ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಯು ತನ್ನ ಜೀವನದಲ್ಲಿ ಅನುಭವಿಸುವ ಅತ್ಯಂತ ಸಂತೋಷದಾಯಕ ಕ್ಷಣಗಳಲ್ಲಿ ಒಂದಾಗಿದೆ. ಹೀಗಿರುವಾಗ ಮಹಿಳೆಯು ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಏಕೆಂದರೆ ಇದು ತಾಯಿ ಮತ್ತು ಮಗು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಗಭಾವಸ್ಥೆಯ ಸಮಯದಲ್ಲಿ ಗರ್ಭದಲ್ಲಿರುವ ಮಗವಿನ ಆರೋಗ್ಯವನ್ನು ಸುಧಾರಿಸಲು ತಾಯಿಯ ದೇಹಕ್ಕೆ ಹೆಚ್ಚುವರಿ ಪೋಷಕಾಂಶವು ಬೇಕಾಗುತ್ತದೆ. ವಾಸ್ತವವಾಗಿ ನೀವು ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ನಿಮ್ಮ ಆಹಾರದಲ್ಲಿ ಪ್ರತಿ ದಿನ 400 ರಿಂದ 500 ಹೆಚ್ಚುವರಿ ಕ್ಯಾಲೋರಿಗಳನ್ನು ಸೇರಿಸುವ ಅಗತ್ಯವಿದೆ. ಕಳಪೆ ಆಹಾರದ ಆಯ್ಕೆಗಳು ನಿಮ್ಮನ್ನು ದಪ್ಪವಾಗಿಸಬಹುದು. ಮತ್ತು ಮಗುವಿನಲ್ಲಿ ಜನ್ಮ ತೊಡಕುಗಳ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ಮಗುವಿಗೆ ವಿಶೇಷ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಗರ್ಭಿಣಿಯರು ಗರ್ಭಾವಸ್ಥೆಯ ಅವಧಿಯಲ್ಲಿ ಅವರು ಏನು ತಿನ್ನುತ್ತಾರೆ ಎಂಬುದರ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆರೋಗ್ಯಕರ ಮತ್ತು ಪೋಷಕಾಂಶಭರಿತ ಆಹಾರವನ್ನು ಸೇವಿಸುವುದರಿಂದ ತಾಯಿ ಮತ್ತು ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಅಲ್ಲದೆ ಇದು ಹೆರಿಗೆಯ ನಂತರ ಸುಲಭವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಡೈರಿ ಉತ್ಪನ್ನಗಳ ಸೇವನೆಯು ಬಹಳ ಮುಖ್ಯವಾಗಿದೆ. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ಬೆಂಬಲ ನೀಡುವ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ನ ಹೆಚ್ಚುವರಿ ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ. ನಿಮ್ಮ ಮಗುವನ್ನು ಆರೋಗ್ಯಕರವಾಗಿಡಲು ದಿನಕ್ಕೆ ಕನಿಷ್ಠ ಒಂದು ಲೋಟ ಹಾಲು ಕುಡಿಯಿರಿ ಮತ್ತು ಹೆಚ್ಚು ಮೊಸರು, ಪನೀರ್ ಮತ್ತು ತುಪ್ಪವನ್ನು ಸೇವಿಸಿ.
ವಿಟಮಿನ್ಗಳು, ಪ್ರೋಟೀನ್ಗಳು ಮತ್ತು ಖಿಜಗಳ ಉತ್ತಮ ಮೂಲವಾಗಿರುವ ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಟ್ಟೆಗಳಲ್ಲಿರುವ ಪ್ರೋಟೀನ್ಗಳು ಭ್ರೂಣದ ಜೀವಕೋಶಗಳನ್ನು ದುರಸ್ತಿ ಮಾಡುವುದರಿಂದ ಅವು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಒಳ್ಳೆಯದು. ಹೆಚ್ಚುವರಿಯಾಗಿ ಮೊಟ್ಟೆಗಳು ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಕೋಲೀನ್ನ್ನು ಹೊಂದಿರುತ್ತದೆ, ಇದು ಹುಟ್ಟಲಿರುವ ಮಗುವಿನ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಅವಶ್ಯಕವಾಗಿದೆ.
ಬಾಳೆಹಣ್ಣು ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ವಿಟಮಿನ್ ಬಿ 6 ನ ಉತ್ತಮ ಮೂಲವಾಗಿದೆ. ಅವುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ಅವು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಇದು ಗರ್ಭಿಣಿಯರು ಸೇವಿಸಲು ಯೋಗ್ಯವಾದ ಆಹಾರವಾಗಿದೆ.
ಸಿಹಿ ಗೆಣಸು ಬೀಟಾ ಕ್ಯಾರೋಟಿನ್ ನ ಉತ್ತಮ ಮೂಲವಾಗಿದೆ. ಇದು ದೇಹದೊಳಗೆ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ . ಇದು ಜೀವಕೋಶಗಳು ಮತ್ತು ಅಂಗಾಂಶಗಳ ಬೆಳವಣಿಗೆಗೆ ಅವಶ್ಯಕವಾಗಿದೆ. ವಿಟಮಿನ್ ಎ ರೋಗಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಸಿಹಿ ಗೆಣಸು ತಿನ್ನುವುದು ತಾಯಿ ಹಾಗೂ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.
ಬೇಳೆಕಾಳುಗಳು, ಸೋಯಾಬೀನ್, ಬಟಾಣಿ, ಬೀನ್ಸ್, ಕಡಲೆ ಇತ್ಯಾದಿ ದ್ವಿದಳ ಧಾನ್ಯಗಳ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅವು ಸಸ್ಯ ಆಧಾರಿತ ಫೈಬರ್, ಪ್ರೋಟೀನ್, ಫೋಲೇಟ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ ಮತ್ತು ಗರ್ಭಿಣಿ ಮಹಿಳೆಗೆ ಇವೆಲ್ಲವೂ ಬಹಳ ಮುಖ್ಯ. ನಿಮ್ಮ ದೇಹಕ್ಕೆ ಸಾಕಷ್ಟು ಫೋಲೆಟ್ ಪೋಷಕಾಂಶ ದೊರೆತಾಗ ನಿಮ್ಮ ಮಗು ಆರೋಗ್ಯಕರವಾಗಿ ಜನಿಸುತ್ತದೆ ಮತ್ತು ಭವಿಷ್ಯದಲ್ಲಿ ಆ ಮಗುವಿಗೆ ರೋಗಗಳು ಮತ್ತು ಸೋಂಕುಗಳು ಭಾದಿಸುವ ಅಪಾಯ ಕಡಿಮೆಯಿರುತ್ತದೆ.
ಒಣ ಹಣ್ಣುಗಳು ಮತ್ತು ಬೀಜಗಳು ತಿನ್ನಲು ಬಲು ರುಚಿಕರವಾಗಿರುತ್ತವೆ. ಮತ್ತು ಅವು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತವೆ. ಇದು ಗರ್ಭಾವಸ್ಥೆಯ ಅವಧಿಯಲ್ಲಿ ಲಘು ಆಹಾರಕ್ಕಾಗಿ ಸೂಕ್ತವಾದ ಆಯ್ಕೆಯಾಗಿದೆ. ಅವುಗಳು ಮೆದುಳನ್ನು ಉತ್ತೇಜಿಸುವ ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಅದು ಮಗುವಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ. ಆದ್ದರಿಂದ ಆರೋಗ್ಯಕರ ಮಗುವಿನ ಜನನಕ್ಕಾಗಿ ಗರ್ಭಿಣಿ ಮಹಿಳೆಯರು ಅಗತ್ಯವಾಗಿ ಡ್ರೈನಟ್ಸ್ಗಳನ್ನು ಸೇವನೆ ಮಾಡಬೇಕು.
ಇದನ್ನೂ ಓದಿ:ಗರ್ಭಾವಸ್ಥೆಯಲ್ಲಿ ತುಟಿಗಳು ಕಪ್ಪಾಗದಂತೆ ತಡೆಯಲು ಇಲ್ಲಿವೆ 6 ಸಲಹೆಗಳು
ಕಿತ್ತಳೆ ಹಣ್ಣಿನ ರಸವು ನಿಮಗೆ ಫೋಲೇಟ್, ಪೊಟ್ಯಾಸಿಯಂ ಮತ್ತು ಸಹಜವಾಗಿ ವಿಟಮಿನ್ ಸಿ ಪೋಷಕಾಂಶವನ್ನು ಒದಗಿಸುತ್ತದೆ. ಮತ್ತು ಇದು ಹುಟ್ಟುವ ಮಗುವಿಗೆ ಭಾದಿಸಬಹುದಾದ ವಿವಿಧ ರೀತಿಯ ಜನ್ಮ ದೋಷಗಳನ್ನು ತಡೆಯುತ್ತದೆ. ಕಿತ್ತಳೆ ರಸದಲ್ಲಿನ ವಿಟಮಿನ್ ಸಿ ಅಂಶ ದೇಹದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವ ನಿಮ್ಮ ಮಗುವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಉಪಹಾರದ ಭಾಗವಾಗಿ ಪ್ರತಿದಿನ ಒಂದು ಲೋಟ ಕಿತ್ತಳೆ ರಸವನ್ನು ಸೇವಿಸಿ.
ಎಲೆ ತರಕಾರಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ಅವು ದೇಹವನ್ನು ಬಹಳಷ್ಟು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, ಫೋಲೇಟ್, ವಿಟಮಿನ್ ಮತ್ತು ಪೊಟ್ಯಾಸಿಯಂಗಳ ಸಮೃದ್ಧ ಮೂಲವಾಗಿರುವುದರಿಂದ ಹಸಿರು ತರಕಾರಿಗಳು ನಿಮ್ಮ ಗರ್ಭಾವಸ್ಥೆಯ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ.
ಸಾಲ್ಮನ್ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಒಮೇಗಾ 3 ಪೋಷಕಾಂಶವು ಗರ್ಭಿಣಿ ಮಹಿಳೆಯರಿಗೆ ಅತ್ಯಗತ್ಯವಾದದ್ದು. ಏಕೆಂದರೆ ಇದು ಭ್ರೂಣದ ಮೆದುಳು ಮತ್ತು ಕಣ್ಣುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸಾಲ್ಮನ್ ವಿಟಮಿನ್ ಡಿ ಉತ್ತಮ ಮೂಲವಾಗಿದೆ. ಇದು ಮೂಳೆಗಳ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಗೆ ಮುಖ್ಯವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:07 pm, Mon, 31 July 23