
ಚಳಿಗಾಲ ಈಗಾಗಲೇ ಆರಂಭವಾಗಿಬಿಟ್ಟಿದೆ. ಈ ಚಳಿಗಾಲದಲ್ಲಿ ಅನಾರೋಗ್ಯ, ತ್ವಚೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಅದೇ ರೀತಿ ಪಾದದ ಆರೈಕೆಯ ಬಗ್ಗೆಯೂ ಗಮನ ವಹಿಸಬೇಕು. ಏಕೆಂದರೆ ಚಳಿಗೆ ಅನೇಕರ ಹಿಮ್ಮಡಿ ಬಿರುಕು (cracked heels) ಬಿಡುತ್ತದೆ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಇದಾಗಿದ್ದು, ಇದರಿಂದ ಇಡೀ ಪಾದದ ಸೌಂದರ್ಯವೇ ಕೆಡುತ್ತದೆ. ಬಿರು ಬಿಟ್ಟ ಈ ಹಿಮ್ಮಡಿಯನ್ನು ಸರಿಪಡಿಸಲು, ಪಾದಗಳ ಸೌಂದರ್ಯವನ್ನು ಕಾಪಾಡಲು ಅನೇಕರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಹೀಗೆ ನಿಮ್ಮ ಹಿಮ್ಮಡಿಯೂ ಬಿರುಕು ಬಿಟ್ಟಿದ್ಯಾ, ಇದಕ್ಕೆ ದುಬಾರಿ ಚಿಕಿತ್ಸೆಯ ಅವಶ್ಯಕತೆಯಿಲ್ಲ, ಈ ಕೆಲವು ಮನೆಮದ್ದುಗಳ ಸಹಾಯದಿಂದ ಸಲಭವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕುರಿತ ಸಂಪೂರ ಮಾಹಿತಿ ಇಲ್ಲಿದೆ ನೋಡಿ.
ನಿಂಬೆ, ಗ್ಲಿಸರಿನ್ ಮತ್ತು ರೋಸ್ ವಾಟರ್: ಅರ್ಧ ಬಕೆಟ್ ಬಿಸಿ ನೀರು ತುಂಬಿಸಿ, ಅದಕ್ಕೆ ನಿಂಬೆ ರಸ, ಒಂದು ಚಮಚ ಗ್ಲಿಸರಿನ್ ಮತ್ತು ಒಂದು ಚಮಚ ರೋಸ್ ವಾಟರ್ ಸೇರಿಸಿ ಬಳಿಕ ನಿಮ್ಮ ಪಾದಗಳನ್ನು ಅದರಲ್ಲಿ 15-20 ನಿಮಿಷಗಳ ಕಾಲ ಇಟ್ಟು, ನಂತರ ಹೀಲ್ ಸ್ಕ್ರಬ್ಬರ್‌ನಿಂದ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ. ನಂತರ ಒಂದು ಚಮಚ ಗ್ಲಿಸರಿನ್, ಒಂದು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ನಿಂಬೆ ರಸವನ್ನು ಒಟ್ಟಿಗೆ ಬೆರೆಸಿ ನಿಮ್ಮ ಪಾದಗಳಿಗೆ ಹಚ್ಚಿ ಸಾಕ್ಸ್ ಧರಿಸಿ. ಬೆಳಗ್ಗೆ ಪಾದಗಳನ್ನು ತೊಳೆಯಿರಿ. ಇದು ಪರಿಣಾಮಕಾರಿಯಾಗಿದೆ.
ಜೇನುತುಪ್ಪ: ಒಂದು ಬಕೆಟ್ ನೀರಿನಲ್ಲಿ ಒಂದು ಕಪ್ ಜೇನುತುಪ್ಪ ಬೆರೆಸಿ. ನಿಮ್ಮ ಪಾದಗಳನ್ನು ಅದರಲ್ಲಿ 15-20 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ನಿಮ್ಮ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ. ಸ್ಕ್ರಬ್ ಮಾಡಿದ ನಂತರ, ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕೂಡ ಪರಿಣಾಮಕಾರಿ ಮನೆಮದ್ದಾಗಿದೆ.
ತೆಂಗಿನ ಎಣ್ಣೆ: ರಾತ್ರಿ ಮಲಗುವ ಮುನ್ನ ಬಿರುಕು ಬಿಟ್ಟ ಹಿಮ್ಮಡಿಗಳನ್ನು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ನಂತರ, ಸಾಕ್ಸ್ ಧರಿಸಿ. ತೆಂಗಿನ ಎಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು, ಇದು ಒಡೆದ ಹಿಮ್ಮಡಿಯನ್ನು ಸರಿಪಡಿಸಲು ಅತ್ಯಂತ ಸುಲಭ ಮತ್ತು ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಅಲೋವೆರಾ: ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಬಿರುಕು ಬಿಟ್ಟ ಹಿಮ್ಮಡಿಗಳನ್ನು ಗುಣಪಡಿಸಲು ನೀವು ಇದನ್ನು ಬಳಸಬಹುದು. ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಅಲೋವೆರಾ ಜೆಲ್ ಹಚ್ಚಿ. ಇದು ಬಿರುಕು ಬಿಟ್ಟ ಹಿಮ್ಮಡಿಯನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ಸಿಂಪಲ್ ಅಭ್ಯಾಸಗಳನ್ನು ರೂಢಿಸಿಕೊಂಡರೆ ಎಷ್ಟೆಲ್ಲಾ ಲಾಭವಿದೆ ನೋಡಿ
ಬಾಳೆಹಣ್ಣು: ಒಡೆದ ಹಿಮ್ಮಡಿಯನ್ನು ಗುಣಪಡಿಸಲು ಮಾಗಿದ ಬಾಳೆಹಣ್ಣನ್ನು ಸಹ ಬಳಸಬಹುದು. ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಣಗಿದ ನಂತರ, ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಹಚ್ಚಿ.
ಇದರ ಜೊತೆಗೆ ಹಿಮ್ಮಡಿ ಬಿರುಕು ಬಿಡುವುದನ್ನು ತಡೆಗಟ್ಟಲು, ಸತು, ವಿಟಮಿನ್ ಇ, ವಿಟಮಿನ್ ಸಿ, ಒಮೆಗಾ -3 ಮತ್ತು ವಿಟಮಿನ್ ಬಿ 3 ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ನಟ್ಸ್ ಮತ್ತು ಸೀಡ್ಸ್‌ಗಳನ್ನು ಸೇರಿಸಿ. ಇದು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಿ ಅಗತ್ಯ ಪೋಷಣೆ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ