Healthy Recipes: ಬೇಸಿಗೆಯಲ್ಲಿ ಮನೆಯಲ್ಲಿಯೇ ತಯಾರಿಸಿ ವಿಟಮಿನ್ ಸಿ ಹಣ್ಣುಗಳ ಆರೋಗ್ಯಕರ ಪಾಕ ವಿಧಾನ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2023 | 11:20 AM

ಕಾಲೋಚಿತ ಸಿಟ್ರಸ್ ಹಣ್ಣುಗಳಿಂದ ರುಚಿಕರವಾದ ಬಗೆಬಗೆಯ ಪಾಕವಿಧಾನವನ್ನು ಮಾಡಬಹುದು. ಇವುಗಳು ವಿಟಮಿನ್ ಸಿ ಅಂಶವನ್ನು ಹೊಂದಿರುವುದರಿಂದ ಇವುಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Healthy Recipes: ಬೇಸಿಗೆಯಲ್ಲಿ ಮನೆಯಲ್ಲಿಯೇ ತಯಾರಿಸಿ ವಿಟಮಿನ್ ಸಿ ಹಣ್ಣುಗಳ ಆರೋಗ್ಯಕರ ಪಾಕ ವಿಧಾನ
ಸಾಂದರ್ಭಿಕ ಚಿತ್ರ
Follow us on

ವಿಟಮಿನ್ ಸಿ ನಮ್ಮ ದೇಹಕ್ಕೆ ಬೇಕಾದ ಒಂದು ಪ್ರಮುಖ ಪೋಷಕಾಂಶವಾಗಿದೆ. ಇದು ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆ, ಹೃದಯದ ಕಾರ್ಯವನ್ನು ಸುಧಾರಿಸುವುದರಿಂದ ಹಿಡಿದು ಚರ್ಮವನ್ನು ಆರೋಗ್ಯಕರವಾಗಿಡುವವರೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 19 ರಿಂದ ಹಿಡಿದು 64 ವರ್ಷ ವಯಸ್ಸಿನ ವಯಸ್ಕರರು ಪ್ರತಿದಿನ 40 ಮಿಗ್ರಾಂ ವಿಟಮಿನ್ ಸಿ ಅಂಶವನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಿಟ್ರಸ್ ಹಣ್ಣುಗಳನ್ನು ತಿನ್ನುವುವ ಮೂಲಕ ನೀವು ವಿಟಮಿನ್ ಸಿ ಯನ್ನು ಪಡೆದುಕೊಳ್ಳಬಹುದು. ಕಿತ್ತಲೆ, ಕಿವಿ, ನಿಂಬೆ, ದ್ರಾಕ್ಷಿ, ಟೊಮೆಟೊ, ಸ್ಟಾಬೆರಿಗಳು ಉತ್ತಮ ವಿಟಮಿನ್ ಸಿ ಯ ಮೂಲಗಳಾಗಿವೆ. ಈ ಸಿಟ್ರಸ್ ಹಣ್ಣುಗಳಿಂದ ಸಲಾಡ್, ಚಟ್ನಿ, ಸ್ಮೂಥಿ, ಜ್ಯೂಸ್‌ಗಳ ಪಾಕವಿಧಾನವನ್ನು ಮಾಡುವ ಮೂಲಕ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್ ಸಿ ಅಂಶವನ್ನು ಪಡೆಯಬಹುದು.

ವಿಟಮಿನ್ ಸಿ ನೀರಿನಲ್ಲಿ ಕರಗುವ ವಿಟಮಿನ್‌ಗಳಲ್ಲಿ ಒಂದಾಗಿದೆ. ಇದು ಅತ್ಯುತ್ತಮ ಪೋಷಕಾಂಶದ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಅಲ್ಲದೆ ಇದು ಪ್ರತಿರಕ್ಷಣಾ ವ್ಯವಸ್ಥೆಯ ಕೊರತೆಗಳು, ಪ್ರಸವಪೂರ್ವ ಆರೋಗ್ಯ ಸಮಸ್ಯೆಗಳು, ಹೃದಯ ಸಮಸ್ಯೆಗಳು, ಚರ್ಮದ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ವಿಟಮಿನ್ ಸಿ ಅಂಗಾಂಶಗಳಲ್ಲಿ ಕಲಾಜನ್ ರಚನೆಗೆ ಸಹಾಯ ಮಾಡುತ್ತದೆ. ಚರ್ಮವನ್ನು ಸುಕ್ಕು ಮುಕ್ತ ಮತ್ತು ಆರೋಗ್ಯಕರವಾಗಿರಿಸುತ್ತದೆ ಎಂದು ಪುಣೆಯ ಕ್ಲೌಡ್ ನೈನ್ ಆಸ್ಪತ್ರೆಯ ಕಾರ್ಯನಿರ್ವಹಕ ನ್ಯೂಟ್ರೀಷನಿಸ್ಟ್ ಪ್ರಿಸ್ಸಿಲ್ಲಾ ಮರಿಯನ್ ಹೇಳುತ್ತಾರೆ.

ವಿಟಮಿನ್ ಸಿ ಭರಿತ ಹಣ್ಣುಗಳ ಪಾಕವಿಧಾನ:

ಮಾವಿನಕಾಯಿ ಚಟ್ನಿ:

ಬೇಕಾಗುವ ಪದಾರ್ಥಗಳು: ಮಾವಿನಕಾಯಿ- 1, ಪುದೀನಾ ಎಲೆ- 1 ಕಪ್, ಕೊತ್ತಂಬರಿ ಸೊಪ್ಪು- 1 ಕಪ್, ಶುಂಠಿ- 1 ಟೀಸ್ಪೂನ್, ಹಸಿಮೆಣಸಿನಕಾಯಿ- 1, ತೆಂಗಿನಕಾಯಿ ತುರಿ- 2 ಚಮಚ, ಬೆಲ್ಲ ಅಥವಾ ಸಕ್ಕರೆ- 1/2 ಟೀಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮಾವಿನಕಾಯಿಯ ಸಿಪ್ಪೆ ಸುಳಿದು ಸಣ್ನ ತುಂಡುಗಳನ್ನಾಗಿ ಕತ್ತರಿಸಿ, ಮೇಲೆ ನೀಡಿರುವ ಎಲ್ಲಾ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ರುಚಿಕರ ಚಟ್ನಿಯು ಸಂಪೂರ್ಣ ಕೊಬ್ಬುಮುಕ್ತವಾಗಿದೆ. ಮತ್ತು ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಉಪ್ಪಿನಕಾಯಿಯ ಬದಲಿಗೆ ಚಟ್ನಿಯನ್ನು ಸೇವನೆ ಮಾಡಬಹುದು.

ಇದನ್ನೂ ಓದಿ: Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ

ಮೂರು ಬಣ್ಣದ ಪೆಪ್ಪರ್ ಸಲಾಡ್:

ಬೇಕಾಗುವ ಪದಾರ್ಥಗಳು: ಕೆಂಪು ಕ್ಯಾಪ್ಸಿಕಮ್ (ಬೆಲ್ ಪೆಪರ್)- 1, ಹಳದಿ ಕ್ಯಾಪ್ಸಿಕಮ್- 1, ತುರಿದ ಬ್ರೊಕೊಲಿ- 2 ಟೀಸ್ಪೂನ್, ಮೊಳಕೆ ಕಟ್ಟಿದ ಹೆಸರುಕಾಳು- 1 ಟೀಸ್ಪೂಸ್, ನಿಂಬೆ ರಸ- 2 ಚಮಚ, ಸ್ವಲ್ಪ ಹುರಿದ ಕಪ್ಪು ಮತ್ತು ಬಿಳಿ ಎಳ್ಳು, ಒಂದು ಚಿಟಿಕೆ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಒಂದು ಬೌಲ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಕತ್ತರಿಸಿ ಹಾಕಿ ಅದಕ್ಕೆ ಎಳ್ಳು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಬೆರೆಸಿ. ಇದನ್ನು ಮಧ್ಯಾಹ್ನ ಮತ್ತು ರಾತ್ರಿಯ ಊಟದೊಂದಿಗೆ ಸವಿಯಿರಿ.

ನೆಲ್ಲಿಕಾಯಿ ಮೌತ್ ಫ್ರೆಶ್ನರ್:

ಬೇಕಾಗುವ ಪದಾರ್ಥಗಳು: 1 ಕೆಜಿ ತುರಿದ ನೆಲ್ಲಿಕಾಯಿ, 250 ಗ್ರಾಂ ತುರಿದ ಶುಂಠಿ, ಒಂದು ಚಮಚ ಓಂಕಾಳು, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ನೆಲ್ಲಿಕಾಯಿ ಮತ್ತು ಶುಂಠಿಯನ್ನು ಪ್ರತ್ಯೇಕವಾಗಿ ತುರಿದು ಎರಡಕ್ಕೂ ಉಪ್ಪು ಸೇರಿಸಿ. ನಂತರ ದೊಡ್ಡ ತಟ್ಟೆಲ್ಲಿ ತುರಿದಿರುವ ನೆಲ್ಲಿಯನ್ನು ಹರಡಿ. ಅದರ ಮೇಲೆ ತುರಿದ ಶುಂಠಿಯನ್ನು ಹರಡಿ ಬಳಿ ಅದರ ಮೇಲೆ ಓಂಕಾಳನ್ನು ಹಾಕಿ, 5 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಈ ಮೌತ್ ಫ್ರೆಶ್ನರ್ ವಿಟಮಿನ್ ಸಿ ಯನ್ನು ಒದಗಿಸುವುದು ಮಾತ್ರವಲ್ಲದೆ ಆಮ್ಲೀಯತೆ ಮತ್ತು ಅಜೀರ್ಣದಿಂದ ಪರಿಹಾರವನ್ನು ಒದಗಿಸುತ್ತದೆ.

ಕರಂಡೆ ಜಾಮ್:

ಬೇಕಾಗುವ ಪದಾರ್ಥಗಳು: 250 ಗ್ರಾಂ ಗುಲಾಬಿ ಬಣ್ಣದ ಕರಂಡೆ 500 ಗ್ರಾಂ ಸಕ್ಕರೆ, 1 ಗ್ಲಾಸ್ ನೀರು.

ತಯಾರಿಸುವ ವಿಧಾನ: ಕರಂಡೆಯನ್ನು ತೊಳೆದು ಅದರ ಬೀಜ ತೆಗೆದು ನಂತರ ಸಕ್ಕರೆ ಮತ್ತು ನೀರನ್ನು ಸೇರಿಸಿ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ 1 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಇದು ತಣ್ಣಗಾದ ಬಳಿಕ ಗಾಳಿಯಾಡದ ಪಾತ್ರೆಯಲ್ಲಿ ಅದನ್ನು ಸಂಗ್ರಹಿಸಿಡಿ. ಚಪಾತಿ, ಬ್ರೆಡ್, ಪರಾಠದೊಂದಿಗೆ ಸವಿಯಲು ಇದು ಸೂಕ್ತವಾಗಿದೆ.

ಹಣ್ಣಿನ ಐಸ್‌ಕ್ಯೂಬ್‌ಗಳು:

ಬೇಕಾಗುವ ಪದಾರ್ಥಗಳು: 1 ಕಪ್ ಕತ್ತರಿಸಿ ಕಿವಿ, 1 ಕಪ್ ಕಿತ್ತಳೆ ರಸ, 1 ಕಪ್ ಕಲ್ಲಂಗಡಿ ತುಂಡು, 1 ಕಪ್ ಕತ್ತರಿಸಿದ ಕರ್ಬೂಜ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ

ವಿಧಾನ: ಕಿತ್ತಳೆ ರಸಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ, ಅದಕ್ಕೆ ಅಗತ್ಯ ಪ್ರಮಾಣದಲ್ಲಿ ನೀರನ್ನು ಸೇರಿಸಿ. ಅದಕ್ಕೆ ಈಗ ಕತ್ತರಿಸಿದ ಹಣ್ಣುಗಳನ್ನು ಸೇರಿಸಿ ಸೇರಿಸಿ. ನಂತರ ಅದನ್ನು ಐಸ್ ಟ್ರೇಗೆ ಸುರಿದು ರೆಫ್ರಿಜರೆಟರ್‌ನಲ್ಲಿ ಇಡಿ. ಈ ಫ್ರೂಟ್ ಐಸ್‌ಕ್ಯೂಬ್ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

Published On - 11:20 am, Mon, 10 April 23