ಛಾಯಾಗ್ರಹಣವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ದೃಶ್ಯ ರೂಪದಲ್ಲಿ ಕ್ಷಣಗಳು ಮತ್ತು ಭಾವನೆಗಳನ್ನು ಸೆರೆಹಿಡಿಯುತ್ತದೆ. ಛಾಯಾಗ್ರಹಣವು ಕಲೆಯ ಒಂದು ರೂಪವಾಗಿದ್ದು, ಸಮಯ, ಬೆಳಕು, ನೆನಪುಗಳು, ಭಾವನೆಗಳು, ಸಂಸ್ಕೃತಿ, ಇತಿಹಾಸ ಮತ್ತು ಹೆಚ್ಚಿನವುಗಳ ಸತ್ಯಾಸತ್ಯತೆಯನ್ನು ಸುಂದರವಾಗಿ ಸೆರೆಹಿಡಿಯುವ ಮೂಲಕ ನೆನಪುಗಳ ಕಥೆ ಹೇಳುವ ಅತ್ಯುತ್ತಮ ಮಾಧ್ಯಮವಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಬ್ಬ ಛಾಯಾಗ್ರಹಕ ಅಡಗಿದ್ದಾನೆ. ಮತ್ತು ನಾವೆಲ್ಲರೂ ಅದರೊಂದಿಗೆ ಸಂಬಂಧ ಹೊಂದಿದ್ದೇವೆ. ನಾವುಗಳು ಮೊಬೈಲ್ ಕ್ಯಾಮೆರಾದ ಮೂಲಕ ನಮ್ಮ ಪ್ರತಿಯೊಂದು ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತೇವೆ. ಅದೇ ರೀತಿ ಅದೆಷ್ಟೋ ವೃತ್ತಿಪರ, ಹವ್ಯಾಸಿ ಛಾಯಾಗ್ರಾಹಕರಿದ್ದಾರೆ. ಅವರೆಲ್ಲರನ್ನು ಪ್ರೋತ್ಸಾಹಿಸಲು ಮತ್ತು ಗೌರವಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ಆಗಸ್ಟ್ 19 ರಂದು ಈ ವಿಶೇಷ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಏನೆಂಬುದನ್ನು ತಿಳಿಯೋಣ.
ಛಾಯಾಗ್ರಹಣ ದಿನದ ಆಚರಣೆಯು ಜನವರಿ 9, 1839 ರಂದು ಫ್ರಾನ್ಸ್ನಲ್ಲಿ ಪ್ರಾರಂಭವಾಯಿತು. ಇದರ ಹಿಂದಿನ ಕಥೆಯೆಂದರೆ, 1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಪ್ರಕ್ರಿಯೆ ಎಂದು ಕರೆಯಲಾಯಿತು. ಮತ್ತು ಈ ಪ್ರಕ್ರಿಯೆಯನ್ನು ವಿಶ್ವದ ಮೊದಲ ಛಾಯಾಗ್ರಹಣ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದನ್ನು ಫ್ರಾನ್ಸ್ ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದರ ನಂತರ ಆಗಸ್ಟ್ 19, 1839 ರಂದು ಫ್ರೆಂಚ್ ಸರ್ಕಾರವು ಈ ಛಾಯಾಗ್ರಹಣ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ನ್ನು ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತಿದೆ.
ಅನೇಕ ಜನರಿಗೆ ಛಾಯಾಗ್ರಹಣವು ಅವರ ಹವ್ಯಾಸವಾಗಿದೆ. 19 ನೇ ಶತಮಾನದ ಆರಂಭದಿಂದಲೂ ಛಾಯಾಗ್ರಹಣದ ಉದ್ಯಮವು ಪ್ರಗತಿಯಲ್ಲಿದೆ ಮತ್ತು ಈ ಉದ್ಯಮವು ಮೈಲಿಗಲ್ಲನ್ನು ಸಾಧಿಸುತ್ತಿದೆ. ಕ್ಯಾಮೆರಾ ತಂತ್ರಜ್ಞಾನದಲ್ಲಿನ ಪ್ರಗತಿಗಳು ಇಂದು ಡಿಜಿಟಲ್ ಫೋಟೋಗ್ರಫಿಗೆ ಕಾರಣಾಗಿದೆ. ಅಲ್ಲದೆ ಇಂದು ಫೋಟೋಗ್ರಫಿ ಒಂದು ಫ್ಯಾಷನ್ ಆಗಿ ಬದಲಾಗಿದೆ. ಇಂದು ಅದೆಷ್ಟೋ ಛಾಯಾಗ್ರಾಹರು ಈ ಕ್ಷೇತ್ರವನ್ನು ತಮ್ಮ ಉದ್ಯಮವನ್ನಾಗಿ ಮಾಡಿಕೊಂಡು ಹೆಸರುಗಳಿಸಿದ್ದಾರೆ. ಅಂತಹ ಛಾಯಾಗ್ರಹಕರನ್ನು ಗೌರವಿಸಲು ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದವರನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಇಂದು ವಿಶ್ವ ಛಾಯಗ್ರಹಣ ದಿನ, ಇತಿಹಾಸ, ಮಹತ್ವ, ಥೀಮ್ ಇಲ್ಲಿದೆ
ವಿಶ್ವ ಛಾಯಾಗ್ರಹಣ ದಿನವನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಜನರನ್ನು ಗೌರವಿಸಲು ಮತ್ತು ಅವರ ಸಾಧನೆಯನ್ನು ನೆನಪಿಸಲು ಆಚರಿಸಲಾಗುತ್ತದೆ. ಅಲ್ಲದೆ ಇದು ಜನರನ್ನು ಛಾಯಾಗ್ರಹಣ ಕ್ಷೇತ್ರಕ್ಕೆ ಬರುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಅವರ ಕೌಶಲ್ಯವನ್ನು ತೋರಿಸಲು ಪ್ರೇರೇಪಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:14 pm, Thu, 17 August 23