ಕ್ಯಾಪ್ಸಿಕಂನ್ನು ಮಂಚೂರಿಯಿಂದ ಹಿಡಿದು ಪಿಜ್ಜಾ, ನೂಡಲ್ಸ್ ಮತ್ತು ಪಾಸ್ಟಾದವರೆಗೆ ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ನಮ್ಮ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಬೀಟಾ-ಕ್ಯಾರೋಟಿನ್ ಸೇರಿದಂತೆ ಹಲವಾರು ಪೋಷಕಾಂಶಗಳಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ, ಕಬ್ಬಿಣದ ಕೊರತೆಯನ್ನು ನೀಗಿಸಲು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇರಿದಂತೆ ಇದು ಹಲವು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಕೆಂಪು, ಹಳದಿ, ಹಸಿರು ಹೀಗೆ ನಾನಾ ಬಣ್ಣದ ಕ್ಯಾಪ್ಸಿಕಂ ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇವುಗಳಲ್ಲಿ ಯಾವ ಬಣ್ಣದ ಕ್ಯಾಪ್ಸಿಕಂ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ? ಈ ಕುರಿತ ಮಾಹಿತಿ ಇಲ್ಲಿದೆ.
ಕೆಂಪು ಕ್ಯಾಪ್ಸಿಕಂ: ಇದು ಇತರೇ ಎಲ್ಲಾ ಕ್ಯಾಪ್ಸಿಕಂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ, ಕಣ್ಣುಗಳಿಗೆ ಹಾಗೂ ಹೃದಯ ರಕ್ತನಾಳದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಹಸಿರು ಕ್ಯಾಪ್ಸಿಕಂ: ಇದು ವಿಟಮಿನ್ ಸಿ ಮತ್ತು ಕ್ಲೋರೊಫಿಕ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಗೆ ಹಾಗೂ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಹಳದಿ ಕ್ಯಾಪ್ಸಿಕಂ: ಇದು ವಿಟಮಿನ್ ಸಿ, ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಅಲ್ಲದೆ ಇದರಲ್ಲಿ ಕ್ಯಾರೊಟಿನಾಯ್ಡ್ ಅಂಶವಿದ್ದು, ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗೂ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ.
ಕಿತ್ತಳೆ ಬಣ್ಣದ ಕ್ಯಾಪ್ಸಿಕಂ: ಇದು ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು, ಚರ್ಮದ ಆರೋಗ್ಯಕ್ಕೆ ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸಲು ಸಹಕಾರಿಯಾಗಿದೆ.
ನೇರಳೆ ಕ್ಯಾಪ್ಸಿಕಂ: ಇದು ಕೆಂಪು ಮತ್ತು ಹಳದಿ ಕ್ಯಾಪ್ಸಿಕಂಗಳಂತೆಯೇ ವಿಶಿಷ್ಟವಾದ ಉತ್ಕರ್ಷಣ ನಿರೋಧಕವಾಗ ಆಂಥೋಸಯಾನಿನ್ ಅಂಶವನ್ನು ಹೊಂದಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇದನ್ನೂ ಓದಿ: ಮೆಣಸೆಂದು ನಿರ್ಲಕ್ಷ್ಯಿಸಬೇಡಿ; ಕ್ಯಾಪ್ಸಿಕಂನಲ್ಲಿದೆ ಹಲವು ಪೋಷಕಾಂಶ
ಹಸಿರು ಕ್ಯಾಪ್ಸಿಕಂ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಕೆಂಪು ಕ್ಯಾಪ್ಸಿಕಂ ವಿಟಮಿನ್ ಸಿ ಯ ಶಕ್ತಿಕೇಂದ್ರವಾಗಿದ್ದು, ಇದು ಚರ್ಮ ಮತ್ತು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಳದಿ ಕ್ಯಾಪ್ಸಿಕಂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ. ಕಿತ್ತಳೆ ಬಣ್ಣದ ಕ್ಯಾಪ್ಸಿಕಂ ಜೀರ್ಣಕ್ರಿಯೆಗೆ ಸಹಕಾರಿ. ನೇರಳೆ ಬಣ್ಣದ ಕ್ಯಾಪ್ಸಿಕಂ ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಹೀಗೆ ಎಲ್ಲಾ ಬಗೆಯ ಕ್ಯಾಪ್ಸಿಕಂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಹೀಗಿದ್ದರೂ ಕೆಂಪು ಕ್ಯಾಪ್ಸಿಕಂನಲ್ಲಿರುವ ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಂತಹ ಫೈಟೊನ್ಯೂಟ್ರಿಯೆಂಟ್ ಪ್ರಮಾಣವು ಹಸಿರು ಅಥವಾ ಇತರ ಕ್ಯಾಪ್ಸಿಕಂ ಗಳಿಗಿಂತ ಹೆಚ್ಚು. ಕೆಂಪು ಕ್ಯಾಪ್ಸಿಕಂನಲ್ಲಿರುವ ಬೀಟಾ-ಕ್ಯಾರೋಟಿನ್ ಪ್ರಮಾಣವು ಹಸಿರು ಕ್ಯಾಪ್ಸಿಕಂ ಗಿಂತ 11 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ. ಹಾಗೆಯೇ ಕೆಂಪು ಕ್ಯಾಪಿಕಂ ನಲ್ಲಿರುವ ವಿಟಮಿನ್ ಸಿ ಪ್ರಮಾಣವು ಹಸಿರು ಕ್ಯಾಪ್ಸಿಕಂಗಿಂತ ಒಂದುವರೆ ಪಟ್ಟು ಹೆಚ್ಚು. ಆದ್ದರಿಂದ ಕೆಂಪು ಕ್ಯಾಪ್ಸಿಕಂ ಸೇವನೆಯು ಹೆಚ್ಚು ಪ್ರಯೋಜನಕಾರಿ.