Modi Dhyana : ಕನ್ಯಾಕುಮಾರಿಯಲ್ಲಿ ‘ಮೋದಿ ಧ್ಯಾನ’, ದಕ್ಷಿಣದ ತುತ್ತ ತುದಿಯಲ್ಲಿರುವ ಈ ಸ್ಥಳದ ವಿಶೇಷತೆಗಳೇನು?
ಕಳೆದ ಎರಡು ತಿಂಗಳಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ಕಾಲ ಆಧ್ಯಾತ್ಮಿಕದ ಮೊರೆ ಹೋಗಲಿದ್ದಾರೆ. ದಕ್ಷಿಣದ ಅಂಚಿನಲ್ಲಿರುವ ಕನ್ಯಾಕುಮಾರಿಯ ಪ್ರಸಿದ್ಧ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 3 ದಿನಗಳ ಕಾಲ ಧ್ಯಾನ ನಡೆಸಲಿದ್ದಾರೆ. ಇಂದು ಮೇ 30 ರಿಂದ ಆರಂಭವಾಗಿ ಜೂನ್ 1ರವರೆಗೆ ಮೋದಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಾಧ್ಯ ದೈವ ಶಿವನಾಮ ಸ್ಮರಣೆಯಲ್ಲಿ ಕಾಲವನ್ನು ಕಳೆಯಲಿದ್ದಾರೆ. ಹಾಗಾದ್ರೆ ಮೋದಿ ಕನ್ಯಾಕುಮಾರಿಯಲ್ಲಿರುವ ಈ ಸ್ಥಳವನ್ನೇ ಆಯ್ಕೆ ಮಾಡಿಕೊಂಡದ್ದು ಯಾಕೆ? ಏನಿದರ ವಿಶೇಷತೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಭಾರತವನ್ನು ವರ್ಣಿಸುವಾಗ ಸಹಜವಾಗಿ ಎಲ್ಲರೂ ಕೂಡ ಕನ್ಯಾ ಕುಮಾರಿಯ ಹೆಸರನ್ನು ಉಲ್ಲೇಖಿಸುತ್ತಾರೆ. ದಕ್ಷಿಣ ಭಾರತದ ಭೂಮಿಯ ತುತ್ತ ತುದಿಯಲ್ಲಿರುವ ‘ಕನ್ಯಾಕುಮಾರಿ’ ಎಂಬ ಹೆಸರು ಬಂದದ್ದರ ಹಿಂದೆಯೂ ಪೌರಣಿಕ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಮೋದಿಯವರು ಈ ಬಾರಿ ವಿವೇಕಾನಂದ ಸ್ಮಾರಕದಲ್ಲಿ ಇಂದಿನಿಂದ ಹಗಲು-ರಾತ್ರಿಯೆನ್ನದೆ ಧ್ಯಾನದಲ್ಲಿ ತೊಡಗಲಿದ್ದು, ಮತ್ತೊಮ್ಮ ಅಧಿಕಾರದ ಚುಕ್ಕಾಣಿ ಹಿಡಿಯಲು ವೇದಿಕೆಯನ್ನು ಸೃಷ್ಟಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಮೋದಿ ಕನ್ಯಾಕುಮಾರಿಯ ಈ ಸ್ಥಳವನ್ನೇ ಆಯ್ಕೆ ಮಾಡಿಕೊಂಡದ್ದು ಯಾಕೆ?
ಭಾರತದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿ ವಿಶೇಷವಾದ ಶಕ್ತಿ ಹೊಂದಿರುವ ಕ್ಷೇತ್ರವಾಗಿದೆ. ತಾಯಿ ಕನ್ಯಾಕುಮಾರಿಯ ಆಶೀರ್ವಾದವಿರುವ ಈ ಪ್ರದೇಶವು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮದ ಸ್ಥಳವಾಗಿದೆ. ಧರ್ಮ ಗ್ರಂಥಗಳಲ್ಲಿ ಪಾರ್ವತಿ ದೇವಿಯ ಶಿವನ ಧ್ಯಾನದ ಸ್ಥಳವೆಂದು ಉಲ್ಲೇಖಿಸಲಾಗಿದ್ದು, ಹೀಗಾಗಿ ಇದೊಂದು ಪವಿತ್ರ ಸ್ಥಳವೆನ್ನಬಹುದು. ಇಲ್ಲಿ ಧಾನ್ಯ ಮಾಡಿದರೆ ಅನೇಕ ಫಲಗಳು ಕೂಡ ಲಭಿಸುತ್ತವೆಯಂತೆ. ಅದಲ್ಲದೇ, ಸ್ವಾಮಿ ವಿವೇಕಾನಂದರು ತಪಸ್ಸು ಮಾಡಿರುವ ಸ್ಥಳವು ಕೂಡ ಹೌದು. ಈ ಹಿಂದೆ ಕನ್ಯಾಕುಮಾರಿಯಲ್ಲಿ ತಪಸ್ಸು ಮಾಡಿದ ನಂತರ ವಿವೇಕಾನಂದರಲ್ಲಿದ್ದ ಶಕ್ತಿ ಮತ್ತಷ್ಟು ಹೆಚ್ಚಾಯಿತಂತೆ. ಹೀಗಾಗಿ ವಿವೇಕಾನಂದರ ಜೀವನದ ಪ್ರಭಾವ ಬೀರಿದ ಈ ಸ್ಥಳವನ್ನೇ ಮೋದಿಯವರು ಜ್ಞಾನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಕ್ಷಿಣದ ತುತ್ತ ತುದಿಗೆ ಕನ್ಯಾಕುಮಾರಿ ಹೆಸರು ಬಂದದ್ದು ಹೇಗೆ?
ಪೌರಾಣಿಕ ಹಿನ್ನಲೆಯನ್ನು ಗಮನಿಸಿದರೆ ಕನ್ಯಾಕುಮಾರಿ ಹೆಸರು ಬರಲು ಮುಖ್ಯ ಕಾರಣವೇ ಈ ಪಾರ್ವತಿ ದೇವಿಯ ತಪಸ್ಸು ಎನ್ನಲಾಗಿದೆ. ಹೌದು, ಸತಿ ದೇವಿಯ ತಂದೆ ದಕ್ಷ ಪ್ರಜಾಪತಿ ತಾನು ನಡೆಸುತ್ತಿದ್ದ ಯಾಗಕ್ಕೆ ಶಿವನಿಗೆ ಆಹ್ವಾನ ನೀಡಲಿಲ್ಲ ಎಂಬ ಕಾರಣಕ್ಕೆ ಸತಿ ಯಾಗದ ಕುಂಡಕ್ಕೆ ಧುಮುಕಿ ತನ್ನನ್ನೇ ಆಹುತಿ ನೀಡುತ್ತಾಳೆ. ಆ ಬಳಿಕ ಸತಿಯೇ ಪಾರ್ವತಿಯಾಗಿ ಮತ್ತೆ ಹುಟ್ಟಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದು ಈ ಸ್ಥಳದಲ್ಲೇ. ಆದರೆ ಶಿವನನ್ನು ಪಡೆಯಲು ಪಾರ್ವತಿ ಒಂಟಿ ಕಾಲಿನಲ್ಲಿ ನಿಂತು ಈ ಪ್ರದೇಶದಲ್ಲಿ ತಪಸ್ಸು ಮಾಡಿದ್ದರ ಕಾರಣ ಈ ಪ್ರದೇಶಕ್ಕೆ ಕನ್ಯಾಕುಮಾರಿ ಎಂಬ ಹೆಸರು ಬಂತು ಎಂಬ ನಂಬಿಕೆಯು ಇದೆ.
ಕನ್ಯಾಕುಮಾರಿಯಲ್ಲಿ ವೀಕ್ಷಿಸಲೇಬೇಕಾದ ಪ್ರವಾಸಿ ತಾಣಗಳು
* ಭಗವತಿ ಅಮ್ಮನ್ ದೇವಸ್ಥಾನ: ದೇವಿ ಕನ್ಯಾಕುಮಾರಿ ದೇವಸ್ಥಾನ ಎಂದೂ ಕರೆಯಲ್ಪಡುವ ಈ 3000 ವರ್ಷಗಳಷ್ಟು ಹಳೆಯದಾದ ಪ್ರಸಿದ್ಧ ದೇವಾಲಯವಾಗಿದೆ. ಶಿವನು ಹೊತ್ತಾಗ ಸತಿ ದೇವಿಯು ಅವನ ಭುಜದ ಮೇಲೆ ವಿನಾಶದ ನೃತ್ಯವನ್ನು ಪ್ರದರ್ಶಿಸುವ ವೇಳೆಯಲ್ಲಿ ಅವಳ ನಿರ್ಜೀವ ದೇಹವು ಒಮ್ಮೆ ಈ ಸ್ಥಳಕ್ಕೆ ಬಿದ್ದಿತು. ಹೀಗಾಗಿ ಈ ದೇವಾಲಯದಲ್ಲಿ ದೇವಿ ಕನ್ಯಾಕುಮಾರಿ ಅಮ್ಮನ್‌ನ ಚಿತ್ರವಿದೆ, ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮೂಗಿನ ಹೊಳ್ಳೆಯಲ್ಲಿ ಚಿನ್ನದ ಆಭರಣಗಳನ್ನು ಧರಿಸಿದ್ದು, ಭಕ್ತರು ಇಲ್ಲಿಗೆ ಬಂದು ಅಮ್ಮನ ದರ್ಶನವನ್ನು ಪಡೆಯುತ್ತಾರೆ.
* ತಿರುವಳ್ಳುವರ್ ಪ್ರತಿಮೆ : ಕನ್ಯಾಕುಮಾರಿ ಬಳಿಯ ಸಣ್ಣ ದ್ವೀಪದಲ್ಲಿ ನೆಲೆಗೊಂಡಿರುವ ಈ ಪ್ರತಿಮೆಯು ಹೆಸರಾಂತ ತತ್ವಜ್ಞಾನಿ ಮತ್ತು ಕವಿ ತಿರುವಳ್ಳುವರ್ ಅವರನ್ನು ಗೌರವಿಸಲು ನಿರ್ಮಿಸಲಾಗಿದೆ. ಈ ಪತ್ರಿಮೆಯು 133-ಅಡಿ ಎತ್ತರದೊಂದಿಗೆ, ಪ್ರತಿಮೆಯು 38-ಅಡಿ ಪೀಠದ ಮೇಲೆ ನೆಲೆಸಿದ್ದು ನೋಡಲು ಆಕರ್ಷಕವಾಗಿದೆ.
* ಅವರ್ ಲೇಡಿ ಆಫ್ ರಾನ್ಸಮ್ ಚರ್ಚ್ : ಕನ್ಯಾಕುಮಾರಿಯಲ್ಲಿರುವ ಅವರ್ ಲೇಡಿ ಆಫ್ ರಾನ್ಸಮ್ ಚರ್ಚ್ ಮದರ್ ಮೇರಿಗೆ ಸಮರ್ಪಿತವಾದ ಪ್ರಸಿದ್ಧ ಕ್ಯಾಥೋಲಿಕ್ ಚರ್ಚ್ ಆಗಿದೆ. 15 ನೇ ಶತಮಾನದಲ್ಲಿ ನಿರ್ಮಾಣವಾದ ಈ ಚರ್ಚ್ ಗೋಥಿಕ್ ವಾಸ್ತುಶಿಲ್ಪವನ್ನು ಕಾಣಬಹುದು.
ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ 2 ದಿನ ಮೋದಿ ಧ್ಯಾನ: 2014, 2019ರಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮೋದಿ ಎಲ್ಲಿಗೆ ಹೋಗಿದ್ರು?
* ಸುನಾಮಿ ಸ್ಮಾರಕ : ಈ ರೀತಿಯ ವಿಶಿಷ್ಟವಾದ, ಸುನಾಮಿ ಸ್ಮಾರಕವು ಕನ್ಯಾಕುಮಾರಿಯ ದಕ್ಷಿಣ ತೀರದ ಸಮೀಪದಲ್ಲಿದೆ. 26 ಡಿಸೆಂಬರ್ 2004 ರಂದು ಹಿಂದೂ ಮಹಾಸಾಗರದಾದ್ಯಂತ ಭೂಕಂಪ ಮತ್ತು ಸುನಾಮಿಯಲ್ಲಿ ಸಾವನ್ನಪ್ಪಿದ ಸಾವಿರಾರು ಜನರನ್ನು ಸ್ಮರಿಸುವ ಮೂಲಕ ಈ ಸ್ಮಾರಕವನ್ನು ನಿರ್ಮಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:48 am, Thu, 30 May 24