
ಇಂದು ಜನರು ತಮ್ಮ ಸ್ಮಾರ್ಟ್ ಫೋನ್‌ಗಳ ಮೂಲಕ ನಿಮಿಷ ನಿಮಿಷದ ಸುದ್ದಿಗಳನ್ನು ಪಡೆಯುತ್ತಿದ್ದರೂ, ದೇಶ ಮತ್ತು ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಲು ರೇಡಿಯೊವನ್ನು ಪ್ರಮುಖ ಮಾಧ್ಯಮವೆಂದು ಪರಿಗಣಿಸಲಾಗಿದ್ದ ಕಾಲವಿತ್ತು. ನಮ್ಮ ಅಜ್ಜ ಅಜ್ಜಿಯಂದಿರು ಸುದ್ದಿಗಳಿಗಾಗಿ ರೇಡಿಯೋವನ್ನೇ ನೆಚ್ಚಿಕೊಂಡಿದ್ದರು. ಆದರೆ ಇಂದು ಆಧುನಿಕತೆಯ ಗಾಳಿಯು ಬೀಸಿದ್ದರೂ ಹಳೆಯ ಮಾಧ್ಯಮವಾಗಿರುವ ರೇಡಿಯೋ ಇವತ್ತಿಗೂ ತನ್ನದೇ ವಿಶಿಷ್ಟ ಶೈಲಿಯ ಕಾರ್ಯಕ್ರಮಗಳನ್ನು ನೀಡುತ್ತಾ ಕೇಳುಗ ವರ್ಗದವರನ್ನು ಹಿಡಿದಿಟ್ಟುಕೊಂಡಿದೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಎಫ್ ಎಂ ರೇಡಿಯೋಗಳು ಸ್ಟೇಷನ್ ಗಳು ಆರಂಭವಾಗಿ ಮನೋರಂಜನೆಯ ವ್ಯಾಪ್ತಿಯು ದೊಡ್ಡದಾಗಿದ್ದು, ರೇಡಿಯೋ ಪ್ರಿಯರನ್ನು ಉಳಿಸಿಕೊಂಡಿದೆ. ಈ ರೇಡಿಯೋದ ಮಹತ್ವ ತಿಳಿಸಲು ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಫೆಬ್ರವರಿ 13 ರಂದು 1946 ರಲ್ಲಿ ಅಮೆರಿಕದಲ್ಲಿ ಮೊದಲ ರೇಡಿಯೋ ಪ್ರಸರಣ ಸಂದೇಶವನ್ನು ಕಳುಹಿಸಲಾಯಿತು. 2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ಅದೇ ದಿನದಂದು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬಗ್ಗೆ ತನ್ನ ಅಭಿಪ್ರಾಯವನ್ನು ಯುನೆಸ್ಕೋದ ಮುಂದೆ ಪ್ರಸ್ತಾಪಿಸಲಾಯಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರೇಡಿಯೋ ದಿನವು ಆಚರಿಸಲು ಮುಂದಾಯಿತು. ಹಾಗಾಗಿ 2012ರ ಫೆಬ್ರವರಿ 13ರಿಂದ ಪ್ರತಿ ವರ್ಷವು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ ರೇಡಿಯೋ ಪ್ರಸಾರವು ಆಕಾಶವಾಣಿ ಅಸ್ತಿತ್ವಕ್ಕೆ ಬರುವ ಸರಿಸುಮಾರು 13 ವರ್ಷಗಳ ಮೊದಲೇ ಪ್ರಾರಂಭವಾಯಿತು. ಜೂನ್ 1923 ರಲ್ಲಿ, ಬಾಂಬೆ ರೇಡಿಯೋ ಕ್ಲಬ್ ದೇಶದಲ್ಲಿ ಮೊದಲ ರೇಡಿಯೋ ಪ್ರಸಾರವನ್ನು ಮಾಡಿತು. ಆದಾದ ಐದು ತಿಂಗಳ ನಂತರದಲ್ಲಿ, ಕಲ್ಕತ್ತಾ (ಈಗ ಕೋಲ್ಕತ್ತಾ) ರೇಡಿಯೋ ಕ್ಲಬ್ ನ್ನು ಸ್ಥಾಪಿಸಲಾಯಿತು. ಭಾರತೀಯ ಪ್ರಸಾರ ಕಂಪನಿ (ಐಬಿಸಿ) ಜುಲೈ 23, 1927 ರಂದು ಅಸ್ತಿತ್ವಕ್ಕೆ ಬಂದಿತು, ಆದರೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ನಷ್ಟವನ್ನು ಅನುಭವಿಸಿತು. ಏಪ್ರಿಲ್ 1930 ರಲ್ಲಿ, ಕೈಗಾರಿಕೆಗಳು ಮತ್ತು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಭಾರತೀಯ ಪ್ರಸಾರ ಸೇವೆಯು ಪ್ರಾಯೋಗಿಕ ಆಧಾರದ ಮೇಲೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಗಸ್ಟ್ 1935 ರಲ್ಲಿ ಲಿಯೋನೆಲ್ ಫೀಲ್ಡೆನ್ ಅವರನ್ನು ಮೊದಲ ಪ್ರಸಾರ ನಿಯಂತ್ರಕರನ್ನಾಗಿ ನೇಮಿಸಲಾಯಿತು. ಆದಾದ ಒಂದೇ ತಿಂಗಳಿಗೆ ಮೈಸೂರಿನಲ್ಲಿ ಖಾಸಗಿ ರೇಡಿಯೋ ಕೇಂದ್ರವಾದ ಆಕಾಶವಾಣಿ ಸ್ಥಾಪನೆಯಾಯಿತು. ಜೂನ್ 8, 1936 ರಂದು, ‘ಭಾರತೀಯ ರಾಜ್ಯ ಪ್ರಸಾರ ಸೇವೆ’ ಆಲ್ ಇಂಡಿಯಾ ರೇಡಿಯೋ ಪ್ರಾರಂಭವಾಯಿತು.
ಇದನ್ನೂ ಓದಿ: ಅಪ್ಪುಗೆ ದಿನವನ್ನು ಯಾವಾಗ ಆಚರಣೆ ಮಾಡಲಾಗುತ್ತದೆ? ಹಗ್ ಡೇ ಯಾಕೆ ಮುಖ್ಯ ತಿಳಿದುಕೊಳ್ಳಿ
ರೇಡಿಯೋ ಅತ್ಯಂತ ಹಳೆಯ ಅಭಿವ್ಯಕ್ತಿ ಮಾಧ್ಯಮ ಮತ್ತು ಅತ್ಯಂತ ಪ್ರಭಾವಶಾಲಿ ಸಮೂಹ ಮಾಧ್ಯಮವಾಗಿದ್ದು, ಇಂದಿಗೂ ಅದು ಅತ್ಯುತ್ತಮ ಸಂವಹನ ಮಾಧ್ಯಮವಾಗಿ ಉಳಿದಿದೆ. ಇದು ಮುಕ್ತ, ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹ ಮಾಹಿತಿ ಮಾಧ್ಯಮವಾಗಿದೆ. ಅದಕ್ಕಾಗಿಯೇ ಇದು ಇಂಟರ್ನೆಟ್, ದೂರದರ್ಶನ ಮತ್ತು ಪತ್ರಿಕೆಗಳಿಗೆ ಹೋಲಿಸಿದರೆ ವಿಶಾಲವಾದ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ. ಸಾರ್ವಜನಿಕರಿಗೆ ರೇಡಿಯೊದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತದೆ. ಈ ದಿನವೂ ರೇಡಿಯೋ ಬಳಕೆಗೆ ಯುವ ಸಮುದಾಯವನ್ನು ಪ್ರೋತ್ಸಾಹಿಸುವುದಾಗಿದೆ. ಈ ಹಿನ್ನಲೆಯಲ್ಲಿ ವಿಶ್ವ ರೇಡಿಯೋ ದಿನದಂದು ವಿವಿಧ ಶಾಲಾ ಕಾಲೇಜುಗಳಲ್ಲಿ ವಿಚಾರಗೋಷ್ಠಿಗಳು ಮತ್ತು ಚರ್ಚಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ