
ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆತ್ತವರು ಎಷ್ಟು ಮುಖ್ಯ ಪಾತ್ರ ವಹಿಸುತ್ತಾರೋ, ಅದೇ ರೀತಿ ಮಕ್ಕಳ ಜೀವನದವನ್ನು ಉಜ್ವಲವಾಗಿ ರೂಪಿಸುವಲ್ಲಿ ಶಿಕ್ಷಕರು (Teachers) ಕೂಡ ಅಷ್ಟೇ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಹೌದು ಪುಸ್ತಕದ ಪಾಠದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಯಾಗಿ ನಿರ್ಮಿಸುಲ್ಲಿ ಶ್ರಮಿಸುತ್ತಾರೆ. ಒಟ್ಟಾರೆಯಾಗಿ ಶಿಕ್ಷಕರನ್ನು ಒಂದು ಕಲ್ಲನ್ನು ಸುಂದರವಾದ ಶಿಲೆಯನ್ನಾಗಿ ರೂಪಿಸುವ ಶಿಲ್ಪಿ ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳಿಗೆ ದಾರಿ ದೀಪವಾದ, ಜ್ಞಾನವನ್ನು ಧಾರೆಯೆರೆದು ಮಕ್ಕಳ ಬಾಳನ್ನು ರೂಪಿಸಲು ನಿಸ್ವಾರ್ಥದಿಂದ ಶ್ರಮಿಸುವ ಇಂತಹ ಶಿಕ್ಷಕರನ್ನು ಗೌರವಿಸಲೆಂದು ಪ್ರತಿವರ್ಷ ಸೆಪ್ಟೆಂಬರ್ 05 ರಂದು ಭಾರತದಲ್ಲಿ ಶಿಕ್ಷಕರ ದಿನವನ್ನು (Teachers’ Day) ಆಚರಿಸಲಾಗುತ್ತದೆ. ಸೆಪ್ಟೆಂಬರ್ 05 ರಂದೇ ಏಕೆ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ, ಈ ದಿನದ ಹಿನ್ನೆಲೆ ಏನೆಂಬುದನ್ನು ನೋಡೋಣ ಬನ್ನಿ.
ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟ್ರಪತಿ, ಮೊದಲ ಉಪರಾಷ್ಟ್ರಪತಿಯಾಗಿದ್ದ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ವಿದ್ವಾಂಸರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವುದರಲ್ಲಿ ಕಳೆದರು. ಹೀಗೆ ಶಿಕ್ಷಣಕ್ಕಾಗಿ ಇವರ ಮಹಾನ್ ಕೊಡುಗೆಗಳನ್ನು ಗೌರವಿಸಲು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ನಿಸ್ವಾರ್ಥದಿಂದ ಶ್ರಮಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದಂತಹ ಸಂದರ್ಭದಲ್ಲಿ ಅವರ ಒಂದಷ್ಟು ಸ್ನೇಹಿತರು ಮತ್ತು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಪ್ರಸ್ತಾಪಿಸಿದರು. ಆಗ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ನೀವು ನನ್ನ ಜನ್ಮ ದಿನವನ್ನು ಆಚರಿಸಲು ಬಯಸುವುದು ಒಳ್ಳೆಯದಯ. ಆದರೆ ಇದನ್ನು ಪ್ರತ್ಯೇಕವಾಗಿ ಆಚರಿಸುವ ಬದಲು ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ಈ ದಿನವನ್ನು ಆಚರಿಸಿದರೆ ಅದರಿಂದ ನನಗೆ ತುಂಬಾನೇ ಸಂತೋಷವಾಗುತ್ತದೆ ಎಂದು ಹೇಳಿದರು. ಅವರ ಈ ಮಾತನ್ನು ಗೌರವಿಸಿ ಅಂದಿನಿಂದ, ಸೆಪ್ಟೆಂಬರ್ 5 ಅನ್ನು ಅಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಭಾರತದಲ್ಲಿ ಶಿಕ್ಷಕರ ದಿನವೆಂದು ಆಚರಿಸಲು ಪ್ರಾರಂಭಿಸಲಾಯಿತು.
ಇದನ್ನೂ ಓದಿ: ಶಿಕ್ಷಕರ ದಿನಾಚರಣೆಯಂದು ನಿಮ್ಮ ನೆಚ್ಚಿನ ಗುರುಗಳಿಗೆ ಈ ಗಿಫ್ಟ್ ನೀಡಿ
ಭಾರತೀಯ ಸಂಸ್ಕೃತಿಯಲ್ಲಿ, ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ಜೀವನ ಕಲೆ, ನೈತಿಕತೆ ಮತ್ತು ಶಿಸ್ತಿನ ಮಾರ್ಗವನ್ನು ಕಲಿಸಿ ಬದುಕಿನ ದಾರಿಯನ್ನು ತೋರುತ್ತಾರೆ. ಒಟ್ಟಾರೆಯಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಹಾಗೂ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಕೊಡುಗೆ ಮಹತ್ತರವಾದ್ದು. ಹೀಗೆ ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸಲು ಶ್ರಮಿಸುವ ಶಿಕ್ಷಕರಿಗೆ ಗೌರವವನ್ನು ಸಲ್ಲಿಸುವುದೇ ಶಿಕ್ಷಕರ ದಿನದ ಆಚರಣೆಯ ಉದ್ದೇಶವಾಗಿದೆ.
ಅಲ್ಲದೆ ಈ ದಿನದಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಜೊತೆಗೆ ಶಿಕ್ಷಕರ ದಿನದ ಸಲುವಾಗಿ ಈ ದಿನ ರಾಷ್ಟ್ರಪತಿಗಳಿಂದ ಪ್ರತಿಭಾನ್ವಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ