
ದಿನವಿಡೀ ಉತ್ಸಾಹಭರಿತ ಮತ್ತು ಸಕಾರಾತ್ಮಕವಾಗಿರಲು ಬೆಳಗಿನ ದಿನಚರಿ (morning routine) ಉತ್ತಮವಾಗಿರಬೇಕು. ಹೌದು ದಿನದ ಆರಂಭ ಚೆನ್ನಾಗಿದ್ದರೆ ಆ ಸಂಪೂರ್ಣ ದಿನವೇ ಸಕಾರಾತ್ಮಕವಾಗಿರುತ್ತದೆ. ಅದಕ್ಕಾಗಿ ಹೆಚ್ಚಿನವರು ಬೆಳಗಿನ ದಿನಚರಿಯಲ್ಲಿ ಯೋಗ, ವ್ಯಾಯಾಮ ಮಾಡುತ್ತಾರೆ, ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುತ್ತಾರೆ. ಈ ಸಣ್ಣ ಅಭ್ಯಾಸಗಳು ನಮ್ಮನ್ನು ಆರೋಗ್ಯವಾಗಿ ಮತ್ತು ಮಾನಸಿಕವಾಗಿ ಸಕಾರಾತ್ಮಕವಾಗಿ ಇರಿಸುತ್ತದೆ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಮಾಡುವಂತಹ ಒಂದಷ್ಟು ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾದ್ರೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ದಿನವನ್ನು ಆತುರದಿಂದ ಪ್ರಾರಂಭಿಸುವುದು: ಅನೇಕ ಜನರು ಬೆಳಿಗ್ಗೆ ಎದ್ದು, ತಮ್ಮ ಅಲಾರಾಂ ಅನ್ನು ಆಫ್ ಮಾಡಿ, ತಕ್ಷಣ ತಮ್ಮ ಫೋನ್ ನೋಡುವುದು ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. ಇದು ಮೆದುಳನ್ನು ಹೈ ಅಲರ್ಟ್ ಮೋಡ್‌ಗೆ ತರುತ್ತದೆ. ಇದು ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸಬಹುದು, ಇದು ಕಿರಿಕಿರಿ, ತಲೆನೋವು ಅಥವಾ ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು.
ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದು: ಇತ್ತೀಚಿನ ದಿನಗಳಲ್ಲಿ ಎದ್ದ ತಕ್ಷಣ ಫೋನ್ ನೋಡುವ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಇದು ಮೆದುಳಿನ ಮೇಲೆ ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ. ಫೋನ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ ಮತ್ತು ಇದು ಬೆಳಗಿನ ತಾಜಾ ಮನಸ್ಥಿತಿಯನ್ನು ಕಸಿದುಕೊಳ್ಳುತ್ತದೆ.
ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು: ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇದು ಆಮ್ಲೀಯತೆ ಮತ್ತು ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡುವುದರಿಂದ ಇದು ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದು: ಬೆಳಗ್ಗೆ ಎಚ್ಚರವಾದ ನಂತರ ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದರಿಂದ ಸೋಮಾರಿತನ ಮತ್ತು ಆಲಸ್ಯ ಹೆಚ್ಚಾಗುತ್ತದೆ. ಇದು ದೇಹದ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ದಿನವಿಡೀ ನಿಮಗೆ ದಣಿವುಂಟು ಮಾಡುತ್ತದೆ. ನೀವು ಎದ್ದ ತಕ್ಷಣ ಸ್ವಲ್ಪ ಸ್ಟ್ರೆಚಿಂಗ್ ಅಥವಾ ವ್ಯಾಯಾಮ ಮಾಡುವುದು ಉತ್ತಮ.
ತಕ್ಷಣವೇ ಭಾರೀ ವ್ಯಾಯಾಮ ಮಾಡುವುದು: ಬೆಳಗ್ಗೆ ಎದ್ದ ತಕ್ಷಣವೇ ಭಾರೀ ವ್ಯಾಯಾಮವನ್ನು ಮಾಡಬೇಡಿ. ಭಾರೀ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಹಠಾತ್ ಒತ್ತಡ ಉಂಟಾಗುತ್ತದೆ. ಇದು ಸ್ನಾಯುಗಳು ಮತ್ತು ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಿಗ್ಗೆ ವಾಕಿಂಗ್ ಅಥವಾ ಸ್ಟ್ರೆಚಿಂಗ್ ನಂತಹ ಲಘು ವ್ಯಾಯಾಮವನ್ನು ಮಾಡುವುದು ಉತ್ತಮ.
ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಈ ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ
ಬಾಯಿ ತೊಳೆಯದೆ ತಿನ್ನುವ ಅಭ್ಯಾಸ: ಬೆಳಿಗ್ಗೆ ಎದ್ದಾಗ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತವೆ. ಆದ್ದರಿಂದ ಬ್ರಷ್ ಮಾಡದೆ ಏನಾದ್ರೂ ಸೇವನೆ ಮಾಡಿದರೆ ಈ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರವೇಶಿಸಿ ಅವು ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತವೆ. ಆದ್ದರಿಂದ, ಬೆಳಿಗ್ಗೆ ಮೊದಲು ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸುವುದು ಮುಖ್ಯ.
ನಿಧಾನವಾಗಿ ಎದ್ದೇಳಿ ಮತ್ತು ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳಿ, ಧ್ಯಾನ ಮಾಡಿ. ಮೊದಲು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯಿರಿ, ಸ್ಟ್ರೆಚಿಂಗ್ ಮಾಡಿ ನಂತರ ವ್ಯಾಯಾಮ ಮಾಡಿ. ಅಲ್ಲದೆ, ಎದ್ದ ತಕ್ಷಣ ನಿಮ್ಮ ಫೋನ್ ಬಳಸುವುದನ್ನು ತಪ್ಪಿಸಿ ಮತ್ತು ನಿಮ್ಮ ದಿನವನ್ನು ಸರಳ ಮತ್ತು ಶಾಂತ ಕೆಲಸಗಳೊಂದಿಗೆ ಪ್ರಾರಂಭಿಸಿ. ಇದು ನಿಮ್ಮ ಮನಸ್ಥಿತಿ, ಆರೋಗ್ಯ ಎರಡನ್ನೂ ಸುಧಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Sun, 29 March 26