Teacher’s Day 2023: ಶಿಕ್ಷಕರ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಹಿಂದಿನ ಇತಿಹಾಸ ಏನು?
ಗುರುವಿನ ಆಶಿರ್ವಾದದಿಂದ ಮಾತ್ರ ನಾವು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಸಾಗಲು ಸಾಧ್ಯ. ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜದ ಸಮರ್ಥ ವ್ಯಕ್ತಿನ್ನಾಗಿ ರೂಪಿಸುವವರು ಶಿಕ್ಷಕರು. ನಮ್ಮ ಉಜ್ವಲ ಭವಷ್ಯವನ್ನು ರೂಪಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಹಿಂದಿನ ಇತಿಹಾಸದ ಬಗ್ಗೆ ತಿಳಿಯೋಣ.
ನಮ್ಮ ಜೀವನದಲ್ಲಿ ಗುರುವಿಗೆ ಬಹಳ ಮಹತ್ವವಿದೆ. ಗುರುವಿಲ್ಲದೆ ಜ್ಞಾನವನ್ನು ಪಡೆಯುವುದು ಅಸಾಧ್ಯ. ಗುರುವಿನ ಆಶೀರ್ವಾದದಿಂದ ನಾವು ಅಜ್ಞಾನದ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತೇವೆ. ಗುರುಗಳಿಂದ ಪಡೆದ ಜ್ಞಾನ ಮತ್ತು ಮಾರ್ಗದರ್ಶನದಿಂದ ಮಾತ್ರ ನಾವು ಯಶಸ್ಸಿನ ಶಿಖರವನ್ನು ತಲುಪಬಹುದು. ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಇಂತಹ ಅದ್ಭುತ ಶಿಕ್ಷಕರಲ್ಲಿ ಒಬ್ಬರಾದ, ಶ್ರೇಷ್ಠ ಶಿಕ್ಷಣ ತಜ್ಞ, ವಿದ್ವಾಂಸ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನಾಚರಣೆಯು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಶಿಕ್ಷಕರನ್ನು ಗೌರವಿಸುವ ದಿನವಾಗಿದೆ. ಈ ದಿನದ ಆಚರಣೆಯ ಹಿಂದಿನ ಇತಿಹಾಸವನ್ನು ತಿಳಿಯೋಣ.
ಶಿಕ್ಷಕರ ದಿನವನ್ನು ಏಕೆ ಆಚರಿಸಲಾಗುತ್ತದೆ:
ಶಿಕ್ಷಣ ತಜ್ಞರಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವುದರಲ್ಲಿ ಕಳೆದರು. ಶಿಕ್ಷಣಕ್ಕಾಗಿ ಅವರ ಮಹಾನ್ ಕೊಡುಗೆಯನ್ನು ಗೌರವಿಸಲು ಮತ್ತು ರಾಷ್ಟ್ರದ ಮಾರ್ಗದರ್ಶಕ ಶ್ರೇಣಿಯಲ್ಲಿ ನಿಂತಿರುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಶಿಕ್ಷಕರ ದಿನಾಚರಣೆ ಹೇಗೆ ಆರಂಭವಾಯಿತು?
ಡಾ. ರಾಧಾಕೃಷ್ಣನ್ ಅವರು ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದಾಗ, ಇವರ ಕೆಲವು ಸ್ನೇಹಿತರು ಮತ್ತು ಅವರ ಮಾಜಿ ವಿದ್ಯಾರ್ಥಿಗಳು ಅವರನ್ನು ಭೇಟಿಯಾದರು. ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ಅನುಮತಿ ಕೇಳಿದರು.
ಇದಕ್ಕೆ ಉತ್ತರಿಸಿದ ಸರ್ವಪಲ್ಲಿ ರಾಧಾಕೃಷ್ಣನ್, ನೀವು ನನ್ನ ನನ್ನ ಜನ್ಮದಿನವನ್ನು ಆಚರಿಸಲು ಬಯಸುವುದು ಒಳ್ಳೆಯದು . ಆದರೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡಿದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ಈ ದಿನವನ್ನು ಆಚರಿಸಿದರೆ, ನನಗೆ ಅತ್ಯಂತ ಸಂತೋಷವಾಗುತ್ತದೆ ಎಂದು ಹೇಳಿದರು. ಇವರ ಈ ಮಾತನ್ನು ಗೌರವಿಸಿ ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಅಂದರೆ ಸರ್ವಪಲ್ಲಿ ರಾಧಾಕೃಷ್ಟನ್ ಅವರ ಜನ್ಮದಿನದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಶಾಲೆಯಲ್ಲಿ ಪಠ್ಯ ವಿಷಯ ಹೇಳಿಕೊಡದ ಮೇರಿ ಟೀಚರ್ ಬದುಕಲು ಕಲಿಸಿಕೊಟ್ಟರು
ಶಿಕ್ಷಕರ ದಿನಾಚರಣೆಯ ಮಹತ್ವ:
ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ತಮ್ಮ ವೃತ್ತಿಯಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ತಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯುವ ಮೂಲಕ, ಹಾಗೂ ಜೀವನ ಪಾಠವನ್ನು ಹೇಳಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ನಿರ್ಮಿಸುವ ಶಿಕ್ಷಕರಿಗೆ ಗೌರವಿಸಲು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರಂತರ ಸಮರ್ಪಣೆಯನ್ನು ಗುರುತಿಸಲು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಶಿಕ್ಷಕರ ದಿನಾಚರಣೆಯ ಸಲುವಾಗಿ ರಾಷ್ಟ್ರಪತಿಗಳಿಂದ ಪ್ರತಿಭಾನ್ವಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: