
ಪ್ರಕೃತಿಯು (Nature) ನಮಗೆಲ್ಲರಿಗೂ ಶುದ್ಧ ಗಾಳಿ, ನೀರು, ಆಹಾರ ಸೇರಿದಂತೆ ಬದುಕಲು ಬೇಕಾದ ಪ್ರತಿಯೊಂದನ್ನು ಸಹ ನೀಡುತ್ತಿವೆ. ಆದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ನೀರು, ಗಾಳಿ ಕುಲುಷಿತಗೊಂಡಿವೆ. ಅದೆಷ್ಟೋ ಪ್ರಾಣಿ, ಪಕ್ಷಿ, ಸಸ್ಯ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಜಾಗತಿಕ ತಾಪಮಾನವೂ ಏರಿಕೆ, ಹವಾಮಾನ ಬದಲಾವಣೆಯಿಂದಾಗಿ ಪರಿಸರದ ಆರೋಗ್ಯ ಹದಗೆಡುತ್ತಿವೆ. ಹಾಗಾಗಿ ಸ್ಥಿರ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ದೈನಂದಿನ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಪ್ರಕೃತಿಯ ರಕ್ಷಿಸುವ ಪ್ರತಿಜ್ಞೆಯನ್ನು ನಾವೆಲ್ಲರೂ ಮಾಡೋಣ.
ಪ್ರತಿ ವರ್ಷ ಜುಲೈ 28 ಅನ್ನು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರದ ಮಹತ್ವವನ್ನು ನಮಗೆ ನೆನಪಿಸುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆ, ಕೈಗಾರೀಕರಣ, ಅರಣ್ಯನಾಶ ಇವೆಲ್ಲವೂ ಪ್ರಕೃತಿಯನ್ನು ನಾಶ ಮಾಡುತ್ತಿವೆ. ಈ ಪ್ರಕೃತಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ 2000 ನೇ ದಶಕದಲ್ಲಿ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ಜಾಗೃತಿ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣವೇನು? ಕದನದಲ್ಲಿ ಭಾರತ ಗೆದ್ದು ಬೀಗಿದ ಪರಾಕ್ರಮದ ಕಥೆಯನ್ನು ತಿಳಿಯಿರಿ
ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು: ಪ್ಲಾಸ್ಟಿಕ್ ಇಂದು ಪರಿಸರಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಾಮಿಸಿದೆ. ಇದು ಮಣ್ಣು ಮಾತ್ರವಲ್ಲದೆ ಸಾಗರಗಳು ಮತ್ತು ಮುಗ್ಧ ಜೀವಿಗಳಿಗೂ ಹಾನಿ ಮಾಡುತ್ತದೆ. ಹಾಗಾಗಿ ಈ ದಿನ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಪ್ರತಿಜ್ಞೆಯನ್ನು ಮಾಡೋಣ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಜೀಲಗಳ ಬದಲು ಬಟ್ಟೆ ಅಥವಾ ಸೆಣಬಿನ ಚೀಲಗಳನ್ನು ಬಳಸೋಣ.
ನೀರು ಪೋಲು ಮಾಡದಿರುವುದು: ನೀರು ಜೀವನದ ಅಡಿಪಾಯ. ಹಾಗಾಗಿ ನೀರು ಪೋಲು ಆಗದಂತೆ ನೋಡಿಕೊಳ್ಳಬೇಕು. ಅಲ್ಲದೆ ಮಳೆನೀರು ಕೊಯ್ಲು ಮಾಡುವುದು ಮತ್ತು ನೀರನ್ನು ವಿವೇಚನೆಯಿಂದ ಬಳಸುವುದು ಮುಂತಾದ ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ದೊಡ್ಡ ಉಳಿತಾಯಕ್ಕೆ ಕಾರಣವಾಗಬಹುದು.
ಗಿಡಗಳನ್ನು ನೆಡುವುದು: ನೀವು ಮರಗಿಡಗಳನ್ನು ನೆಡುವ ಮೂಲಕವೂ ಪ್ರಕೃತಿಯ ರಕ್ಷಣೆಗೆ ಕೊಡುಗೆಯನ್ನು ನೀಡಬಹುದು. ಅರಣ್ಯ ನಾಶ ಹೆಚ್ಚುತ್ತಿರುವ ಈ ದಿನಗಳಲ್ಲಿ ನೀವು ಮರಗಳನ್ನು ನೆಡುವ ಕಾರ್ಯಗಳಿಗೆ ಮುಂದಾಗಿ.
ಇಂಧನ ಉಳಿತಾಯ ಮಾಡಿ: ಅನಗತ್ಯ ವಿದ್ಯುತ್ ಬಳಕೆಯೂ ಪರಿಸರಕ್ಕೆ ಹಾನಿ ಮಾಡುತ್ತದೆ. ಹಾಗಾಗಿ ಎಲ್ಇಡಿ ಬಲ್ಬ್‌ಗಳನ್ನು ಬಳಸಿ, ಅನಗತ್ಯ ಉಪಕರಣಗಳನ್ನು ಆಫ್ ಮಾಡಿ. ಮತ್ತು ಕಡಿಮೆ ಅನಿಲ ಬಳಸಿ, ಮತ್ತು ಸಾಧ್ಯವಾದರೆ, ಸೌರಶಕ್ತಿಯನ್ನು ಬಳಸಿ. ಹೀಗೆ ಇಂಧನ ಸಂರಕ್ಷಣೆಗೆ ವಿಶೇಷ ಗಮನ ಕೊಡುವ ಮೂಲಕವೂ ಪ್ರಕೃತಿಯ ರಕ್ಷಣೆಗೆ ಕೊಡುಗೆ ನೀಡಬಹುದು.
ಸಾವಯವ ಗೊಬ್ಬರಗಳ ಬಳಕೆ: ಮಣ್ಣು ಕಲುಷಿತಗೊಳ್ಳದಂತೆ ತಡೆಯಲು ರಾಸಾಯನಿಕಯುಕ್ತ ಗೊಬ್ಬರಗಳ ಬದಲು ಸಾವಯವ ಗೊಬ್ಬರಗಳ ಬಳಕೆ ಮಾಡಬೇಕು. ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಗಮನ ಕೊಡಬೇಕು.
ಸಾರ್ವಜನಿಕ ಸಾರಿಗಳ ಬಳಕೆ: ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿ. ಇದು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಗಿಡಗಳನ್ನು ಗಿಫ್ಟ್ ನೀಡಿ: ಯಾವುದೇ ಕಾರ್ಯಕ್ರಮಗಳು ಇದ್ದಾಗ ಗಿಫ್ಟ್ ಕೊಡುವ ಪದ್ಧತಿ ನಮ್ಮಲ್ಲಿದೆ. ಹೂಗುಚ್ಛ ಇತ್ಯಾದಿ ಗಿಫ್ಟ್‌ಗಳನ್ನು ನೀಡುವ ಬದಲು ಗಿಡಗಳನ್ನು ಗಿಫ್ಟ್ ನೀಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ