
ಪತ್ರಿಕಾ ಮಾಧ್ಯಮ (Journalism) ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಜನರು ಹಾಗೂ ಸರ್ಕಾರಗಳ ನಡುವೆ ಇರುವ ಮಹತ್ವದ ಕೊಂಡಿ ಎಂದರೆ ಅದು ಪತ್ರಿಕೋದ್ಯಮ. ಇಂದಿನ ಈ ಡಿಜಿಟಲ್ ಜಗತ್ತಿನಲ್ಲಿ ಪತ್ರಿಕೋದ್ಯಮ ಸೇರಿದಂತೆ ಎಲ್ಲವೂ ಡಿಜಿಟಲೀಕರಣವಾಗಿದೆ. ಮೊಬೈಲ್‌ನಲ್ಲಿಯೇ ಎಲ್ಲಾ ಕ್ಷಣ ಕ್ಷಣದ ಸುದ್ದಿಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಹೌದು ಈಗೀಗ ಸುದ್ದಿಗಳನ್ನು ತಿಳಿಯಬೇಕೆಂದರೆ ಪತ್ರಿಕೆ ಬೇಕೆಂದಿಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಕುಳಿತಲ್ಲಿಯೇ ಜಗತ್ತಿನಲ್ಲಿ ನಡೆಯುವ ಕ್ಷಣ ಕ್ಷಣದ ಸುದ್ದಿಯನ್ನು ತಿಳಿಯಬಹುದು. ಆದರೆ ಸ್ವಲ್ಪ ವರ್ಷಗಳ ಹಿಂದೆ ಜನ ಸುದ್ದಿಗಳನ್ನು ತಿಳಿಯಲು ಪತ್ರಿಕೆಯನ್ನೇ ಅವಲಂಬಿಸಿದ್ದರು. ಹೀಗೆ ಪತ್ರಿಕೆಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಜನರಿಗೆ ತಿಳಿಸಲು ಜನವರಿ 29 ರಂದು ಭಾರತೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಜುಲೈ 01 ರಂದು ನಮ್ಮ ಕರ್ನಾಟಕದಲ್ಲಿ ಪತ್ರಿಕಾ ದಿನವನ್ನು (Press Day) ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಪ್ರತಿ ವರ್ಷ ಜುಲೈ 01 ರಂದು ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಕರ್ನಾಟಕದ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರ ಪತ್ರಿಕೆ ಆರಂಭಗೊಂಡ ದಿನದ ಸ್ಮರಣಾರ್ಥವಾಗಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರ ಪತ್ರಿಕೆಯನ್ನು ಜರ್ಮನ್ ಮತಪ್ರಚಾರಕ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು 1843 ರ ಜುಲೈ 1 ರಂದು ಆರಂಭಿಸಿದರು. 1838 ರಲ್ಲಿ ಮಂಗಳೂರಿಗೆ ಬಂದ ಇವರು 1841 ರಲ್ಲಿ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಪ್ರೆಸನ್ನು ಸ್ಥಾಪಿಸಿ, ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿದ ಮೊಗ್ಲಿಂಗ್ 1843 ರಲ್ಲಿ ʼಮಂಗಳೂರು ಸಮಾಚಾರʼ ಹೆಸರಿನ ವಾರ ಪತ್ರಿಕೆಯೊಂದನ್ನು ಆರಂಭಿಸುತ್ತಾರೆ. ಇದು ಅಂದಿನ ಕಾಲದಲ್ಲಿ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿತು. ಮುಂದೆ ಇದು ಕನ್ನಡ ಪತ್ರಿಕಾ ರಂಗದಲ್ಲಿ ಕ್ರಾಂತಿಯಾಯಿತು.
ಇದನ್ನೂ ಓದಿ: ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ
ಮಂಗಳೂರು ಸಮಾಚಾರ ಪತ್ರಿಕೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗ ಇಂದು ಮಹತ್ವದ ಸುಧಾರಣೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪತ್ರಿಕೋದ್ಯಮವು ಎಲ್ಲಾ ಮಜಲುಗಳಲ್ಲೂ ಗಟ್ಟಿಯಾಗಿ ಬೇರೂರಿದ್ದು, ಮುದ್ರಣ, ಎಲೆಕ್ಟ್ರಾನಿಕ್, ಡಿಜಿಟಲ್, ಆನ್‌ಲೈನ್ ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಹೀಗೆ ಪ್ರತಿಕಾ ರಂಗವು ಕಾಲಕ್ಕೆ ತಕ್ಕಂತೆ ಬದಲಾಗಿದ್ದು, ಪತ್ರಿಕೋದ್ಯಮದ ಹಿನ್ನೆಲೆ, ಅದು ಕಾಲಕ್ಕೆ ತಕ್ಕಂತೆ ಬದಲಾದ ವೈಖರಿ ಹಾಗೂ ಸಮಾಜದಲ್ಲಿ ನಡೆಯುವ ತಪ್ಪುಗಳ ವಿರುದ್ಧ ಧ್ವನಿ ಎತ್ತುವ ಬಗ್ಗೆ ಜನರಿಗೆ ತಿಳಿಸಲು ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Tue, 1 July 25