ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲವೆ? ಬಾಯಾರಿಕೆ ನೀಗಲು ಇಲ್ಲಿದೆ ಸರಳ ಸಲಹೆ
ಅತಿಯಾದ ಬಿಸಿಲಿನ ಸಮಯದಲ್ಲಿ ಗಂಟಲು ಒಣಗುವುದು ಬಾಯಾರಿಕೆ ಯಾಗುವುದು ಸಹಜ. ಆದರೆ ಚಳಿಗಾಲದಲ್ಲಿ ಬಾಯಾರಿಕೆಯಾಗುವುದು ಕಡಿಮೆಯೇ. ಆದರೆ, ಬೇಸಿಗೆಕಾಲದಲ್ಲಿ ಎಷ್ಟೇ ನೀರು ಕುಡಿದರೂ ಸ್ವಲ್ಪ ಸಮಯದ ನಂತರ ಮತ್ತೆ ಬಾಯಾರಿಕೆಯಾಗುತ್ತದೆ. ಹೀಗಾಗಿ ಹೆಚ್ಚಿನವರು ಅತಿಯಾದ ದಾಹವನ್ನು ಕಡಿಮೆಮಾಡಲು ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸಲು ಇಷ್ಟ ಪಡುತ್ತಾರೆ. ಆದರೆ ಅತಿಯಾದ ಬಾಯಾರಿಕೆಯೂ ಕೆಲವು ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ಹೀಗಾಗಿ ಮೊದಲು ವೈದ್ಯರನ್ನು ಭೇಟಿ ಮಾಡಿ, ಆರೋಗ್ಯ ಸಮಸ್ಯೆಯೇ ಇದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಯಾವುದೇ ಸಮಸ್ಯೆಯಿಲ್ಲದೇನೇ ಅತಿಯಾಗಿ ದಾಹವಾಗುತ್ತಿದ್ದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿದರೆ ಬಾಯಾರಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಮನುಷ್ಯನ ದೇಹಕ್ಕೆ ದಿನಕ್ಕೆ ಇಂತಿಷ್ಟು ನೀರು ಬೇಕೇ ಬೇಕು. ಆರೋಗ್ಯವಾಗಿರಲು ದಿನಾಲು ಎರಡರಿಂದ ಮೂರು ಲೀಟರ್ ಗಳಷ್ಟು ನೀರು ಕುಡಿಯಬೇಕು. ಆದರೆ ಕೆಲವರು ಅತಿಯಾದ ಬಾಯಾರಿಕೆಯಿಂದ ಒದ್ದಾಡುತ್ತಾರೆ. ಎಷ್ಟೇ ನೀರು ಕುಡಿದರೂ ಬಾಯಾರಿಕೆ ಮಾತ್ರ ಕಡಿಮೆಯಾಗುವುದೇ ಇಲ್ಲ. ನಿಮಗೂ ಕೂಡ ಎಷ್ಟೇ ನೀರು ಕುಡಿದರೂ ಬಾಯಾರಿಕೆ ನೀಗುತ್ತಿಲ್ಲ ಎಂದಾದರೆ, ಮನೆಯಲ್ಲಿರುವ ಕೆಲವು ವಸ್ತುಗಳಿಂದ ಬಾಯಾರಿಕೆಯನ್ನು ದೂರ ಮಾಡಿಕೊಳ್ಳಬಹುದು.
ಅತಿಯಾದ ಬಾಯಾರಿಕೆ ನೀಗಲು ಇಲ್ಲಿದೆ ಸಲಹೆಗಳು
* ಉಪ್ಪಿನೊಡನೆ ಮಾವಿನಕಾಯಿ ನಂಜಿಕೊಂಡು ತಿಂದರೆ ಬಾಯಾರಿಕೆಯ ದೂರವಾಗುತ್ತದೆ.
* ಒಳ್ಳೆಯ ಕಸಿ ಮಾವಿನ ಹಣ್ಣುಗಳನ್ನು ಊಟ ಆದ ನಂತರ ಸೇವಿಸುವುದರಿಂದ ಬಾಯಾರಿಕೆ ಇಂಗುತ್ತದೆ.
* ಎಳೆನೀರನ್ನು ಕುಡಿಯುವುದರಿಂದ ಬಾಯಾರಿಕೆ ನಿವಾರಣೆ ಆಗುವುದು.
* ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಅಗಿದು, ರಸದೊಂದಿಗೆ ನುಂಗುವುದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ.
* ಮೂಸಂಬಿ ಹಣ್ಣಿನ ರಸವನ್ನು ಸೇವಿಸುವುದರಿಂದ ಬಾಯಾರಿಕೆ ದೂರ ಆಗುವುದು.
* ಕಿತ್ತಳೆಹಣ್ಣಿನ ರಸವನ್ನು ಸೇವಿಸಿದರೆ ಬಾಯಾರಿಕೆ ದೂರ ಆಗುವುದು.
* ಬೆಲ್ಲದ ಪಾನಕವನ್ನು ಸೇವಿಸಿದರೆ ಬಾಯಾರಿಕೆಯ ನಿವಾರಣೆ ಆಗುವುದರೊಂದಿಗೆ ದೇಹವು ತಂಪಾಗುತ್ತದೆ.
* ಅತಿದಾಹದಿಂದ ಬಳಲುವವರು ಒಂದು ಬಟ್ಟಲು ಕಾಯಿಸಿದ ಹಾಲಿಗೆ ಅರಿಶಿನ ಪುಡಿ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿದರೆ ದಾಹ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಆರೋಗ್ಯಕ್ಕೆ ಸಂಜೀವಿನಿ ಈ ಕಹಿಬೇವಿನ ಎಲೆ, ಏನಿದರ ಆರೋಗ್ಯ ಪ್ರಯೋಜನಗಳು?
* ಕಲ್ಲಂಗಡಿ ಹಣ್ಣಿಗೆ ಜೀರಿಗೆಪುಡಿ, ಕಲ್ಲುಸಕ್ಕರೆಯ ಪುಡಿ ಸೇರಿಸಿ ತಿಂದರೆ ಬಾಯಾರಿಕೆ ಕಡಿಮೆಯಾಗುತ್ತದೆ.
* ನೀರು ಮಜ್ಜಿಗೆಗೆ ಕೊತ್ತುಂಬರಿ ಸೊಪ್ಪು ಹಾಗೂ ಉಪ್ಪು ಬೆರೆಸಿ ಕುಡಿದರೆ ಬಾಯಾರಿಕೆ ಕಡಿಮೆಯಾಗುತ್ತದೆ.
* ಕಲ್ಲಂಗಡಿ ಹಣ್ಣಿನ, ಖರ್ಬೂಜದ ಹಣ್ಣಿನ ಪಾನಕ ಬಾಯಾರಿಕೆಯ ನಿವಾರಣೆಯಾಗುತ್ತದೆ.
* ನಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಹಿಂಡಿ, ಏಲಕ್ಕಿ ಪುಡಿ ಹಾಗೂ ಸಕ್ಕರೆ ಸೇರಿಸಿ ಮಾಡಿದ ಪಾನಕವನ್ನು ಸೇವಿಸಿದರೆ ಬಾಯಾರಿಕೆ ಹಾಗೂ ದಾಹ ದೂರವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ