾಗ ಹೊಸ ವರ್ಷವನ್ನು ಡಿಜಿಟಲ್ ಡಿಟಾಕ್ಸ್ ದಿನವನ್ನಾಗಿ ಮಾಡಿ. ಫೋನ್, ಲ್ಯಾಪ್‌ಟಾಪ್ ಪರದೆಯಿಂದ ಸ್ವಲ್ಪ ದೂರವಿದ್ದು, ನಿಮ್ಮ ನೆಚ್ಚಿನ ಪುಸ್ತಕವನ್ನು ಓದಿ ಅಥವಾ ಮನಸ್ಸಿಗೆ ಶಾಂತಿ ನೀಡುವ ಸ್ಥಳಕ್ಕೆ ಭೇಟಿ ನೀಡಿ. ಖಂಡಿತವಾಗಿಯೂ ಇದು ಪಾರ್ಟಿಗಳಿಗಿಂತ ಹೆಚ್ಚಿನ ತೃಪ್ತಿಯನ್ನು ಮನಸ್ಸಿಗೆ ನೀಡುತ್ತದೆ.
ಗುರಿಗಳನ್ನು ಹೊಂದಿಸಿ: ಹೊಸ ವರ್ಷದ ಮೊದಲ ದಿನವು ನಿಮ್ಮೊಂದಿಗೆ ನೀವು ಮಾತನಾಡಲು ಒಂದು ದಿನ. ಒಂದು ಡೈರಿಯನ್ನು ಖರೀದಿಸಿ ಮತ್ತು ಕಳೆದ ವರ್ಷ ಹೇಗೆ ಹೋಯಿತು, ಮುಂಬರುವ ವರ್ಷದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ, ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲು ಬಯಸುತ್ತೀರಿ ಎಂಬುದನ್ನು ಬರೆಯಿರಿ. ಹೀಗೆ ನಿಮ್ಮ ಆಲೋಚನೆಗಳನ್ನು ಪುಸ್ತಕದ ಮೇಲೆ ಗೀಚಿದಾಗ ನಿಮ್ಮ ಮನಸ್ಸು ಸ್ಪಷ್ಟ ಮತ್ತು ಶಾಂತವಾಗಿರುತ್ತದೆ.
ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ: ಪಾರ್ಟಿ ಪಬ್ ಅಂತೆಲ್ಲಾ ಹೋಗಲು ಇಷ್ಟವಿಲ್ಲದಿದ್ದರೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಟವಾಡುತ್ತಾ, ಮೂವಿಗಳನ್ನು ನೋಡುತ್ತಾ, ಎಲ್ಲರೂ ಜೊತೆಗೂಡಿ ತಮಾಷೆ ಮಾಡುತ್ತಾ ಸಮಯವನ್ನು ಕಳೆಯಬಹುದು. ಇದು ನಿಮ್ಮ ಒತ್ತಡವನ್ನೆಲ್ಲಾ ದೂರ ಮಾಡಿ, ಮನಸ್ಸಿಗೆ ಖುಷಿ ನೀಡುವಂತೆ ಮಾಡುತ್ತದೆ. ಜೊತೆಗೆ ಹೊಸ ವರ್ಷವನ್ನು ಸಕಾರಾತ್ಮಕತೆಯೊಂದಿಗೆ ಆರಂಭಿಸಲು ಅನುವುಮಾಡಿಕೊಡುತ್ತದೆ.
ಇದನ್ನೂ ಓದಿ: ಕ್ರಿಸ್ಮಸ್, ನ್ಯೂ ಇಯರ್‌ಗೆ ಟ್ರಿಪ್ ಹೋಗೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ
ಸೇವೆ ಮತ್ತು ದಾನ: ಹೊಸ ವರ್ಷವನ್ನು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ, ಈ ದಿನದಂದು ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಪ್ರಾಣಿಗಳ ಆಶ್ರಯ ತಾಣಕ್ಕೆ ಭೇಟಿ ನೀಡಿ, ಅಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ನಿಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಹೀಗೆ ಇತರರ ಮುಖದಲ್ಲಿ ನಗು ತರಿಸುವುದು ಹೊಸ ವರ್ಷದ ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಆರಂಭವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:01 am, Mon, 29 December 25