
ಪ್ರತಿ ಭಾರತೀಯ ಮನೆಗಳಲ್ಲೂ ಬೆಳಗ್ಗಿನ ಉಪಹಾರ(Breakfast) ದಲ್ಲಿ ವಾರದಲ್ಲಿ ಒಂದು ದಿನವಾದರೂ ದೋಸೆಯಂತೂ ಇದ್ದೇ ಇರುತ್ತದೆ. ಜೊತೆಗೆ ಸುಲಭವಾಗಿ ತಯಾರಿಸಲು ಸಾಧ್ಯವಿರುವುದರಿಂದ ಪ್ರತಿಯೊಂದು ಗೃಹಿಣೆಯರೂ ಇದು ಅಚ್ಚುಮೆಚ್ಚು.ದೋಸೆಯನ್ನು ಅಕ್ಕಿ ಹಿಟ್ಟು ಮತ್ತು ಉದ್ದಿನ ಬೇಳೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ನೀವು ಸಾಮಾನ್ಯವಾಗಿ ಜೋಳದ ರೊಟ್ಟಿ ಕೇಳಿರುತ್ತೀರಿ, ಆದರೆ ಜೋಳದಿಂದ ದೋಸೆಯನ್ನು ಕೂಡ ತಯಾರಿಸಬಹುದಾಗಿದೆ. ಜೋಳದ ದೋಸೆಯ ಪಾಕ ವಿಧಾನ ಮತ್ತು ಇದರಿಂದಾಗುವ ಆರೋಗ್ಯ ಪ್ರಯೋಜನಗಳು ಕೂಡ ಇಲ್ಲಿದೆ.
ಆರೋಗ್ಯಕರವಾದ ಉಪಹಾರದೊಂದಿಗೆ ದಿನವನ್ನು ಪ್ರಾರಂಭ ಮಾಡುವುದು ಎಷ್ಟು ಮುಖ್ಯವಾದ್ದು ಎಂಬುದು ಎಲ್ಲರಿಗೂ ತಿಳಿದಿದೆ. ಇದು ನಿಮಗೆ ಶಕ್ತಿಯನ್ನು ತುಂಬುವುದು ಮಾತ್ರವಲ್ಲದೆ ದಿನವಿಡೀ ನಿಮ್ಮನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ. ಕ್ಲಿನಿಕಲ್ ನ್ಯೂಟ್ರಿಷ್ಯನಿಸ್ಟ್ ರೂಪಾಲಿ ದತ್ತಾ ಅವರ ಪ್ರಕಾರ ಜೋಳವು ಪ್ರಪಂಚದ ಐದನೇ ಪ್ರಮುಖ ಧಾನ್ಯವಾಗಿದೆ. ಇದು ಅಂಟು ಮುಕ್ತವಾಗಿದೆ ಮತ್ತು ಸಾಕಷ್ಟು ಪ್ರಮಾಣದ ಫೈಬರ್, ಪ್ರೋಟೀನ್, ಆಂಟಿಆಕ್ಸಿಡೆಂಟ್ ಮತ್ತು ಇನ್ನೂ ಹೆಚ್ಚಿನ ಪೋಷಕಾಂಶಗಳ ಮೂಲವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಜೋಳವು ಫೈಬರ್‌ನ ಮೂಲವಾಗಿದ್ದು, ಅದು ನಿಮಗೆ ಧೀರ್ಘಕಾಲದ ವರೆಗೆ ಹೊಟ್ಟೆ ತುಂಬಿರುವಂತೆ ಮಾಡಲು ಸಹಾಯ ಮಾಡುತ್ತದೆ. ಆಹಾರದ ಫೈಬರ್ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ತೂಕ ನಷ್ಟವನ್ನು ಉತ್ತೇಜಿಸಲು ಇದು ಸೂಕ್ತ ಭಕ್ಷ್ಯವಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಬೆಳಗ್ಗೆ ಫೈಬರ್ ಭರಿತ ಆಹಾರವನ್ನು ತಿನ್ನುವುದು ತುಂಬಾ ಮುಖ್ಯ. ಉತ್ತಮ ಪ್ರಮಾಣದ ಫೈಬರ್ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಕರುಳನ್ನು ಉತ್ತೇಜಿಸುತ್ತದೆ.
ಜೋಳದಲ್ಲಿರುವ ಕಡಿಮೆ ಗ್ಲೆಸೆಮಿಕ್ ಸೂಚ್ಯಾಂಕವು ಮಧುಮೇಹಿ ರೋಗಿಗಳ ಡಯೆಟ್‌ಗೆ ಉತ್ತಮವಾಗಿದೆ. ಇದು ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೋಳವು ಟ್ಯಾನಿನ್, ಫೀನಾಲಿಕ್ ಆಮ್ಲ, ಆಂಥೋಸಯಾನಿನ್, ಫೈಟೊಸ್ಟೆರಾಲ್ ಮತ್ತು ಪೋಲಿಕೋಸನಾಲ್‌ಗಳಂತಹ ವಿವಿಧ ಫೈಟೊಕೆಮಿಕಲ್‌ಗಳ ಉತ್ತಮ ಮೂಲವಾಗಿದೆ. ಈ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಉರಿಯೂತವನ್ನು ತಡೆಗಟ್ಟಲು ಸಹಾಯಕವಾಗಿದೆ. ಆದ್ದರಿಂದ ಜೋಳದ ದೋಸೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
ಗ್ಲುಟನ್ ಇಂಟಾಲರೆನ್ಸ್, ಗ್ಲುಟನ್ ಅಲರ್ಜಿ ಅಥವಾ ಉದರದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಜೋಳವು ಅಂಟು ಮುಕ್ತವಾಗಿರುವುದರಿಂದ ಉತ್ತಮವಾಗಿದೆ.
ಇದನ್ನೂ ಓದಿ: ಸುಗ್ಗಿ ಹಬ್ಬ ಸಿಹಿಯೊಂದಿಗೆ ಆಚರಿಸೋಣ, ಈ ಪಾಕ ವಿಧಾನ ಪ್ರಯತ್ನಿಸಿ
ಈ ದೋಸೆಯನ್ನು ಮಾಡಲು ನೀವು ಮೊದಲಿಗೆ ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಜೀರಿಗೆ, ಇಂಗು, ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ನೀರು ಸೇರಿಸಿ ದೋಸೆ ಮಾಡಲು ಬೇಕಾದ ಹದಕ್ಕೆ ಹಿಟ್ಟನ್ನು ತಯಾರಿಸಿಕೊಳ್ಳಿ. ಇದಾದ ಬಳಿಕ ದೋಸೆ ಕಾವಲಿಗೆ ಎಣ್ಣೆ ಸವರಿ ನಂತರ ಮೊದಲೇ ತಯಾರಿಸಿಟ್ಟ ಹಿಟ್ಟು ಹಾಕಿ ತೆಳುವಾಗಿ ಸವರಿಕೊಳ್ಳಿ. ದೋಸೆಯ ಎರಡು ಬದಿ ಕಂದು ಬಣ್ಣ ಬರುವವರೆಗೆ ತಿರುಗಿಸಿ ಬೇಯಿಸಿಕೊಳ್ಳಿ. ದೋಸೆ ತಯಾರಾದ ಮೇಲೆ ನಿಮ್ಮ ಆಯ್ಕೆಯ ಚಟ್ನಿಯೊಂದಿಗೆ ಸವಿಯಿರಿ. ಮನೆಯಲ್ಲಿ ಈ ಆರೋಗ್ಯಕರವಾದ ಜೋಳದ ದೋಸೆ ರೆಸಿಪಿಯನ್ನು ಟ್ರೈ ಮಾಡಿ ಮತ್ತು ನಿಮ್ಮ ದಿನವನ್ನು ಪೌಷ್ಟಿಕಾಂಶದ ಆಹಾರದೊಂದಿಗೆ ಆರೋಗ್ಯಕರವಾಗಿ ಪ್ರಾರಂಭಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: