
ಸೀರೆ (Saree) ಹೆಣ್ಣಿನ ಚೆಲುವು ಸೌಂದರ್ಯದ ಸಂಕೇತ ಅಂತಾನೇ ಹೇಳಬಹುದು. ಸೊಬಗು ಸೌಂದರ್ಯದ ಪ್ರತಿಬಿಂಬವಾಗಿರುವ ಸೀರೆ ಕೇವಲ ಉಡುಗೆಯಲ್ಲ ಇದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ಮೂರ್ತ ರೂಪವಾಗಿದೆ. ಶತಮಾನಗಳಿಂದಲೂ ಭಾರತದಲ್ಲಿ ಮಹಿಳೆಯರು ಸೀರೆಯನ್ನು ಧರಿಸುತ್ತಿದ್ದಾರೆ. ಎಷ್ಟೇ ಫ್ಯಾಶನ್, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ. ಈ ಸೀರೆ ಫ್ಯಾಷನ್‌ಗೂ ಮೀರಿ ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿನಿಧಿಸುವ ಒಂದು ಉಡುಪಾಗಿದ್ದು, ಇದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತಿವರ್ಷ ಡಿಸೆಂಬರ್ 21 ರಂದು ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ.
ನೇಕಾರರ ಸಮುದಾಯ ಮತ್ತು ಸೀರೆಗಳ ವಿಶಿಷ್ಟ ಕಲೆಯನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರಾದ ಸಿಂಧೂರ ಕವಿತಿ ಮತ್ತು ನಿಸ್ತುಲಾ ಹೆಬ್ಬಾರ್ ಅವರು ಸೀರೆಗಳ ಸಂಕೀರ್ಣ ಕರಕುಶಲತೆ ಮತ್ತು ಶ್ರೀಮಂತ ಪರಂಪರೆಯನ್ನು ಸಂಭ್ರಮಿಸುವ ಸಲುವಾಗಿ 2020 ರಲ್ಲಿ ಈ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಈ ಉಪಕ್ರಮವು ಸಾಮಾಜಿಕ ಮಾಧ್ಯಮ ಮತ್ತು ಫ್ಯಾಷನ್ ಸಮುದಾಯದ ಗಮನ ಸೆಳೆಯಿತು. ಮತ್ತು ಇದು ವಿಶ್ವಾದ್ಯಂತ ಈ ದಿನವನ್ನು ಪ್ರತಿವರ್ಷ ಡಿಸೆಂಬರ್ 21 ರಂದು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸುಸ್ಥಿರ ಅಭಿವೃದ್ಧಿ ಸಾಧ್ಯ
ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವುದು: ಸೀರೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದ್ದು, ಸಂಪ್ರದಾಯ, ಸೊಬಗು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಮತ್ತು ಆಚರಿಸಲು ಈ ದಿನ ಒಂದು ಅವಕಾಶವನ್ನು ಒದಗಿಸುತ್ತದೆ.
ಭಾರತೀಯ ಕೈಮಗ್ಗಗಳನ್ನು ಉತ್ತೇಜಿಸುವುದು: ಭಾರತದ ಜವಳಿ ಉದ್ಯಮದ ಅವಿಭಾಜ್ಯ ಅಂಗವಾದ ಕೈಮಗ್ಗ ನೇಯ್ಗೆಯ ಕಲೆಯನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ವಿಶ್ವ ಸೀರೆ ದಿನದ ಪ್ರಮುಖ ಉದ್ದೇಶವಾಗಿದೆ. ಈ ದಿನವು ಕೈಮಗ್ಗ ಕೈಗಾರಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಕುಶಲಕರ್ಮಿಗಳನ್ನು ಗೌರವಿಸುವುದು: ಈ ದಿನ ಪ್ರತಿ ಸೀರೆಯ ಹಿಂದಿರುವ ನೇಕಾರರು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಗೌರವಿಸಲಾಗುತ್ತದೆ.
ಇದಲ್ಲದೆ ಸಾಂಪ್ರದಾಯಿಕ ಭಾರತೀಯ ಉಡುಪು ಸೀರೆಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವುದು ವಿಶ್ವ ಸೀರೆ ದಿನದ ಮುಖ್ಯ ಉದ್ದೇಶವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ