Valentines day : ದೇಶ ಕಾಯೋ ಯೋಧ ನನ್ನ ಪ್ರೇಮಿ ಅವೀ..
Valentines day : ತಾಯಿ ಭಾರತಿಯ ಸೇವೆಗೆ ತೆರಳುವ ದಿನ ಹತ್ತಿರ ಬಂತು. ಮನದಲ್ಲಿ ದುಗುಡಗಳನ್ನು ಕಟ್ಟಿಕೊಂಡು, ಪ್ರೇಮಿಯನ್ನು ಕಣಿವೆ ರಾಜ್ಯ ಕಾಶ್ಮೀರಕ್ಕೆ ಕಳುಹಿಸಲಾಯಿತು. ವಾರಕ್ಕೆ ಒಮ್ಮೆ ,ಎರಡು ದಿನಕೊಮ್ಮೆ ಕರೆ ಮಾಡಿ ಮಾತನಾಡುತ್ತಿದ್ದ. ಅಲ್ಲಿ ತೆರಳಿ ವರುಷ ಕಳೆದ ಮೇಲೆ, ಮತ್ತೊಮ್ಮೆ ನನ್ನ ನೋಡಲು ಬಂದ, ನನ್ನ ಖುಷಿಗೆ ಪಾರವೇ ಇರಲಿಲ್ಲ. ಆತ ಇದ್ದಷ್ಟು ದಿನ ಖುಷಿಯಾಗಿಯೇ ಆತನೊಂದಿಗೆ ಸುತ್ತಾಡಿ ಮತ್ತೊಮ್ಮೆ ಆತನನ್ನು ಸೇನೆಯ ಯೂನಿಪಾರ್ಮ್ ದಿರಸಿನೊಂದಿಗೆ ಹೆಮ್ಮೆಯಿಂದ ಕಳುಹಿಸಿದೆನು. ಒಂದು ದಿನ ಟಿ. ವಿ ನೋಡುವಾಗ ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾದರು ಎಂಬ ಸುದ್ದಿಯನ್ನು ನೋಡಿ ಕುಸಿದು ಹೋದೆ. ಮರುಕ್ಷಣವೇ ಬಂದ ಕರೆಯ ಮಾತು ಇನ್ನೂ ಕಿವಿಯಂಚಲ್ಲಿ ಇನ್ನೂ ಮಾರ್ದನಿಸುತ್ತಿದೆ. "ಅವೀ ಇನ್ನಿಲ್ಲ
ಪ್ರತಿಬಾರಿ ಪ್ರೇಮಿಗಳ ದಿನ ಬಂದಾಗ, ಕಣ್ಣಲೆಯಲ್ಲೊಂದು ತುಸು ನೆಮ್ಮದಿ.ಕಾರಣ ಖುಷಿಯ ಹೊಳೆ ಹರಿಸೋ ನೆಪವಲ್ಲ. ಬದಲಾಗಿ ಅವನ ನೆನಪಿನಲ್ಲಿ. ಯಾವತ್ತೂ ಕಣ್ಣೀರು ಹಾಕದ ಕಣ್ಣು ಅಂದು ಮಾತ್ರ ಕಣ್ಣೀರಲ್ಲೇ ಮಿಂದೇಳುತ್ತದೆ. ಕಣ್ಣು ಕೂಡ ಯೋಚಿಸುತ್ತೋ ಏನೋ ನನ್ನ ಇವತ್ತು ತೊಳೆದು ಹಾಕಿ ನನಗೂ ನೆಮ್ಮದಿ ತಂದಳೋ ಏನೋ!!. ಕೈ ಹಿಡಿದ ದಿನದಿಂದ ಯೋಚಿಸುವಷ್ಟು ಬಿಡಲಿಲ್ಲ. ಬಾಳ ಪಯಣದಿ ಉರಿವ ದೀಪವಾದರು. ಬಿಸಿ ಉಸಿರ ಚೆಲ್ಲಿದರು, ನನ್ನ ಜೇನ್ತುಟಿಗೆ ಸಿಹಿ ಮುತ್ತಿನ ಹೊಳೆ ಹರಿಸಿದವನು. ನನ್ನ ಆತ್ಮವಿಶ್ವಾಸದ ಬಲ ಬಾಗಿದಂತೆಲ್ಲ ಊರುಗೋಲಾಗಿ ಬಂದು ಆತ್ಮ ವಿಶ್ವಾಸದ ಬೆಳಕು ಚೆಲ್ಲಿದವನು. ಹೃದಯದೊಳಗೆ ಅಚ್ಚಾಗಿದ್ದವನು ಇಂದು ಜೊತೆಯಾಗಿ ಇಲ್ಲದವನು. ಅವೀ.. ಹೀಗೆಂದೂ ಬರೆಯುತ್ತಿದ್ದ ಅನುಷಾಳ ಕಣ್ಣಿಂದ ಪಟ ಪಟನೇ ಬೀಳುತ್ತಿದ್ದ ಕಣ್ಣೀರು ಬರೆವ ಪುಟಗಳನ್ನೇ ಒದ್ದೆಯಾಗಿಸಿಟ್ಟಿತು.ಸರಿಯಾಗಿ ನೆನಪಿದೆ ಪಿಯುಸಿ ಕಲಿಯುತ್ತಿದ್ದಾಗ ತುಂಟ ಹುಡುಗನಾಗಿದ್ದ ಅವಿನಾಶ್ ಮಾತಿಗಿಳಿಯದೆಯೇ ನನ್ನ ಬಳಿಯೇ ಸುತ್ತುತ್ತಿದ್ದ. ನಾನು ನನ್ನ ಪಾಡಿಗೆ ಇದ್ದರೂ ನನ್ನ ಗಮನ ಅವನತ್ತ ವಾಲುವಂತೆ ಶತ ಪ್ರಯತ್ನಗಳನ್ನೇ ಮಾಡುತ್ತಿದ್ದ.ಒಂದು ದಿನ ನನ್ನ ಬಳಿ ಬಂದ ಅವೀ “ಏ ಮೂಗುತಿ ಸುಂದರಿ ನನ್ನ ಪ್ರೀತಿಸುತ್ತೀಯಾ?” ಎಂದು ನನ್ನ ಗೆಳೆತಿಯರ ಗುಂಪಿನ ಎದುರಿಗೆ ಒಂದೇ ಸಮನೆ ಅಚಾನಕ್ ಆಗಿ ಕೇಳಿ ಬಿಟ್ಟ. ಆತನ ಮಾತು ಕೇಳಿ ಕೋಪ ಬಂದರೂ ತೋರ್ಪಡಿಸದೇ ಒಂದು ಮಾತು ಹೇಳದೇ ಅಲ್ಲಿಂದ ಹೊರಟೇ ಬಿಟ್ಟಿದ್ದೆ. ಅಂದೇ ಬೇಡವೆಂದಿದ್ದರೆ ಆತ ನನ್ನ ಜೀವನದಲ್ಲಿ ಬರುತ್ತಿರಲಿಲ್ಲವೋ ಏನೋ.? ನಾನು ಹೋದ ನಂತರ ನನಗೂ ಒಪ್ಪಿಗೆ ಇದೆಯೇನೋ ಅನಿಸಿತೋ ಅವನಿಗೆ. ದಿನವೂ ನೆಪ ಹೇಳಿ ಮಾತನಾಡಿ ಮಾತನಾಡಿ ನನಗೆ ಹತ್ತಿರವಾಗೋಕೆ ಬರುತ್ತಿದ್ದ.
ಒಂದು ಸಲವಂತೂ ಮನೆಯವರೆಗೂ ಹಿಂಬಾಲಿಸಿ ಬಂದಿದ್ದ. ನನ್ನಪ್ಪನ ತಲೆ ಕಂಡು ಕಣ್ಮರೆಯಾಗಿದ್ದು ಅಂದಿನ ನನ್ನ ಅದೃಷ್ಟ. ಯಾವೂದರಲ್ಲೂ ಯಾವುದೇ ಆಕರ್ಷಣೆಗೆ ಒಳಗಾಗದ ನಾನು ಆತನ ತುಂಟಾಟಕ್ಕೆ ಕ್ರಮೇಣ ಶರಣಾಗಿದ್ದೆ. ಪ್ರೀತಿ ಶುರುವಾದ ಮೇಲೆ ಮುಗಿದೇ ಹೋಯಿತು ಅಲ್ವಾ. ಡಿಗ್ರಿ ಕಾಲೇಜಿಗೂ ಒಂದೇ ವಿಭಾಗಕ್ಕೂ ನಾವು ಸೇಪರ್ಡೆಗೊಂಡೆವು. ಆದರೆ ಪ್ರತಿಬಾರಿಯೂ ನಮ್ಮ ಪ್ರೇಮಕ್ಕೆ ಇದೇ ದಿನವೆಂದೆ ಇರಲಿಲ್ಲ. ಎಲ್ಲಾ ದಿನವೂ ನಮ್ಮ ಪಾಲಿಗೆ ಪ್ರೇಮಿಗಳ ದಿನವೇ. ವ್ಯಾಲೆಂಟೆನ್ಸ್ ಡೇ ದಿನ ಹತ್ತಿರವಾದರೇ ನನ್ನ ಅವೀ ಹೇಳುತ್ತಿದ್ದ ಮಾತುಗಳು.” ಹೇ ನನ್ನ ನಿನ್ನ ಪ್ರೀತಿಯನ್ನು ತೋರಿಸಲು ದಿನದ ಅವಶ್ಯಕತೆಯಿಲ್ಲ. ಪ್ರತಿದಿನವೂ ನಾವು ಪ್ರೇಮಿಗಳೇ. ಪ್ರೀತಿಗೆ ಯಾವ ಸ್ಮಾರಕವೂ ಬೇಕಿಲ್ಲ, ಯಾವ ದಿನವೂ ಬೇಕಿಲ್ಲ. ಯಾರೋ ತಮಗಾಗಿ ಮಾಡಿದ ಆ ಒಂದು ದಿನವನ್ನು ರಾಷ್ಟ್ರದ ಮೇಲಿನ ಮಮತೆಗಾಗಿ ಸಮರ್ಪಿಸೋಣ” ಅನ್ನುತ್ತಿದ್ದ. ಪ್ರತಿಬಾರಿ ಪ್ರೇಮಿಗಳ ದಿನದಂದು ಆತ ಮಾತ್ರ ಪ್ರತಿದಿನಂತೆ ಇದ್ದರೂ ಬೇಸರದಲ್ಲಿರುತ್ತಿದ್ದ. ಎಷ್ಟೇ ಬಾರಿ ಕಾರಣ ತಿಳಿಯ ಬಯಸಿದರೂ ಪ್ರಯತ್ನ ವ್ಯರ್ಥವಾಗುತ್ತಿತ್ತು.
ಆತ ಕೆಲವೊಂದರಲ್ಲಿ ನಿಗೂಢ ಮನುಷ್ಯನಾಗಿಯೇ ಉಳಿದು ಬಿಟ್ಟಿದ್ದ. ಒಂದು ದಿನವೂ ತನ್ನ ಕುಟುಂಬದ ಯಾವೊಬ್ಬ ಸದಸ್ಯನನ್ನು ಪರಿಚಯಿಸಲಿರಲಿಲ್ಲ. ಕೇಳುವ ಉತ್ಸುಕತೆಯೂ ನನ್ನೊಳಗಿರಲಿಲ್ಲ. ಆ ಒಂದು ದಿನ ನನ್ನನ್ನೂ ಹತ್ತಿರ ಕರೆದಾತ ತಾನು ಸೇನೆಗೆ ಆಯ್ಕೆಯಾದ ವಿಷಯವನ್ನು ಖುಷಿ ಖುಷಿಯಾಗಿಯೇ ಹೇಳಿದ್ದ. ಆದರೆ ನನಗೆ ಆಕಾಶವೇ ಕುಸಿದು ಬಿದ್ದ ಅನುಭವ. “ಅವೀ ಮಿಲಿಟರಿ ಅಂದ್ರೇ ಆಟನಾ, ನಿನಗೆ ಅಲ್ಲಿ ಏನಾದರೂ ಆದರೆ, ನಾನು ಹೇಗೆ ಇರಲಿ ನಿನ್ನ ಬಿಟ್ಟು ???”ಅತ್ತು ಗೋಳಾಡಿದ್ದೆ ಬಂತು. ಆತನ ನಿರ್ಧಾರ ದೃಢವಾಗಿತ್ತು. “ನೋಡು ಅನು, ನನ್ನ ತಂದೆ ಈ ನಾಡಿಗಾಗಿ ರಕ್ತ ಚೆಲ್ಲಿ ಹುತಾತ್ಮರಾದರೂ, ತಾಯಿ ಅಪ್ಪನ ಕೊರಗಿನಲ್ಲಿಯೇ ತೀರಿಹೋದರು. ನನಗೂ ದೇಶ ಸೇವೆಯ ಆಕಾಂಕ್ಷೆಯಿದೆ. ತಂದೆ ತಾಯಿಗಾಗಿ ಮಾಡಲು ಏನೂ ಇಲ್ಲ. ಹೊತ್ತ ತಾಯಿಗಾದರೂ ಸೇವೆ ಮಾಡಬೇಕೆಂಬ ತುಡಿತವಿದೆ. ಹಾಗಂತ ನಿನ್ನ ಮೇಲಿನ ಪ್ರೀತಿ ಕುರುಡು ಎಂದಲ್ಲ, ನೀನು ನನ್ನೊಳಗಿರುವಾಗ ಸಾವಿನ ಭಯವೂ ಇಲ್ಲ. ಒಂದೆರಡು ವರ್ಷ ಇದ್ದು ಬಂದು ನಿನ್ನ ಮದುವೆಯಾಗಿ ಪುನಃ ಸೈನ್ಯದಲ್ಲಿಯೇ ಸೇವೆ ಸಲ್ಲಿಸುವೆ”ಎಂದು ಸಮಾಧಾನಗಳಿಸಿದ.
ಅಂತೂ ತಾಯಿ ಭಾರತಿಯ ಸೇವೆಗೆ ತೆರಳುವ ದಿನ ಹತ್ತಿರ ಬಂತು. ಮನದಲ್ಲಿ ದುಗುಡಗಳನ್ನು ಕಟ್ಟಿಕೊಂಡು, ಪ್ರೇಮಿಯನ್ನು ಕಣಿವೆ ರಾಜ್ಯ ಕಾಶ್ಮೀರಕ್ಕೆ ಕಳುಹಿಸಲಾಯಿತು. ವಾರಕ್ಕೆ ಒಮ್ಮೆ ,ಎರಡು ದಿನಕೊಮ್ಮೆ ಕರೆ ಮಾಡಿ ಮಾತನಾಡುತ್ತಿದ್ದ. ಅಲ್ಲಿ ತೆರಳಿ ವರುಷ ಕಳೆದ ಮೇಲೆ, ಮತ್ತೊಮ್ಮೆ ನನ್ನ ನೋಡಲು ಬಂದ, ನನ್ನ ಖುಷಿಗೆ ಪಾರವೇ ಇರಲಿಲ್ಲ. ಆತ ಇದ್ದಷ್ಟು ದಿನ ಖುಷಿಯಾಗಿಯೇ ಆತನೊಂದಿಗೆ ಸುತ್ತಾಡಿ ಮತ್ತೊಮ್ಮೆ ಆತನನ್ನು ಸೇನೆಯ ಯೂನಿಪಾರ್ಮ್ ದಿರಸಿನೊಂದಿಗೆ ಹೆಮ್ಮೆಯಿಂದ ಕಳುಹಿಸಿದೆನು. ಒಂದು ದಿನ ಟಿ. ವಿ ನೋಡುವಾಗ ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಯೋಧರು ಹುತಾತ್ಮರಾದರು ಎಂಬ ಸುದ್ದಿಯನ್ನು ನೋಡಿ ಕುಸಿದು ಹೋದೆ. ಮರುಕ್ಷಣವೇ ಬಂದ ಕರೆಯ ಮಾತು ಇನ್ನೂ ಕಿವಿಯಂಚಲ್ಲಿ ಇನ್ನೂ ಮಾರ್ದನಿಸುತ್ತಿದೆ. “ಅವೀ ಇನ್ನಿಲ್ಲ “!!
ಪ್ರೀತಿ ಎಂಬ ಮಾಯೆಯ ಎದುರು ದೇಶ ಪ್ರೇಮವೆಂಬ ಕಾಯಕ ಆರಿಸಿದನು. ನನ್ನನ್ನು ಬರಿದಾಗಿಸಿ, ದೇಶಕ್ಕೆ ಕೀರ್ತಿ ತಂದ ಮಗನಾದನು. ನನ್ನ ಹೃದಯವ ಕದ್ದವನ್ನು, ಆತನ ಉಸಿರನ್ನು ಮಣ್ಣಿಗಾಗಿ ಅರ್ಪಿಸಿದನು.
ಯಾರ ಸಮಾಧಾನದ ಮಾತುಗಳೂ ನನ್ನ ಕಿವಿಯಂಚು ತಲುಪಲಿಲ್ಲ.ಕೊನೆಯ ಬಾರಿ ಅವಿಯ ಮೊಗವನ್ನು ನೋಡಲಾಗಲಿಲ್ಲವೆಂಬ ಕೊರಗು ಪ್ರತಿಕ್ಷಣ ಜೀವಿಸುತ್ತಿದೆ. ಆತನ ಸಹೋದರ ಆ ಊರಿನಲ್ಲೇ ಇದ್ದುದರಿಂದಲೋ ಏನೋ ಅಲ್ಲೇ ಮಣ್ಣು ಮಾಡಿದರು ಎಂಬ ಸುದ್ದಿಯೂ ಕಿವಿ ಸೇರಿತು. ಒಂದು ವರ್ಷ ಮದುವೆಯೂ ಬೇಡ ಏನೂ ಬೇಡ ಎಂಬ ಮಾತಿನ ಮೇಲೆ ನಿಂತಿದ್ದರೂ ಮನೆಯವರ ಒತ್ತಡಕ್ಕಾಗಿ ಇನ್ನೊಬ್ಬನ ತೆಕ್ಕೆಗೆ ಬೀಳುವ ಸಮಯ ಬಂದಾಗಿತ್ತು. ಹಳೆ ನೆನಪುಗಳು ಮಾಸಿಹೋಗಿ, ಹೊಸ ಹೊಸ ನೆನಪುಗಳು ತಲೆತುಂಬಿ ಅವೀ ಬದುಕಿನ ಪುಸ್ತಕದಲ್ಲಿ ಮುಗಿದು ಹೋದ ಅಧ್ಯಾಯವಾಗಿದ್ದರೂ ನೆನಪಿನ ಮಸ್ತಕದಲ್ಲಿ ಸದಾ ಅಜಾರಮವಾಗಿದ್ದನು. ಮದುವೆಯಾಗಿ ಒಂದು ವರ್ಷ ಕಳೆದಾಗ ಒಂದು ದಿನ ಕರೆಯೊಂದು ಬಂದಿತು. ಹಲೋ ಎಂದೆಯಷ್ಟೇ. ಆ ಕಡೆಯಿಂದ ಅನು ಅನ್ನೋ ಪದ ಕೇಳಿದಾಕ್ಷಣ ಅವೀ ಅನ್ನೋ ಉಲ್ಲಾಸದ ಉದ್ಗಾರ ಬಂದಾಗಿತ್ತು. ಮುಂದಿನ ಮಾತು ಆಡುವ ಮೊದಲೇ ತಲೆಯಲ್ಲಿ ಅವೀ ಬದುಕಿದ್ದಾನೆಯೇ? ಎಂಬ ಅಚ್ಚರಿ ಒಂದೆಡೆಯಾದರೆ ಆತ ಬದುಕಿದ್ದರೆ ಸತ್ತು ಹೋದವರಂತೆ ನಟಿಸಿದ್ದು ಯಾಕೆ?ಎಂಬ ಗೊಂದಲ ಇನ್ನೊಂದೆಡೆ.ಮುಂದೆ ಮಾತನಾಡಲು ಏನೂ ತೋಚಲೇ ಇಲ್ಲ.
ಮತ್ತೆ ಮಾತು ಮುಂದುವರೆಸಿದ ಅವಿಯ ಮಾತಿಗೆ ಮೊದಲೇ,”ಇಷ್ಟು ದಿನ ನೆನಪಾಗದ ನಾನು ಇಂದೇಕೇ ನೆನಪಾದೆ!!” ಎಂದೆ.” ನಿನ್ನ ತಲೆಯಲ್ಲಿ ಯಾವ ಪ್ರಶ್ನೆಗಳು ಬರುತ್ತಿದೆ ಎಂದು ಗೊತ್ತಾಗುತ್ತಿದೆ. ಹೌದು ನಾನು ಸತ್ತಿಲ್ಲ ಹಾಗಂತ ಪೂರ್ಣವಾಗಿ ಜೀವಂತವಾಗಿಲ್ಲ. ಅಂದಿನ ಗುಂಡಿನ ಚಕಮಕಿಯಲ್ಲಿ ನನ್ನೆರಡು ಕಾಲುಗಳನ್ನು ಕಳೆದುಕೊಂಡೆ. ಕಾಲು ಕಳೆದುಕೊಂಡ ನಾನು ನಿನಗೆ ಹೇಗೆ ನನ್ನ ಮುಖ ತೋರಿಸಲಿ. ನನ್ನಿಂದ ನಿನ್ನ ಬದುಕು ನರಕವಾಗುವುದು ನನಗೆ ಇಷ್ಟವಿರಲಿಲ್ಲ. ನಿನ್ನ ಮನೆಯವರಿಗೆ ಎಲ್ಲಾ ವಿಷಯನೂ ಗೊತ್ತಿದೆ. ಅವರು ಕೈ ಮುಗಿದು ನಿನ್ನನ್ನು ಮದುವೆ ಮಾಡಿ ಕೊಡಲಾಗುವುದಿಲ್ಲ ಎಂದಾಗ ನನ್ನ ಹೃದಯ ಚೂರಾಗಿತ್ತು. ಕೊರಗು ನರಳಾಡಿದ ಸಮಯ ಕ್ಷಣಗಳಿಗೆ ಲೆಕ್ಕವೇ ಇಲ್ಲ.ಆ ಸಮಯಕ್ಕೆ ಈ ನಿರ್ದಾರವೇ ಶ್ರೇಷ್ಠ ಅನಿಸಿತು “ಎಂದನು. ಮತ್ತೆ ಮಾತು ಮುಂದುವರಿಸಿ “ನೀನು ಎಂದಿಗೂ ಸುಖವಾಗಿರು, ಅವತ್ತೇ ಹೇಳಿದ್ದೆ ಪ್ರೇಮಿಯೆಂದರೆ ದಿನದ ಆಟವಲ್ಲ. ಒಬ್ಬರ ಹಿತವನ್ನು ನೋಡುವುದು ಪ್ರೇಮವೇ.. ನನ್ನಂತೆ ಹಲವಾರು ಜನ ಈ ನಾಡಿಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಅವರಿಗಾಗಿ ರಾಷ್ಟ್ರ ಪ್ರೇಮಿಗಳ ದಿನವೆಂದು ಆಚರಿಸಬಹುದು. ಪ್ರೇಮಿಗಳಿಗೆ ದಿನವೆಂಬುದಿಲ್ಲ. ಪ್ರೀತಿಸೋ ಪ್ರತಿ ಜೀವಗಳಿಗೂ ಪ್ರತಿಕ್ಷಣವು ಪ್ರೇಮವೇ ಸ್ವಂತ. ನನ್ನ ಹುಡುಕುವ ಪ್ರಯತ್ನ ಮಾಡಬೇಡ “ಎಂದು ಹೇಳಿ ಕರೆಗೆ ಪೂರ್ಣ ವಿರಾಮವಿಟ್ಟನು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ರಾತ್ರಿ ಕಾಯುತ್ತಿದ್ದೇನೆ. ಆತನ ಕರೆಗಾಗಿ,ಅನು.. ಎಂಬ ಪ್ರೀತಿಯ ಮಾತಿಗೆ.. ಗಡಿಯಾರ ಹನ್ನೆರಡು ತೋರಿಸುತ್ತಿತ್ತು. ತಾನು ಬರೆದ ಸಾಲನ್ನು ಮತ್ತೊಮ್ಮೆ ನೋಡಿ ಮನದ ಭಾರಗಳನ್ನು ಇಳಿಸಲು ಸ್ಪಂದಿಸುವ ಕಣ್ಣೀರ ಹನಿಗಳಿಗೊಂದು ಧನ್ಯವಾದ ಹೇಳಿ ನಿದ್ರಾದೇವಿಯ ಮಡಿಲಲ್ಲಿ ಶರಣಾದಳು ಅನುಷಾ..
ಪ್ರೇಮಿಗಳ ದಿನ. ಇದೊಂದು ಬರೀ ಹೆಸರು ಅಷ್ಟೇ. ಪ್ರೇಮಿಗಳಿಗೆ ಪ್ರೀತಿಸಲು ದಿನದ ಅವಶ್ಯಕತೆಯಿಲ್ಲ. ಅವಿನಾಷ್, ಅನುಷಾಳಂತೆ ಅದೆಷ್ಟೋ ಸೈನಿಕರ ಕುಟುಂಬವು ಇದೇ. ಅದೆಷ್ಟೋ ಸೈನಿಕರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅದೆಷ್ಟೋ ಹೆಣ್ಣುಮಕ್ಕಳು, ಹೆಂಗಳೆಯರು,ಮಕ್ಕಳು ತಂದೆ ತಾಯಿ ತಮ್ಮ ಮನೆಮಗ, ಗಂಡ, ಅಪ್ಪ, ಪ್ರೇಮಿಯನ್ನು ಕಳೆದುಕೊಂಡಿದ್ದಾರೆ.ವರ್ಷದ ಈ ದಿನವನ್ನಾದರು ರಾಷ್ಟ್ರ ಪ್ರೇಮಿಗಳ ನೆನಪನ್ನು ಮಾಡಿಕೊಳ್ಳೋಣ. ಇಂದು ಇದ್ದು ನಾಳೆ ಅಳಿದು ಹೋಗೋ ಹುಚ್ಚು ವ್ಯಾಲೆಂಟೈನ್ಸ್ ದಿನ ಎಂಬ ಕಲ್ಪನೆ ಬೇಡ..
ನೀತು ಬೆದ್ರ