Varalakshmi Vratham 2023: ವರಮಹಾಲಕ್ಷ್ಮೀ ಹಬ್ಬ ಯಾವಾಗ? ಪೂಜಾ ಸಮಯ, ವ್ರತ ಮಾಡುವ ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ
ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಆಗಸ್ಟ್ 25 ರಂದು ಶುಕ್ರವಾರ ಆಚರಿಸಲಾಗುತ್ತದೆ.
ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ನಾಗರಪಂಚಮಿ ಮೊದಲ ಹಬ್ಬವಾದರೇ ಬಳಿಕ ಬರುವುದು ವರಮಹಾಲಕ್ಷ್ಮೀ ವ್ರತ (Varalakshmi Vratham). ಇದು ಹಿಂದೂಗಳ ಹಬ್ಬಗಳಲ್ಲಿ ಪ್ರಮುಖವಾಗಿದೆ. ಈ ದಿನವನ್ನು ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಆಗಸ್ಟ್ 25 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನದಂದು ವರಲಕ್ಷ್ಮೀ ದೇವಿಯನ್ನು ಸಂಪತ್ತು, ಭೂಮಿ, ಬುದ್ಧಿವಂತಿಕೆ, ಪ್ರೀತಿ, ಖ್ಯಾತಿ, ಶಾಂತಿ, ತೃಪ್ತಿ ಮತ್ತು ಶಕ್ತಿಯನ್ನು ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಜೊತೆಗೆ ಎಂಟು ದೇವತೆಗಳಾದ ಅಷ್ಟಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಈ ವ್ರತವನ್ನು ಆಚರಣೆ ಮಾಡುತ್ತಾರೆ.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಏನು?
ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ- ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮೀ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಈ ವ್ರತಾಚರಣೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ ಹಲವಾರು ಕಥೆಗಳಿದ್ದು ಕೆಲವು ನಂಬಿಕೆಯ ಪ್ರಕಾರ, ಲಕ್ಷ್ಮೀಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಪ್ರತೀತಿ ಇದೆ. ಹಾಗಾಗಿ ಲಕ್ಷ್ಮೀಯ ಆರಾಧನೆ ಮಾಡಿದಲ್ಲಿ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ. ಜೊತೆಗೆ ಪ್ರತಿ ವರ್ಷವೂ ಲಕ್ಷ್ಮೀಯನ್ನು ಶ್ರದ್ಧೆ- ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವರಮಹಾಲಕ್ಷ್ಮೀ ಹಬ್ಬದಂದು ಯಾವ ರೀತಿ ಪೂಜೆ ಮಾಡಬೇಕು?
ಶುಕ್ರವಾರ ವರಮಹಾಲಕ್ಷ್ಮೀಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಈ ಮುಹೂರ್ತದಲ್ಲಿ ಲಕ್ಷ್ಮೀಯನ್ನು ಕೂರಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ. ಇನ್ನು ಲಕ್ಷ್ಮೀಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವುಗಳೆಂದರೆ ಲಕ್ಷ್ಮೀಗೆ ತುಂಬಾ ಇಷ್ಟ. ಹಾಗಾಗಿ ಹೂವುಗಳನ್ನು ಪೂಜೆಗೆ ತರುವುದನ್ನು ಮರೆಯಬೇಡಿ. ಇನ್ನು ಕೆಲವರು ಹಣ, ಚಿನ್ನ, ಬಳೆ, ಹಣ್ಣು, ಅರಿಶಿಣ, ಕುಂಕುಮ, ಎಲ್ಲವನ್ನು ಇಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮೀಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಲಕ್ಷ್ಮೀ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ, ಕಡಲೆಮಡ್ಡಿ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸಬಹುದು. ಇನ್ನು ಪೂಜೆ ಮಾಡುವ ವಿಧಾನ ಕರ್ನಾಟಕದ ವಿವಿಧೆಡೆ ಬೇರೆ ಬೇರೆ ರೀತಿ ಇರಬಹುದು. ಹಿಂದಿನಿಂದ ನಡೆದು ಕೊಂಡು ಬಂದ ಆಚಾರದಂತೆ, ಕ್ರಮದಂತೆ ಪೂಜೆ ಮಾಡಬಹುದು.
ಇದನ್ನೂ ಓದಿ:ವರ ಮಹಾಲಕ್ಷ್ಮೀ ವ್ರತದ ಮುಹೂರ್ತ, ವರಪ್ರದ ಮಹಾಲಕ್ಷ್ಮಿಯ ಸ್ವರೂಪ ತಿಳಿದುಕೊಳ್ಳಿ
ವರಮಹಾಲಕ್ಷ್ಮೀ ವ್ರತದ ದಿನ ಪಠಿಸಬೇಕಾದ ಮಂತ್ರಗಳಾವವು?
-ಪದ್ಮಾಸನೇ ಪದ್ಮಾಕರೇ ಸರ್ವ ಲೌಕೈಕ ಪೂಜಿತೇ
-ನಾರಾಯಣಾಪ್ರಿಯೇ ದೇಯಿ ಸುಪ್ರಿತಾ ಭವ ಸರ್ವದಾ
-ಓಂ ಲಕ್ಷ್ಮೀ ನಾರಾಯಣಾಯ ನಮಃ
-ಓಂ ಹ್ರೀಂ ಹ್ರೀಂ ಶ್ರೀ ಲಕ್ಷ್ಮೀ ವಾಸುದೇವಾಯ ನಮಃ
-ಪದ್ಮನೇ ಪದ್ಮ ಪದ್ಮಾಕ್ಷೀ ಪದ್ಮ ಸಂಭವ್ಯೇ ತನ್ಮೇ ಭಜಸಿ ಪದ್ಮಾಕ್ಷಿ ಯೇನ ಸೌಖ್ಯಂ ಲಾಭ್ಯಮ್
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:51 am, Sat, 12 August 23