Danger Mobile: ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟೀರಿ ಜೋಕೆ ಎಂದ ಶವೋಮಿ ಇಂಡಿಯಾ ಸಿಇಒ; ಏನಾಗುತ್ತೆ ಮೊಬೈಲ್ ನೋಡೋದ್ರಿಂದ?
Xiaomi India CEO Speaks: ಮಕ್ಕಳಿದ್ದಾಗ ಮೊಬೈಲ್ ನೋಡಿದರೆ ದೊಡ್ಡವರಾದ ಮೇಲೆ ಮಾನಸಿಕ ಸಮಸ್ಯೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿ ಶವೋಮಿ ಇಂಡಿಯಾ ಸಿಇಒ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಮಾರ್ಟ್ಫೋನ್ ಬಂದ ಮೇಲೆ ಜನಜೀವನಶೈಲಿಯೇ (Lifestyle) ಅಗಾಧವಾಗಿ ಬದಲಾಗಿದೆ. ಜನರ ವರ್ತನೆಯಲ್ಲಿ ಭಾರೀ ಬದಲಾವಣೆ ಕಾಣಬಹುದು. ಜನನಿಬಿಡ ಸಾರ್ವಜನಕ ಸ್ಥಳದಲ್ಲಿ ಜನರು ಕೈಯಲ್ಲಿ ಮೊಬೈಲ್ ಹಿಡಿದು ಸ್ಮಾರ್ಟ್ಫೋನ್ ಪ್ರಪಂಚದಲ್ಲಿ ಮುಳುಗಿಹೋಗುವ ದೃಶ್ಯ ಕಾಣಸಿಗುವುದು ತೀರಾ ಸಾಮಾನ್ಯ ಸಂಗತಿಯಾಗಿ ಹೋಗಿದೆ. ಟಿವಿ ಧಾರವಾಹಿಗೆ ಅಂಟಿಕೊಂಡಂತೆ ಜನರು ಸ್ಮಾರ್ಟ್ಫೋನ್ಗೆ ಅಡಿಕ್ಟ್ ಆಗುತ್ತಿರುವುದು ಬಹಳ ವೇದ್ಯವಾಗಿದೆ. ಮಕ್ಕಳ ವಿಚಾರದಲ್ಲಂತೂ ಇದು ನಿಜವಾಗಿದೆ. ಆಡಲಿಚ್ಛಿಸುವ ಮಕ್ಕಳನ್ನು ಆಡಲು ಬಿಡಲೊಲ್ಲದೇ ಕೈಗೆ ಸ್ಮಾರ್ಟ್ಫೋನ್ ಕೊಟ್ಟು ಕೂರಿಸುವ ಪೋಷಕರೇ ಹೆಚ್ಚು. ಇಂಥ ಪೋಷಕರೇ ದಯವಿಟ್ಟು ಗಮನಿಸಿ, ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಡದಿರಿ. ಇದು ನಾವು ಹೇಳುತ್ತಿರುವುದಲ್ಲ, ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್ಫೋನ್ ಮಾರಾಟ ಮಾಡುವ ಶವೋಮಿ ಇಂಡಿಯಾದ ಸ್ವತಃ ಸಿಇಒ ಅವರೇ ಈ ಎಚ್ಚರ ನೀಡಿದ್ದಾರೆ.
ಶವೋಮಿ ಇಂಡಿಯಾದ ಸಿಇಒ ಮನು ಕುಮಾರ್ ಜೈನ್ ಅವರು ಇತ್ತೀಚಿನ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದು, ಅದರಲ್ಲಿ ಬಹಳ ಹೆಚ್ಚು ಹೊತ್ತು ಮಕ್ಕಳು ಸ್ಮಾರ್ಟ್ಫೋನ್ ನೋಡದಂತೆ ಎಚ್ಚರ ವಹಿಸಿ ಎಂದು ಪೋಷಕರಿಗೆ ತಿಳಿಹೇಳಿದ್ದಾರೆ. ಸೇಪಿಯನ್ ಲ್ಯಾಬ್ಸ್ನಲ್ಲಿ ಕೆಲಸ ಮಾಡುವ ತಮ್ಮೊಬ್ಬ ಸ್ನೇಹಿತರು ಕಳುಹಿಸಿದ ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿ ಮನುಕುಮಾರ್ ಜೈನ್ ಸ್ಮಾರ್ಟ್ಫೋನ್ ಬಳಕೆಯಿಂದ ಮಕ್ಕಳಿಗೆ ಆಗುವ ಅನಾಹುತದ ಬಗ್ಗೆ ತಿಳಿಹೇಳಿದ್ದಾರೆ.
ಇದನ್ನೂ ಓದಿ: Skin Care: ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಚರ್ಮದ ಸಮಸ್ಯೆ; ಪರಿಹಾರ ಏನು?
ಫೋನ್ ಬಳಕೆಯಿಂದ ದೊಡ್ಡವರಾದ ಮೇಲೆ ಮಾನಸಿಕ ಸಮಸ್ಯೆಯಾ?
‘ನಿಮ್ಮ ಮಕ್ಕಳಿಗೆ ಸ್ಮಾರ್ಟ್ಫೋನ್ ನೀಡುವುದನ್ನು ನಿಲ್ಲಿಸಿ. ಪೋಷಕರೇ, ಸಣ್ಣ ವಯಸ್ಸಿನಲ್ಲಿ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಬಳಕೆಯಿಂದ ನಮ್ಮ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಆಗುವ ದುಷ್ಪರಿಣಾಮದ ಬಗ್ಗೆ ಮಾತನಾಡೋಣ’ ಎಂದು ಆರಂಭಿಸಿ ಶವೋಮಿ ಇಂಡಿಯಾ ಸಿಇಒ, ಸೇಪಿಯನ್ ಲ್ಯಾಬ್ಸ್ ಅಧ್ಯಯನದ ಅಂಶಗಳನ್ನು ಉಲ್ಲೇಖಿಸಿದರು. ಸಣ್ಣ ಮಕ್ಕಳಿದ್ದಾಗ ಸ್ಮಾರ್ಟ್ಫೋನ್ ಬಳಕೆ ಮಾಡಿರುವುದಕ್ಕೂ ದೊಡ್ಡವರಾದ ಬಳಿಕ ಮಾನಸಿಕ ಸಮಸ್ಯೆ ಬರುವುದಕ್ಕೂ ನೇರ ಸಂಬಂಧ ಇರುವುದು ಈ ಅಧ್ಯಯನದಿಂದ ಗೊತ್ತಾಗುತ್ತದೆ ಎಂದಿದ್ದಾರೆ.
10 ವರ್ಷ ವಯಸ್ಸಿಗೆ ಮುನ್ನ ಸ್ಮಾರ್ಟ್ಫೋನ್ ಬಳಸಿದ ಶೇ. 60-70ರಷ್ಟು ಮಹಿಳೆಯರು ದೊಡ್ಡವರಾದ ಮೇಲೆ ಮಾನಸಿಕ ಸಮಸ್ಯೆ ಅನುಭವಿಸುತ್ತಿದ್ದಾರೆ. ಶೇ. 45-50ರಷ್ಟು ಪುರುಷರಿಗೂ ಈ ಸಮಸ್ಯೆ ಆಗಿದೆ ಎಂದು ಮನುಕುಮಾರ್ ಜೈನ್ ಹೇಳಿದ್ದಾರೆ.
ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಕೊಡದೇ ಮತ್ತಿನ್ನೇನು ಮಾಡಬೇಕು?
ಸದಾ ಚಟುವಟಿಕೆ ಬಯಸುವ ಮಕ್ಕಳನ್ನು ಹಿಡಿದು ಕೂರಿಸಲು ಪೋಷಕರಿಗೆ ಸ್ಮಾರ್ಟ್ಫೋನ್ ಬಿಟ್ಟರೆ ಬೇರೆ ಅಸ್ತ್ರ ಇಲ್ಲ ಎಂಬಂತಾಗಿದೆ. ಆದರೆ, ಶವೋಮಿ ಇಂಡಿಯಾ ಸಿಇಒ ಈ ನಿಟ್ಟಿನಲ್ಲಿ ಒಳ್ಳೆಯ ಸಲಹೆ ನೀಡಿದ್ದು, ಮಕ್ಕಳು ಏನಾದರೊಂದು ಚಟುವಟಿಯಲ್ಲಿ ನಿರತರಾಗುವಂತೆ ನೋಡಿಕೊಳ್ಳಿ ಎಂದಿದ್ದಾರೆ.
ಇದನ್ನೂ ಓದಿ: ದೀರ್ಘ ಕೋವಿಡ್ ಲಕ್ಷಣ ಎಂದುಕೊಂಡಿದ್ದು ಬುದ್ಧಿಮಾಂದ್ಯತೆ ಆಗಿದ್ದು ಹೇಗೆ? ವೈದ್ಯರ ಅಭಿಪ್ರಾಯವೇನು ? ಇಲ್ಲಿದೆ ಮಾಹಿತಿ
ಹೊರಾಂಗಣ ಚಟುವಟಿಕೆಗಳಲ್ಲಿ ನಿರತರಾಗುವಂತೆ ಮಕ್ಕಳಿಗೆ ಉತ್ತೇಜನ ನೀಡಿ. ಯಾವುದಾದರೂ ಹವ್ಯಾಸದಲ್ಲಿ ತೊಡಗಿಸಿ. ಸಾಮಾಜಿಕವಾಗಿ ಮಕ್ಕಳು ಸಮರ್ಥವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಮನುಕುಮಾರ್ ಜೈನ್ ಸಲಹೆ ನೀಡಿದ್ದಾರೆ.
ಮಕ್ಕಳು ಮೊಬೈಲ್ ನೋಡುವ ಬದಲು ಪಾರ್ಕ್ಗಳಲ್ಲಿ ಆಡುವುದೋ, ಬೀದಿಯಲ್ಲಿ ಇತರ ಮಕ್ಕಳ ಜೊತೆ ಏನಾದರೂ ದೈಹಿಕ ಆಟಗಳಲ್ಲಿ ನಿರತರಾಗಿರುವುದೋ ಮಾಡಲು ಉತ್ತೇಜಿಸಬಹುದು. ಕ್ರಿಕೆಟ್, ಫುಟ್ಬಾಲ್, ಬ್ಯಾಡ್ಮಿಂಟನ್, ಲಗೋರಿ ಅಲ್ಲದೇ ಇನ್ನೂ ಅದೆಷ್ಟೋ ಲೆಕ್ಕವಿಲ್ಲದಷ್ಟು ಆಸಕ್ತಿಕರ ಕ್ರೀಡೆಗಳಿವೆ. ಅದರಲ್ಲಿ ಮಕ್ಕಳು ತೊಡಗಿಸಿಕೊಳ್ಳುವಂತೆ ಮಾಡಬಹುದು. ಇವೆಲ್ಲವೂ ಮಕ್ಕಳ ಶಾಲಾ ಓದಿನ ಸಮಯಕ್ಕೆ ಹೊರತಾದ ಇತರ ಸಮಯದಲ್ಲಿ ತೊಡಗಿಸಿಕೊಳ್ಳಬಹುದಾದ ಚಟುವಟಿಕೆಗಳು.