ಪಾದ ಮುಟ್ಟಿ ನಮಸ್ಕರಿಸುವುದು ಕೇವಲ ಸಂಪ್ರದಾಯವಲ್ಲ, ಅದರ ಹಿಂದೆ ಆರೋಗ್ಯ ಪ್ರಯೋಜಗಳಿವೆ 

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2023 | 4:28 PM

ಭಾರತೀಯ ಸಂಸ್ಕೃತಿಯಲ್ಲಿ ಕಿರಿಯರು ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದವನ್ನು ಪಡೆಯುವ ಪದ್ದತಿಯಿದೆ. ಅದರಲ್ಲೂ ದಿನನಿತ್ಯ ತಂದೆತಾಯಿಯ ಪಾದಗಳಿಗೆ ನಮಸ್ಕರಿಸಿ ಆಶಿರ್ವಾದ ಪಡೆಯಬೇಕು ಎಂದು ಹೇಳಲಾಗುತ್ತದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ, ಪ್ರತಿನಿತ್ಯ ಹಿರಿಯರ ಪಾದಗಳನ್ನು ಮುಟ್ಟಿ ಆಶಿರ್ವಾದ ಪಡೆದುಕೊಳ್ಳುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಕುರಿತ ಕುತೂಹಲಕಾರಿ  ಮಾಹಿತಿ ಇಲ್ಲಿದೆ.

ಪಾದ ಮುಟ್ಟಿ ನಮಸ್ಕರಿಸುವುದು ಕೇವಲ ಸಂಪ್ರದಾಯವಲ್ಲ, ಅದರ ಹಿಂದೆ ಆರೋಗ್ಯ ಪ್ರಯೋಜಗಳಿವೆ 
ಸಾಂದರ್ಭಿಕ ಚಿತ್ರ
Follow us on
ನಾವೆಲ್ಲರೂ ನಮ್ಮ ಹಿರಿಯರ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸುತ್ತೇವೆ ಮತ್ತು ಅವರಿಂದ ಆಶಿರ್ವಾದವನ್ನು ಪಡೆದುಕೊಳ್ಳುತ್ತೇವೆ. ಈ ಸಂಪ್ರದಾಯ ಸನಾತನ ಧರ್ಮದಲ್ಲಿ  ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇದು  ಇಂದಿಗೂ ರೂಢಿಯಲ್ಲಿದೆ. ಹಿರಿಯರ ಹಾಗೂ ದಿನನಿತ್ಯ ತಂದೆತಾಯಿಯ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದವನ್ನು ಪಡೆಯುವುದರಿಂದ ನಮಗೆ ಶ್ರೇಯಸ್ಸು ದೊರೆಯುತ್ತದೆ ಎಂದು ಹೇಳಲಾಗುತ್ತದೆ.  ಧರ್ಮ ಗ್ರಂಥಗಳ ಪ್ರಕಾರ, ಪ್ರತಿದಿನ ತಂದೆತಾಯಂದಿರ ಪಾದಗಳನ್ನು ಸ್ಪರ್ಶಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ದಿ ಬರುತ್ತದೆ.  ನಿಮಗೆ ಗೊತ್ತಾ,  ಪಾದ ಸ್ಪರ್ಶಿಸಿ ನಮಿಸುವುದರಿಂದ ನಮಗೆ ಹಿರಿಯರ ಆಶಿರ್ವಾದ ದೊರೆಯುವುದು ಮಾತ್ರವಲ್ಲದೆ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಹೌದು ಇದರಿಂದ  ಹಲವಾರು ಆರೋಗ್ಯ ಪ್ರಯೋಜನಗಳೂ ದೊರೆಯುತ್ತದೆ. ಹಾಗಾದರೆ ಪಾದ ಸ್ಪರ್ಶಿಸಿ ನಮಸ್ಕರಿಸುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ.

ಹಿರಿಯರ ಪಾದ ಸ್ಪರ್ಶಿಸಿ ಆಶಿರ್ವಾದ ಪಡೆದುಕೊಳ್ಳುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳು:

ಬೆನ್ನು ನೋವಿನಿಂದ ಮುಕ್ತಿ:

ದೀರ್ಘಕಾಲದವರೆಗೆ ಸೊಂಟ ಮತ್ತು ಬೆನ್ನುನೋವಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ, ಪ್ರತಿದಿನ ನಿಮ್ಮ ಮನೆಯ ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದ ಪಡೆಯಿರಿ. ಹೀಗೆ ಮಾಡುವುದರಿಂದ ಸೊಂಟ ಮತ್ತು ಬೆನ್ನು ನೋವಿನ ಸಮಸ್ಯೆಯಿಂದ ಬೇಗನೆ ಪರಿಹಾರ ಸಿಗುತ್ತದೆ.  ಅಲ್ಲದೆ ಪಾದ ಸ್ಪರ್ಶಿಸುವಾಗ ದೇಹವು ಬಾಗುತ್ತದೆ ಇದರಿಂದ  ರಕ್ತ ಪರಿಚಲನೆಯು ಉತ್ತಮಗೊಳ್ಳಲು ಪ್ರಾರಂಭಿಸುತ್ತದೆ.

ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ:

ಆರೋಗ್ಯ ತಜ್ಞರ ಪ್ರಕಾರ, ಪ್ರತಿನಿತ್ಯ ತಂದೆತಾಯಿ ಅಥವಾ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದರಿಂದ ಸೊಂಟದ ಮೇಲ್ಭಾಗದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಚರ್ಮ ಮತ್ತು ಕೂದಲಿನ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ ಹಾಗೂ ಇದು  ಕೂದಲು ಮತ್ತು ಚರ್ಮದಲ್ಲಿ ಹೊಳಪನ್ನು ತರುತ್ತದೆ. ಮಾತ್ರವಲ್ಲದೆ  ಇದು ಮೊಡವೆ ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಯೋಗದಲ್ಲಿ ಪಾದಗಳನ್ನು ಸ್ಪರ್ಶಿಸುವುದನ್ನು ಸಾಷ್ಟಾಂಗ ಎಂದು ಕರೆಯಲಾಗುತ್ತದೆ. ಇದು ಸೂರ್ಯ ನಮಸ್ಕಾರದ ಸಮಸಯದಲ್ಲಿ ಮಾಡುವ ಯೋಗವಾಗಿದೆ.

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ:

ನೀವು ನಿಯಮಿತವಾಗಿ  ಹಿರಿಯರ ಪಾದಗಳನ್ನು ಸ್ಪರ್ಶಿಸಿದರೆ , ಅದು ಹೃದಯದಲ್ಲಿ ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯಕ್ಕೆ ತುಂಬಾನೇ  ಒಳ್ಳೆಯದು. ಇದು ಕೊಲೆಸ್ಟ್ರಾಲ್, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದ್ದರಿಂದ ಹೃದಯವನ್ನು ಆರೋಗ್ಯಕರವಾಗಿಡಲು ದಿನನಿತ್ಯ ಹೆತ್ತವರ ಪಾದ ಮುಟ್ಟಿ ನಮಸ್ಕರಿಸಿ. ಮತ್ತು ಹೀಗೆ ಮಾಡುವುದರಿಂದ  ದೇಹದ ರಕ್ತ ಪರಿಚಲನೆಯು ಸರಾಗವಾಗಿ ಸಾಗುತ್ತದೆ.
ಇದನ್ನೂ ಓದಿ: ಕಡಿಮೆ ರಕ್ತದೊತ್ತಡ, ಅಧಿಕ ರಕ್ತದೊತ್ತಡದಿಂದ ಪಾರಾಗಲು ಹೀಗಿರಲಿ ನಿಮ್ಮ ಜೀವನಶೈಲಿ

ನರಮಂಡಲಕ್ಕೆ ಉಪಯೋಗಕಾರಿ:

ಪಾದಗಳನ್ನು ಸ್ಪರ್ಶಿಸುವ ಮೂಲಕ ಅಶಿರ್ವಾದವನ್ನು ತೆಗೆದುಕೊಳ್ಳುವುದರಿಂದ ನರಮಂಡಲವು ಸುಧಾರಿಸುತ್ತದೆ.  ಹೀಗೆ ನಮಸ್ಕರಿಸುವಾಗ ಹಿರಿಯರ ಪಾದಗಳಿಗೆ ನಮ್ಮ ಬೆರಳುಗಳು ತಾಕುತ್ತವೆ ಅದು ಆಕ್ಯುಪ್ರೆಶರ್ ನಂತೆ ಕೆಲಸ ಮಾಡುತ್ತದೆ. ಹಾಗೂ ಇದು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ನೀವು ಪಾದಗಳನ್ನು ಸ್ಪರ್ಶಿಸಿದಾಗ ನಿಮ್ಮ ದೈಹಿಕ ಚಟುವಟಿಕೆಯು ಹೆಚ್ಚುತ್ತದೆ. ಇದು ನಿಮ್ಮ ದೇಹದಲ್ಲಿ ಒಟ್ಟಾರೆಯಾಗಿ ರಕ್ತಪರಿಚಲನೆಯನ್ನು ಸುಧಾರಿಸಲು ಸಹಕಾರಿಯಾಗಿದೆ.

ಪಾದಗಳನ್ನು ಸ್ಪರ್ಶಿಸುವುದರಿಂದ ದೊರೆಯುವ ಮಾನಸಿಕ ಪ್ರಯೋಜನಗಳು:

ಹಿರಿಯರ ಪಾದಗಳನ್ನು ಸ್ಪರ್ಶಿಸುವುದರಿಂದ ಅನೇಕ ಮಾನಸಿಕ ಪ್ರಯೋಜನಗಳು ಲಭಿಸುತ್ತದೆ. ನಾವು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದಾಗ ಅದು ನಮ್ಮ ನಮ್ರತೆ ಮತ್ತು ಕೃತಜ್ಞತೆಯ ಭಾವನೆಯನ್ನು ಉತೇಜಿಸುತ್ತದೆ ಹಾಗೂ ಮನಸ್ಸಿನಿಂದ ಅಹಂಕಾರ ಮತ್ತು ಸ್ವಾರ್ಥ ಭಾವನೆಗಳನ್ನು ತೆಗೆದುಹಾಕುತ್ತದೆ.  ಮಾತ್ರವಲ್ಲದೆ ಪಾದ ಮುಟ್ಟಿ ನಮಸ್ಕರಿಸುವುದರಿಂದ ಸಕಾರಾತ್ಮಕ ಶಕ್ತಿಯೂ ನಮಗೆ ದೊರೆಯುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: