ಪೌಷ್ಟಿದಾಯಕ ಆಹಾರಗಳ ಸೇವನೆಯ ಕೊರತೆಯಿಂದ ಅಪೌಷ್ಟಿಕತೆಯ ಕಾರಣದಿಂದಾಗಿ ಜಗತ್ತಿನಲ್ಲಿ ಅನೇಕ ಮಕ್ಕಳು ಸಾವನ್ನಪ್ಪುವ ಸುದ್ದಿಯನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಾಗಿ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸಬೇಕೆಂದರೆ ಪ್ರತಿಯೊಬ್ಬರು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡಬೇಕು. ಅಲ್ಲದೆ ಬಲವಾದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಒಬ್ಬ ವ್ಯಕ್ತಿಯು ತಾನು ಸೇವಿಸುವ ಆಹಾರದಲ್ಲಿ ಹಲವಾರು ಪೋಷಕಾಂಶಗಳನ್ನು ಸೇರಿಸಿಕೊಳ್ಳಬೇಕು. ಒಬ್ಬ ವ್ಯಕ್ತಿಯು ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯಲು ಪ್ರತಿದಿನ ಸಾಕಷ್ಟು ಕಾರ್ಬೋಹೈಡ್ರೇಟ್, ಫೈಬರ್, ಆರೋಗ್ಯಕರ ಕೊಬ್ಬು, ಫ್ರೋಟೀನ್, ಖನಿಜಗಳು, ವಿಟಮಿನ್ ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇಂತಹ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಅನೇಕ ರೋಗಗಳು ಬಾರದಂತೆ ತಡೆಯುತ್ತದೆ. ಈ ಕಾರಣದಿಂದಾಗಿ ಆರೋಗ್ಯಕರ ಆಹಾರಪದ್ಧತಿ ಮತ್ತು ಸರಿಯಾದ ಪೋಷಣೆಯ ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ.
ಭಾರತ ಪ್ರತಿಯೊಬ್ಬ ನಾಗರಿಕನ (ನವಜಾತ ಶಿಶುವಿನಿಂದ ಹಿಡಿದು ವಯಸ್ಸಾದವರವರೆಗೆ) ಪೋಷಣೆಯ ಬಗ್ಗೆ ಕಾಳಜಿ ವಹಿಸಲು ಮತ್ತು ಪೌಷ್ಟಿಕಾಂಶ ಆಹಾರದ ಸೇವನೆಯ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಗ್ಗೆ ಜಾಗೃತಿ ಅಭಿಯಾನವನ್ನು ನಡೆಸಲು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಮೊದಲ ಬಾರಿಗೆ ಅಮೇರಿಕನ್ ಡಯೆಟಿಕ್ ಅಸೋಸಿಯೇಷನ್ (ಈಗಿನ ಅಕಾಡೆಮಿ ಆಫ್ ನ್ಯೂಟ್ರಿಷನ್ ಮತ್ತು ಡಯಟ್ ಸೈನ್ಸಸ್) 1975 ರಲ್ಲಿ ಆಚರಿಸಿತು. ಪೌಷ್ಟಿಕಾಂಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಆಚರಣೆಯ ಹಿಂದಿನ ಉದ್ದೇಶವಾಗಿತ್ತು. ಈ ಆಚರಣೆಗೆ ವ್ಯಾಪಕವಾದ ಮನ್ನಣೆ ಸಿಕ್ಕಿತು. ಇದಾದ ನಂತರ ಭಾರತದಲ್ಲಿ ಮೊದಲ ಬಾರಿಗೆ 1982 ರಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಯಿತು. ಇದನ್ನು ಆಚರಿಸುವ ಉದ್ದೇಶವು ಜನರಿಗೆ ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದಾಗಿತ್ತು. ಅಲ್ಲದೆ ಪೌಷ್ಟಿಕಾಂಶದ ಮಹತ್ವ ಬಗ್ಗೆ ಜನರಿಗೆ ತಿಳಿಸಲು, ಆರೋಗ್ಯಕರ ಮತ್ತು ಉತ್ತಮ ಜೀವನಶೈಲಿಯನ್ನು ಪಾಲಿಸಲು ಜನರನ್ನು ಪ್ರೇರೇಪಿಸಲು ಈ ಅಭಿಯಾನವನ್ನು ರಚಿಸಲಾಗಿದೆ.
ಇದನ್ನೂ ಓದಿ:ಮಕ್ಕಳ ಆರೋಗ್ಯ: ನಿಮ್ಮ ಮಗುವಿಗೆ ಎಂದಿಗೂ ಈ 10 ಆಹಾರಗಳು ನೀಡಬೇಡಿ
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯು ಪ್ರತಿವರ್ಷ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಕಾರ್ಯವನ್ನು ಆಯೋಜಿಸುತ್ತದೆ. ಪೌಷ್ಟಿಕಾಂಶ ಸಪ್ತಾಹದ ನಿಮಿತ್ತ ಹಲವು ಅಭಿಯಾನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಹವನ್ನು ಪೋಷಿಸುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು, ಹಾಗೂ ನಮ್ಮ ಆರೋಗ್ಯಕ್ಕೆ ಅವುಗಳ ಕೊಡುಗೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತದೆ.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಪೋಷಕಾಂಶಗಳು ವಹಿಸುವ ನಿರ್ಣಾಯಕ ಪ್ರಾತ ಹಾಗೂ ಪ್ರತಿಯೊಬ್ಬ ಮನುಷ್ಯನು ತಾನು ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದರ ಕುರಿತು ಜಾಗೃತಿಯನ್ನು ಹರಡುವ ಗುರಿಯೊಂದಿಗೆ ಒಂದು ವಾರಗಳವರೆಗೆ ನಡೆಯುವ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಉದ್ದಕ್ಕೂ ವಿವಿಧ ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: