ಪ್ಲಾಸ್ಟಿಕ್ ಬ್ಯಾನ್
Image Credit source: Aaj Tak
ಬೆಂಗಳೂರು: ಭಾರತದಾದ್ಯಂತ ಇಂದಿನಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ (Single Use Plastic Ban) ಬಳಕೆಗೆ ನಿಷೇಧ ಹೇರಲಾಗಿದೆ. ಒಂದು ಬಾರಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಸ್ಟ್ರಾ, ಕಪ್, ಚಮಚ, ಪಾರ್ಸಲ್ ಕವರ್ ಮುಂತಾದವುಗಳನ್ನು ಇಂದಿನಿಂದ ನೀವು ಬಳಸುವಂತಿಲ್ಲ. ಹಾಗೇ, ತರಕಾರಿ, ಹಣ್ಣು, ಹಾಲು, ದಿನಸಿ ತರಲು ಪೇಪರ್ ಬ್ಯಾಗ್ ತೆಗೆದುಕೊಂಡು ಹೋಗಲು ಮರೆಯಬೇಡಿ. ಏಕೆಂದರೆ, ಅಂಗಡಿಗಳಲ್ಲಿ ಇನ್ನುಮುಂದೆ ನಿಮಗೆ ಪ್ಲಾಸ್ಟಿಕ್ ಕವರ್ ಸಿಗುವುದಿಲ್ಲ. ಹಾಗಾದರೆ, ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ನೀವು ಯಾವ ವಸ್ತುಗಳನ್ನು ಬಳಸಬಹುದು? ಎಂಬುದಕ್ಕೆ ಉತ್ತರ ಇಲ್ಲಿದೆ.
- ದಿನಸಿ ಅಂಗಡಿಗಳು ಮತ್ತು ಸ್ಥಳೀಯ ಮಾರಾಟಗಾರರು ಬಟ್ಟೆ ಚೀಲಗಳು, ಕಾಗದದ ಚೀಲಗಳು ಅಥವಾ ಸೆಣಬಿನ ಚೀಲಗಳನ್ನು ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇರಿಸಬಹುದು. ಅಥವಾ ನೀವು ಪ್ಲಾಸ್ಟಿಕ್ ಸ್ಟ್ರಾಗಳ ಬದಲು ಪೇಪರ್ ಸ್ಟ್ರಾಗಳನ್ನು ಬಳಸಬಹುದು.
- ಭಾರತೀಯ ಮದುವೆಗಳು ಮತ್ತು ಇತರ ಆಚರಣೆಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ಲಾಸ್ಟಿಕ್ ಕಟ್ಲರಿಯನ್ನು ಇಂದಿನಿಂದ ನಿಷೇಧಿಸಲಾಗುವುದು. ಇದರ ಬದಲಿಗೆ, ಎಲೆಗಳಿಂದ ಮಾಡಿದ ಕಟ್ಲರಿಯಲ್ಲಿ ನೀವು ಆಹಾರವನ್ನು ಸೇವಿಸಬಹುದು. ಏಕ-ಬಳಕೆಯ ಪ್ಲಾಸ್ಟಿಕ್ ಕಟ್ಲರಿ ಬದಲು ಇವು ಅಗ್ಗದ ಮತ್ತು ಪರಿಸರ ಸ್ನೇಹಿ ಪರ್ಯಾಯಗಳಾಗಿವೆ.
- ತೆಳುವಾದ ಮರದ ಹಾಳೆಗಳಿಂದ ಮಾಡಿದ ಕಟ್ಲರಿ ವಸ್ತುಗಳನ್ನು ಸಹ ನೀವು ಬಳಸಬಹುದು. ಇದನ್ನು ಚಹಾ ಮತ್ತು ಕಾಫಿಯಂತಹ ಪಾನೀಯಗಳನ್ನು ಸೇವಿಸಲು ಕೂಡ ಬಳಸಬಹುದು.
- ಕಬ್ಬಿಣ, ಕ್ರೋಮಿಯಂ, ನಿಕಲ್ ಮುಂತಾದ ಲೋಹಗಳಿಂದ ಸ್ಟೀಲ್ ಅನ್ನು ತಯಾರಿಸಲಾಗುತ್ತದೆ. ಇದು ಸಂಪೂರ್ಣವಾಗಿ ಜೈವಿಕ ವಿಘಟನೀಯವಲ್ಲದಿದ್ದರೂ ಸ್ಟೇನ್‌ಲೆಸ್ ಸ್ಟೀಲ್ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬಿಡುವುದಿಲ್ಲ. ಹೀಗಾಗಿ, ಸ್ಟೀಲ್ ಪಾತ್ರೆ, ವಸ್ತುಗಳನ್ನು ಬಳಸಬಹುದು.
- ಬಟ್ಟೆ ಚೀಲಗಳು ಸಸ್ಯಗಳು ಮತ್ತು ಇತರ ನೈಸರ್ಗಿಕ ಮೂಲಗಳಿಂದ ಪಡೆದ ಇತರ ಉತ್ಪನ್ನಗಳು ಜೈವಿಕ ವಿಘಟನೀಯವಾಗಿವೆ. ಭೂಮಿಯಲ್ಲಿ ದೀರ್ಘಕಾಲ ಉಳಿಯುವ ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಗೆ ಬಟ್ಟೆಯ ವಸ್ತುಗಳು ಉತ್ತಮ ಪರ್ಯಾಯವಾಗಿದೆ.
- ಬಿದಿರು ಶೇ. 100ರಷ್ಟು ಜೈವಿಕ ವಿಘಟನೀಯ ವಸ್ತುವಾಗಿದೆ. ರಾಸಾಯನಿಕವಾಗಿ ಸಂಸ್ಕರಿಸದ ಮತ್ತು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸದಿದ್ದರೆ ಈ ಬಿದಿರನ್ನು ಸುಲಭವಾಗಿ ಮರುಸೃಷ್ಟಿಸಬಹುದು. ಬಿದಿರಿನ ಉತ್ಪನ್ನಗಳು ಸಹ ಗಟ್ಟಿಮುಟ್ಟಾಗಿರುತ್ತವೆ. ಇದು ಶಾಶ್ವತ ಮೌಲ್ಯವನ್ನು ಹೊಂದಿವೆ.
- ಸಿಲಿಕೋನ್ ಜೈವಿಕ ವಿಘಟನೀಯವಲ್ಲದಿದ್ದರೂ ಇದು ಒಡೆಯುವ ಸಾಧ್ಯತೆ ಕಡಿಮೆ. ಪ್ಲಾಸ್ಟಿಕ್ ಆಧಾರಿತ ಉತ್ಪನ್ನಗಳಿಗಿಂತ ಸಿಲಿಕೋನ್ ವಸ್ತುಗಳನ್ನು ಸ್ಕ್ರಾಚಿಂಗ್, ಡಿಸ್ಕಲರ್ ಅಥವಾ ಬ್ರೇಕಿಂಗ್ ಇಲ್ಲದೆ ಹೆಚ್ಚು ಬಾರಿ ಬಳಸಬಹುದು.
- ಪ್ಲಾಸ್ಟಿಕ್ ವಸ್ತುಗಳ ಬದಲು ಗಾಜಿನ ವಸ್ತುಗಳನ್ನು ಬಳಸಬಹುದು. ಇದನ್ನು ಮತ್ತೆ ಮತ್ತೆ ಮರುಬಳಕೆ ಮಾಡಬಹುದು. ಗಾಜು ಜೈವಿಕ ವಿಘಟನೀಯವಲ್ಲದಿದ್ದರೂ ಅದು ಸುರಕ್ಷಿತ ಮತ್ತು ಸ್ಥಿರವಾಗಿರುತ್ತದೆ. ಗಾಜು ಒಡೆದುಹೋದರೂ ಅಥವಾ ಅದನ್ನು ಬಿಸಾಡಿದರೂ ಅದರಿಂದ ಪರಿಸರಕ್ಕೆ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವುದಿಲ್ಲ.
- ಮರದ ವಸ್ತುಗಳು ಈಗ ಬಹಳ ಟ್ರೆಂಡ್ ಸೃಷ್ಟಿ ಮಾಡಿವೆ. ನವೀಕರಿಸಬಹುದಾದ, ಮರುಬಳಕೆ ಮಾಡಬಹುದಾದ ಮತ್ತು ಸ್ಥಳೀಯವಾಗಿ ಲಭ್ಯವಿರುವ ಮರದ ವಸ್ತುಗಳನ್ನು ಹೆಚ್ಚೆಚ್ಚು ಬಳಸಿ. ಇದು ಭೂಮಿಯಲ್ಲಿ ಸಂಪೂರ್ಣವಾಗಿ ಕ್ಷೀಣಿಸಲು ಸುಮಾರು 10-15 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೂ, ಇದರಿಂದ ಭೂಮಿಗೆ ಅಪಾಯವಿಲ್ಲ.
- ಮಣ್ಣಿನ ವಸ್ತುಗಳನ್ನು ಪುರಾತನ ಕಾಲದಿಂದಲೂ ನಮ್ಮ ಜನರು ಬಳಸುತ್ತಿದ್ದಾರೆ. ಈಗ ಮತ್ತೆ ಮಣ್ಣಿನ ಮಡಿಕೆ, ಹೂಜಿಗಳು ಫ್ಯಾಷನ್ ಆಗಿವೆ. ಕೈಗೆಟುಕುವ ಬೆಲೆ, ಸುಲಭವಾಗಿ ಲಭ್ಯವಿರುವುದರಿಂದ ಮತ್ತು ವಿವಿಧ ಕಾರಣಗಳಿಗಾಗಿ ದೇಶದಲ್ಲಿ ಸಾಂಪ್ರದಾಯಿಕವಾಗಿ ಇದನ್ನು ಬಳಸಲಾಗುತ್ತದೆ. ಮಣ್ಣಿನ ಮಡಿಕೆಗಳು, ಬಟ್ಟಲುಗಳು, ಹೆಂಚು ಮತ್ತು ಇತರ ಕಟ್ಟಡ ಸಾಮಗ್ರಿಗಳು ಸಾಂಪ್ರದಾಯಿಕ ನಿರ್ಮಾಣ ಸಾಮಗ್ರಿಗಳಿಗೆ ಉತ್ತಮವಾದ ಪರಿಸರ ಸ್ನೇಹಿ ಪರ್ಯಾಯಗಳಾಗಿವೆ.
- ಐಸ್ ಕ್ರೀಮ್‌ಗಳಿಗೆ ಮರದ ತುಂಡುಗಳ ಚಮಚವನ್ನು ಬಳಸಿ. ಕೇಕ್ ಸೇವಿಸಲು ಪೇಪರ್ ಚಮಚಗಳನ್ನು ಬಳಸಿ. ತೊಳೆಯಬಹುದಾದ ಇಯರ್ ಬಡ್ಸ್ ಅಥವಾ ಮರದ ಇಯರ್ ಬಡ್ಸ್ ಬಳಸಿ.
- ಪ್ಲಾಸ್ಟಿಕ್ ಪ್ಲೇಟ್‌ಗಳು, ಗ್ಲಾಸ್‌ಗಳು, ಕತ್ತರಿ, ಚಾಕುಗಳ ಬದಲಿಗೆ ಕಾಗದದಿಂದ ಮಾಡಿದ ಬಟ್ಟಲುಗಳು, ಬಿದಿರಿನಿಂದ ತಯಾರಿಸಿದ ವಸ್ತು, ಮಣ್ಣಿನ ಲೋಟಗಳು, ಸ್ಟೀಲ್ ಕತ್ತರಿ, ಚಾಕು, ಪ್ಲೇಟ್‌ಗಳು, ಲೋಹದ ಬಾಟಲಿಗಳು ಇತ್ಯಾದಿಗಳನ್ನು ಬಳಸಿ.