Womens Day Special : ಮೂಕ ಪ್ರಾಣಿಗಳ ಆಶ್ರಯದಾತೆ ಮಂಗಳೂರಿನ ರಜನಿ ಶೆಟ್ಟಿ

ಸ್ವಾರ್ಥ ತುಂಬಿದ ಲೋಕದಲ್ಲಿ ಒಬ್ಬ ವ್ಯಕ್ತಿಯೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯದ ಈ ಕಾಲದಲ್ಲಿ ಇಲ್ಲೊಬ್ಬಳು ಮಹಿಳೆಯೂ ಕಳೆದ ಕೆಲವು ವರ್ಷಗಳಿಂದ ಮೂಕ ಪ್ರಾಣಿಗಳಿಗೆ ತಾಯಿಯಾಗಿದ್ದಾಳೆ. ಕಷ್ಟದಲ್ಲಿ ಸಿಲುಕಿರುವ ಪ್ರಾಣಿ ಪಕ್ಷಿಗಳನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ರಕ್ಷಿಸುತ್ತಿರುವ ಮಹಿಳೆಯ ಹೆಸರು ರಜನಿ ಶೆಟ್ಟಿ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದ ಮಂಗಳೂರು ಮೂಲದ ರಜನಿ ಶೆಟ್ಟಿಯವರು ಉಳಿದವರಿಗೆ ಮಾದರಿಯಾಗಿದ್ದಾರೆ. ಮೂಕ ಜೀವಿಗಳ ಜೀವವನ್ನು ರಕ್ಷಿಸಿ, ಅದರ ಹೊಟ್ಟೆ ತುಂಬಿಸುವ ಮಾತೃ ಹೃದಯಿ ರಜಿನಿ ಶೆಟ್ಟಿಯವರ ಈ ಕೆಲಸಕ್ಕೆ ನೂರಾರು ಮಾನ ಸನ್ಮಾನಗಳು ಸಂದಿವೆ.

Womens Day Special : ಮೂಕ ಪ್ರಾಣಿಗಳ ಆಶ್ರಯದಾತೆ ಮಂಗಳೂರಿನ ರಜನಿ ಶೆಟ್ಟಿ
Edited By:

Updated on: Mar 07, 2024 | 12:52 PM

ಹಸಿದ ಮೂಕ ಪ್ರಾಣಿ ಹಾಗೂ ಪಕ್ಷಿಗಳಿಗೆ ಅನ್ನ ನೀಡುವುದೇ ಇವರ ದಿನದ ಕೆಲಸ. ಹೌದು, ಹಸಿದು ಬಂದವರಿಗನೇ ಊಟ ಹಾಕಲು ಹಿಂದೆ ಮುಂದೆ ನೋಡುವ ಈ ಕಾಲದಲ್ಲಿ ವಿಶಾಲ ಹೃದಯದ ತಾಯಿ ಬೀದಿ ನಾಯಿಗಳಿಗೆ ಊಟ ಉಣಬಡಿಸುತ್ತಾರೆ. ತಾನು ಬಾಡಿಗೆ ಮನೆಯಲ್ಲಿದ್ದರೂ ಪ್ರತಿದಿನ 800 ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡುತ್ತಾರೆ. ಅಪಾಯಕ್ಕೆ ಸಿಲುಕಿರುವ ಬೀದಿ ನಾಯಿಗಳನ್ನು, ಪಕ್ಷಿಗಳನ್ನು ಕಾಪಾಡಿ ಅವುಗಳಿಗೆ ಹೊತ್ತು ಹೊತ್ತಿಗೆ ಊಟ ನೀಡುವ ಕಾಯಕದಲ್ಲಿ ಸರಿಸುಮಾರು 22 ವರ್ಷಗಳಿಂದ ರಜನಿ ಶೆಟ್ಟಿಯವರು ನಿರತಾಗಿಕೊಂಡು ಬಂದಿದ್ದಾರೆ. ಈ ಮಹಾನ್ ತಾಯಿ ರಜನಿ ದಾಮೋಧರ್ ಶೆಟ್ಟಿಯವರು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಂಬೆ ಮೂಲದವರಾಗಿರುವ ಈ ರಜನಿಯವರು ಮಂಗಳೂರಿಗೆ ಮದುವೆಯಾಗಿ ಬಂದ ನಂತರದಲ್ಲಿ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿಕ್ಕಂದಿನಿಂದಲೂ ಪ್ರಾಣಿಗಳ ವಿಶೇಷವಾದ ಕಾಳಜಿಯನ್ನು ಹೊಂದಿದ್ದರು. ಆದರೆ ಮದುವೆಯಾದ ಬಳಿಕ ಮಂಗಳೂರಿಗೆ ಬಂದ ಮೇಲೆ ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾದರು. ಅಂದು ಶುರುವಾದ ಇವರ ಕಾಯಕವು ನಿತ್ಯವು ನಡೆಯುತ್ತಲೇ ಇದೆ. ಆಸುಪಾಸಿನ ಊರಿನಲ್ಲಿ ಪ್ರಾಣಿಗಳು ಬಾವಿಗೆ ಬಿದ್ದರೆ, ತಾನೇ ಬಾವಿಗಿಳಿದು ಅವುಗಳನ್ನು ರಕ್ಷಣೆ ಮಾಡುತ್ತಾರೆ.

ಅನಾರೋಗ್ಯಕ್ಕೊಳಗಾದ, ಗಾಯಗೊಂಡ ಬೀದಿ ನಾಯಿಗಳಿಗೆ ಆರೈಕೆ ಮಾಡುವುದರಲ್ಲಿ ತಮ್ಮ ಖುಷಿ ಕಾಣುವ ಇವರ ಹೃದಯ ಶ್ರೀಮಂತಿಕೆಯೂ ನಿಜಕ್ಕೂ ದೊಡ್ಡದು. ಈಗಾಗಲೇ ಸಾಕಷ್ಟು ಶ್ವಾನಗಳು, ಬೆಕ್ಕುಗಳು ಹಾಗೂ ಪಕ್ಷಿಗಳು ರಜನಿಯವರಿಂದ ರಕ್ಷಣೆಗೊಳಗಾಗಿದೆ. 136 ಕ್ಕೂ ಹೆಚ್ಚು ಬಾವಿಗೆ ಬಿದ್ದ ಪ್ರಾಣಿಗಳನ್ನು ಕೇವಲ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಈಗ 800 ಬೀದಿನಾಯಿಗಳ ತಾಯಿಯಾಗಿ ನಿಂತಿದ್ದು, ಇವರ ಮನೆಯಲ್ಲಿ 40ಕ್ಕೂ ಶ್ವಾನಗಳು, ಬೆಕ್ಕುಗಳು, ಹದ್ದುಗಳು ಸೇರಿದ್ದಂತೆ 90 ಕ್ಕೂ ಹೆಚ್ಚು ಪ್ರಾಣಿಪಕ್ಷಿಗಳು ಮನೆಯ ಸದಸ್ಯರಂತೆ ಆಗಿ ಬಿಟ್ಟಿವೆ. ಇವುಗಳೆಲ್ಲವನ್ನು ಯಾರೋ ಬೀದಿಯಲ್ಲಿ ಬಿಟ್ಟು ಹೋಗಿರುವುದೂ ಹಾಗೂ ರಸ್ತೆಯಲ್ಲಿ ಗಾಯವಾಗಿ ಬಿದ್ದಿರುವ ಪ್ರಾಣಿಗಳಾಗಿದ್ದು, ಇವುಗಳನ್ನು ಮನೆಗೆ ತಂದು ಸಾಕುತ್ತಿದ್ದಾರೆ. ಇವರ ಮೂವರು ಮಕ್ಕಳಿಗೂ ಕೂಡ ಪ್ರಾಣಿಗಳೆಂದರೆ ಪಂಚಪ್ರಾಣ. ಪತಿಯ ಜೊತೆಗೆ ಮೂವರು ಮಕ್ಕಳು ಇವರ ಪ್ರಾಣಿ ಪ್ರೀತಿಗೆ ಬೆಂಬಲವಾಗಿ ನಿಂತಿದ್ದಾರೆ.

ಇದನ್ನೂ ಓದಿ: ರುದ್ರಭೂಮಿಯಲ್ಲಿ ಭದ್ರ ಬದುಕು ಕಟ್ಟಿಕೊಂಡ ವನಜಾ ಪೂಜಾರ್ತಿ, ಇವರ ಬದುಕಿನ ಯಶೋಗಾಥೆಯೇ ರೋಚಕ

ಮನೆಯಲ್ಲಿ ಮಾತ್ರವಲ್ಲದೆ ಪ್ರತಿದಿನ ಸುಮಾರು 600ರಷ್ಟು ಬೀದಿನಾಯಿಗಳಿಗೆ ರಜನಿ ಆಹಾರವನ್ನು ನೀಡುತ್ತಾ ಹಸಿವನ್ನು ನೀಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿದಿನ 10 ಕೆ.ಜಿ ಅನ್ನ, ಮಾಂಸ ದಂಗಡಿಗಳಿಂದ ಅಳಿದುಳಿದ ಮಾಂಸದ ತುಂಡು, ಅರಶಿನ ಹುಡಿ, ಉಪ್ಪನ್ನು ಸೇರಿಸಿ ದೊಡ್ಡ ಪಾತ್ರೆಯಲ್ಲಿ ಬೇಯಿಸಿ ಅದನ್ನು ತನ್ನ ಮನೆಯ ಹಾಗೂ ಬೀದಿ ಬದಿಯ ಪ್ರಾಣಿಗಳಿಗೆ ಆಹಾರವಾಗಿ ನೀಡುತ್ತಾರೆ.

ನಗರದ ಸ್ಟೇಟ್ ಬ್ಯಾಂಕ್, ಬಂದರು, ಡಿಸಿ ಕಛೇರಿ, ಬಿಜೈ, ಲಾಲ್ ಬಾಗ್, ಲೇಡಿ ಹಿಲ್, ಮಣ್ಣಗುಡ್ಡೆ, ಚಿಲಿಂಬಿ ಹೀಗೆ ಹಲವು ಭಾಗಗಳಲ್ಲಿರುವ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಅದಲ್ಲದೇ, ಮನೆಯಲ್ಲಿರುವ ಶ್ವಾನಗಳಿಗೆ ಸೇರಿದಂತೆ ಬೆಕ್ಕು, ರಣಹದ್ದುಗಳಿಗೆ ಆರೈಕೆಯನ್ನು ಇವರೇ ಮಾಡುತ್ತಿದ್ದಾರೆ. ತಾನು ಸಾಕಿದ ಎಲ್ಲಾ ಶ್ವಾನಗಳಿಗೆ ಈಗಾಗಲೇ ಸಂತಾನ ಹರಣ ಚಿಕಿತ್ಸೆಯನ್ನು ಮಾಡಿಸಿದ್ದಾರೆ.

ಮಂಗಳೂರಿನಲ್ಲಿ ಬೀದಿ ಪ್ರಾಣಿಗಳು ಮತ್ತು ಪಕ್ಷಿಗಳಿಗಾಗಿ ಪ್ರತ್ಯೇಕವಾಗಿ ಪಶು ವೈದ್ಯಕೀಯ ವನ್ನು ಸ್ಥಾಪಿಸುವುದು ಇವರ ಕನಸಾಗಿದೆ. ದೇಶ ವಿದೇಶಗಳಿಂದ ಪ್ರಾಣಿಗಳನ್ನು ಆರೈಕೆ ಮಾಡುವ ಇವರ ನಿಸ್ವಾರ್ಥ ಸೇವಗೆ ಈಗಾಗಲೇ ಸಾಕಷ್ಟು ಮಂದಿ ಬೆಂಬಲವನ್ನು ನೀಡಿದ್ದಾರೆ. ಅದಲ್ಲದೇ ಈ ಕಾರ್ಯವನ್ನು ರಾಜ್ಯದಾದಂತ್ಯ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ. ದಾರಿಯಲ್ಲಿ ಅನಾಥವಾಗಿರುವ ಮೂಕ ಪ್ರಾಣಿಯನ್ನು ಮಗುವಿನಂತೆ ಆರೈಕೆ ಮಾಡುವ ರಜನಿ ಶೆಟ್ಟಿಯವರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:17 pm, Tue, 5 March 24