
ಎನ್‌ಜಿಒ (NGO) ಅಂದರೆ ಸರ್ಕಾರೇತರ ಸಂಸ್ಥೆಗಳು. ಇವು ಸಾಮಾಜಿಕ, ಮಾನವೀಯ, ಶೈಕ್ಷಣಿಕ ಪರಿಸರ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುವ ಲಾಭರಹಿತ ನಾಗರಿಕ ಸಂಘಟನೆಗಳಾಗಿವೆ. ದೊಡ್ಡ ಪ್ರಮಾಣದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಎನ್‌ಜಿಒಗಳು ಸಮಾಜಗಳನ್ನು ಅಭಿವೃದ್ಧಿಪಡಿಸುವಲ್ಲಿ, ಸಮುದಾಯಗಳನ್ನು ಸುಧಾರಿಸುವಲ್ಲಿ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಇವು ಸರ್ಕಾರ ಮತ್ತು ಸಮಾಜದ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಸರ್ಕಾರೇತರ ಸಂಸ್ಥೆಗಳ ಸಾಮಾಜಿಕ ಕಾರ್ಯಗಳನ್ನು ಗುರುತಿಸಲು, ಬೆಂಬಲಿಸಲು, ಗೌರವಿಸಲು ಪ್ರತಿವರ್ಷ ಫೆಬ್ರವರಿ 27 ರಂದು ವಿಶ್ವ ಎನ್‌ಜಿಒ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ವಿಶ್ವ ಎನ್‌ಜಿಒ ದಿನವನ್ನು ಪ್ರತಿ ವರ್ಷ ಫೆಬ್ರವರಿ 27 ರಂದು ಆಚರಿಸಲಾಗುತ್ತದೆ. 2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸೀ NGO ಫೋರಮ್‌ನ ಪ್ರತಿನಿಧಿಯಿಂದ NGO ದಿನವನ್ನು ಘೋಷಣೆ ಮಾಡಲಾಯಿತು. ನಂತರದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಫೆಬ್ರವರಿ ಮೊದಲ ವಾರವನ್ನು ವಿಶ್ವ ಎನ್‌ಜಿಒ ವೀಕ್ ಎಂದು ಘೋಷಿಸಲಾಯಿತು. ಫೆಬ್ರವರಿ 27, 2014 ರಂದು ಮೊದಲ ಬಾರಿಗೆ ವಿಶ್ವ ಎನ್‌ಜಿಒ ದಿನವನ್ನು ಆಚರಣೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ, ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಎನ್‌ಜಿಒಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಿ ಗೌರವಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Fri, 27 February 26