Hug Day 2024: ತಬ್ಬಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಾ?

|

Updated on: Feb 12, 2024 | 6:10 PM

Valentine's Week: ಇಂದು ಹಗ್ ಡೇ. ತಬ್ಬಿಕೊಳ್ಳುವ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಪ್ರೀತಿ, ಬಾಂಧವ್ಯವನ್ನು ತೋರಿಸುವ ರೀತಿಯಿದು. ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ತಬ್ಬಿಕೊಳ್ಳುವುದರಿಂದ ಅವರೊಂದಿಗೆ ಹೆಚ್ಚು ಸಂಪರ್ಕವನ್ನು ಸಾಧಿಸಲು ಮತ್ತು ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲು ಸಹಾಯಕವಾಗುತ್ತದೆ. ತಬ್ಬಿಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೂ ಅನೇಕ ಪರಿಣಾಮಗಳು ಉಂಟಾಗುತ್ತವೆ.

Hug Day 2024: ತಬ್ಬಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಾ?
ಅಪ್ಪುಗೆ
Image Credit source: iStock
Follow us on

ತಬ್ಬಿಕೊಳ್ಳುವುದು (Hug) ಎಂದರೆ ಕೇವಲ ದೈಹಿಕ ಕ್ರಿಯೆ ಮಾತ್ರವಲ್ಲ ಅದು ಮಾನಸಿಕವಾಗಿಯೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಕೇವಲ ಪ್ರೇಮಿಗಳು ಮಾತ್ರ ತಬ್ಬಿಕೊಳ್ಳಬೇಕೆಂದೇನಿಲ್ಲ. ಸ್ನೇಹಿತರು, ಕುಟುಂಬದವರು, ಸಂಗಾತಿಗಳು ಕೂಡ ತಬ್ಬಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ತೀರಿಸಬಹುದು. ಇಂದು (ಫೆ. 12) ಅಪ್ಪುಗೆಯ ದಿನ (Hug Day 2024). ಹಾಗಾದರೆ, ತಬ್ಬಿಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತವೆ?

ತಬ್ಬಿಕೊಳ್ಳುವುದು ನಿಮಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ. ತಬ್ಬಿಕೊಳ್ಳುವಿಕೆಯು ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಿಮ್ಮ ತೋಳುಗಳಲ್ಲಿ ಯಾರನ್ನಾದರೂ ತಬ್ಬಿಕೊಳ್ಳುವಾಗ ನೀವು ಪಡೆಯುವ ಬೆಚ್ಚನೆಯ ಭಾವನೆಯು ಡೋಪಮೈನ್, ಸಿರೊಟೋನಿನ್ ಮತ್ತು ಆಕ್ಸಿಟೋಸಿನ್‌ನಂತಹ ಉತ್ತಮ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರೀತಿಪಾತ್ರರನ್ನು ನೀವು ಬಿಗಿಯಾಗಿ ಅಪ್ಪಿಕೊಳ್ಳಲು ಕೆಲವು ಕಾರಣಗಳು ಇಲ್ಲಿವೆ.

ಇದನ್ನೂ ಓದಿ: Kissing Benefits: ಮುತ್ತು ಕೊಡಲು ಹಿಂಜರಿಯಬೇಡಿ; ಸೋಂಕಿನ ವಿರುದ್ಧವೂ ಹೋರಾಡುತ್ತೆ ಚುಂಬನ!

ಒತ್ತಡ, ಆತಂಕವನ್ನು ನಿವಾರಿಸುತ್ತದೆ:

ನೀವು ಎಂದಾದರೂ ಒತ್ತಡವನ್ನು ಅನುಭವಿಸಿದರೆ ಅಥವಾ ಯಾವುದರ ಬಗ್ಗೆಯಾದರೂ ಆತಂಕವನ್ನು ಅನುಭವಿಸಿದರೆ ನಿಮಗೆ ಯಾರು ಹೆಚ್ಚು ಆಪ್ತರೋ ಅವರನ್ನು ತಬ್ಬಿಕೊಂಡು ಮನಸನ್ನು ಹಗುರವಾಗಿಸಿಕೊಳ್ಳಬಹುದು. ಅಧ್ಯಯನಗಳ ಪ್ರಕಾರ, ಸ್ಪರ್ಶದ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬೆಂಬಲವನ್ನು ನೀಡುವುದರಿಂದ ವ್ಯಕ್ತಿಯ ಒತ್ತಡವನ್ನು ಕಡಿಮೆಯಾಗುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ:

ಅಪ್ಪಿಕೊಳ್ಳುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಒಂದು ಅಧ್ಯಯನದಲ್ಲಿ, ವಿಜ್ಞಾನಿಗಳು ಸುಮಾರು 200 ವಯಸ್ಕರ ಗುಂಪನ್ನು ಎರಡು ಗುಂಪುಗಳಾಗಿ ವಿಭಜಿಸಿದರು. ಇದರಲ್ಲಿ ಒಬ್ಬರು ತಮ್ಮ ಪಾರ್ಟನರ್ ಕೈಯನ್ನು 10 ನಿಮಿಷಗಳ ಕಾಲ ಹಿಡಿದುಕೊಳ್ಳಬೇಕು. ನಂತರ ಅವರನ್ನು ತಬ್ಬಿಕೊಳ್ಳಬೇಕು. ಆದರೆ ಇನ್ನೊಬ್ಬರು 10 ನಿಮಿಷಗಳ ಕಾಲ ಪ್ರತ್ಯೇಕವಾಗಿ ಕುಳಿತು ನಂತರ ಅವರನ್ನು ತಬ್ಬಿಕೊಳ್ಳಬೇಕು. ಫಲಿತಾಂಶಗಳ ಪ್ರಕಾರ, ಮೊದಲ ಗುಂಪಿನಲ್ಲಿರುವವರು ಎರಡನೇ ಗುಂಪಿಗಿಂತ ರಕ್ತದೊತ್ತಡದ ಮಟ್ಟಗಳು ಮತ್ತು ಹೃದಯ ಬಡಿತದಲ್ಲಿ ಹೆಚ್ಚಿನ ಕಡಿತವನ್ನು ತೋರಿಸಿದರು. ಅಪ್ಪುಗೆಯ ದೈನಂದಿನ ಪ್ರಮಾಣವು ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಅಧ್ಯಯನವು ಕಂಡುಹಿಡಿದಿದೆ.

ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ:

ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳುವುದು ಸಹ ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಏಕೆಂದರೆ ಆಕ್ಸಿಟೋಸಿನ್ – ಕಡ್ಲ್ ಎಂದೂ ಕರೆಯಲ್ಪಡುವ ಹಾರ್ಮೋನ್ ಜನರು ಒಬ್ಬರಿಗೊಬ್ಬರು ತಬ್ಬಿಕೊಂಡಾಗ ಬಿಡುಗಡೆಯಾಗುತ್ತದೆ. ಇದರ ಬಿಡುಗಡೆಯು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಗಾಯದ ಗುಣಪಡಿಸುವಿಕೆಯನ್ನು ಸುಧಾರಿಸುತ್ತದೆ ಎಂದು ಕಂಡುಬಂದಿದೆ.

ಭಯವನ್ನು ಕಡಿಮೆ ಮಾಡುತ್ತದೆ:

ತಬ್ಬಿಕೊಳ್ಳುವಿಕೆಯು ಜನರಲ್ಲಿ ಭಯದ ಭಾವನೆಗಳನ್ನು ಕಡಿಮೆ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಇದನ್ನೂ ಓದಿ: Kiss Day 2024 Date: ಕಿಸ್ ಡೇ ಯಾವಾಗ?; ಅದರ ಇತಿಹಾಸ, ವಿಶೇಷತೆಯೇನು?

ಸಂಬಂಧಗಳನ್ನು ಬಲಪಡಿಸುತ್ತದೆ:

ತಬ್ಬಿಕೊಳ್ಳುವುದು ಜನರ ನಡುವೆ ನಿಕಟತೆಯನ್ನು ಹೆಚ್ಚಿಸುತ್ತದೆ, ಅವರ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಾನವನ ಸ್ಪರ್ಶದ ಜೊತೆಯಲ್ಲಿರುವ ಶಾರೀರಿಕ ಬದಲಾವಣೆಗಳು ಎಲೆಕ್ಟ್ರಾನ್‌ಗಳ ರೂಪದಲ್ಲಿ ಶಕ್ತಿಯ ವಿನಿಮಯಕ್ಕೆ ಸಂಬಂಧಿಸಿವೆ.

ಚಿಕಿತ್ಸಕರ ಪ್ರಕಾರ, ಜನರು ದಿನದಲ್ಲಿ ಎಷ್ಟು ಬಾರಿ ಬೇಕಾದರೂ ತಬ್ಬಿಕೊಳ್ಳಬಹುದು. ಆದರೆ, ನಿಯಂತ್ರಿತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿನಕ್ಕೆ ಕನಿಷ್ಠ 4 ಅಪ್ಪುಗೆಗಳು ಉತ್ತಮವಾಗಿವೆ. ನೀವು ಹೆಚ್ಚು ತಬ್ಬಿಕೊಂಡಷ್ಟೂ ಉತ್ತಮ ನಂಬಿಕೆ ಮತ್ತು ಸುರಕ್ಷತೆಯ ಪ್ರಜ್ಞೆಯನ್ನು ಅದು ನಿರ್ಮಿಸುತ್ತದೆ. ಮುಕ್ತ ಮತ್ತು ಪ್ರಾಮಾಣಿಕ ಸಂವಹನದಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ