Natural Drinks: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈ ದೇಸಿ ನೈಸರ್ಗಿಕ ಪಾನೀಯಗಳು ಸಹಕಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2023 | 3:23 PM

ಭಾರತೀಯ ಪಾಕಪದ್ಧತಿಯಲ್ಲಿ ನಾವು ಅನೇಕ ರೀತಿಯ ಬೇಸಿಗೆಯಲ್ಲಿ ಸೇವನೆ ಮಾಡುವ ಪಾನೀಯಗಳನ್ನು ಕಾಣಬಹುದು. ಇದು ನಮ್ಮ ದೇಹದಲ್ಲಿ ನೀರಿನಾಂಶ ಇರುವಂತೆ ಮಾಡುವುದು ಮಾತ್ರವಲ್ಲದೆ ಒಳಗಿನಿಂದ ನಮ್ಮನ್ನು ಚೈತನ್ಯಗೊಳಿಸುತ್ತದೆ.

Natural Drinks: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈ ದೇಸಿ ನೈಸರ್ಗಿಕ ಪಾನೀಯಗಳು ಸಹಕಾರಿ
ಸಾಂದರ್ಭಿಕ ಚಿತ್ರ
Follow us on

ಬೇಸಿಗೆಯಂತೂ ಬಂದೇ ಬಿಟ್ಟಿದೆ. ಈ ಬೇಸಿಗೆ ಶಾಖಕ್ಕೆ ದಾಹವೂ ಹೆಚ್ಚಾಗುತ್ತಿದೆ. ಮತ್ತು ತಂಪಾಗಿರುವ ಉಲ್ಲಾಸಕರವಾದ ಏನನ್ನಾದರೂ ಸೇವಿಸಬೇಕೆಂದೆನಿಸುತ್ತದೆ. ಜೊತೆಗೆ ಈ ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರಿನಾಂಶ ಇರುವುದು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಹವಾಮಾನವು ಬಿಸಿಯಾಗಿರುವಾಗ, ನಾವು ಹೆಚ್ಚು ಬೆವರುತ್ತೇವೆ. ಮತ್ತು ಇದರಿಂದ ನಮ್ಮ ದೇಹದಲ್ಲಿನ ಹೆಚ್ಚಿನ ನೀರಿನಾಂಶವನ್ನು ಕಳೆದುಕೊಳ್ಳುತ್ತೇವೆ. ಇದು ಆಯಾಸ, ಅಶಕ್ತಿ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಬೇಸಿಗೆಯಲ್ಲಿ ನಮ್ಮ ದೇಹವನ್ನು ನೀರನಾಂಶ ಇರಿಸುವಂತಹ ಅನೇಕ ದೇಸಿ ಪಾನೀಯಗಳಿವೆ. ಈ ದೇಸಿ ಪಾನೀಯಗಳನ್ನು ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ. ಪ್ರಸ್ತುತ ನಾವೆಲ್ಲರೂ ಹೆಚ್ಚಾಗಿ ಫಿಜ್ಜಿ, ಸೋಡಾಗಳಂತಹ ಪ್ಯಾಕೆಜ್ ಪಾನೀಯಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತೇವೆ. ಆದರೆ ಇವುಗಳಿಂದ ಆರೋಗ್ಯಕ್ಕೆ ಹಾನಿಕರವೇ ಹೊರತೂ ದೇಸಿ ಪಾನೀಯಗಳಂತೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ. ಆದ್ದರಿಂದ ಈ ಬೇಸಿಗೆಯಲ್ಲಿ ಆದಷ್ಟು ಆರೋಗ್ಯಕರ ಪಾನೀಯಗಳನ್ನು ಸೇವನೆ ಮಾಡುತ್ತಾ ಆರೋಗ್ಯವನ್ನು ಕಾಪಡಿಕೊಳ್ಳಬೇಕು.

ಇತ್ತೀಚಿಗೆ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಅವರು ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ನೀರನಾಂಶ ಹಾಗೂ ಶಕ್ತಿಯುತವಾಗಿರಿಸಲು ಸಹಕಾರಿಯಾಗುವ ದೇಸಿ ಪಾನೀಯಗಳ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವುಗಳನ್ನು ಮನೆಯಲ್ಲಿ ಲಭ್ಯವಿರುವ ಪಾದರ್ಥಗಳನ್ನು ಬಳಸಿ ಸಲಭವಾಗಿ ತಯಾರಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಲೊವ್ನೀತ್ ಬಾತ್ರಾ ಸೂಚಿಸಿರುವ 5 ಬಗೆಯ  ನೈಸರ್ಗಿಕ ದೇಸಿ ಪಾನೀಯಗಳು:

ಸಟ್ಟು ಶರ್ಬತ್: ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಜೊತೆಗೆ ಬೇಸಿಗೆಯ ಅತ್ಯುತ್ತಮ ಪಾನೀಯವಾಗಿದೆ. ಇದರಲ್ಲಿ ಸತು, ಕಬ್ಬಿಣ, ಮ್ಯಾಂಗನೀಸ್ ಮತ್ತು ಮೆಗ್ನೇಸಿಯಂ ಅಧಿಕವಾಗಿದೆ. ಮತ್ತು ಇದರಲ್ಲಿ ಸೋಡಿಯಂ ಕಡಿಮೆಯಿದೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ದೇಹವನ್ನು ತಂಪಾಗಿರಿಸುತ್ತದೆ. ನೀವು ಸಟ್ಟುವಿನಿಂದ ಪಾನಕವನ್ನು ತಯಾರಿಸಬಹುದು. ಅಥವಾ ರುಚಿಕರವಾದ ಮಿಲ್ಕ್ಶೇಕ್ ತಯಾರಿಸಿಯೂ ಸೇವನೆ ಮಾಡಬಹುದು. ಇದನ್ನು ಸೇವನೆ ಮಾಡುವ ಮೂಲಕ ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸಬಹುದು.

ಮಜ್ಜಿಗೆ: ಇದು ಭಾರತದ ಜನಪ್ರಿಯ ದೇಸಿ ಪಾನೀಯವಾಗಿದೆ. ಇದಕ್ಕೆ ಉಪ್ಪು, ಪುದೀನಾ ಹಾಗೂ ಇನ್ನಿತರ ಮಸಾಲೆಗಳನ್ನು ಸೇರಿಸಿರುವುದರಿಂದ ಇದು ಸೇವೆಸಲು ತುಂಬಾ ರುಚಿಕರವಾಗಿರುತ್ತದೆ. ಬೆಸಿಗೆಯ ಶಾಖದಿಂದ ನಮ್ಮ ದೇಹವನ್ನು ರಕ್ಷಿಸಲು ನಿಯಮಿತವಾಗಿ ಮಜ್ಜಿಗೆಯನ್ನು ಸೇವನೆ ಮಾಡುವುದು ಉತ್ತಮ. ಮಜ್ಜಿಗೆ ನಿಮ್ಮನ್ನು ಹೈಡ್ರೇಟ್ ಮಾಡಲು ಮತ್ತು ದೇಹಕ್ಕೆ ಶಕ್ತಿಯನ್ನು ತುಂಬಲು ಸಹಕಾರಿಯಾಗಿದೆ. ಇದು ಎಲೆಕ್ಟೊಲೈಟ್‌ಗಳಿಂದ ತುಂಬಿದೆ ಮತ್ತು ಇದು ದೇಹವನ್ನು ತಂಪಾಗಿರಿಸುತ್ತದೆ ಎಂದು ಬಾತ್ರಾ ಹೇಳುತ್ತಾರೆ.

ಬೇಲ್ ಹಣ್ಣಿನ ಜ್ಯೂಸ್: ಬೆಲ್ ಅಥವಾ ಮರಸೇಬು ದೇಹದ ನಿರ್ಜಲೀಕರಣವನ್ನು ತಡೆಯುವ ಮತ್ತು ದೇಹವನ್ನು ತಂಪುಗೊಳಿಸುವ, ಚೈತನ್ಯ ನೀಡುವ ಉತ್ತಮ ಹಣ್ಣಾಗಿದೆ. ಬೇಲ್ ಜ್ಯೂಸ್ ರೈಬೊಫ್ಲಾವಿನ್, ವಿಟಮಿನ್ ಬಿ ಅಂಶದಿಂದ ತುಂಬಿದೆ. ಹಾಗೂ ಬೇಸಿಗೆಯ ದಿನಗಳಲ್ಲಿ ದೇಹದ ಶಕ್ತಿಯ ಪೂರೈಕೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ.

ಇದನ್ನೂ ಓದಿ:Summer Health: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 5 ಸುಲಭ ಮಾರ್ಗಗಳು ಇಲ್ಲಿವೆ

ಸೌತೆಕಾಯಿ ಪುದೀನಾ ಜ್ಯೂಸ್: ಸೌತೆಕಾಯಿ ಪುದೀನಾ ಜ್ಯೂಸ್ ದೇಹವನ್ನು ತಂಪಾಗಿಸುವ ಹಾಗೂ ತೂಕ ನಷ್ಟಕ್ಕೆ ಸಹಾಯ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಬೇಸಿಗೆಯಲ್ಲಿ ಸೇವಿಸಲು ಸೂಕ್ತವಾದ ಪಾನೀಯವಾಗಿದೆ. ಸೌತೆಕಾಯಿ ಮತ್ತು ಪುದೀನಾದ ಸಂಯೋಜನೆಯು ಶಾಖದ ಹೊಡೆತದ ಸಾಧ್ಯತೆಗಳನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಒಳಗಿನಿಂದ ನೀರಿನಾಂಶಕ್ಕೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸೀಯಾಳ: ಬೇಸಿಗೆಯಲ್ಲಿ ದಾಹವನ್ನು ನೀಗಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುವ ಪಾನೀಯಗಳಲ್ಲಿ ಸೀಯಾಳ ಕೂಡಾ ಒಂದು. ಇದು ನೈಸರ್ಗಿಕ ಪಾನೀಯವಾಗಿದೆ. ಇದು ಸೋಡಿಯಂ, ಪೊಟ್ಯಾಸಿಯಂ, ಮೆಗ್ನೇಸಿಯಂ ಮತ್ತು ಕ್ಯಾಲ್ಸಿಯಂನಂತಹ ಬೆವರಿನ ಮೂಲಕ ಹೊರಹಾಕಲ್ಪಟ್ಟ ಮಾನವನ ದೇಹದ ವಿದ್ಯುದ್ವಿಚ್ಪೇದ್ಯವನ್ನು ದೇಹದಲ್ಲಿ ಪುನರ್ ತುಂಬಿಸುತ್ತದೆ ಎಂದು ಲೊವ್ನೀತ್ ಬಾತ್ರಾ ಹೇಳುತ್ತಾರೆ.