ಮನೆಯಲ್ಲಿಯೇ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರು ಸದಾ ಮಕ್ಕಳ ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಆದರೆ ನೀವು ಈ ಕುರಿತು ಮೊದಲೇ ತಯಾರಿ ನಡೆಸಿದ್ದರೆ ನಿಮಗೆ ಬೇಸರವೆನಿಸದು. ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗುವ ಪೋಷಕರು ಏನು ಮಾಡಬೇಕು ಇಲ್ಲಿದೆ ಕೆಲವು ಸಲಹೆಗಳು.
ಪ್ರತಿಯೊಬ್ಬ ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಬೇಕು ಎಂದು ಬಯಸುತ್ತಾರೆ. ಆದರೆ ಇಬ್ಬರೂ ಕೆಲಸಕ್ಕೆ ಹೋಗುವುದು ಮುಖ್ಯವಾಗಿರುವುದರಿಂದ ಅನಿವಾರ್ಯವಾಗಿ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಬೇಕಾಗುತ್ತದೆ. ಮಕ್ಕಳು ಮನೆಯಲ್ಲಿರುವಾಗ ಏನನ್ನು ಮಾಡಬೇಕು, ಏನು ಮಾಡಬಾರದು ಎಂಬುದರ ಕಡೆಗೆ ಹೆಚ್ಚು ಗಮನಕೊಡಬೇಕು.
ಮನೆಯ ಸುತ್ತಮುತ್ತಲಿನ ಪರಿಚಯವಿರುವ ನಂಬಿಕೆ ಇರುವ ಮೂರು ಜನರ ಮೊಬೈಲ್ ನಂಬರ್ ನಿಮ್ಮ ಬಳಿ ಇರಲಿ. ಯಾವುದೇ ತುರ್ತು ಸಂದರ್ಭವಿದ್ದರೂ ಅವರಿಗೆ ಕರೆ ಮಾಡಿ ವಿಚಾರಿಸಬಹುದು. ಹಾಗೆಯೇ ಮಕ್ಕಳ ಮೇಲೆ ಕಣ್ಣಿಟ್ಟಿರುವಂತೆ ಹೇಳಬಹುದು.
ಕೆಲವು ನಿಯಮಗಳಿರಲಿ
ಕೆಲವು ನಿಯಮಗಳನ್ನು ಸಿದ್ಧಪಡಿಸಿ, ಮಕ್ಕಳು ಇಡೀ ದಿನವು ಟಿವಿ ನೋಡುವಂತಿಲ್ಲ ಅಥವಾ ವಿಡಿಯೋ ಗೇಮ್ ಆಡುವಂತಿಲ್ಲ, ಯಾಕಾಗಿ ಪೋಷಕರು ಹೇಳಿದ ಮಾತುಗಳನ್ನು ಮಕ್ಕಳು ಕೇಳಬೇಕೆಂದು ಮನದಟ್ಟು ಮಾಡಿಕೊಡಿ, ಹಾಗೆಯೇ ಒಂದೊಮ್ಮೆ ಟಿವಿ ನೋಡಿದರೆ ಯಾವ ರೀತಿಯ ಶೋಗಳನ್ನು ವೀಕ್ಷಿಸಬೇಕು, ಅಡುಗೆ ಮನೆ ಅಥವಾ ಪಾತ್ರೆ ಬಳಕೆ ಹೇಗೆ ಮಾಡಬೇಕು ಎಂಬುದನ್ನೂ ತಿಳಿಸಿ.
ಸುರಕ್ಷತಾ ನಿಯಮಗಳು
ಮನೆಯಲ್ಲಿ ಒಬ್ಬರೇ ಇರುವಾಗ ಸುರಕ್ಷತಾ ನಿಯಮಗಳನ್ನು ಹೇಗೆ ಪಾಲಿಸಬೇಕು, ಬೆಂಕಿ, ದರೋಡೆ, ವೈದ್ಯಕೀಯ ತುರ್ತು ಪರಿಸ್ಥಿತಿ ಬಂದರೆ ಹೇಗೆ ನಿಭಾಯಿಸಬೇಕು ಎಂಬುದನ್ನು ತಿಳಿಸಿಕೊಡಿ. ಮನೆಯಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಿಸಿ. ಮದ್ಯ, ತಂಬಾಕು, ಸಿಗರೇಟ್, ಕಾರಿನ ಕೀ, ಬೆಂಕಿಪೊಟ್ಟಣ ಸೇರಿದಂತೆ ಇತರೆ ವಸ್ತುಗಳನ್ನು ಮಕ್ಕಳಿಂದ ದೂರವಿರುವಂತೆ ನೋಡಿಕೊಳ್ಳಿ. ಒಂದೊಮ್ಮೆ ಬೆಂಕಿ ಹೊತ್ತಿಕೊಂಡರೆ ಫೈರ್ ಎಸ್ಟಿಂಗ್ವಿಷರ್ ಬಳಕೆ ಮಾಡುವುದು ಹೇಗೆ ಎಂಬುದನ್ನೂ ಹೇಳಿರಿ.
ಮನೆಯಲ್ಲಿ ಎಲ್ಲಾ ವ್ಯವಸ್ಥೆಯೂ ಇರಲಿ
ಮನೆಯಿಂದ ಹೊರಡುವ ಮುನ್ನ ಮನೆಯಲ್ಲಿ ಮಕ್ಕಳಿಗೆ ಬೇಕಾದ ವಸ್ತುಗಳು, ಆಹಾರ ಪದಾರ್ಥಗಳೆಲ್ಲವನ್ನೂ ಕೈಗೆ ಸಿಗುವಂತೆ ಇರಿಸಿರಿ. ಹಾಗೆಯೇ ಯಾವ ಸಮಯದಲ್ಲಿ ಆಹಾರವನ್ನು ಸೇವಿಸಬೇಕು, ಯಾವ ಸಮಯದಲ್ಲಿ ಓದಬೇಕು, ಯಾವ ಸಮಯದಲ್ಲಿ ಆಟವಾಡಬೇಕು ಎನ್ನುವ ಟೈಂಟೇಬಲ್ ರಚಿಸಿ.
ಮನೆಯ ಬಾಗಿಲನ್ನು ತೆಗೆಯುವುದು ಹೇಗೆ?
ಬಾಗಿಲನ್ನು ತೆಗೆಯುವುದು ಹೇಗೆ ಎಂಬುದನ್ನೂ ತಿಳಿಸಿರಿ, ಹಾಗೆಯೇ ಪರಿಚಯವಿಲ್ಲದವರು ಬಂದು ಚಾಕಲೇಟ್ ಅಥವಾ ಇನ್ಯಾವುದೇ ಆಮಿಷವೊಡ್ಡಿದರೂ ಮನೆಯ ಬಾಗಿಲನ್ನೂ ಯಾವುದೇ ಕಾರಣಕ್ಕೆ ತೆರೆಯಬಾರದು ಮೊದಲು ಕಿಟಕಿ ಮೂಲಕ ವೀಕ್ಷಿಸಬೇಕು, ನಿಮಗೆ ಪರಿಚಯವಿದ್ದರೆ ಮಾತ್ರ ಬಾಗಿಲು ತೆರೆಯಬೇಕು ಎಂಬುದನ್ನೂ ಮಕ್ಕಳಿಗೆ ತಿಳಿ ಹೇಳುವುದು ಮುಖ್ಯ.
Published On - 4:04 pm, Tue, 26 July 22