Home Remedies: ಕಂಬಳಿ ಹುಳು ಸ್ಪರ್ಶಿಸಿ ತುರಿಕೆ ಉಂಟಾದರೆ,ಈ ಸಿಂಪಲ್ ಮನೆ ಮದ್ದು ಪ್ರಯತ್ನಿಸಿ
ಮರ ಅಥವಾ ಗಿಡದ ಎಲೆಗಳಲ್ಲಿ ಕಂಬಳಿ ಹುಳುವನ್ನು ಕಂಡ್ರೆ ಸಾಕು ಅದೆಷ್ಟೋ ಜನರು ಕಾಲ್ಕಿತ್ತು ಓಡಿ ಹೋಗುತ್ತಾರೆ. ಏಕೆಂದರೆ ಕಂಬಳಿ ಹುಳು ಮೈಗೆ ಸ್ಪರ್ಶಿದರೆ ಮಾತ್ರವಲ್ಲ ಕೆಲವರಿಗೆ ಕಂಬಳಿ ಹುಳು ನೋಡಿದ್ರೂ ಮೈಯೆಲ್ಲಾ ತುರಿಕೆ ಉಂಟಾದಂತೆ ಭಾಸವಾಗುತ್ತದೆ. ಅಕಸ್ಮಾತ್ ಆಗಿ ಕಂಬಳಿ ಹುಳು ನಿಮ್ಮ ದೇಹವನ್ನು ಸ್ಪರ್ಶಿಸಿ ತುರಿಕೆ ಉಂಟಾದರೆ ಅದರಿಂದ ತಕ್ಷಣಕ್ಕೆ ಪರಿಹಾರವನ್ನು ಪಡೆಯಲು ಈ ಕೆಲವು ಸರಳ ಪರಿಹಾರವನ್ನು ಅನುಸರಿಸಿ.

ಸಾಮಾನ್ಯವಾಗಿ ಗಿಡ, ಮರಗಳು ಹೆಚ್ಚಿರುವ ಸ್ಥಳಗಳಲ್ಲಿ ಕಂಬಳಿ ಹುಳುಗಳ ಸಮಸ್ಯೆಯೂ ಹೆಚ್ಚು. ಅಷ್ಟೇ ಅಲ್ಲದೆ ಮನೆಯಲ್ಲಿ ಬೆಳೆಯುವ ಹೂವುಗಳಲ್ಲಿಯೂ ಈ ಹುಳುಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಇವುಗಳ ಕಾಟ ತುಸು ಹೆಚ್ಚೇ ಇರುತ್ತದೆ. ಅಪ್ಪಿ ತಪ್ಪಿ ನೀವೇನಾದ್ರೂ ತಣ್ಣನೆಯ ಗಾಳಿ ಪಡೆಯಲು ಮರದಡಿಯಲ್ಲಿ ಕುಳಿತರೆ ಅಲ್ಲೇ ನೇತಾಡುತ್ತಿರುವ ಕಂಬಳಿ ಹುಳು ಅದೇಗೆ ಬಂದು ಮೈ ಮೇಲೆ ಬೀಳುತ್ತೇ ಅಂತಾನೇ ಹೇಳಲು ಸಾಧ್ಯವಿಲ್ಲ. ಅದರ ಚೂಪಾದ ರೋಮಗಳಂತೂ ದೇಹ ಸ್ಪರ್ಶಿಸಿದರೆ, ದೇಹ ಕೆಂಪಾಗಿ, ತಡೆಯಲಾರದಷ್ಟು ತುರಿಕೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಇದರಿಂದ ತಕ್ಷಣ ಪರಿಹಾರವನ್ನು ಪಡೆಯಲು ಈ ಕೆಲವು ಮನೆ ಮದ್ದುಗಳನ್ನು ಟ್ರೈ ಮಾಡಬಹುದು.
ಅಷ್ಟಕ್ಕೂ ಕಂಬಳಿ ಹುಳು ಕಚ್ಚಿದರೆ ತುರಿಕೆ ಏಕೆ ಉಂಟಾಗುತ್ತದೆ?
ಕಂಬಳಿ ಹುಳುಗಳ ದೇಹದ ಮೇಲೆ ಇರುವ ರೋಮಗಳನ್ನು ಅತೀ ಸೂಕ್ಷ್ಮ ಸೂಜಿಗಳು ಎಂದು ಕರೆಯುತ್ತಾರೆ. ಇದೇನಾದ್ರೂ ನಮ್ಮ ದೇಹ ಸ್ಪರ್ಶಿಸಿದರೆ, ಅದು ಸ್ಪರ್ಶಿಸಿದ ಜಾಗದಲ್ಲಿ ಅಲರ್ಜಿ ಅಥವಾ ಸೋಂಕನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಕಂಬಳಿ ಹುಳು ಕಡಿದಾಗ ವಿಪರೀತ ತುರಿಕೆ, ಊತ ಕಾಣಿಸಿಕೊಳ್ಳುತ್ತದೆ. ಇದನ್ನು ಕ್ಯಾಟರ್ಪಿಲ್ಲರ್ ರಾಶ್ ಎಂದೂ ಕರೆಯುತ್ತಾರೆ.
ಕಂಬಳಿ ಹುಳು ಕಡಿದಾಗ ಉಂಟಾಗುವ ತುರಿಕೆಯಿಂದ ತಕ್ಷಣ ಪರಿಹಾರವನ್ನು ಪಡೆಯಲು ಈ ಮನೆಮದ್ದುಗಳನ್ನು ಉಪಯೋಗಿಸಿ:
ಚರ್ಮಕ್ಕೆ ಐಸ್ ಕ್ಯೂಬ್ ಅನ್ವಯಿಸಿ:
ಅಕಸ್ಮಾತ್ ಆಗಿ ಕಂಬಳಿ ಹುಳು ಕಚ್ಚಿ, ವಿಪರೀತವಾಗಿ ತುರಿಕೆ ಕಾಣಿಸಿಕೊಂಡರೆ, ಕಡಿದ ಸ್ಥಳಕ್ಕೆ ಐಸ್ ಕ್ಯೂಬ್ ಇಟ್ಟು ನಿಧಾನಕ್ಕೆ ಮಸಾಜ್ ಮಾಡುವ ಮೂಲಕ ಚರ್ಮದ ಕಿರಿಕಿರಿ ಮತ್ತು ತುರಿಕೆಯ ಸಮಸ್ಯೆಯನ್ನು ಶಮನಗೊಳಿಸುತ್ತದೆ.
ತಲೆಗೂದನ್ನು ಉಜ್ಜಿಕೊಳ್ಳಬಹುದು:
ಕಂಬಳಿ ಹುಳು ಕಡಿದಾಗ ಉಂಟಾಗುವ ತುರಿಕೆಯ ಸಮಸ್ಯೆಗೆ ತಲೆಗೂದಲು ಪರಿಣಾಕಾರಿ ಪರಿಹಾರ ಎಂದು ಹೇಳಲಾಗುತ್ತದೆ. ಹೌದು ನಿಮಗೇನಾದರೂ ಅಕಸ್ಮಾತ್ ಆಗಿ ಕಂಬಳಿ ಹುಳ ಕಡಿದರೆ, ಆ ಜಾಗದಲ್ಲಿ ನಿಧಾನವಾಗಿ ಕೂದಲಿನಿಂದ ಉಜ್ಜಿಕೊಳ್ಳಿ. ಇದರಿಂದ ಹುಳದ ರೋಮ ದೇಹದಲ್ಲಿ ಅಂಟಿಕೊಂಡಿದ್ದರೆ ಬೀಳುತ್ತದೆ. ಜೊತೆಗೆ ತುರಿಕೆ ಕೂಡಾ ಬೇಗನೆ ಕಡಿಮೆಯಾಗುತ್ತದೆ.
ತುಳಸಿ ರಸ:
ಸಾಮಾನ್ಯವಾಗಿ ಎಲ್ಲರ ಮನೆ ಅಂಗಳದಲ್ಲೂ ತುಳಸಿ ಗಿಡ ಇದ್ದೇ ಇರುತ್ತೆ ಅಲ್ವಾ. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ತುರಿಕೆಯ ಸಮಸ್ಯೆಯಿಂದಲೂ ಪರಿಹಾರ ಪಡೆಯಲು ಉತ್ತಮ ಮನೆ ಮದ್ದಾಗಿದೆ. ಏನಾದ್ರೂ ಕಂಬಳಿ ಹುಳ ನಿಮ್ಮ ದೇಹ ಸ್ಪರ್ಶಿಸಿದರೆ, ಮೂರ್ನಾಲ್ಕು ತುಳಸಿ ಎಲೆಗಳನ್ನು ತೆಗೆದುಕೊಂಡು ಕಚ್ಚಿದ ಜಾಗಕ್ಕೆ ಉಜ್ಜಿಕೊಳ್ಳಿ ಅಥವಾ ತುಳಸಿ ಎಲೆಯ ರಸವನ್ನು ತೆಗೆದುಕೊಂಡು ಕಂಬಳಿ ಹುಳು ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ.
ಕೊಬ್ಬರಿ ಎಣ್ಣೆ:
ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಕೊಬ್ಬರಿ ಎಣ್ಣೆ ಮಹತ್ವದ ಪಾತ್ರ ವಹಿಸುತ್ತದೆ. ಅಷ್ಟೆ ಅಲ್ಲದೆ ಕಂಬಳಿ ಹುಳು ಕಡಿದಾಗ ಉಂಟಾದ ತುರಿಕೆಯ ಸಮಸ್ಯೆಯಿಂದಲೂ ಪರಿಹಾರವನ್ನು ಪಡೆಯಲು ಇದು ಪರಿಣಾಮಕಾರಿ ಮನೆ ಮದ್ದಾಗಿದೆ. ಹೌದು ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಉರಿ, ತುರಿಕೆಯಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ