ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುವವರಿಗೆ ಆಯಸ್ಸು ಕಮ್ಮಿಯಾಗುವ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ ವರದಿ

|

Updated on: May 17, 2021 | 11:21 AM

ವಾರದಲ್ಲಿ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವವವರು 35ರಿಂದ 40 ಗಂಟೆ ದುಡಿಯುವವರಿಗಿಂತಲೂ ಶೇ.35ರಷ್ಟು ಹೆಚ್ಚು ಸ್ಟ್ರೋಕ್​ಗೆ ಹಾಗೂ ಶೇ.17ರಷ್ಟು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಯಿಂದಾಗುವ ಸಾವಿಗೆ ತುತ್ತಾಗುತ್ತಾರೆ ಎನ್ನುವುದನ್ನು ಅಧ್ಯಯನ ತಿಳಿಸಿದೆ.

ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುವವರಿಗೆ ಆಯಸ್ಸು ಕಮ್ಮಿಯಾಗುವ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ ವರದಿ
ಪ್ರಾತಿನಿಧಿಕ ಚಿತ್ರ
Follow us on

ಕೆಲಸ ಎಂದಾಕ್ಷಣ ಕೆಲವರು ಹಗಲು ರಾತ್ರಿ ಎನ್ನದೇ ತಮ್ಮ ವೈಯಕ್ತಿಕ ಸಮಯವನ್ನೆಲ್ಲಾ ಬದಿಗೊತ್ತಿ ದುಡಿಯುತ್ತಾರೆ. ಬೆಳಗ್ಗೆ ಕಣ್ಬಿಟ್ಟಾಗಿನಿಂದ ರಾತ್ರಿ ಕಣ್ಮುಚ್ಚುವ ತನಕ ಕಚೇರಿಯ ಕೆಲಸವನ್ನೇ ತಮ್ಮ ಜೀವನದ ಪ್ರಮುಖ ಕಾರ್ಯವೆಂದು ಭಾವಿಸಿ ಅದರಲ್ಲೇ ತಲ್ಲೀನರಾಗಿರುತ್ತಾರೆ. ಆದರೆ, ಈ ರೀತಿಯ ಕಾರ್ಯ ವೈಖರಿ ಪ್ರತಿವರ್ಷವೂ ಜಗತ್ತಿನ ಸಾವಿರಾರು ಜನರ ಜೀವವನ್ನೇ ಬಲಿಪಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವೊಂದು ತಿಳಿಸಿದೆ. ಅಲ್ಲದೇ, ಕೊರೊನಾ ಆರಂಭವಾದ ನಂತರ ಈ ಕಾರ್ಯ ವೈಖರಿ ಇನ್ನೂ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ನಡೆದ ಮೊದಲ ಅಧ್ಯಯನವು ದೀರ್ಘಕಾಲದ ಕೆಲಸವು ಮನುಷ್ಯನ ಜೀವನದ ಮೇಲೆ ಹೇಗೆ ಅಡ್ಡಪರಿಣಾಮ ಬೀರುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ. ಎನ್​ವಿರಾನ್​ಮೆಂಟ್ ಇಂಟರ್​ನ್ಯಾಶನಲ್​ ಜರ್ನಲ್​ನಲ್ಲಿ ಪ್ರಕಟವಾದ ಈ ಅಧ್ಯಯನದ ಕುರಿತಾದ ವರದಿಯಲ್ಲಿ 2016ನೇ ಇಸವಿಯೊಂದರಲ್ಲೇ ದೀರ್ಘಕಾಲ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಜಗತ್ತಿನ 7,45,000 ಮಂದಿ ಸ್ಟ್ರೋಕ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂಬ ಅಂಶ ಪ್ರಕಟವಾಗಿದ್ದು, ಈ ಪ್ರಮಾಣವು 2000ನೇ ಇಸವಿಗೆ ಹೋಲಿಸಿದರೆ ಶೇ.30ರಷ್ಟು ಅಧಿಕವಾಗಿದೆ ಎಂದು ಉಲ್ಲೇಖಿಸಲಾಗಿದೆ.

ವಾರದಲ್ಲಿ 55 ಗಂಟೆಗಳಿಗಿಂತಲೂ ಹೆಚ್ಚು ಕಾಲ ದುಡಿಯುವುದು ಜೀವಕ್ಕೆ ಹಾನಿಕರ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿಸರ, ವಾತಾವರಣ ಬದಲಾವಣೆ ಹಾಗೂ ಆರೋಗ್ಯ ವಿಭಾಗದ ನಿರ್ದೇಶಕಿ ಮೆರಿಯಾ ನೀರಾ ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜಂಟಿ ಅಧ್ಯಯನದ ಈ ವರದಿಯಲ್ಲಿ ಸಮಸ್ಯೆ ಎದುರಿಸುತ್ತಿರುವ ಶೇ.72ಕ್ಕಿಂತ ಹೆಚ್ಚು ಮಂದಿ ಪುರುಷರಾಗಿದ್ದು ಬಹುಮುಖ್ಯವಾಗಿ ಮಧ್ಯವಯಸ್ಕರು ಹಾಗೂ ಅದಕ್ಕಿಂತಲೂ ಹೆಚ್ಚು ವಯಸ್ಸಾದವರು ಎನ್ನುವುದು ಗಮನಾರ್ಹವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಚೀನಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಆಗ್ನೇಯಾ ಏಷ್ಯಾ, ಪಶ್ಚಿಮ ಫೆಸಿಫಿಕ್ ಭಾಗದ ಜನ ಈ ವಿಚಾರದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಧ್ಯಯನವು ಸುಮಾರು 194 ದೇಶಗಳನ್ನು ಒಳಗೊಂಡಿದ್ದು, ವಾರದಲ್ಲಿ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವವವರು 35ರಿಂದ 40 ಗಂಟೆ ದುಡಿಯುವವರಿಗಿಂತಲೂ ಶೇ.35ರಷ್ಟು ಹೆಚ್ಚು ಸ್ಟ್ರೋಕ್​ಗೆ ಹಾಗೂ ಶೇ.17ರಷ್ಟು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಯಿಂದಾಗುವ ಸಾವಿಗೆ ತುತ್ತಾಗುತ್ತಾರೆ ಎನ್ನುವುದನ್ನು ತಿಳಿಸಿದೆ.

ಈ ಅಧ್ಯಯನವು 2000ದಿಂದ 2016ರ ವರೆಗಿನ ಸಮಯದಲ್ಲಿ ನಡೆದಿದ್ದು, ಕೊವಿಡ್​ 19ರ ಕಾಲವನ್ನು ಒಳಗೊಂಡಿಲ್ಲ. ಆದರೆ, ಕೊರೊನಾ ನಂತರದ ಕೆಲಸದ ಶೈಲಿಯು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಕುಸಿತವು ಬಹುದೊಡ್ಡ ಸಮಸ್ಯೆಯಾಗಿ ತಲೆದೋರುತ್ತಿರುವುದರಿಂದ ಸಹಜವಾಗಿ ಕೆಲಸದ ಒತ್ತಡ ಹೆಚ್ಚಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:
ವರ್ಕ್​ ಫ್ರಂ ಹೋಮ್​​ ಪರಿಣಾಮ: ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನ ನಿಭಾಯಿಸುವಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಒತ್ತಡ