Upma For Weight Loss: ತೂಕ ನಷ್ಟಕ್ಕೆ ಸಹಾಯಕವಾಗುವ ಆರೋಗ್ಯಕರ ರಾಗಿ ಉಪ್ಪಿಟ್ಟು ಪಾಕವಿಧಾನ ಇಲ್ಲಿದೆ

|

Updated on: Feb 21, 2023 | 6:43 PM

ಆರೋಗ್ಯಕರವಾಗಿ ಮತ್ತು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ಮಾಡಲು ಆಹಾರ ತಯಾರಿಕೆಯಲ್ಲಿ ಅನೇಕ ಪ್ರಯೋಗ ಮತ್ತು ಮಾರ್ಪಾಡುಗಳನ್ನು ಕಾಣಬಹುದು. ಇಂದು ರಾಗಿಯನ್ನು ಬಳಸಿಕೊಂಡು ಉಪ್ಮಾವನ್ನು ಯಾವ ರೀತಿ ಮಾಡವುದು ಎಂಬ ಬಗ್ಗೆ ತಿಳಿಸಿಕೊಡುತ್ತೇವೆ.

Upma For Weight Loss: ತೂಕ ನಷ್ಟಕ್ಕೆ ಸಹಾಯಕವಾಗುವ ಆರೋಗ್ಯಕರ ರಾಗಿ ಉಪ್ಪಿಟ್ಟು ಪಾಕವಿಧಾನ ಇಲ್ಲಿದೆ
ರಾಗಿ ಉಪ್ಪಿಟ್ಟು
Image Credit source: Youtube
Follow us on

ನಿಮ್ಮ ದೈನಂದಿನ ಉಪಹಾರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಕೆಲವೊಂದು ಭಕ್ಷ್ಯಗಳಲ್ಲಿ ಉಪ್ಮಾ ಕೂಡ ಒಂದು. ಉಪ್ಪಿಟ್ಟು ದಕ್ಷಿಣ ಭಾರತೀಯ ಶೈಲಿಯ ಉಪಹಾರವಾಗಿದ್ದು, ತ್ವರಿತ ಮತ್ತು ಸುಲಭವಾಗಿ ಮಾಡಬಹುದಾದ ಭಕ್ಷ್ಯವಾಗಿದೆ. ಸಾಂಪ್ರದಾಯಿಕವಾಗಿ ಉಪ್ಪಿಟ್ಟನ್ನು ರವೆಯಿಂದ ತಯಾರಿಸಲಾಗುತ್ತದೆ. ಇದಕ್ಕೆ ಕೆಲವು ಮೂಲ ಮಸಾಲೆಗಳು ಮತ್ತು ತರಕಾರಿಗಳನ್ನು ಸೇರಿಸಲಾಗುತ್ತದೆ. ಇದು ಹಗುರ ಮತ್ತು ಆರೋಗ್ಯಕರ ತಿಂಡಿಯಾಗಿದೆ. ಇದರ ಜನಪ್ರಿಯತೆಯನ್ನು ಹೆಚ್ಚಿಸುವ ಇನ್ನೊಂದು ಅಂಶವೆಂದರೆ ಅದಕ್ಕೆ ಸಂಬಂಧಿಸಿದ ಆರೋಗ್ಯ ಪ್ರಯೋಜನಗಳು. ಆರೋಗ್ಯ ಮತ್ತು ಫಿಟ್‌ನೆಸ್ ಪರಿಣಿತರು ಉಪ್ಮಾವನ್ನು ತೂಕನಷ್ಟಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಾರೆ.

ತೂಕ ನಷ್ಟಕ್ಕೆ ಉಪ್ಮಾ ಉತ್ತಮವಾದ ಆಯ್ಕೆ ಎಂದು ಏಕೆ ಪರಿಗಣಿಸಲಾಗಿದೆ?

ರವೆ ಮತ್ತು ತರಕಾರಿಗಳೊಂದಿಗೆ ತಯಾರಿಸಿದ ಉಪ್ಮಾ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತದೆ. ಇದು ದೀರ್ಘಾವಧಿಯವರೆಗೆ ನಿಮ್ಮ ಹೊಟ್ಟೆ ಪೂರ್ಣವಾಗಿರಿಸಿ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನಾರೋಗ್ಯಕರ ಆಹಾರಗಳನ್ನು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಫೈಬರ್ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ , ಹೊಟ್ಟೆಯುಬ್ಬರವನ್ನು ತಡೆಯುತ್ತದೆ. ಉಪ್ಮಾವನ್ನು ತಯಾರಿಸಲು ಬಳಸುವ ಪದಾರ್ಥಗಳಲ್ಲಿ ಕೊಬ್ಬಿನಾಂಶವು ಕಡಿಮೆಯಿರುತ್ತದೆ. ಇದರಿಂದಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಭಕ್ಷ್ಯವು ಅತ್ಯುತ್ತಮ ಆಯ್ಕೆಯಾಗಿದೆ.

ರಾಗಿ ಉಪ್ಪಿಟ್ಟು ಆರೋಗ್ಯ ಪ್ರಯೋಜನಗಳು ಇಲ್ಲಿವೆ:

ಫೈಬರ್‌ನಿಂದ ಸಮೃದ್ಧವಾಗಿದೆ:

ರಾಗಿಯು ಫೈಬರ್‌ನ ಉತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗೂ ದೀರ್ಘಾವಧಿಯವರೆಗೆ ನಿಮ್ಮ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಪರಿಪೂರ್ಣವಾದ ಆಹಾರ ಕ್ರಮವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ:

ರಾಗಿ ಕಡಿಮೆ ಗ್ಲೆಸೆಮಿಕ್ ಅಂಶವನ್ನು ಹೊಂದಿರುವ ಸಂಕೀರ್ಣ ಕಾರ್ಬೋಹೈಡ್ರೇಟ್ ಆಹಾರವಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸಲು ಉತ್ತಮವಾದ ಆಹಾರವಾಗಿದೆ.

ಮೂಳೆಯ ಆರೋಗ್ಯಕ್ಕೆ ಒಳ್ಳೆಯದು:

ರಾಗಿಯು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ, ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ರಾಗಿ ಉಪ್ಮಾವನ್ನು ನಿಯಮಿತವಾಗಿ ತಿನ್ನುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳಾದ ಆಸ್ಟಿಯೊಪೊರೋಸಿಸ್ ಮತ್ತು ಇತರ ಕಾಯಿಲೆಗಳನ್ನು ತಡೆಯಬಹುದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ರಾಗಿ ಉಪ್ಮಾವು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ವಿವಿಧ ರೋಗಗಳನ್ನು ತಡೆಯುತ್ತದೆ.

ಅಂಟು ಮುಕ್ತ:

ರಾಗಿಯು ಅಂಟು ಮುಕ್ತ ಧಾನ್ಯವಾಗಿದೆ. ಇದು ಉದರದ ಕಾಯಿಲೆ ಇರುವವರಿಗೆ ಸೇವಿಸಲು ಉತ್ತಮವಾದ ಆಹಾರವಾಗಿದೆ.

ಇದನ್ನೂ ಓದಿ: ಆರೋಗ್ಯಕರ ಬೀಟ್ರೂಟ್​​ ವೈನ್​ ತಯಾರಿಸಿ, ರೆಸಿಪಿ ಇಲ್ಲಿದೆ

ರಾಗಿ ಉಪ್ಪಿಟ್ಟು ಮಾಡುವುದು ಹೇಗೆ:

ಬೇಗಾಗುವ ಪದಾರ್ಥಗಳು:

ರಾಗಿ, ಗೋಡಂಬಿ, ಒಣದ್ರಾಕ್ಷಿ, ತೆಂಗಿನಕಾಯಿ ತುರಿ, ತೆಂಗಿನ ಹಾಲು, ತೆಂಗಿನ ಎಣ್ಣೆ, ಸಾಸಿವೆ, ಕರಿಬೇವಿನ ಎಲೆ, ಕಾಶ್ಮೀರಿ ಮೆಣಸಿನಕಾಯಿ, ಈರುಳ್ಳಿ, ಶುಂಠಿ, ಬಟಾಣಿ, ಉಪ್ಪು ಮತ್ತು ಸಕ್ಕರೆ.

ರಾಗಿ ಉಪ್ಪಿಟ್ಟು ಮಾಡುವ ವಿಧಾನ:

ರಾಗಿಯನ್ನು ರಾತ್ರಿಯಿಡಿ ನೆನೆಸಿಟ್ಟು ನಂತರ ಅದು ಬೇಯುವವರೆಗೆ ನೀರಿನಲ್ಲಿ ಕುದಿಸಿ. ಇದಾದ ಬಳಿಕ ಒಂದು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಮೆನಸಿನಕಾಯಿಯನ್ನು ಸೇರಿಸಿ ಹೊಗೆ ಬರುವವರೆಗೆ ಫ್ರೈ ಮಾಡಿ. ಅದನ್ನು ಪಕ್ಕಕ್ಕೆ ಇಟ್ಟು ಬಿಡಿ. ಮತ್ತೊಮ್ಮೆ ಅದೇ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ತಯಾರಿಸಿ. ನಂತರ ಈರುಳ್ಳಿ ಮತ್ತು ಶುಂಠಿಯನ್ನು ಎಣ್ಣೆಯಲ್ಲಿ ಹುರಿಯಿರಿ. ನಂತರ ಅದಕ್ಕೆ ಬೇಯಿಸಿದ ರಾಗಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ತೆಂಗಿನಕಾಯಿ ತುರಿ, ಹಸಿ ಬಟಾಣಿ ಮತ್ತು ಸ್ವಲ್ಪ ಗೋಡಂಬಿ ದ್ರಾಕ್ಷಿಯನ್ನು ಕೂಡಾ ಸೇರಿಸಿ. ಇದಕ್ಕೆ ಸೇರಿಸಿ ಕುದಿಯಲು ಬಿಡಿ. ನಂತರ ಇದಕ್ಕೆ ತೆಂಗಿನಕಾಯಿ ಹಾಲು, ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ನಂತರ ಕಡಾಯಿಯ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಇದು ತಯಾರಾದ ಬಳಿಕ ಹುರಿದ ಮೆಣಸಿನ ಕಾಯಿ, ಗೋಡಂಬಿ ಮತ್ತು ಕರಿಬೇವಿನ ಎಲೆಗಳಿಂದ ಉಪ್ಮಾವನ್ನು ಅಲಂಕರಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:43 pm, Tue, 21 February 23