
ಸೈನಿಕರು ದೇಶದ ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡಿದರೆ, ಪೊಲೀಸರು (Police) ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ನಾಗರಿಕ ಸಮಾಜವನ್ನು ರಕ್ಷಣೆ ಮಾಡುವ ಸಲುವಾಗಿ, ಜನರು ನೆಮ್ಮದಿಯಿಂದ ಜೀವನ ನಡೆಸುವ ಸಲುವಾಗಿ ಅವರು ದಿನದ 24 ಗಂಟೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅದೆಷ್ಟೋ ಪೊಲೀಸರು ದೇಶ ರಕ್ಷಣೆಯ ಸಲುವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಹೌದು ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುತ್ತಾ ಪೊಲೀಸರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದುಂಟು. ಇಂತಹ ದಿಟ್ಟ ಹುತಾತ್ಮ ಪೊಲೀಸರ ತ್ಯಾಗ, ಬಲಿದಾನವನ್ನು ಸ್ಮರಿಸಲು, ಅವರಿಗೆ ಗೌರವವನ್ನು ಸಲ್ಲಿಸಲು ಪ್ರತಿವರ್ಷ ಅಕ್ಟೋಬರ್ 21 ರಂದು ನಮ್ಮ ಭಾರತದಲ್ಲಿ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಅಕ್ಟೋಬರ್ 21, 1959 ರಲ್ಲಿ ಟಿಬೆಟ್‌ನಲ್ಲಿ ಚೀನಾದೊಂದಿಗಿನ ಭಾರತದ 2,500 ಮೈಲಿ ಗಡಿಯನ್ನು ಭದ್ರಪಡಿಸುವ ಜವಾಬ್ದಾರಿಯನ್ನು ಭಾರತೀಯ ಪೊಲೀಸರ ಮೂರು ಬೆಟಾಲಿಯನ್‌ಗಳು ವಹಿಸಿಕೊಂಡವು. ಮೊದಲ ಎರಡು ಬೆಟಾಲಿಯನ್‌ಗಳು ತಮ್ಮ ಗಸ್ತು ಪೂರ್ಣಗೊಳಿಸಿ ಹಿಂತಿರುಗಿದವು, ಆದರೆ ಮೂರನೇ ಬೆಟಾಲಿಯನ್ ಹಿಂತಿರುಗಲಿಲ್ಲ. ಈಶಾನ್ಯ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ಈ ತುಕಡಿಯ ಮೇಲೆ ಚೀನಾದ ಸೈನ್ಯವು ಹೊಂಚು ದಾಳಿ ನಡೆಸಿತು. ಈ ದಾಳಿಯಲ್ಲಿ ಬೆಟಾಲಿಯನ್ ನೇತೃತ್ವ ವಹಿಸಿದ್ದ . ಡಿಎಸ್ಪಿ ಶ್ರೀ ಕರಮ್ ಸಿಂಗ್ ಸೇರಿದಂತೆ ಹತ್ತು ಪೊಲೀಸರು ಹುತಾತ್ಮರಾದರು ಮತ್ತು ಏಳು ಮಂದಿ ಗಾಯಗೊಂಡರು. ಮತ್ತು ಈ ಗಾಯಗೊಂಡ 7 ಪೊಲೀಸರನ್ನು ಚೀನಾದ ಸೈನ್ಯವು ಒತ್ತೆಯಾಳಾಗಿ ಇರಿಸಿಕೊಂಡಿತು. ಘಟನೆ ನಡೆದ 23 ದಿನಗಳ ನಂತರ, ನವೆಂಬರ್ 13, 1959 ರಂದು, ಚೀನಾ ಸೇನೆಯು ಪೊಲೀಸರನ್ನು ಭಾರತಕ್ಕೆ ಹಿಂದಿರುಗಿಸಿತು. ಕರಮ್ ಸಿಂಗ್ ಅವರ ಶೌರ್ಯಕ್ಕಾಗಿ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಲಾಯಿತು.
ಹೀಗೆ ಪೊಲೀಸ್ ಸಿಬ್ಬಂದಿಗಳು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ನೆನೆಯಲು ಮತ್ತು ಕೊಡುಗೆಗಳನ್ನು ಗುರುತಿಸಲು ಜನವರಿ 1960 ರಲ್ಲಿ ನಡೆದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಅಕ್ಟೋಬರ್ 21 ರಂದು ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ವಿಶ್ವ ಅಂಕಿಅಂಶ ದಿನವನ್ನು ಆಚರಿಸುವ ಉದ್ದೇಶವೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ