Fruits For Under Eye Dark Circles: ಕಣ್ಣಿನ ಸುತ್ತಲಿನ ಕಪ್ಪು ಕಲೆ ಸಮಸ್ಯೆ ನಿವಾರಿಸಲು ಈ ಹಣ್ಣುಗಳು ಸಹಕಾರಿ

| Updated By: ಅಕ್ಷತಾ ವರ್ಕಾಡಿ

Updated on: Sep 21, 2023 | 5:42 AM

ಕಳಪೆಮಟ್ಟದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಪಾಲನೆಯು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಸ್ಯೆಗಳಲ್ಲಿ ಡಾರ್ಕ್ ಸರ್ಕಲ್ ಸಮಸ್ಯೆ ಕೂಡಾ ಒಂದು. ದೇಹದಲ್ಲಿ ನೀರು ಮತ್ತು ವಿಟಮಿನ್ಗಳ ಕೊರೆತೆಯಿಂದ, ಕಪ್ಪು ವರ್ತುಲಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಲ್ಲದೆ ನಿದ್ರೆಯ ಕೊರತೆಯಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಅನೇಕ ಜನರು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರ. ಆದರೆ ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರವನ್ನು ಪಡೆಯಬಹುದು.

Fruits For Under Eye Dark Circles: ಕಣ್ಣಿನ ಸುತ್ತಲಿನ ಕಪ್ಪು ಕಲೆ ಸಮಸ್ಯೆ ನಿವಾರಿಸಲು ಈ ಹಣ್ಣುಗಳು ಸಹಕಾರಿ
Fruits For Under Eye Dark Circles
Image Credit source: Pinterest
Follow us on

ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳುವ ಕಪ್ಪು ಕಲೆಗಳು ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿರಬಹುದು. ಅತಿಯಾದ ಒತ್ತಡ, ನಿದ್ರೆಯ ಕೊರತೆ, ಹಾರ್ಮೋನುಗಳ ಬದಲಾವಣೆ, ಮಿಟಮಿನ್ಗಳು ಮತ್ತು ಪೋಷಕಾಂಶಗಳ ಕೊರತೆ ಈ ಎಲ್ಲಾ ಕಾರಣಗಳಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲದೆ ಇದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಈ ಉತ್ಪನ್ನಗಳಿಂದ ಪರಿಹಾರ ಸಿಗದಿದ್ದರೆ, ಆಂತರಿಕವಾಗಿ ನಿಮ್ಮ ದೇಹವನ್ನು ಪೋಷಿಸುವುದು ಅತ್ಯಗತ್ಯ. ಅದಕ್ಕಾಗಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಇ ಜೀವಸತ್ವಗಳನ್ನು ಒಳಗೊಂಡಿರುವ ಆಹಾರವನ್ನು ಸೇವನ ಮಾಡಬೇಕು. ಜೊತೆಗೆ ಪ್ರತಿನಿತ್ಯ ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡಬೇಕು. ಇದು ದೇಹವನ್ನು ಪೋಷಣೆ ಮಾಡುವುದರೊಂದಿಗೆ ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳುವ ಕಪ್ಪು ವರ್ತುಲ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳುವ ಕಪ್ಪು ಕಲೆಗಳನ್ನು ತೊಡೆದು ಹಾಕಲು ಈ ಕೆಲವು ಹಣ್ಣುಗಳನ್ನು ಸೇವಿಸಿ:

ಕಿತ್ತಳೆ:

ಕಿತ್ತಳೆ ವಿಟಮಿನ್ ಸಿ ಯ ಸಮೃದ್ದ ಮೂಲವಾಗಿದೆ. ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಈ ಹಣ್ಣು ಸಹಕಾರಿಯಾಗಿದೆ. ಮತ್ತು ದೇಹದ ಕಾಲಜನ್ ಮಟ್ಟವನ್ನು ಹೆಚ್ಚಿಸಲು ಕೂಡಾ ಇದು ಸಹಕಾರಿ. ಚರ್ಮದಲ್ಲಿನ ಕಾಲಜನ್ ಕೊರತೆಯಿಂದಲೂ ಡಾರ್ಕ್ ಸರ್ಕಲ್ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಕಿತ್ತಳೆ ಹಣ್ಣನ್ನು ಸೇರಿಸಿಕೊಳ್ಳಬೇಕು.

ಸೀಬೆ ಹಣ್ಣು:

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪೇರಳೆ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ವಿಟಮಿನ್ ಸಿ ಪೋಷಕಾಂಶವು ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ಅವಕಾಡೊ:

ಅವಕಾಡೊ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಈ ಪೋಷಕಾಂಶವನ್ನು ಹೊಂದಿರುತ್ತದೆ. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ ಅವಕಾಡೊವನ್ನು ಸೇರಿಸಿಸುವ ಮೂಲಕ ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.

ಇದನ್ನೂ ಓದಿ: ಕರಿಬೇವಿನ ಎಲೆಗಳಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯಾ? ಮಾಹಿತಿ ಇಲ್ಲಿದೆ

ಪಪ್ಪಾಯಿ:

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ಡಾರ್ಕ್ ಸರ್ಕಲ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಪಪ್ಪಾಯಿ ವಯಸ್ಸಾಗುವಿಕೆಯ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ. ಹಾಗಾಗಿ ನೀವು ಪಪ್ಪಾಯಿಯನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ಸೌತೆಕಾಯಿ:

ಸೌತೆಕಾಯಿಯಲ್ಲಿ ವಿಟಮಿನ್ ಕೆ ಸಮೃದ್ಧವಾಗಿದೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲದೆ ಡಾರ್ಕ್ ಸರ್ಕಲ್ ಸಮಸ್ಯೆಯಿಂದಲೂ ಪರಿಹಾರವನ್ನು ನೀಡುತ್ತದೆ. ಅಲ್ಲದೆ ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ, ಇ ಮತ್ತು ವಿಟಮಿನ್ ಕೆ ಜೀವಸತ್ವಗಳಿದ್ದು, ಇದು ರಕ್ತ ಪರಿಚಲನೆಯನ್ನು ಸುಧಾರಿಸುವುದರೊಂದಿಗೆ ಡಾರ್ಕ್ ಸರ್ಕಲ್ ಸಮಸ್ಯೆಯನ್ನು ನಿವಾರಿಸುತ್ತದೆ.

ಬೆರ್ರಿ ಹಣ್ಣುಗಳು:

ನೀವು ಪ್ರತಿನಿತ್ಯ ಬೆರ್ರಿ ಹಣ್ಣುಗಳನ್ನು ಸೇವನೆ ಮಾಡಬಹುದು. ಏಕೆಂದರೆ ಈ ಹಣ್ಣುಗಳು ವಿಟಮಿನ್ ಸಿ, ಒಮೆಗಾ-3, ವಿಟಮಿನ್ ಕೆ ಮತ್ತು ಮ್ಯಾಂಗನೀಸ್ನ ಉತ್ತಮ ಮೂಲವಾಗಿದ್ದು, ಇದು ಕಣ್ಣಿನ ಸುತ್ತಲೂ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ: