ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ಈ ರೀತಿ ಗಿಡವನ್ನು ಆರೈಕೆ ಮಾಡಿ

ಜೋರಾದ ಮಳೆ ಮತ್ತು ವಾತಾವರಣದ ತೇವಾಂಶದಿಂದಾಗಿ ಮಳೆಗಾಲದಲ್ಲಿ ಗಿಡಗಳು ಹಾಳಾಗುತ್ತವೆ. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು ತುಳಸಿ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆಯಲು ಪ್ರಾರಂಭಿಸುತ್ತವೆ. ಹೀಗಿರುವಾಗ ಮಾನ್ಸೂನ್‌ ಸೀಸನ್‌ನಲ್ಲಿ ಈ ಪವಿತ್ರ ಗಿಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಗಿಡ ಸೊಂಪಾಗಿ ಬೆಳೆಯುವಂತೆ ಮಾಡಲು ತುಳಸಿ ಗಿಡದ ಬಗ್ಗೆ ಈ ವಿಶೇಷ ಕಾಳಜಿಯನ್ನು ವಹಿಸಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ಈ ರೀತಿ ಗಿಡವನ್ನು ಆರೈಕೆ ಮಾಡಿ
ತುಳಸಿ ಗಿಡದ ಆರೈಕೆ
Image Credit source: Getty Images

Updated on: Jul 22, 2026 | 6:45 PM

ಮುಖ್ಯಾಂಶಗಳು

  • ಮಳೆಗಾಲದಲ್ಲಿ ತುಳಸಿ ಗಿಡದ ಆರೈಕೆಯ ಬಗ್ಗೆ ತುಸು ಕಾಳಜಿ ವಹಿಸಬೇಕು
  • ವಿಶೇಷವಾಗಿ ಮಳೆಗಾಲದಲ್ಲಿ ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಗಿಡ ಹಾಳಾಗುವ ಸಾಧ್ಯತೆ ಹೆಚ್ಚು
  • ಸರಿಯಾದ ಆರೈಕೆಯಿಂದ ಮಳೆಗಾಲದಲ್ಲೂ ತುಳಸಿ ಸೊಂಪಾಗಿ ಬೆಳೆಯುವಂತೆ ಮಾಡಬಹುದು

ಹಿಂದೂ ಧರ್ಮದಲ್ಲಿ ತುಳಸಿ (tulsi) ಗಿಡಕ್ಕೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಆದರೆ ಈ ತುಳಸಿ ಗಿಡ ಮಳೆಗಾಲದಲ್ಲಿ ಹಾಳಾಗಲು ಪ್ರಾರಂಭಿಸುತ್ತದೆ. ತೇವಾಂಶದಿಂದಾಗಿ ತುಳಸಿ ಎಲೆಗಳೆಲ್ಲಾ ಹಳದಿ ಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭಿಸುತ್ತವೆ. ಹಾಗಾಗಿ ಮಳೆಗಾಲದಲ್ಲಿ ಇತರ ಗಿಡಗಳ ಬಗ್ಗೆ ಕಾಳಜಿ ವಹಿಸುವಂತೆ ತುಳಗಿ ಗಿಡದ ಬಗ್ಗೆಯೂ ತುಸು ಆರೈಕೆ ಮಾಡಬೇಕು. ಆಗ ಮಾತ್ರ ಮಳೆಗಾಲದಲ್ಲಿಯೂ ಸಹ ತುಳಸಿ ಸೊಂಪಾಗಿ, ಆರೋಗ್ಯಕರವಾಗಿ ಬೆಳೆಯುತ್ತದೆ. ಮಳೆಗಾಲದಲ್ಲಿ ತುಳಸಿ ಗಿಡವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ತುಳಸಿ ಗಿಡದ ಆರೈಕೆ ಹೀಗಿರಲಿ:

ಮಳೆಗಾಲದಲ್ಲಿನ ತೇವಾಂಶದ ಕಾರಣದಿಂದ ತುಳಸಿ ಗಿಡಗಳು ಬೇಗನೆ ಹಾಳಾಗುತ್ತವೆ. ಹೀಗೆ ಮಳೆಗಾಲದಲ್ಲಿ ಗಿಡ ಹಾಳಾಗುವುದನ್ನು ತಪ್ಪಿಸಲು ಮತ್ತು ಸೊಂಪಾಗಿ ಬೆಳೆಯಲು ಮಳೆಗಾಲದಲ್ಲಿ ತುಳಸಿ ಗಿಡವನ್ನು ಯಾವ ರೀತಿ ಆರೈಕೆ ಮಾಡಬೇಕು ಎಂಬುದರ ಉಪಯುಕ್ತ ಮಾಹಿತಿಯನ್ನು ಮಧುರಾ ಭಟ್‌ ಎಂಬವರು ತಮ್ಮ ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಹೂವನ್ನು ಚಿವುಟಿ ಹಾಕಬೇಕು: ನಿಮ್ಮ ಮನೆಯ ತುಳಸಿ ಗಿಡವು ಸಹ ದಡ್ಡವಾಗಿ ಹರಡಿ ಬೆಳೆಯಬೇಕೆಂದರೆ ಅದರ ಹೂವನ್ನು ಚಿವುಟಿ ಹಾಕಬೇಕು. ಹೀಗೆ ಹೂವನ್ನು ಚಿವುಟಿ ಹಾಕುವುದರಿಂದ ಗಿಡದ ಎಲೆಗಳು ಸೊಂಪಾಗಿ ಬೆಳೆಯಲು ಸಹಾಯವಾಗುತ್ತದೆ. ಹೂವನ್ನು ತೆಗೆಯದಿದ್ದರೆ ಗಿಡದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಮಳೆಗಾದಲ್ಲೂ ಹೂವುಗಳನ್ನು ಚಿವುಟಿ ಹಾಕಬೇಕು. ಈ ಕಾರ್ಯವನ್ನು ಆದಷ್ಟು ಬೆಳಗಿನ ಸಮಯದಲ್ಲಿ ಮಾಡಿದರೆ ಒಳ್ಳೆಯದು.

ಕಹಿಬೇವಿನ ಎಣ್ಣೆಯ ಬಳಕೆ: ಇತರ ಗಿಡಗಳಂತೆ ಮಳೆಗಾಲದಲ್ಲಿ ತುಳಸಿ ಗಿಡಕ್ಕೂ ಕೀಟ, ಹುಳಗಳು ಆವರಿಸುತ್ತವೆ. ಈ ಕೀಟಗಳು ಎಲೆಗಳನ್ನೆಲ್ಲಾ ತಿನ್ನುವುದು ಮಾತ್ರವಲ್ಲದೆ ಗಿಡದ ಬೆಳವಣಿಗೆಗೂ ಅಡ್ಡಿ ಮಾಡುತ್ತದೆ. ಹೀಗಿರುವಾಗ ಕಹಿಬೇವಿನ ಎಣ್ಣೆಯನ್ನು ಕೀಟಗಳಿರುವ ಪ್ರದೇಶಕ್ಕೆ ಸಿಂಪಡಣೆ ಮಾಡಬಹುದು. ಇದರ ಬದಲು ಜೋರಾಗಿ ನೀರು ಸಿಂಪಡಿಸಿಯೂ ಗಿಡದ ಮೇಲೆ ಅಂಟಿರುವ ಕೀಟಗಳನ್ನು ಹೋಗಲಾಡಿಸಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಗಿಡಗಳನ್ನು ಕಂಬಳಿ ಹುಳಗಳಿಂದ ರಕ್ಷಿಸಲು ಮನೆಮದ್ದುಗಳೇ ಸಾಕು

ಗೊಬ್ಬರದ ಬಳಕೆ: ಲಿಕ್ವಿಡ್‌ ಗೊಬ್ಬರದ ಬದಲು, ಮಳೆಗಾಲದಲ್ಲಿ ತುಳಸಿ ಗಿಡದ ಬುಡಕ್ಕೆ ಹರಳಿಂಡಿ ಹಾಕುವುದು ತುಂಬಾನೇ ಒಳ್ಳೆಯದು. ಸುಮಾರು ನಾಲ್ಕರಿಂದ ಐದು ಮುಷ್ಟಿಯಷ್ಟು ಈ ಗೊಬ್ಬರವನ್ನು ಹಾಕಬೇಕು. ಹರಳಿಂಡಿ ಸಾವಯವ ಗೊಬ್ಬರವಾಗಿದ್ದು, ಇದು ತುಳಸಿ ಗಿಡದ ಬೇರುಗಳಿಗೆ ಹಾನಿ ಮಾಡುವ ಹುಳಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಮತ್ತು ತುಳಸಿ ಗಿಡ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ತುಳಸಿ ಗಿಡವನ್ನು ಈ ರೀತಿ ಆರೈಕೆ ಮಾಡುವ ಮೂಲಕ ತುಳಸಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆಯುವಂತೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us