ನಮ್ಮಲ್ಲಿಂದು ದೊಡ್ಡಸ್ತಿಕೆಗೋ, ಆಡಂಬರಕ್ಕೋ ಅಥವಾ ತಿಳಿವಳಿಕೆಯ ಕೊರೆತೆಯಿಂದಲೋ ಆಹಾರವನ್ನು ಚೆಲ್ಲುವವರೇ ಹೆಚ್ಚು. ಅಹಾರಕ್ಕಾಗಿ ಪರಿತಪಿಸುವ ಅದೆಷ್ಟೋ ಜನ ನಮ್ಮ ನಡುವೆ ಇದ್ದಾರೆ. ಅರೆಹೊಟ್ಟೆಯಲ್ಲೋ, ಖಾಲಿ ಹೊಟ್ಟೆಯಲ್ಲೋ ನೀರು ಕುಡಿದು ಮಲಗುವವರು ಎಷ್ಟೋ. ಇನ್ನೊಂದೆಡೆ ಆಹಾರ ತಿನ್ನುವುದಕ್ಕಿಂತ ವ್ಯರ್ಥ ಮಾಡುವುದೇ ಹೆಚ್ಚಾಗ್ಬಿಟ್ಟಿದೆ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಆಹಾರ ವೇಸ್ಟ್ ಮಾಡುವುದು. ಮದ್ವೆ, ಮುಂಜಿ, ಸಭೆ-ಸಮಾರಂಭಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ಹೆಚ್ಚಾಗಿ ಕಾಣುತ್ತೇವೆ. ಮನಸ್ಸಿಗೆ ಬಂದಷ್ಟು ಹಾಕಿಸಿಕೊಂಡು ಕೊನೆಗೆ ತಿನ್ನಲಾಗದೇ ಬಿಸಾಡುತ್ತಾರೆ. ಇನ್ನು ಆಹಾರ ವ್ಯರ್ಥವಾಗುವುದನ್ನು ತಡೆಯಲು ಏನೆಲ್ಲ ಮಾಡಬಹುದು? ಈ ಕೆಳಗಿನಂತಿವೆ ನೋಡಿ ಕೆಲವು ಮಾರ್ಗಗಳು.
ಇದನ್ನೂ ಓದಿ: Stop Food Waste Day 2023: ದಯವಿಟ್ಟು ಆಹಾರ ವ್ಯರ್ಥ ಮಾಡ್ಬೇಡಿ, ಹಸಿದವನಿಗೆ ಗೊತ್ತು ಅನ್ನದ ಬೆಲೆ
ನಿಮ್ಮ ಮನೆಗೆ ತರುವ ದಿನಸಿ ಮತ್ತು ಊಟವನ್ನು ಪ್ಲ್ಯಾನ್ ಮಾಡಿ. ಅಂಗಡಿಗೂ ಹೋಗುವ ಮುನ್ನ, ನಿಮಗೆ ಬೇಕಾಗಿರುವ ಸಾಮಗ್ರಿಗಳ ಒಂದು ಪಟ್ಟಿಯನ್ನು ಮಾಡಿ ಮತ್ತು ಅದನ್ನು ಮಾತ್ರ ತನ್ನಿ. ಇದರಿಂದ ನೀವು ಅನಗತ್ಯ ವಸ್ತುಗಳನ್ನು ಖರೀದಿಸದಂತೆ ಆಗುತ್ತದೆ. ಇದರಿಂದ ಆಹಾರದ ವ್ಯರ್ಥದ ಜತೆಗೆ ಹಣದ ವ್ಯರ್ಥವೂ ನಿಯಂತ್ರಣಕ್ಕೆ ಬರುತ್ತದೆ.
ಗಾಳಿಯಾಡದ ಪಾತ್ರೆಯಲ್ಲಿ ಬಿಸ್ಕತ್ತು, ಹಣ್ಣುಗಳು, ಉಪ್ಪಿನಕಾಯಿ ಮತ್ತು ನಾಮ್‌ಕೀನ್‌ನಂತಹ ಹೆಚ್ಚಿನ ಆಹಾರಗಳನ್ನು ಸಂಗ್ರಹಿಸಿದರೆ ಅದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಈ ಪಾತ್ರೆಗಳು ತೇವಾಂಶ ಮತ್ತು ಬ್ಯಾಕ್ಟೀರಿಯಾಗಳು ಪ್ರವೇಶಿಸದಂತೆ ತಡೆಯುತ್ತವೆ. ಅಷ್ಟೇ ಅಲ್ಲ, ಆಹಾರವನ್ನು ಹೆಚ್ಚು ಕಾಲ ಸಂರಕ್ಷಿಸಬಹುದು. ಈ ಮೂಲಕ ಆಹಾರ ಹಾಳಾಗುವುದನ್ನು ತಡೆಗಟ್ಟಬಹುದು.
ರೆಸ್ಟೋರೆಂಟ್ ಅಥವಾ ಹೋಟೆಲ್’ನಲ್ಲಿ ಫುಡ್ ಆರ್ಡರ್ ಮಾಡುವಾಗ, ಎಲ್ಲಾ ತರಹದ ತಿನಿಸುಗಳನ್ನು ಆರ್ಡರ್ ಮಾಡದಿರಲು ಪ್ರಯತ್ನಿಸಿ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಆರ್ಡರ್ ಮಾಡಿ. ಇನ್ನು ಬೇಕಿದ್ದರೆ ಆಮೇಲೆ ಮತ್ತೆ ಆರ್ಡರ್ ಮಾಡಿಕೊಳ್ಳಬಹುದು. ಹೀಗೆ ಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಆಹಾರ ವೇಸ್ಟ್ ಆಗುವುದನ್ನು ತಡೆಯಬಹುದು. ನೀವು ಸ್ನೇಹಿತರು ಅಥವಾ ಕುಟುಂಬದ ಜೊತೆ ಹೊರಗೆ ಹೋದಾಗ ಆಹಾರ ವ್ಯರ್ಥವನ್ನು ಕಡಿಮೆ ಮಾಡಲು ಒಂದು ಅಥವಾ ಎರಡು ತರಹದ ತಿನಿಸುಗಳನ್ನು ಮಾತ್ರ ಆರ್ಡರ್ ಮಾಡಿ.
ರಾತ್ರಿಯ ಊಟ ಮಿಕ್ಕಿದ್ದರೆ, ಮರುದಿನದ ಉಪಾಹಾರಕ್ಕಾಗಿ ಅದರಲ್ಲೇ ಏನನ್ನಾದರೂ ಮಾಡಲು ಬರಬಹುದಾ ಎಂದು ಪ್ರಯತ್ನಿಸಿ. ಆರೋಗ್ಯಕರ ಉಪಾಹಾರಕ್ಕಾಗಿ ಇದು ಸುಲಭ ಮತ್ತು ತ್ವರಿತ ಮಾರ್ಗಗಳಲ್ಲಿ ಒಂದಾಗಿದೆ ಮತ್ತು ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಇದೊಂದು ಉತ್ತಮ ಮಾರ್ಗ.
ನಿಮ್ಮ ಆಹಾರ ಸೇವನೆಯ ನಂತರ ಬಹಳಷ್ಟು ಆಹಾರ ಉಳಿದಿದೆ ಎಂದರೆ, ಹೊರಗೆ ಹೋಗಿ ಅಗತ್ಯವಿರುವವರಿಗೆ ಅದನ್ನು ಹಂಚುವುದು ಉತ್ತಮ. ಇಲ್ಲದಿದ್ದರೆ ಆಹಾರ ಸಂಗ್ರಹಣೆಗಾಗಿ ಕೆಲ ಸಂಘಟನೆಗಳು ಇವೆ. ಅದಕ್ಕೆ ಕಾಲ್ ಚೆನ್ನಾಗಿರುವ ಉಳಿದ ಆಹಾರವನ್ನು ನೀಡಬಹುದು. ಇದರಿಂದ ಅನ್ನದಾನ ಮಾಡಿದ ಕೃಪೆ ನಿಮ್ಮ ಮೇಲೆ ಇರಲಿದೆ.
ಆಹಾರ ಪೋಲು ಎಂಬುದು ಈಗ ಜಾಗತಿಕ ಸಮಸ್ಯೆಯಾಗಿ ಬೆಳೆದುನಿಂತಿದೆ. ನಾವಿದನ್ನು ಈಗಲೇ ಸರಿ ಪಡಿಸಿಕೊಳ್ಳದೆ ಹೋದರೆ ಮುಂದೆ ಪರಿತಪಿಸಬೇಕಾಗುತ್ತದೆ. ನೀವು ಸಹ ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಜಾಗೃತಿ ಮೂಡಿಸಿ ಸ್ಟಾಪ್ ಫುಡ್ ವೇಸ್ಟೇಜ್ ಡೇ ಆಚರಿಸಿ. ನಿಮ್ಮ ಮನೆಯ ಹಾಗೂ ಸುತ್ತಮುತ್ತಲಿನ ಆಹಾರ ವ್ಯರ್ಥವನ್ನು ಕಡಿಮೆ ಮಾಡಲು ನೀವು ಪ್ರಯತ್ನಿಸಿ.