
ಅಕ್ರಮ ಬೇಟೆ, ಆವಾಸಸ್ಥಾನಗಳ ನಷ್ಟದ ಕಾರಣದಿಂದಾಗಿ ಹುಲಿ, ಸಿಂಹ, ಆನೆಗಳಂತಹ ಅದೆಷ್ಟೋ ಕಾಡು ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅದೇ ರೀತಿ ಒಂಟಿ ಕೊಂಬಿನ ದೈತ್ಯ ಪ್ರಾಣಿಯಾದ ಘೇಂಡಾಮೃಗಗಳನ್ನು (Rhino) ಸಹ ಹೆಚ್ಚು ಬೇಟೆಯಾಡಲಾಗುತ್ತದೆ. ಚೀನಾ, ವಿಯೆಟ್ನಾಂ, ಕೊರಿಯಾ ಮತ್ತು ಮಲೇಷ್ಯಾ ಸೇರಿದಂತೆ ಅನೇಕ ದೇಶಗಳಲ್ಲಿ ಘೇಂಡಾಮೃಗದ ಕೊಂಬುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಚೀನಾದಲ್ಲಿ ಈ ಕೊಂಬುಗಳನ್ನು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅದೇ ರೀತಿ ಅನೇಕ ಸ್ಥಳಗಳಲ್ಲಿ ಘೇಂಡಾಮೃಗದ ಕೊಂಬುಗಳನ್ನು ಆಭರಣ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಹೆಚ್ಚಿನ ಬೇಡಿಕೆಯ ಕಾರಣದಿಂದಾಗಿ ಘೇಂಡಾಮೃಗಳ ಕಳ್ಳಸಾಗಣಿಕೆ, ಬೇಟೆ ವಿಪರೀತವಾಗಿ ಹೆಚ್ಚಾಗಿ ಅವುಗಳ ಸಂತತಿ ಅಳಿವಿನ ಅಂಚಿಗೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ ಈ ಮುಗ್ಧ ಜೀವಿಗಳನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 22 ರಂದು ವಿಶ್ವ ಘೇಂಡಾಮೃಗ (World Rhino Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಘೇಂಡಾಮೃಗಗಳ ಕಳ್ಳಸಾಗಾಣಿಕೆಯಿಂದಾಗಿ 1990 ರ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳ ಸಂಖ್ಯೆ ಕ್ಷೀಣಿಸತೊಡಗಿದವು. 2010 ರ ವೇಳೆಗೆ ಈ ಪ್ರಾಣಿಗಳ ಸಂಖ್ಯೆ ತೀರಾ ಇಳಿಮುಖವಾಯಿತು. ಈ ಬಗ್ಗೆ ರಾಷ್ಟ್ರವ್ಯಾಪಿ ಕಳವಳ ವ್ಯಕ್ತವಾಯಿತು. ಇದಲ್ಲದೆ ಆ ವೇಳೆಯಲ್ಲಿ ಜಗತ್ತಿನಲ್ಲಿ ಕೇವಲ 30,000 ಘೇಂಡಾಮೃಗಗಳು ಮಾತ್ರ ಜೀವಂತವಾಗಿದ್ದವು. ಈ ನಿಟ್ಟಿನಲ್ಲಿ ಘೇಂಡಾಮೃಗಗಳ ಸಂತತಿಯನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 2010 ರಲ್ಲಿ ವಿಶ್ವ ವನ್ಯಜೀವಿ ನಿಧಿ (WWF) ದಕ್ಷಿಣ ಆಫ್ರಿಕಾದಲ್ಲಿ ಸೆಪ್ಟೆಂಬರ್ 22 ರಂದು ಘೇಂಡಾಮೃಗ ದಿನವನ್ನು ಆಚರಿಸಲು ಘೋಷಿಸಿತು. 2011 ರಲ್ಲಿ ಲಿಸಾ ಜೇನ್ ಕ್ಯಾಂಪ್ಬೆಲ್ ಮತ್ತು ರಿಶ್ಜಾ ಎಂಬವರು ಈ ವಿಶೇಷ ಆಚರಣೆಯೊಂದಿಗೆ ಕೈಜೋಡಿಸಿ ಈ ವಿಶೇಷ ದಿನವನ್ನು ಅಂತರಾಷ್ಟ್ರೀಯ ಆಚರಣೆಯಾಗಿ ಮಾಡಿದರು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಅಳಿವಿನಂಚಿನಲ್ಲಿವೆ ರೆಡ್ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ