Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 27ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 27ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 27ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Mar 27, 2025 | 1:49 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮಾತನಾಡದೆ ಸುಮ್ಮನಿರಬೇಕು ಎಂದುಕೊಂಡಂಥ ವಿಷಯಗಳ ಬಗ್ಗೆಯೇ ಸಿಕ್ಕಾಪಟ್ಟೆ ಮಾತನಾಡುವಂತೆ ಆಗುತ್ತಿದೆ. ಕೈಲಿ ಇರುವಂಥ ಹಣದ ಬಗ್ಗೆ ಇಷ್ಟು ಸಮಯ ನಿಮಗಿದ್ದ ಆತ್ಮವಿಶ್ವಾಸ ಸ್ವಲ್ಪ ಕರಗುತ್ತಾ ಬರುತ್ತಾದೆ. ಸ್ವಲ್ಪ ಸಮಯ ತೆಗೆದುಕೊಂಡು ಹಣ ನೀಡಿದರೂ ಪರವಾಗಿಲ್ಲ ಎಂದು ನೀವು ಯಾರಿಗೆ ಹೇಳಿರುತ್ತೀರೋ ಅಂಥವರಿಂದ ಬೇಗ ಹಣವನ್ನು ವಸೂಲಿ ಮಾಡಬೇಕು ಎಂದೆನಿಸುವುದಕ್ಕೆ ಶುರುವಾಗುತ್ತದೆ. ಇನ್ನು ನಿಮ್ಮಲ್ಲಿ ಯಾರು ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತೀರಿ ಅಂಥವರಿಗೆ ನಿಯೋಜನೆ ಮೇಲೆ ಬೇರೆ ಕಡೆಗೆ ವರ್ಗಾವಣೆ ಆಗುವ ಅಥವಾ ಈಗಿರುವ ಕೆಲಸದ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಸಾಧ್ಯತೆಗಳಿವೆ. ಇನ್ನು ಮದುವೆ ವಯಸ್ಕರಾಗಿದ್ದು, ಈ ಹಿಂದೆ ಯಾವ ಸಂಬಂಧವನ್ನು ಬೇಡ ಎಂದು ಹೇಳಿದ್ದಿರೋ ಅದೇ ಸಂಬಂಧ ಈಗ ಒಪ್ಪಿಗೆ ಇದೆ ಎಂದು ಹೇಳುವ ತೀರ್ಮಾನಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಇತರರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಮನೆಯ ದುರಸ್ತಿಗಾಗಿ ಯೋಜನೆಯನ್ನು ರೂಪಿಸಲಿದ್ದೀರಿ. ನಲ್ಲಿ, ಟಾಯ್ಲೆಟ್ ಇಂಥದ್ದರ ನವೀಕರಣ ಮಾಡಿಸಿಕೊಳ್ಳಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದು ನೆರವೇರಲಿದೆ. ಈಗಾಗಲೇ ಖರೀದಿ ಮಾಡಿರುವಂಥ ಸೈಟ್ ಅಥವಾ ವಿಲ್ಲಾ ಇದ್ದಲ್ಲಿ ಅದಕ್ಕೆ ಸಂಬಂಧಿಸಿದ ಖಾತೆ- ತೆರಿಗೆ ಇತ್ಯಾದಿಗಳ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವರ ಸಹಾಯವನ್ನು ತೆಗೆದುಕೊಳ್ಳುವುದಕ್ಕೆ ತೀರ್ಮಾನಿಸಲಿದ್ದೀರಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ ಅದಕ್ಕಾಗಿ ಕೆಲವು ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ವಿದೇಶಕ್ಕೆ ವ್ಯಾಸಂಗ ಮಾಡುವುದಕ್ಕೆ ತೆರಳಬೇಕು ಎಂದುಕೊಳ್ಳುತ್ತಿರುವವರಿಗೆ ಇಲ್ಲಿಯ ತನಕ ಅಡೆತಡೆಗಳು ಕಾಡುತ್ತಾ ಇದ್ದಲ್ಲಿ ಅದಕ್ಕೆ ಸೂಕ್ತ ಸಹಾಯ- ಮಾರ್ಗದರ್ಶನ ದೊರೆಯಲಿದೆ. ಸಾಕು ಪ್ರಾಣಿಗಳ ಅನಾರೋಗ್ಯದಿಂದ ಅವುಗಳ ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಖರ್ಚಾಗುವ ಯೋಗವಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವವರು ಹತ್ತುವಾಗ ಹಾಗೂ ಇಳಿಯುವಾಗ ಸಾಮಾನ್ಯಕ್ಕಿಂತ ಹೆಚ್ಚು ಜಾಗ್ರತೆಯನ್ನು ವಹಿಸಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕಾರಣವೇ ಇಲ್ಲದೆ ತುಂಬ ಸಂತೋಷವಾಗಿ ಇರುವಂತೆ ನಿಮಗೆ ಎನಿಸಲಿದೆ. ಧಾರ್ಮಿಕ ಪ್ರವಚನಕಾರರು, ಜ್ಯೋತಿಷಿಗಳು, ದೇವಾಲಯದ ಪಾರುಪತ್ತೇದಾರರು ಆಗಿರುವಂಥವರಿಗೆ ಸನ್ಮಾನ, ಗೌರವಗಳು ದೊರೆಯುವ ದಿನ ಇದಾಗಿರಲಿದೆ. ಈ ಹಿಂದೆ ನೀವು ಶ್ರಮಪಟ್ಟು ಉಳಿಸಿಕೊಂಡಂಥ ಸ್ಥಳವೋ ಇತರರ ಜೊತೆಗೆ ವಾದ ಹೂಡಿಯಾದರೂ ಗಳಿಸಿಕೊಂಡಂಥ ಸ್ಥಾನ-ಮಾನದ ಹೆಚ್ಚುಗಾರಿಕೆ ಏನು ಎಂಬ ಬಗ್ಗೆ ಇತರರಿಗೆ ಗೌರವ ಮೂಡಲಿದೆ. ಉದ್ಯೋಗಕ್ಕಾಗಿ ಬಹಳ ಸಮಯದಿಂದ ಪ್ರಯತ್ನವನ್ನು ಪಡುತ್ತಿರುವವರು ತಮ್ಮ ತೀರ್ಮಾನವನ್ನು ಬದಲಾಯಿಸಿಕೊಂಡು ಸ್ವಂತ ಉದ್ಯಮ- ವ್ಯವಹಾರವನ್ನು ಶುರು ಮಾಡುವ ಬಗ್ಗೆಯೋ ಅಥವಾ ಕಮಿಷನ್ ಆಧಾರದಲ್ಲಿ ಆದಾಯ ತರುವಂಥದ್ದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳಿವೆ. ಕೃಷಿಕರಿಗೆ ಈಗ ಇರುವುದರ ಜೊತೆಗೆ ಹೆಚ್ಚುವರಿಯಾಗಿ ಭೂಮಿಯನ್ನು ಭೋಗ್ಯಕ್ಕೋ ಸ್ವಂತಕ್ಕೋ ಖರೀದಿಸಿ ಹೊಸ ಬೆಳೆಗಳನ್ನು ಬೆಳೆಯಬೇಕು ಎಂಬ ಆಲೋಚನೆ ಮೂಡಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಸಾಮರ್ಥ್ಯವೇ ಕುಂದಿದೆಯಾ ಅಥವಾ ಆಲೋಚನೆ ಮಾಡುವ ವಿಧಾನದಲ್ಲಿ ಹಿಂದುಳಿಯುತ್ತಿದ್ದೀರಾ ಎಂದೆಲ್ಲ ಯೋಚನೆ ಮೂಡುವುದಕ್ಕೆ ಶುರುವಾಗಲಿದೆ. ಬಹಳ ದಿವಸದ ಹಿಂದೆ ನಿಮಗೆ ಮಾಡಿ ಮುಗಿಸಲು ಹೇಳಿದಂಥ ಮುಖ್ಯವಾದ ಕೆಲಸವೊಂದನ್ನು ಮರೆತ ಕಾರಣಕ್ಕೆ ಮುಜುಗರ ಎದುರಿಸುವಂಥ ಪರಿಸ್ಥಿತಿ ಬರಲಿದೆ. ಯಾರು ವೈದ್ಯಕೀಯ ವೃತ್ತಿಯಲ್ಲಿ ಇರುತ್ತೀರೋ ಅಂಥವರು ಸ್ವಂತ ಕ್ಲಿನಿಕ್ ಅಥವಾ ಆಸ್ಪತ್ರೆ ಶುರು ಮಾಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಲೈಬ್ರರಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಬಹುದು. ಬಾಡಿಗೆ ಮನೆಯಲ್ಲಿ ವಾಸ ಇರುವಂಥವರು ಈಗ ಇರುವ ಮನೆಯನ್ನು ಬಿಟ್ಟು ಬೇರೆ ಕಡೆ ಹೋಗಬೇಕು ಎಂದುಕೊಳ್ಳಲಿದ್ದೀರಿ. ಮಕ್ಕಳ ಶಿಕ್ಷಣ ಹಾಗೂ ಶಾಲೆ ಸಲುವಾಗಿ ಹಣ- ಸಮಯವನ್ನು ಮೀಸಲಿಟ್ಟು ಕೆಲವು ಹೊಸ ಕೆಲಸಗಳನ್ನು ಶುರು ಮಾಡಲಿದ್ದೀರಿ. ದಿನದ ಕೊನೆಗೆ ಸಮಾಧಾನ ಆಗುವ ಕೆಲವು ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನನಗೆ ಯಾರ ಸಹಾಯವೂ ಬೇಡ ಎಂದು ನಿಮ್ಮೆದುರು ಮಾತನಾಡಿದ್ದ ವ್ಯಕ್ತಿ ಈಗ ತಾನು ಬಹಳ ಕಷ್ಟದಲ್ಲಿ ಇರುವುದಾಗಿಯೂ ಈ ಹಿಂದೆ ತಾನಾಡಿದ ಮಾತುಗಳನ್ನು ಮರೆತು ಸಹಾಯ ಮಾಡುವಂತೆಯೂ ಕೇಳಿಕೊಂಡು ಬರಲಿದ್ದಾರೆ. ಇನ್ನು ನಿಮ್ಮ ಉಳಿತಾಯದ ಹಣವನ್ನು ತೆಗೆದುಕೊಂಡು, ಅದನ್ನು ಷೇರು ಮಾರುಕಟ್ಟೆಯಲ್ಲಿನ ಷೇರುಗಳ ಮೇಲೆಯೋ ಅಥವಾ ಮ್ಯೂಚುವಲ್ ಫಂಡ್ ಮೇಲೋ ಹೂಡಿಕೆ ಮಾಡಬೇಕು ಎಂದು ಗಂಭೀರವಾಗಿ ಆಲೋಚನೆಯನ್ನು ಆರಂಭಿಸಲಿದ್ದೀರಿ. ಇತರರ ಕಣ್ಣಿಗೆ ಅಥವಾ ದೃಷ್ಟಿ- ಆಲೋಚನೆಗೆ ದಕ್ಕದ ಕೆಲವು ಸಂಗತಿ-ವಸ್ತು, ವಿಷಯಗಳು ನಿಮ್ಮ ಗಮನಕ್ಕೆ ಬರಲಿವೆ. ಎಷ್ಟು ಬೇಗ ಇದರ ಲಾಭವನ್ನು ಪಡೆದುಕೊಳ್ಳುವುದಕ್ಕೆ ಪ್ರತಿಕ್ರಿಯೆ ನೀಡುತ್ತೀರೋ ಅಷ್ಟು ಒಳ್ಳೆಯದು. ಇಷ್ಟು ಸಮಯ ನೀವು ಯಾವುದನ್ನು ವ್ಯರ್ಥ ಹೂಡಿಕೆ ಅಂದುಕೊಂಡಿದ್ದಿರೋ ಅದರಲ್ಲಿ ನಿಮ್ಮ ಅಸಲು ದೊರೆಯಬಹುದು ಅಥವಾ ಹಾಕಿದ್ದ ಅಸಲಿನ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ಕೈ ಸೇರುವ ಸಾಧ್ಯತೆ ಗೋಚರಿಸಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಏಕ ಕಾಲಕ್ಕೆ ಹಲವು ಕೆಲಸಗಳನ್ನು ನಿಗಾ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಇದು ಒತ್ತಡವಾಗಿ ಮಾರ್ಪಡಲಿದೆ. ಇನ್ನು ಮಕ್ಕಳಿರುವವರಿಗೆ ಅವರ ಆರೋಗ್ಯ ಸ್ಥಿತಿಯು ಏಕಾಗ್ರತೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದಂಥ ಸ್ಥಿತಿಯನ್ನು ಸೃಷ್ಟಿ ಮಾಡಲಿವೆ. ನೀವು ಬಹಳ ಆಸ್ಥೆ ವಹಿಸಿ, ಶ್ರಮ ಪಟ್ಟು ಮಾಡಿದ ಪ್ರಾಜೆಕ್ಟ್- ಕಾರ್ಯಗಳ ಬಗ್ಗೆ ಇತರರು ಉದಾಸೀನ- ಉಡಾಫೆಯಿಂದ ಮಾತನಾಡಿದರು ಎಂಬುದು ಸಿಟ್ಟಿಗೆ ಕಾರಣವಾಗಲಿದೆ. ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ಈ ದಿನ ಸಾಧ್ಯವಾದಷ್ಟೂ ದೂರದಲ್ಲಿ ಇರುವುದು ಕ್ಷೇಮ. ಬಾಯಿ ರುಚಿಗೆ ಬಿದ್ದಲ್ಲಿ ಹೊಟ್ಟೆ ನೋವು, ಹೊಟ್ಟೆಯುಬ್ಬರ ಅಥವಾ ಹೊಟ್ಟೆಯುರಿ ಇಂಥ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಆಗಲಿದೆ. ಈ ಹಿಂದೆ ಬಹಳ ಹಣ ಖರ್ಚು ಮಾಡಿ, ಖರೀದಿಸಿ ತಂದಂಥ ಸಲಕರಣೆ ಅಥವಾ ಉಪಕರಣಗಳು ಏನಾದರೊಂದು ಸಮಸ್ಯೆ ತರಬಹುದು. ತಕ್ಷಣಕ್ಕೆ ಇದಕ್ಕೆ ಏನು ಪರಿಹಾರ ಎಂಬುದು ತಿಳಿಯದೆ ಬೇಸರ ಪಡುವಂತೆ ಆಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರು ಹಳೇ ನಾಣ್ಯ, ಅಂಚೆ ಚೀಟಿ ಅಥವಾ ಪುರಾತನ ವಸ್ತುಗಳ ಖರೀದಿ ಹಾಗೂ ಮಾರಾಟವನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುತ್ತೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಕ್ಯಾಟರಿಂಗ್ ಮಾಡುತ್ತಿರುವವರು ದಿಢೀರನೆ ನಾನಾ ಸವಾಲುಗಳನ್ನು ಎದುರಿಸುವಂತಾಗಲಿದೆ. ಕೆಲಸಕ್ಕೆ ಬರುವುದಾಗಿ ಮಾತು ನೀಡಿದ್ದಂಥ ವ್ಯಕ್ತಿಗಳು ಏಕಾಏಕಿ ತಮ್ಮಿಂದ ಬರುವುದಕ್ಕೆ ಸಾಧ್ಯವಿಲ್ಲ ಎಂದುಬಿಡಬಹುದು ಅಥವಾ ನಿಮಗೆ ಇರುವಂಥ ಸೌಲಭ್ಯ- ಸಲಕರಣೆಗಳಲ್ಲಿ ಸಮಾಧಾನ ಆಗದಂತೆ ಕೆಲವು ಬೆಳವಣಿಗೆಗಳು ಆಗಲಿವೆ. ವಾಹನ ಖರೀದಿ ಮಾಡಬೇಕು ಎಂದಿರುವವರು ಅಡ್ವಾನ್ಸ್ ನೀಡಿ ಬುಕ್ ಮಾಡುವುದಕ್ಕೆ ತೀರ್ಮಾನ ಮಾಡುವ ಅವಕಾಶಗಳು ಹೆಚ್ಚಾಗಿವೆ. ಮಕ್ಕಳ ಸಲುವಾಗಿ ವಾಹನವನ್ನು ಖರೀದಿಸಲಿದ್ದೀರಿ. ಮನೆಯಲ್ಲಿ ಅಥವಾ ಜಮೀನಿನಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬ ಮುಂಜಾಗ್ರತೆಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುವ ಕಡೆಗೆ ಲಕ್ಷ್ಯವನ್ನು ನೀಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8) ಸಕಾಲಕ್ಕೆ ಆಗಬೇಕಾದ ಕೆಲಸಗಳು ಸಲೀಸಾಗಿ ಆಗಲಿವೆ. ಇತರರು ನಿಮ್ಮನ್ನು ಆತಂಕಕ್ಕೆ ಗುರಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಲ್ಲಿ ಅಂಥವರ ಗುರಿ- ಉದ್ದೇಶಗಳು ಗೊತ್ತಾಗಲಿವೆ. ಸಣ್ಣದಾಗಿ ಆರಂಭ ಮಾಡಬೇಕು ಎಂದುಕೊಂಡಿದ್ದ ವ್ಯಾಪಾರ- ವ್ಯವಹಾರಗಳು ದೊಡ್ಡ ಮಟ್ಟದಲ್ಲಿಯೇ ಶುರು ಮಾಡುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ಆಗಲಿವೆ. ಸಂಬಂಧಿಕರು- ಸ್ನೇಹಿತರ ಜತೆಗೆ ಈ ಹಿಂದೆ ಮನಸ್ತಾಪಗಳನ್ನು ನಿವಾರಿಸಿಕೊಳ್ಳಲು ಬೇಕಾದ ವೇದಿಕೆ ಸಿದ್ಧವಾಗಲಿದೆ. ಮನೆಯಲ್ಲಿ ಅನಗತ್ಯ ಎನಿಸಿದ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ. ಮನೆ ದೇವರು ಅಥವಾ ಬೇರೆ ಯಾವುದೇ ದೇವರ ಆರಾಧನೆಯನ್ನು ಮಾಡಬೇಕು ಎಂದುಕೊಳ್ಳುತ್ತಾ ಬರುತ್ತಿದ್ದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ ಆಗಲಿದೆ. ನೀವು ಗುರುಗಳಾಗಿ ಗೌರವಿಸುವಂಥವರು ಕೆಲವು ಅಮೂಲ್ಯವಾದ ಸಲಹೆ- ಸೂಚನೆ ನೀಡಿ, ಮಾರ್ಗದರ್ಶನ ಮಾಡಲಿದ್ದಾರೆ. ಇದರಿಂದಾಗಿ ನಿಮಗೆ ಆರ್ಥಿಕವಾಗಿ ಅನುಕೂಲಗಳು ಆಗಲಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು ಎಂದು ಹಲವು ಸಲ ಈ ದಿನ ಅನಿಸಲಿದೆ. ತಮಾಷೆಗೆ ಎಂದು ನೀವಾಡಿದ ಮಾತಿನಿಂದ ಸಂಬಂಧಗಳಲ್ಲಿ ಸಮಸ್ಯೆಯನ್ನು ಮಾಡಿಕೊಳ್ಳಲಿದ್ದೀರಿ. ಮಧುಮೇಹ- ರಕ್ತದೊತ್ತಡದಂಥ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪರಿಸ್ಥಿತಿ ಗಂಭೀರ ಆಗುತ್ತಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ಗ್ಯಾಸ್ ಸಿಲಿಂಡರ್ ಪೈಪ್ ಗಳನ್ನು ಹಾಕುವ ಅಥವಾ ಗ್ಯಾಸ್ ಸ್ಟೌ ರಿಪೇರಿ ಮಾಡುವಂಥ ಕೆಲಸವನ್ನು ಮಾಡುತ್ತಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಹೊಸದಾಗಿ ಕೆಲವರು ಪರಿಚಯ ಆಗಿ, ಅವಕಾಶಗಳು ದೊರೆಯಲಿವೆ. ನೀವು ಬಹಳ ಇಷ್ಟಪಡುವ- ಪ್ರೀತಿಸುವ ವ್ಯಕ್ತಿಯ ಮನವೊಲಿಕೆ ಮಾಡುವುದಕ್ಕೋಸ್ಕರ ಕೆಲವು ಉಡುಗೊರೆಗಳನ್ನು ನೀಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ತಂದೆ- ತಾಯಿಯನ್ನು ತೀರ್ಥಕ್ಷೇತ್ರ- ಪ್ರವಾಸಕ್ಕೆ ಕಳಿಸುವ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೂ ಸಮಾಧಾನ ಹಾಗೂ ಸಂತೋಷ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ