ರಾತ್ರಿ ಬಿದ್ದ ಕನಸು ಬೆಳಗ್ಗೆ ಎದ್ದಕೂಡಲೆ ಮರೆತು ಹೋಗೋದೇಕೆ?
ನಿದ್ರೆಯ ಸಮಯದಲ್ಲಿ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವ ನಮ್ಮ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ. ಒಟ್ಟಾರೆಯಾಗಿ ನಾವು ರಾತ್ರಿಯಲ್ಲಿ 4ರಿಂದ 5 ಬಾರಿ ಕನಸು ಕಾಣಬಹುದು. ಆದರೆ ನಾವು ಬೆಳಗಿನ ಜಾವದಲ್ಲಿ ಅಂದರೆ ನಾವು ಏಳುವಾಗ ಬಿದ್ದ ಕನಸುಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ.
ಕನಸುಗಳು ಮಾಂತ್ರಿಕ ಗುಣವನ್ನು ಹೊಂದಿವೆ. ಕನಸು ಕಾಣದವರು ಯಾರೂ ಇಲ್ಲ. ಕೆಲವರು ಕನಸನ್ನೇ ಗುರಿಯಾಗಿಸಿಕೊಂಡು ಮುಂದೆ ಸಾಗುತ್ತಾರೆ. ಇನ್ನು ಕೆಲವರ ಕನಸುಗಳು ರಾತ್ರಿಗೆ ಮಾತ್ರ ಸೀಮಿತವಾಗಿರುತ್ತದೆ. ರಾತ್ರಿ ಬೀಳುವ ಕನಸುಗಳಲ್ಲಿ ಕೆಲವು ಅಹಿತಕರವಾಗಿದ್ದರೆ, ಇನ್ನೂ ಕೆಲವು ಸಂತೋಷಕರ ಮತ್ತು ಸಾಹಸದಿಂದ ಕೂಡಿರುತ್ತವೆ. ಆಸ್ಟ್ರಿಯನ್ ನರವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಕನಸುಗಳು ನಮ್ಮ ಸುಪ್ತಾವಸ್ಥೆಯ ಆಸೆಗಳು, ಆಲೋಚನೆಗಳು, ಪ್ರೇರಣೆಗಳನ್ನು ಪ್ರತಿನಿಧಿಸುತ್ತವೆ. ಕನಸು ಕಾಣುವುದು ಕೂಡ ನಮ್ಮ ಮಾನಸಿಕ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಹೀಗಾಗಿ, ನಮಗೆ ಬೀಳುವ ಕನಸುಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಆದರೆ, ರಾತ್ರಿ ಮಲಗಿದಾಗ ಬೀಳುವ ಬಹುತೇಕ ಕನಸುಗಳು ಬೆಳಗಾಗುವಷ್ಟರಲ್ಲಿ ಮರೆತು ಹೋಗಿರುತ್ತವೆ. ಅದಕ್ಕೆ ಕಾರಣ ಏನಿರಬಹುದು? ಎಂದು ನೀವು ಯೋಚಿಸಿದ್ದೀರಾ?
ನಾವು ಆಳವಾದ ನಿದ್ರಾಲೋಕಕ್ಕೆ ಹೋದಾಗ ಕನಸು ಬೀಳುತ್ತದೆ. ಅದರಲ್ಲಿ ಕೆಲವು ಕನಸುಗಳು ನಾವು ಮಾತನಾಡಿದ, ನೋಡಿದ, ಕೇಳಿದ ಘಟನೆಗಳಿಂದ ಸ್ಫೂರ್ತಿ ಪಡೆದವುಗಳಾಗಿರಬಹುದು. ಆದರೆ, ಇನ್ನು ಕೆಲವು ತೀರಾ ವಿಚಿತ್ರವಾಗಿರುತ್ತದೆ. ಆ ರೀತಿಯ ಕನಸು ಯಾಕೆ ಬೀಳುತ್ತದೆ ಎಂಬುದು ಕೂಡ ನಮಗೆ ಗೊತ್ತಾಗುವುದಿಲ್ಲ. ಈ ರೀತಿಯ ಹುಚ್ಚುಚ್ಚು ಕನಸುಗಳು ಬೆಳಗ್ಗೆ ನಾವು ಕಣ್ತೆರೆಯುವಾಗ ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿದಂತೆ ಇದ್ದರೂ ಮುಖ ತೊಳೆದು ಬರುವಷ್ಟರಲ್ಲಿ ಸಂಪೂರ್ಣವಾಗಿ ಮರೆತುಹೋಗಿರುತ್ತದೆ.
ಇದನ್ನೂ ಓದಿ: ನಿಮ್ಮ ಮಗುವಿಗೆ ಹಸುವಿನ ಹಾಲು ಕೊಡುತ್ತೀರಾ?; ಅಪಾಯದ ಬಗ್ಗೆಯೂ ತಿಳಿದಿರಲಿ
2019ರ ಅಧ್ಯಯನದ ಪ್ರಕಾರ, ನಿದ್ರೆಯ ಸಮಯದಲ್ಲಿ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವ ನಮ್ಮ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ. ಒಟ್ಟಾರೆಯಾಗಿ ನಾವು ರಾತ್ರಿಯಲ್ಲಿ 4ರಿಂದ 5 ಬಾರಿ ಕನಸು ಕಾಣಬಹುದು. ಆದರೆ ನಾವು ಬೆಳಗಿನ ಜಾವದಲ್ಲಿ ಅಂದರೆ ನಾವು ಏಳುವಾಗ ಬಿದ್ದ ಕನಸುಗಳನ್ನು ಮಾತ್ರ ನೆನಪಿಸಿಕೊಳ್ಳುತ್ತೇವೆ. ನಮ್ಮ ಕನಸುಗಳು ನಮಗೆ ನಿದ್ರೆಯಲ್ಲಿ ಖುಷಿಯನ್ನು ನೀಡಬಹುದು. ಆದರೆ, ಆ ಕನಸು ಸಂಪೂರ್ಣವಾಗಿ ನೆನಪಾಗದಿದ್ದಾಗ ನಮಗೆ ದುಃಖವಾಗುತ್ತದೆ.
ಕನಸಿನ ಸ್ಥಿತಿಯಲ್ಲಿ ನಮ್ಮ ಮನಸ್ಸು ವಿಸ್ಮಯಕಾರಿಯಾಗಿ ಸಕ್ರಿಯವಾಗಿರುತ್ತದೆ. ಆದರೆ ನಿದ್ರೆಯಿಂದ ಎಚ್ಚರಕ್ಕೆ ಪರಿವರ್ತನೆಯಾದಾಗ ಮನಸಿನಲ್ಲೂ ಬದಲಾವಣೆ ಆಗುತ್ತದೆ. ಆಗ ನಮ್ಮ ಗಮನ ನಮ್ಮ ದೈನಂದಿನ ಕಾರ್ಯದ ಮೇಲೆ ಕೇಂದ್ರೀಕೃತವಾಗುವುದರಿಂದ ರಾತ್ರಿ ಬಿದ್ದ ಕನಸು ಮರೆತುಹೋಗುತ್ತದೆ. ಕನಸುಗಳು ಹಾರುವ ಚಿಟ್ಟೆಯಂತೆ. ನಾವು ಅದನ್ನು ತಕ್ಷಣ ಹಿಡಿದಿಟ್ಟುಕೊಂಡರೆ ಅದು ನಮಗೆ ಸಿಗುತ್ತದೆ. ಇಲ್ಲವಾದರೆ ಹಾರಿಹೋಗುತ್ತದೆ.
ಕೆಲವು ಸಂಶೋಧಕರು ಕನಸುಗಳನ್ನು ಮರೆಯುವುದು ರಕ್ಷಣಾತ್ಮಕ ಉದ್ದೇಶವನ್ನು ಪೂರೈಸುತ್ತದೆ ಎನ್ನುತ್ತಾರೆ. ಕನಸುಗಳು ಆಗಾಗ ತೀವ್ರವಾದ ಭಾವನೆಗಳು ಮತ್ತು ಸನ್ನಿವೇಶಗಳನ್ನು ಒಳಗೊಂಡಿರುತ್ತವೆ. ಹೀಗಾಗಿ, ಕೆಲವು ಕನಸುಗಳನ್ನು ಉದ್ದೇಶಪೂರ್ವಕವಾಗಿ ನಮ್ಮ ಮೆದುಳು ಮರೆತುಬಿಡುತ್ತದೆ.
ಇದನ್ನೂ ಓದಿ: Coffee: ನೀವು ಕುಡಿಯುವ ಕಾಫಿಯನ್ನು ಆರೋಗ್ಯಕರವಾಗಿಸುವುದು ಹೇಗೆ?
ನ್ಯೂರಾನ್ ನಿಯತಕಾಲಿಕದಲ್ಲಿ 2011ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಾವು ನಿದ್ರಿಸಿದಾಗ ನಮ್ಮ ಮೆದುಳಿನ ಎಲ್ಲಾ ಪ್ರದೇಶಗಳು ಒಂದೇ ಸಮಯದಲ್ಲಿ ಆಫ್‌ಲೈನ್‌ಗೆ ಹೋಗುವುದಿಲ್ಲ. ಅದರಲ್ಲಿ ಕೆಲವೊಂದಷ್ಟು ಭಾಗಗಳು ಇನ್ನೂ ಆ್ಯಕ್ಟಿವ್ ಆಗಿರುತ್ತದೆ. ನಮ್ಮ ಮೆದುಳಿನ ಭಾಗವಾದ ಹಿಪೊಕ್ಯಾಂಪಸ್ ಕೊನೆಯದಾಗಿ ಮಲಗಿದರೆ ಅದು ಕೊನೆಯದಾಗಿ ಎಚ್ಚರಗೊಳ್ಳಬಹುದು. ಹಾಗೇನಾದರೂ ಆದರೆ, ನಿಮ್ಮ ಕನಸು ನಿಮಗೆ ಅಲ್ಪಸ್ವಲ್ಪ ನೆನಪಿರುತ್ತದೆ. ಹಿಪೊಕ್ಯಾಂಪಸ್ ಇನ್ನೂ ಸಂಪೂರ್ಣವಾಗಿ ಎಚ್ಚರವಾಗಿರದ ಕಾರಣದಿಂದ ನಿಮ್ಮ ಮೆದುಳಿಗೆ ಆ ಸ್ಮರಣೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ