ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಸೋಯಾ ಪ್ಯಾನ್ ಕೇಕ್

ಪ್ರತಿನಿತ್ಯ ಬೆಳಗಿನ ಉಪಹಾರಕ್ಕೆ ದೋಸೆ, ಇಡ್ಲಿ, ಉಪ್ಪಿಟ್ಟು, ಪಲಾವ್ ಈ ರೀತಿಯ ಖಾದ್ಯಗಳನ್ನು ಮಾಡುವ ಬದಲು ಏನಾದರೂ ಹೊಸ ರುಚಿಯನ್ನು ಪ್ರಯತ್ನಿಸಬೇಕೇಂದು ಯೋಚಿಸುತ್ತಿದ್ದೀರಾ? ಹಾಗಾಗಿದ್ದರೆ ಇಲ್ಲಿದೆ ಸೋಯಾ ಪ್ಯಾನ್ ಕೇಕ್ ರೆಸಿಪಿ. ಈ ಒಂದು ಖಾದ್ಯ ರುಚಿಕರವಾದದ್ದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹಾಗಿದ್ದರೆ ಸೋಯಾ ಪ್ಯಾನ್ ಕೇಕ್ ತಯಾರಿಸುವುದು ಹೇಗೆ, ಇಲ್ಲಿದೆ ಮಾಹಿತಿ.

ಬೆಳಗ್ಗಿನ ಉಪಹಾರಕ್ಕೆ ತಯಾರಿಸಿ ಆರೋಗ್ಯಕರ ಸೋಯಾ ಪ್ಯಾನ್ ಕೇಕ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 17, 2023 | 7:38 PM

ಮಕ್ಕಳಾಗಿರಲಿ ಅಥವಾ ದೊಡ್ಡವರಾಗಿಲಿ ಎಲ್ಲರೂ ಬೆಳಗಿನ ಉಪಹಾರ ಹಾಗೂ ಸಂಜೆಯ ಸ್ಯಾಕ್ಸ್ ಸಮಯಕ್ಕೆ ರುಚಿಕರವಾದ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತಾರೆ. ರುಚಿಯಾದ ಅಡುಗೆಯನ್ನು ತಯಾರಿಸುವ ಅವಸರದಲ್ಲಿ ನೀವು ಎಣ್ಣೆಯಲ್ಲಿ ಕರಿದ ಬಜ್ಜಿ, ಬೋಂಡಾ, ಪಕೋಡಾ ಗಳನ್ನು ಪ್ರತಿನಿತ್ಯ ಮಾಡಿ ಮನೆಯವರಿಗೆ ಬಡಿಸಿದರೆ, ಇದು ಮನೆಯವರ ಆರೋಗ್ಯವನ್ನು ಕೆಡಿಸಬಹುದು. ಹೀಗಿರುವಾಗ ಬೆಳಗಿನ ಉಪಹಾರ ಹಾಗೂ ಸಂಜೆಯ ಸ್ಯಾಕ್ಸ್ ಸಮಯಕ್ಕೆ ನಿಮ್ಮ ಕುಟುಂಬ ಸದಸ್ಯರಿಗೆ ನೀವು ಆರೋಗ್ಯಕರ ಆಹಾರವನ್ನು ನೀಡಲು ಬಯಸಿದರೆ ಸೋಯಾ ಪ್ಯಾನ್ ಕೇಕ್ ಮಾಡಬಹುದು. ಸೋಯಾ ಆರೋಗ್ಯಕರ ಆಹಾರವಾಗಿದ್ದು, ಇದರಲ್ಲಿ ಪ್ರೋಟೀನ್ ಹೇರಳವಾಗಿದೆ. ಈ ಪ್ರೋಟೀನ್ ಭರಿತ ಸೋಯಾ ಪ್ಯಾನ್ ಕೇಕ್ ತಿನ್ನಲು ರುಚಿಕರವಾದದ್ದು, ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಸೋಯಾ ಪ್ಯಾನ್ ಕೇಕ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

• 1/4 ಕಪ್ ಸೋಯಾ ತುಂಡುಗಳು

• 2 ಹಸಿ ಮೆಣಸಿನಕಾಯಿ

• 2 ಬೆಳ್ಳುಳ್ಳಿ ಎಸಲು,

• 1/2 ಇಂಚು ಶುಂಠಿ

• 1/4 ಕಪ್ ಮೊಸರು

• 2 ಟೀಚಮಚ ಅಕ್ಕಿ ಹಿಟ್ಟು

• 3 ಚಮಚ ಕಡ್ಲೆಹಿಟ್ಟು

• 2 ಚಮಚ ಎಳ್ಳು

• ತುರಿದ ಕ್ಯಾರೆಟ್, ಎಲೆಎಕೋಸು ಹಾಗೂ ಕೊತ್ತಂಬರಿ ಸೊಪ್ಪು

• ಜೀರಿಗೆ ಪುಡಿ

• ಗರಂ ಮಸಾಲ

• ಅರಶಿನ ಪುಡಿ

• ಸಣ್ಣದಾಗಿ ಕೊಚ್ಚಿದ ಈರುಳ್ಳಿ

• ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ಸಂಜೆಯ ತಿಂಡಿಗೆ ಸೋಯಾ ಕಬಾಬ್ ಸೂಪರ್, ಇದು ಆರೋಗ್ಯಕ್ಕೂ ಉತ್ತಮ

ಸೋಯಾ ಪ್ಯಾನ್ ಕೇಕ್ ತಯಾರಿಸುವ ವಿಧಾನ:

ಮೊದಲನೆಯದಾಗಿ ಸೋಯಾ ತುಂಡುಗಳನ್ನು ನೀರಿನಲ್ಲಿ ನೆನೆಸಿಡಿ, ನಂತರ ಅದು ನೀರಿನಲ್ಲಿ ಉಬ್ಬಿದಾಗ, ಅದರ ನೀರನ್ನು ಬಸಿದು ಆ ಸೋಯಾಚಂಕ್ಸ್ ಗಳನ್ನು ಮಿಕ್ಸಿ ಜಾರ್ ಗೆ ವರ್ಗಾಯಿಸಿ ಹಾಗೂ ಅದಕ್ಕೆ ಮೊಸರು, ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ (ನೀವು ಇದರ ಬದಲು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡ ಬಳಸಬಹುದು) ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಎಲೆಕೋಸು ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ. ಜೊತೆಗೆ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅರಶಿನ, ಜೀರಿಗೆ ಪುಡಿ, ಗರಂ ಮಸಾಲ, ಬಿಳಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ದಪ್ಪ ಹಿಟ್ಟು ತಯಾರಿಸಿಕೊಳ್ಳಿ.

ಇದಾದ ಬಳಿಕ ಒಲೆಯಲ್ಲಿ ತವಾ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಕಾದ ಬಳಿಕ ಹಿಟ್ಟನ್ನು ಸುರಿದು ಪುಟ್ಟ ಪುಟ್ಟ ಪ್ಯಾನ್ ಕೇಕ್ ತಯಾರಿಸಿ. ಮತ್ತು ಈ ಪ್ಯಾನ್ ಕೇಕ್ ದೋಸೆಯ ರೀತಿ ತೆಳ್ಳಗೆ ಇರಲಿ. ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ ನಂತರ ಚಟ್ನಿ ಅಥವಾ ಕೆಚಪ್​​ನೊಂದಿಗೆ ಬಡಿಸಿ.

ಆರೋಗ್ಯ ಕುರಿತಾದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ