Vijay Diwas 2024: ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
1971 ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ಎದುರು ಗೆಲುವು ಸಾಧಿಸಿದ ದಿನವೇ ಡಿಸೆಂಬರ್ 16. ಅಂದು ನಡೆದ ಯುದ್ಧದ ಪರಿಣಾಮವಾಗಿ ನೂತನ ದೇಶವಾಗಿ ಬಾಂಗ್ಲಾದೇಶ ಉದಯವಾಯಿತು. ಅಂದಿನಿಂದ ದೇಶಾದ್ಯಂತ ಡಿಸೆಂಬರ್ 16ರನ್ನು 'ವಿಜಯ ದಿವಸ್' ಎಂದು ಆಚರಿಸಲಾಗುತ್ತದೆ. ವಿಜಯ ದಿವಸದಂದು ರಕ್ಷಣಾ ಪಡೆಗಳ ತ್ಯಾಗವನ್ನು ನೆನಪಿಸಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಸೇರಿದಂತೆ ಇನ್ನಿತರ ಕುತೂಹಲಕಾರಿ ಅಂಶಗಳು ಇಲ್ಲಿವೆ.
ಡಿಸೆಂಬರ್ 16 ರಂದು ಭಾರತ ಬಾಂಗ್ಲಾದೇಶದ ವಿಮೋಚನೆಗಾಗಿ ಹೋರಾಡಿ ಪಾಕ್ ವಿರುದ್ದ ಗೆಲುವು ಸಾಧಿಸಿದ ದಿನವಾಗಿದ್ದು, ಹೀಗಾಗಿ ಈ ದಿನವು ಭಾರತೀಯರ ಪಾಲಿಗೆ ಸ್ಮರಣೀಯ ದಿನವಾಗಿದೆ. ಅಂದು ನಡೆದ ಯುದ್ಧದ ಬಳಿಕ ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾ ಪ್ರತ್ಯೇಕಗೊಂಡು ಬಾಂಗ್ಲಾದೇಶವು ಉದಯವಾಯಿತು. ಹೀಗಾಗಿ ಭಾರತವು ಗೆಲುವಿನ ಪತಾಕೆ ಹಾರಿಸುವುದರೊಂದಿಗೆ, ಯುದ್ದದಲ್ಲಿ ರಾಷ್ಟ್ರಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನದ ಆಚರಣೆಯು ಚಾಲ್ತಿಯಲ್ಲಿದೆ.
*ಭಾರತ ಪಾಕಿಸ್ತಾನ ಯುದ್ಧಕ್ಕೆ ಕಾರಣವೇನು?*
ಭಾರತ ಹಾಗೂ ಪಾಕಿಸ್ತಾನ ವೈಷಮ್ಯಕ್ಕೆ ಕಾರಣವಾದದ್ದೇ ಈ ಬಾಂಗ್ಲ ವಿಮೋಚನೆ. 1971ರಲ್ಲಿ ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ನೀಡಿದ ಬೆಂಬಲವು ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಸಾರಲು ಮುಖ್ಯ ಕಾರಣವೆನ್ನಬಹುದು. ಆಪರೇಷನ್ ಚೆಂಗೀಸ್ ಖಾನ್ ಹೆಸರಿನಲ್ಲಿ 3ನೇ ಡಿಸೆಂಬರ್ 1971ರಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತೀಯ ವಾಯುನೆಲೆಗಳ ಮೇಲೆ ದಾಳಿ ನಡೆಸಿದವು. ಈ ವೇಳೆಯಲ್ಲಿ ಭಾರತವು ಕೂಡ ಪಾಕಿಸ್ತಾನಕ್ಕೆ ನೇರವಾಗಿ ಯುದ್ಧಕ್ಕೆ ಆಹ್ವಾನ ನೀಡಿದ್ದು ಮಾತ್ರವಲ್ಲದೇ, ಭಾರತ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿತು. ಕೊನೆಗೆ ಪಾಕಿಸ್ತಾನ ಪಡೆಗಳ ಮುಖ್ಯಸ್ಥ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಝಿ ಡಿ.16ರಂದು 93 ಸಾವಿರ ಸೈನಿಕರ ಗುಂಪಿನೊಂದಿಗೆ ಭಾರತೀಯ ಸೇನೆಗೆ ಶರಣಾದರು.
*ಬಾಂಗ್ಲಾ ದೇಶದ ಉದಯಕ್ಕೆ ನಾಂದಿ ಹಾಡಿತು ಈ ಯುದ್ಧ*
ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಬಾಂಗ್ಲಾದೇಶವನ್ನು ಹೊಸ ರಾಷ್ಟ್ರವಾಗಿ ಘೋಷಿಸಲು ಪಾಕಿಸ್ತಾನವು ಕೊನೆಗೂ ಒಪ್ಪಿತು. ಪಾಕಿಸ್ತಾನಿ ಸಶಸ್ತ್ರ ಪಡೆಗಳ ಈಸ್ಟರ್ನ್ ಕಮಾಂಡ್ 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಯುದ್ಧವನ್ನು ಕೊನೆಗೊಳಿಸಿದರು. ಈ ಯುದ್ಧದ ಪರಿಣಾಮವಾಗಿ ಬಾಂಗ್ಲಾ ದೇಶವು ಉದಯವಾಯಿತು.
ಇದನ್ನೂ ಓದಿ: ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳನ್ನು ತಡೆಯುವುದು ಹೇಗೆ? ಇಲ್ಲಿದೆ ಪರಿಹಾರ
*ವಿಜಯ್ ದಿವಸವನ್ನು ಏಕೆ ಆಚರಿಸಲಾಗುತ್ತದೆ?*
1971 ರಲ್ಲಿ ಪಾಕಿಸ್ತಾನದ ವಿರುದ್ಧದ ಭಾರತದ ವಿಜಯದ ಸ್ಮರಣಾರ್ಥವಾಗಿ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ, ಈ ಯುದ್ಧವು ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಭಾರತೀಯ ಸೇನೆಯ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ದಿನವಾಗಿದೆ. ಈ ದಿನದಂದು ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ದೇಶದಾದಂತ್ಯ ವಿಶೇಷ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ