Varamahalakshmi Festival 2023: ವರಮಹಾಲಕ್ಷ್ಮಿ ಹಬ್ಬದಂದು ದೇವಿಗೆ ಈ ವಿಶೇಷ ನೈವೇದ್ಯ ಮಾಡಿ
ವರಮಹಾಲಕ್ಷ್ಮಿ ಹಬ್ಬ ಇನ್ನೇನು ಹತ್ತಿರದಲ್ಲಿದೆ. ಸುಮಂಗಲಿಯರು ಈ ಹಬ್ಬವನ್ನು ಬಹಳ ಭಕ್ತಿ ಪೂರ್ವಕವಾಗಿ ಆಚರಿಸುತ್ತಾರೆ. ಮನೆಯಲ್ಲಿಯೇ ಲಕ್ಷ್ಮೀ ದೇವಿಯನ್ನು ಅಲಂಕರಿಸಿ, ತಾವು ತಯಾರಿಸಿದ ವಿಶೇಷ ಅಡುಗೆಯನ್ನು ಶ್ರೀದೇವಿಗೆ ನೈವೇದ್ಯ ರೂಪದಲ್ಲಿ ಬಡಿಸುತ್ತಾರೆ. ಈ ಬಾರಿಯ ಹಬ್ಬದಂದು ಈ ಕೆಲವು ವಿಶೇಷ ಖಾದ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.
ವರಮಹಾಲಕ್ಷಿ (Varamahalakshmi) ಹಬ್ಬವು ಇನ್ನೇನೂ ಹತ್ತಿರದಲ್ಲಿದೆ. ಈ ಮಂಗಳಕರ ಹಬ್ಬವನ್ನು ಶ್ರಾವಣ ಮಾಸದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ. ಈ ಬಾರಿಯ ವರಮಹಾಲಕ್ಷ್ಮೀ ವ್ರತವನ್ನು ಆಗಸ್ಟ್ 25 ರಂದು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಈ ವ್ರತಾಚರಣೆಯನ್ನು ಸುಮಂಗಲಿಯರು ಆಚರಿಸುತ್ತಾರೆ. ಈ ವ್ರತಾಚರಣೆ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು ಜೊತೆಗೆ ಆ ವ್ಯಕ್ತಿಯು ಸಂಪತ್ತು, ಕೀರ್ತಿ, ಸಂತಾನ, ಸಂತೋಷದ ಅದೃಷ್ಟವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಈ ವಿಶೇಷ ದಿನ ಮನೆಯಲ್ಲಿ ಹಬ್ಬದ ಅಡುಗೆ ಮಾಡಿ ದೇವರಿಗೆ ನೈವೇದ್ಯ ಸಲ್ಲಿಸಬಹುದು. ದೇವರಿಗೆ ನೈವೇದ್ಯ ರೂಪದಲ್ಲಿ ಸಲ್ಲಿಸಬಹುದಾದ ಕೆಲವೊಂದು ಪಾಕವಿಧಾನದ ಮಾಹಿತಿ ಇಲ್ಲಿದೆ.
ವರಮಹಾಲಕ್ಷಿ ವ್ರತ ದಿನದಂದು ನೀವು ತಯಾರಿಸಬಹುದಾದ ಖಾದ್ಯಗಳು:
ಗೂಡಾನ್ನ
ಲಕ್ಷ್ಮೀ ದೇವಿಗೆ ಪ್ರಿಯವಾದ ಗೂಡಾನ್ನವು ತುಂಬಾ ರುಚಿಕರ ಮತ್ತು ಸರಳವಾದ ಪಾಕವಿಧಾನವಾಗಿದೆ. ಹಬ್ಬದ ದಿನಗಳಲ್ಲಿ ಪ್ರಸಾದವಾಗಿ ಗೂಡಾನ್ನ ತಯಾರಿಸಲಾಗುತ್ತದೆ. ಈ ಬಾರಿಯ ವರಮಹಾಲಕ್ಷ್ಮೀ ಹಬ್ಬದ ದಿನದಂದು ಈ ಒಂದು ಪಾಕವಿಧಾನವನ್ನು ತಯಾರಿಸಿ ಲಕ್ಷ್ಮೀದೇವಿಗೆ ನೈವೇದ್ಯವಾಗಿ ಇಡಬಹುದು.
ಗೂಡಾನ್ನ ಮಾಡಲು ಬೇಕಾಗುವ ಸಾಮಾಗ್ರಿಗಳು:
• 1/2 ಕಪ್ ಅಕ್ಕಿ
• 1.25 ಕಪ್ ನೀರು (ಅಕ್ಕಿ ಬೇಯಿಸಲು)
• 1/2 ಕಪ್ ನೀರು (ಬೆಲ್ಲದ ಪಾಕ ತಯಾರಿಸಲು)
• ಬೆಲ್ಲ (ನಿಮ್ಮ ಸಿಹಿಗೆ ತಕ್ಕಷ್ಟು ಇರಲಿ)
• 1 ಕಪ್ ತುರಿದ ತೆಂಗಿನಕಾಯಿ
• ಗೋಡಂಬಿ
• ಒಣ ದ್ರಾಕ್ಷಿ
• ತುಪ್ಪ
• ಏಲಕ್ಕಿ
ಗೂಡಾನ್ನ ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದನ್ನು 1.25 ಕಪ್ ನೀರಿನೊಂದಿಗೆ ಸೇರಿಸಿ ಕುಕ್ಕರ್ನಲ್ಲಿ ಅಕ್ಕಿ ಮೃದುವಾಗುವವರೆಗೆ ಬೇಯಿಸಿ. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಅದು ಕಾದ ಬಳಿಕ ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಹುರಿಯಿರಿ. ಬಳಿಕ ಅದನ್ನು ಪಕ್ಕಕ್ಕೆ ಇಟ್ಟುಬಿಡಿ. ಮುಂದೆ ಅದೇ ಬಾಣಲೆಯಲ್ಲಿ 1/2 ಕಪ್ ಬೆಲ್ಲ ಮತ್ತು 1/2 ಕಪ್ ನೀರನ್ನು ಹಾಕಿ ಬೆಲ್ಲ ಕರಗುವವರೆಗೆ ಅದನ್ನು ಕೈಯಾಡಿಸುತ್ತಾ ಬೇಯಿಸಿಕೊಳ್ಳಿ. ಬೆಲ್ಲ ಕರಗಿದ ನಂತರ ಬೇಯಿಸಿದ ಅನ್ನವನ್ನು ಅದಕ್ಕೆ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಈಗ ಅದಕ್ಕೆ 1/2 ಕಪ್ ತೆಂಗಿನಕಾಯಿ ತುರಿ ಸೇರಿಸಿ ಮಧ್ಯಮ ಉರಿಯಲ್ಲಿ ಈ ಮಿಶ್ರಣವನ್ನು ಬೇಯಿಸಿಕೊಳ್ಳಿ. ಅದರಲ್ಲಿನ ಹೆಚ್ಚುವರಿ ನೀರು ಆವಿಯಾಗಿ ಗೂಡಾನ್ನ ಗಟ್ಟಿಯಾದ ಬಳಿಕ ಅದಕ್ಕೆ ಮೊದಲೇ ಹುರಿದಿಟ್ಟ ಗೋಡಂಬಿ, ದ್ರಾಕ್ಷಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡರೆ ಗೂಡಾನ್ನ ಸಿದ್ಧವಾಗುತ್ತದೆ.
ಕೋಸಂಬರಿ:
ಹೆಚ್ಚಿನ ಹಬ್ಬಗಳಲ್ಲಿ ಕೋಸಂಬರಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ಮಾಡಲಾಗುತ್ತದೆ. ಈ ಬಾರಿಯ ವರಮಹಾಲಕ್ಷ್ಮೀ ಹಬ್ಬದ ದಿನದಂದು ಈ ಸುಲಭ ಪಾಕವಿಧಾನವನ್ನು ತಯಾರಿಸಿ
ಬೇಕಾಗುವ ಪದಾರ್ಥಗಳು:
• 1/2 ಕಪ್ ಉದ್ದಿನಬೇಳೆ
• ತುರಿದ ಕ್ಯಾರೆಟ್
• ಕೊತ್ತಂಬರಿ ಸೊಪ್ಪು
• 2 ಚಮಚ ತೆಂಗಿನಕಾಯಿ ತುರಿ
• ನಿಂಬೆ ರಸ
• ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ
• ರುಚಿಗೆ ತಕ್ಕಷ್ಟು ಉಪ್ಪು
• ಕೆಂಪು ಮೆಣಸು (ಬ್ಯಾಡಗಿ ಮೆಣಸು)
• ಸಾಸಿವೆ
• ಎಣ್ಣೆ
ಕೋಸಂಬರಿ ಮಾಡುವ ವಿಧಾನ:
ಉದ್ದಿನಬೇಳೆಯನ್ನು 2 ರಿಂದ 3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ತುರಿದ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉದ್ದಿನ ಬೇಳೆ, ತೆಂಗಿನ ಕಾಯಿ ತುರಿಯನ್ನು ಒಂದು ಬೌಲ್ಗೆ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನಿಂಬೆ ರಸವನ್ನು ಸೇರಿಸಿ ಇನ್ನೊಂದು ಬಾರಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ಒಗ್ಗರಣೆ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದು ಕಾದ ಬಳಿಕ ಅದಕ್ಕೆ ಸಾಸಿವೆ ಮತ್ತು ಒಣ ಮೆಣಸು ಹಾಕಿ ಒಗ್ಗರಣೆ ತಯಾರಿಸಿ, ಅದನ್ನು ಮೊದಲೇ ತಯಾರಿಸಿಟ್ಟ ಮಿಶ್ರಣಕ್ಕೆ ಹಾಕಿದರೆ ಕೋಸಂಬರಿ ರೆಡಿ.
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬ ಯಾವಾಗ? ಪೂಜಾ ಸಮಯ, ವ್ರತ ಮಾಡುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
ಪುಳಿಯೋಗರೆ:
ಪುಳಿಯೋಗರೆ ಮಾಡಲು ಬೇಕಾಗುವ ಸಾಮಾಗ್ರಿಗಳು:
• 1 ಕಪ್ ಅಕ್ಕಿ
• ಎಣ್ಣೆ
• 1 ನಿಂಬೆಗಾತ್ರದಷ್ಟು ಹುಣಸೆ ಹಣ್ಣು
• ಅರಶಿನ ಪುಡಿ
• ಉಪ್ಪು
• ಎಳ್ಳು
• 6-8 ಮೆಣಸಿಕಕಾಯಿ (ಗುಂಟೂರು ಮತ್ತು ಬ್ಯಾಡಗಿ ಎರಡನ್ನೂ ಮಿಶ್ರಣ ಮಾಡಿ)
• 2 ಟೀಸ್ಪೂನ್ ಉದ್ದಿಬೇಳೆ
• 2 ಟೀಸ್ಪೂನ್ ಜೀರಿಗೆ
• 4 ಟೀಸ್ಪೂನ್ ಕೊತ್ತಂಬರಿಬೀಜ
• 1/4 ಟೀಸ್ಪೂನ್ ಮೆಂತ್ಯ ಬೀಜ
• 1/2 ಕಪ್ ತೆಂಗಿನಕಾಯಿ ತುರಿ
• ಇಂಗು
• ಕಡ್ಲೆಬೇಳೆ
• ಸಾಸಿವೆ
• ನೆಲಗಡಲೆ
• ಗೋಡಂಬಿ
• ಕರಿಬೇವಿನ ಎಲೆ
ತಯಾರಿಸಿಸುವ ವಿಧಾನ:
ಮೊದಲು ಅಕ್ಕಿಯನ್ನು ಬೇಯಿಸಿ ಪಕ್ಕಕ್ಕೆ ಇರಿಸಿ. ಹಾಗೂ ಹುಣಸೆಹಣ್ಣನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ನೆನೆಯಲು ಬಿಡಿ. ಈಗ ಒಂದು ಪಾತ್ರೆಯನ್ನು ತೆಗೆದುಕೊಂಡು ಅದು ಬಿಸಿಯಾದ ಬಳಿಕ ಅದಕ್ಕೆ ಎಳ್ಳು ಹಾಕಿ ಅದು ಸಿಡಿಯುವವರೆಗೆ ಹುರಿಯಿರಿ. ನಂತರ ಅದನ್ನು ಪಕ್ಕಕ್ಕೆ ಇಟ್ಟುಬಿಡಿ. ಈಗ ಅದೇ ಪಾತ್ರೆಯಲ್ಲಿ ಸ್ವಲ ಎಣ್ಣೆ ಹಾಕಿ ಅದು ಕಾದ ಬಳಿಕ ಕೊತ್ತಂಬರಿ ಬೀಜ, ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತ್ಯ, ಸಾಸಿವೆ, ಜೀರಿಗೆ, ಮೆಣಸು, ಕರಿಮೆಣಸು ಇಂಗು ಎಲ್ಲವನ್ನು ಹಾಕಿ ಹುರಿದು ಪಕ್ಕಕ್ಕೆ ಇಟ್ಟುಬಿಡಿ. ಈಗ ಅದೇ ರೀತಿ ತುರಿದ ತೆಂಗಿನಕಾಯಿಯನ್ನು ಹುರಿದು ಈ ಎಲ್ಲಾ ಮಿಶ್ರಣ ತಣ್ಣಗಾದ ಬಳಿಕ ಅದನ್ನು ಮಿಕ್ಸಿಜಾರ್ ನಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. ಇದಾದ ಬಳಿಕ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಮೊದಲೇ ನೆನೆಸಿಟ್ಟ ಹುಣಸೆಹಣ್ಣನ್ನು ಹಿಂಡಿ ಅದರ ರಸ, ಅರಶಿನಪುಡಿ, ಉಪ್ಪು ಮತ್ತು ಬೆಲ್ಲವನ್ನು ಹಾಕಿ ಈ ಪಾಕವನ್ನು ಮಧ್ಯಮ ಹುರಿಯಲ್ಲಿ ಬೇಯಿಸಿಕೊಳ್ಳಿ. ಪಾಕ ದಪ್ಪವಾಗಲು ಆರಂಭಿಸಿದಾಗ ಮೊದಲೇ ರುಬ್ಬಿಟ್ಟ ಮಸಾಲೆ ಪುಡಿಯನ್ನು ಇದಕ್ಕೆ ಸೇರಿಸಿ ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ ಪುಳಿಯೊಗರೆ ಗೊಜ್ಜು ತಯಾರಿಸಿಕೊಳ್ಳಿ. ಪಾತ್ರೆಯಿಂದ ಎಣ್ಣೆ ಬಿಡಲು ಪ್ರಾರಂಭವಾಗುವವರೆಗೆ ಈ ಮಿಶ್ರಣವನ್ನು ಬೇಯಿಸಿಕೊಳ್ಳಿ. ಈಗ ಇನ್ನೊಂದು ಬಾಣಲೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ ನಂತರ ಮೆಣಸಿನಕಾಯಿ, ಸಾಸಿವೆ, ನೆಲಗಡಲೆ, ಗೋಡಂಬಿ, ಉದ್ದಿನಬೇಳೆ, ಎಳ್ಳು ಮತ್ತು ಕರಿಬೇವಿನ ಎಲೆಯನ್ನು ಹಾಕಿ ಚೆನ್ನಾಗಿ ಹುರಿದು ಅದನ್ನು ಬೇಯಿಸಿಟ್ಟ ಅನ್ನಕ್ಕೆ ಹಾಕಿ. ನಂತರ ಅದಕ್ಕೆ ಪುಳಿಯೋಗರೆ ಗೊಜ್ಜನ್ನೂ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಪುಳಿಯೋಗರೆ ರೆಡಿ.
ಕೇಸರಿ ಬಾತ್:
ನೀವು ದೇವರಿಗೆ ಸಿಹಿ ನೈವೇದ್ಯವನ್ನು ಮಾಡಬೇಕೆಂದಿದ್ದರೆ, ಸುಲಭವಾಗಿ ಕೇಸರಿಬಾತ್ ಮಾಡಬಹುದು.
ಕೇಸರಿಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು:
• 2 ಕಪ್ ರವೆ
• 3 ಕಪ್ ನೀರು
• ಸಕ್ಕರೆ
• ತುಪ್ಪ
• ಹಳದಿ ಅಥವಾ ಕೇಸರಿ ಬಣ್ಣ (ಫುಡ್ ಕಲರ್)
• ಉಪ್ಪು
• ಏಲಕ್ಕಿ ಪುಡಿ
• ಗೋಡಂಬಿ
• ಒಣದ್ರಾಕ್ಷಿ
ತಯಾರಿಸುವ ವಿಧಾನ:
ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೀರು, ಸಕ್ಕರೆ, ಉಪ್ಪು, ಹಳದಿ ಬಣ್ಣ (ಫುಡ್ ಕಲರ್) ಮತ್ತು ನಿಂಬೆ ರಸವನ್ನು ಸೇರಿಸಿ ಕುದಿಯಲು ಬಿಡಿ. ಬಳಿಕ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ರವೆ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ. ಇದು ಚೆನ್ನಾಗಿ ಹುರಿದ ಬಳಿಕ ಇನ್ನೊಂದು ಪಾತ್ರೆಯಲ್ಲಿ ಕುದಿಯುತ್ತಿರುವ ಬಣ್ಣದ ನೀರನ್ನು ಈ ಮಿಶ್ರಣಕ್ಕೆ ನಿಧಾನವಾಗಿ ಸೇರಿಸಿಕೊಳ್ಳಿ. ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿಕೊಳ್ಳಿ. ಕೊನೆಯಲ್ಲಿ ನೀವು ಏಲಕ್ಕಿ ಪುಡಿಯನ್ನೂ ಸೇರಿಸಬಹುದು.
ಅಲ್ಲದೆ ನೀವು ಒಬ್ಬಟ್ಟು, ರವೆ ಉಂಡೆ, ಶ್ಯಾವಿಗೆ ಪಾಯಸ, ತಂಬಿಟ್ಟು, ಇತ್ಯಾದಿ ಖಾದ್ಯಗಳನ್ನು ಮಾಡಿ ದೇವರಿಗೆ ನೈವೇದ್ಯಕ್ಕೆ ಇಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Thu, 17 August 23