ಸುಡು ಬಿಸಿಲಿನ ನಡುವೆ ದೇಹವನ್ನು ತಂಪಾಗಿಸುವ ಪಾನೀಯಗಳನ್ನು ಸೇವಿಸುವ ಬಯಕೆಯಾಗುವುದು ಸಹಜ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳ ಮೊರೆ ಹೋಗುತ್ತಾರೆ. ದುಡ್ಡು ಕೊಟ್ಟು ಪಾನೀಯಗಳನ್ನು ಕೊಂಡುಕೊಳ್ಳುವುದಕ್ಕಿಂತ ಮನೆಯಲ್ಲೇ ಫ್ರೆಶ್ ಆಗಿರುವ ಜ್ಯೂಸ್ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಹಿತಕರವಾಗಿದೆ. ಮನೆಯಲ್ಲೇ ರಾಗಿಯಿದ್ದರೆ ಇದರಿಂದ ವಿವಿಧ ಆರೋಗ್ಯಕರ ರಾಗಿ ಮಜ್ಜಿಗೆ ಹಾಗೂ ರಾಗಿ ಜ್ಯೂಸ್ ಮಾಡಿ ಕುಡಿದರೆ ಸುಸ್ತು ಹಾಗೂ ಬಾಯಾರಿಕೆಯು ನೀಗುತ್ತದೆ.
ರಾಗಿ ಮಜ್ಜಿಗೆ ಬೇಕಾಗುವ ಸಾಮಗ್ರಿಗಳು :
- ರಾಗಿ ಪುಡಿ
- ಮೊಸರು
- ನೀರು
- ರುಚಿಗೆ ತಕ್ಕಷ್ಟು ಉಪ್ಪು
- ಜೀರಿಗೆ ಪುಡಿ
- ಕೊತ್ತಂಬರಿ ಸೊಪ್ಪು
ರಾಗಿ ಮಜ್ಜಿಗೆ ಮಾಡುವ ವಿಧಾನ:
- ನಾಲ್ಕು ಲೋಟ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ರಾಗಿ ಪುಡಿ ಬೆರೆಸಿ ಮಾಡಿ, ಗಂಟು ಇರದಂತೆ ಕಲಸಿಕೊಳ್ಳಿ.
- ಈ ರಾಗಿ ಮಿಶ್ರಣವನ್ನು ಗ್ಯಾಸ್ ಮೇಲೆ ಇಟ್ಟು ಕುದಿಯಲು ಬಿಡಿ. ಆಗಾಗ ಕೈಯಾಡಿಸುತ್ತ ಇರಿ.
- ಈ ರಾಗಿ ಮಿಶ್ರಣವು ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ.
- ಮತ್ತೊಂದೆಡೆ ಮೊಸರನ್ನು ಒಂದು ಪಾತ್ರೆಗೆ ಹಾಕಿ, ಈಗಾಗಲೇ ಕುದಿಸಿಟ್ಟ ರಾಗಿ ಮಿಶ್ರಣವನ್ನು ಬೆರೆಸಿಕೊಳ್ಳಿ.
- ಅದಕ್ಕೆ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಕುಡಿದರೆ ಬಾಯಾರಿಕೆ ನೀಗುತ್ತದೆ.
ರಾಗಿ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳು:
- ರಾಗಿ
- ತೆಂಗಿನ ತುರಿ
- ಬೆಲ್ಲ
- ನೀರು
- ಏಲಕ್ಕಿ
- ಉಪ್ಪು
ರಾಗಿ ಜ್ಯೂಸ್ ಮಾಡುವ ವಿಧಾನ:
- ಒಂದು ಬಟ್ಟಲಿನಲ್ಲಿ ರಾಗಿ ತೆಗೆದುಕೊಂಡು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ.
- ಒಣಗಿದ ರಾಗಿಯನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ಹುರಿದು ಕೊಳ್ಳಿ.
- ಮಿಕ್ಸಿ ಜಾರಿಗೆ ಹುರಿದ ರಾಗಿ, ಒಂದೆರಡು ಏಲಕ್ಕಿ ಹಾಗೂ ತೆಂಗಿನ ತುರಿ, ಬೆಲ್ಲ ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
- ಈ ಮಿಶ್ರಣಕ್ಕೆ ಬೇಕಾಗುವಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸೋಸಿದರೆ ರುಚಿ ರುಚಿಕರವಾದ ರಾಗಿ ಜ್ಯೂಸ್ ಸವಿಯಲು ಸಿದ್ಧ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ