
ಸನ್‌ಸ್ಕ್ರೀನ್ (Sunscreen) ನಮ್ಮ ಚರ್ಮದ ಆರೈಕೆಯ (Skin Care) ಪ್ರಮುಖ ಭಾಗ ಅಂತಾನೇ ಹೇಳ್ಬೋದು. ಇದು ಸೂರ್ಯನ (Sun) ಹಾನಿಕಾರಕ ಯುವಿ ಕಿರಣಗಳಿಂದ (UV Radiation) ನಮ್ಮ ತ್ವಚೆಯನ್ನು (Skin) ರಕ್ಷಿಸುತ್ತದೆ (Protect). ಆದ್ದರಿಂದ ಮಹಿಳೆಯರು ಮಾತ್ರವಲ್ಲ ಪುರುಷರು ಕೂಡಾ ಪ್ರತಿನಿತ್ಯ ಸನ್‌ಸ್ಕ್ರೀನ್ ಹಚ್ಚಲೇಬೇಕು. ಅದರಲ್ಲೂ ಈ ಬೇಸಿಗೆಯಲ್ಲಿನ ಸೂರ್ಯನ ವಿಪರೀತ ಶಾಖದಿಂದ ಚರ್ಮವನ್ನು ರಕ್ಷಿಸಲು SPF ಮಟ್ಟ 50 ಇರುವ ಸನ್‌ಸ್ಕ್ರೀನ್ ಲೋಷನ್‌ಗಳನ್ನು ಪ್ರತಿ 4-5 ಗಂಟೆಗಳಿಗೊಮ್ಮೆ ಮುಖ, ಕುತ್ತಿಗೆ ಕೈ ಕಾಲು ಭಾಗಗಳಿಗೆ ಹಚ್ಚಿಕೊಳ್ಳುವುದು ಅತ್ಯಗತ್ಯ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದು ಮಾತ್ರವಲ್ಲದೆ ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ, ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುತ್ತದೆ. ಸನ್‌ಸ್ಕ್ರೀನ್ ಬಳಸುವುದು ಅತ್ಯಗತ್ಯ ಎಂದು ತಜ್ಞರು ಕೂಡ ಒತ್ತಿ ಹೇಳ್ತಾರೆ. ಹೀಗಿದ್ರೂ ಕೂಡಾ ಒಂದಷ್ಟು ಜನ ಅತಿಯಾಗಿ ಸನ್‌ಸ್ಕ್ರೀನ್ ಹಚ್ಚಿದ್ರೆ ಚರ್ಮದ ಕ್ಯಾನ್ಸರ್ ಬರುತ್ತೆ ಎಂದು ಹೇಳ್ತಾರೆ. ಇವೆಲ್ಲವೂ ಸತ್ಯವೇ ಅಥವಾ ಮಿಥ್ಯವೇ ಎಂಬುದನ್ನು ಡಿಕನ್ಸ್ಟ್ರಕ್ಟ್ ಸ್ಕಿನ್‌ಕೇರ್ (Deconstruct) ಉತ್ಪನ್ನಗಳ ಸಂಸ್ಥಾಪಕಿ ಮಾಲಿನಿ ಅಡಪುರೆಡ್ಡಿ (Malini Adapureddy) ತಿಳಿಸಿಕೊಟ್ಟಿದ್ದಾರೆ.
ಸನ್‌ಸ್ಕ್ರೀನ್ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಎಂದು ಹಲವರು ಭಾವಿಸಿದ್ದಾರೆ. ಆದ್ರೆ ಸನ್‌ಸ್ಕ್ರೀನ್ ಬಳಕೆ ಮತ್ತು ಚರ್ಮದ ಕ್ಯಾನ್ಸರ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಮಾಲಿನಿ ಹೇಳಿದ್ದಾರೆ. ವಾಸ್ತವವಾಗಿ ಸನ್‌ಸ್ಕ್ರೀನ್ ಚರ್ಮಕ್ಕೆ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಸಾಕಷ್ಟು ರೀತಿಯ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುವ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ. ಆದ್ದರಿಂದ ಸನ್‌ಸ್ಕ್ರೀನ್ ಬಳಕೆ ಅತ್ಯಗತ್ಯ.
ನಾನು ಕಪ್ಪಾಗಿದ್ದೇನೆ ಆದ್ದರಿಂದ ಸನ್‌ಸ್ಕ್ರೀನ್ ಹಚ್ಚುವ ಯಾವುದೇ ಅಗತ್ಯವಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ಯಾವುದೇ ಚರ್ಮದ ಬಣ್ಣ ಹೊಂದಿದ್ದರೂ ಸನ್‌ಸ್ಕ್ರೀನ್ ಹಚ್ಚಲೇಬೇಕು. ಹೌದು ಇದು ಹೈಪರ್‌ಪಿಗ್ಮೆಂಟೇಶನ್, ಸನ್‌ಬರ್ನ್ ಮತ್ತು ಚರ್ಮದ ಕ್ಯಾನ್ಸರ್ ದೂರ ಮಾಡುವುದರ ಜೊತೆಗೆ ಚರ್ಮವನ್ನು ಆರೋಗ್ಯಕರ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
ಮಳೆಗಾಲ ಮತ್ತು ಮೋಡ ಕವಿತ ವಾತಾವರಣವಿರುವ ಸಮಯದಲ್ಲಿ ಸೂರ್ಯನ ಕಿರಣ ಅಷ್ಟಾಗಿ ಮೈಮೇಲೆ ಬೀಳುವುದಿಲ್ಲ, ಆಗ ಸನ್‌ಸ್ಕ್ರೀನ್ ಹಚ್ಚುವ ಯಾವುದೇ ಅಗತ್ಯವಿರುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಈ ದಿನಗಳಲ್ಲೂ ಹಾನಿಕಾರಕ ಯುವಿ ಕಿರಣಗಳು ಮೋಡಗಳ ಮೂಲಕ ಭೇದಿಸಿ ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದ ಮೋಡ ಕವಿದ ವಾತಾವರಣವಿರುವ ದಿನಗಳಲ್ಲಿಯೂ ಸಹ ಸನ್‌ಸ್ಕ್ರೀನ್ ಅತ್ಯಗತ್ಯ.
ಇದನ್ನೂ ಓದಿ: ಇದೇ ಕಾರಣಕ್ಕಂತೆ ಹೆಂಡ್ತಿ ಕಟ್ಟಿಕೊಂಡ ಗಂಡನಿಗೆ ಮೋಸ ಮಾಡೋದು; ಗಂಡಸರೇ ಏನದು ತಿಳಿಯಿರಿ
ಈಗೀಗ ಅನೇಕ ಫೌಂಡೇಶನ್‌ಗಳು ಮತ್ತು ಟಿಂಟೆಡ್ ಮಾಯಿಶ್ಚರೈಸರ್‌ಗಳು SPF ನೊಂದಿಗೆ ಬರುತ್ತವೆ. ಹೀಗಾಗಿ ಹಲವರು ಮೇಕಪ್ ಮಾಡಿಕೊಳ್ಳುವಾಗ ಸನ್‌ಸ್ಕ್ರೀನ್ ಹಚ್ಚುವ ಅಗತ್ಯವಿರುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದರಿಂದ ಚರ್ಮದ ರಕ್ಷಣೆ ಸಾಧ್ಯವಿಲ್ಲ. ಚರ್ಮದ ರಕ್ಷಣೆಗಾಗಿ ಸೂಕ್ತ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ಮಾಲಿನಿ.
ಸನ್‌ಸ್ಕ್ರೀನ್ ನಮ್ಮ ದೇಹವು ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಹೀರಿಕೊಳ್ಳುವುದನ್ನು ತಡೆಯುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ ಸನ್‌ಸ್ಕ್ರೀನ್ ಬಳಕೆಯೊಂದಿಗೆ, ನಮ್ಮ ದೇಹವು ಇನ್ನೂ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಯನ್ನು ಉತ್ಪಾದಿಸಬಹುದು ಎಂದು ಸಂಶೋಧನೆ ತೋರಿಸುತ್ತದೆ ಎಂಬುದನ್ನು ಮಾಲಿನಿ ಹೇಳಿದ್ದಾರೆ. ಸಣ್ಣ ಪ್ರಮಾಣದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅಂಶ ದೇಹಕ್ಕೆ ಸಿಗುತ್ತದೆ. ಆಹಾರ ಅಥವಾ ಇತರೆ ಪೂರಕಗಳ ಮೂಲಕವೂ ವಿಟಮಿನ್ ಡಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ