Short Stories : ಅಚ್ಚಿಗೂ ಮೊದಲು ; ಕಥೆಗಾರ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಇಂದಿನಿಂದ ನಿಮ್ಮ ಓದಿಗೆ

|

Updated on: Nov 25, 2021 | 10:45 AM

Kannada Literature : ‘ಅಕ್ಷರಗಳೇ ಗೊತ್ತಿಲ್ಲದ ಇವರುಗಳೊಳಗೆ ಅದೆಷ್ಟು ಕಥೆಗಳು ಗೂಡು ಕಟ್ಟಿದ್ದವು, ನಾನು ಓದಿರುವ ಯಾವುದೇ ಶ್ರೇಷ್ಠ ಲೇಖಕನಿಗಿಂತ ಇವರುಗಳು ಯಾವುದರಲ್ಲಿ ಕಡಿಮೆ? ಇಂಥದ್ದೊಂದು ಲೋಕ ಸಿಗದೇ ಹೋಗಿದ್ದರೆ ಇವರುಗಳು ಕಥೆಯ ಮಾಂತ್ರಿಕ ಚಾಪೆಯಲ್ಲಿ ಕೂರಿಸಿಕೊಂಡು ನನ್ನನ್ನು ತೇಲಿಸದೇ ಹೋಗಿದ್ದರೆ ಬಹುಶಃ ನನ್ನೊಳಗೊಬ್ಬ ಕಥೆಗಾರ ಮುಖ ತೋರಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ.’ ಎಸ್. ಗಂಗಾಧರಯ್ಯ

Short Stories : ಅಚ್ಚಿಗೂ ಮೊದಲು ; ಕಥೆಗಾರ ಎಸ್. ಗಂಗಾಧರಯ್ಯನವರ ‘ಮಣ್ಣಿನ ಮುಚ್ಚಳ’ ಇಂದಿನಿಂದ ನಿಮ್ಮ ಓದಿಗೆ
ಕಥೆಗಾರ, ಅನುವಾದಕ ಎಸ್. ಗಂಗಾಧರಯ್ಯ
Follow us on

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಮಣ್ಣಿನ ಮುಚ್ಚಳ (ಕಥಾ ಸಂಕಲನ)
ಲೇಖಕರು : ಎಸ್. ಗಂಗಾಧರಯ್ಯ
ಪುಟ : 162
ಬೆಲೆ : ರೂ. 180
ಮುಖಪುಟ ವಿನ್ಯಾಸ : ರಘು ಅಪಾರ
ಪ್ರಕಾಶನ : ಪಲ್ಲವ ಪ್ರಕಾಶನ, ಬಳ್ಳಾರಿ 

*

ಈ ಕಥಾಸಂಕಲನ ಇಂದಿನಿಂದ ಲಭ್ಯ, ಈ ಸಂದರ್ಭದಲ್ಲಿ ಎಸ್. ಗಂಗಾಧರಯ್ಯ, ತಮ್ಮ ಬದುಕಿನಲ್ಲಿ ಹಾದುಹೋದ ಕಥಾಮಾಂತ್ರಿಕರುಗಳನ್ನು ಇಲ್ಲಿ ನೆನೆದಿದ್ದಾರೆ ಮತ್ತು ಇವರ ಕಥೆಗಳ ಬಗ್ಗೆ ಸಹೃದಯರಿಬ್ಬರು ವ್ಯಕ್ತಪಡಿಸಿದ ಅನಿಸಿಕೆಗಳೂ ಇಲ್ಲಿವೆ.

*
ಕನ್ನಡದಲ್ಲಿ ಕಥಾ ಮಾರ್ಗ ತನ್ನ ವೈವಿಧ್ಯತೆಯನ್ನು ಹೇಗೆ ವಿಸ್ತರಿಸಿಕೊಂಡಿದೆಯೆಂದರೆ ಆಯಾ ಪ್ರದೇಶದ ಕಥೆಗಾರರರು ಹೊಸತೇ ಹೊಸತು ಎನ್ನುವಂಥ ಭಾಷೆ ಮತ್ತು ವಸ್ತು ಸಂಗತಿಯನ್ನು ತಡಕಾಡುತ್ತಾ ತಮ್ಮ ಪ್ರಾದೇಶಿಕವೆನ್ನುವ ಬರಹಗಳನ್ನು ಸಾರ್ವತ್ರಿಕಗೊಳಿಸುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ. ಇದೇ ಮುಹೂರ್ತದಲ್ಲಿ ಹೇಳಬೇಕಾದ ಇನ್ನೊಂದು ಮಾತೆಂದರೆ ಈ ಹೊತ್ತಿನ ಜಗತ್ತು ಜಾಗತೀಕರಣದತ್ತ, ಅತ್ಯಾಧುನಿಕ ಸಂಗತಿಗಳ ಅಮಲಿನತ್ತ ದೌಡಾಯಿಸುತ್ತಿರಬೇಕಾದರೆ ಕನ್ನಡದ ಅನೇಕಾನೇಕ ಲೇಖಕರು ಆರ್ದ್ರ ಅಂತಃಕರಣದಿಂದ ತಾವು ಬೆಳೆದು ಬಂದ ಗ್ರಾಮ ಬದುಕಿನತ್ತ ದೃಷ್ಟಿ ಮಡಗಿ ಅಲ್ಲಿಯ ವಿದ್ಯಮಾನಗಳನ್ನು ಗ್ರಹಿಸುತ್ತ ಆ ಸಂಗತಿಗಳನ್ನೆಲ್ಲ ಓದುಗರ ಮುಂದಿಟ್ಟು ರವಷ್ಟು ಇತ್ತಲೂ ತಿರುಗಿ ನೋಡಿ ಎನ್ನುತ್ತಿದ್ದಾರೆ. ಈ ಥರದಲ್ಲಿ ಎಸ್. ಗಂಗಾಧರಯ್ಯನವರ ಕಥೆಗಳು ತೀವ್ರ ಗತಿಯ ಬದಲಾವಣೆಯ ಚಕ್ರದಡಿ ಸಿಕ್ಕಿ, ಅಷ್ಟಾಗಿಯೂ ಬದುಕಬೇಕೆಂದು ಬಡಿದಾಡುತ್ತಿರುವ ಪಾತ್ರಗಳನ್ನು ಅವುಗಳ ಉಸಿರಾಟದಂತೆ ಚಿತ್ರಿಸುತ್ತವೆ.
ಕೃಷ್ಣಮೂರ್ತಿ ಹನೂರು, ಕಥೆಗಾರ 

ಇಲ್ಲಿನ ಕತೆಗಳಲ್ಲಿನ ಗ್ರಾಮಗಳ ಬದುಕು ಮಹಾಭಾರತದ ಭೀಕರ ಯುದ್ಧ ಮುಗಿದ ಮೇಲೆ ಅಲ್ಲಿ ಬದುಕುಳಿದ ಪಾತ್ರಗಳು ಅನುಭವಿಸುವ ಯಾತನೆಯಂತೆಯೇ ಇದೆ. ನಾವು ಯಾಕೆ ಬದುಕಿದ್ದೇವೆ ಎಂಬುದು ಮಹಾಭಾರತದ ಕಡೆಯಲ್ಲಿ ಪದೇಪದೆ ಎದ್ದು ಕೂರುವ ಪ್ರಶ್ನೆ. ಮಕ್ಕಳು, ಮರಿಗಳ ನಗುವೇ ಇಲ್ಲದ ಕುರು ಭೂಮಿಯಲ್ಲಿ ಬರೀ ಅನಾಥರ, ವೃದ್ಧರ ಆರ್ತನಾದ ಮಾತ್ರ ಕೇಳಿಸುತ್ತದೆ. ತೋಳು ತೆರೆದು ಸಾವನ್ನು ಆಹ್ವಾನಿಸುವ ಭೀಕರ ನಿರಾಶೆಯನ್ನು ವ್ಯಾಸರು ಚಿತ್ರಿಸುತ್ತಾರೆ. ಮಕ್ಕಳಿಂದ ಹಿಡಿದು ಶರಶಯ್ಯೆಯಲ್ಲಿರುವ ಭೀಷ್ಮರವರೆಗಿನ ಎಲ್ಲ ಪಾತ್ರಗಳಿಗೆ ‘ವೃದ್ಧಭಾವ’ವು ಧಿಮ್ಮನೆ ಅದುಮಿಕೊಳ್ಳುತ್ತದೆ. ಇಂದಿನ ನಮ್ಮ ಗ್ರಾಮಗಳೂ ಕೂಡ ಅಂಥದೇ ವೃದ್ಧ ಭಾವನೆಯಲ್ಲಿ ನರಳುತ್ತಿವೆ. ಈ ಭಾವನೆಗಳನ್ನು ಸಾಧ್ಯವಾದ ಮಟ್ಟಿಗೆ ಹಿಡಿದು ನಾಸ್ಟಾಲ್ಜಿಕ್ ಆಗದಂತೆ ನಿರ್ವಚಿಸುವ ಸಾಹಸಕ್ಕೆ ಕತೆಗಾರರು ಕೈ ಹಾಕಿದ್ದಾರೆ. ಈ ಕತೆಗಳಲ್ಲಿ ಬಯಲು ಸೀಮೆಯ ಭಾಷೆ, ಕತೆಗಳ ವಿನ್ಯಾಸ, ರೂಪಕ ನಿರೂಪಣೆ ಇವೆಲ್ಲವೂ ವಸ್ತುಗಳಿಗೆ ಪೂರಕವಾಗಿ ದುಡಿಯುತ್ತವೆ. ಈ ಸಂಕಲನದ ಐದು ಕತೆಗಳು ನಿಸ್ಸಂದೇಹವಾಗಿ ಕನ್ನಡದ ಸಣ್ಣ ಕತೆಗಳ ಖಜಾನೆಯಲ್ಲಿ ಬಹುಕಾಲ ಉಳಿಯುತ್ತವೆ.
ನೆಲ್ಲುಕುಂಟೆ ವೆಂಕಟೇಶ್, ಲೇಖಕ

*

ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಪಕ್ಕ ಕುಂಟಜ್ಜಿ ಅನ್ನುವ ಅಜ್ಜಿ ಇತ್ತು. ಆ ಅಜ್ಜಿಗೆ ಮತ್ತೇನೋ ಹೆಸರಿತ್ತು. ಆದರೆ ಪೋಲಿಯೋ ಕಾರಣಕ್ಕೋ ಏನೋ ಎರಡೂ ಕಾಲುಗಳು ಕುಡುಗೋಲಿನಂತೆ ಬಾಗಿದ್ದ ಕಾರಣಕ್ಕೆ ಆ ಅಜ್ಜಿಗೆ ಕುಂಟಜ್ಜಿ ಅನ್ನುವ ಅಡ್ಡ ಹೆಸರೇ ಖಾಯಮ್ಮಾಗಿ ಹೋಗಿತ್ತು. ಕುಂಟಜ್ಜಿ ಎದ್ದು ನಡೆಯುವಂತೆಯೇ ಇರಲಿಲ್ಲ. ಮನೆಯ ಪಡಸಾಲೆಯಲ್ಲಿ ಸದಾ ಅಂಗಳಕ್ಕೆ ಮುಖಮಾಡಿ ಕೂತಿರುತ್ತಿತ್ತು. ದಣಿವರಿಯದಂತೆ ಕಥೆಗಳನ್ನು ಹೇಳುತ್ತಿದ್ದ ಕಾರಣಕ್ಕೆ ಅಜ್ಜಿಯ ಹತ್ತಿರ ಬೆಳಗು ಬೈಗುಗಳಲ್ಲಿ ಮಕ್ಕಳ ದಂಡೇ ಇರುತ್ತಿತ್ತು. ಅಜ್ಜಿ ಮಕ್ಕಳಿಗೆಲ್ಲಾ ಥರಾವರಿ ಕಥೆಗಳನ್ನು ಹೇಳುತ್ತಿತ್ತು. ಆ ಒಂದೊಂದು ಕಥೆ ತಿಂಗಳುಗಳಾದರೂ ಮುಗಿಯುತ್ತಿರಲೇ ಇಲ್ಲ. ರಾಜಕುಮಾರಿ ರಾಜಕುಮಾರ ಮಂತ್ರವಾದಿ ರಾಜ ರಾಣಿಯರ ಕಾಲ್ಪನಿಕ ಕಥೆಗಳಿಂದ ಹಿಡಿದು ಕಾಟಣ್ಣ ಮೋಟಣ್ಣರವರೆಗಿನ ಹಾಗೂ ದೆವ್ವದ ಕಥೆಗಳನ್ನು ಹೇಳುತ್ತಿತ್ತು. ಯಾವ ಚಣದಲ್ಲೇ ಆಗಲಿ ಕಥೆ ಹೇಳಲು ಕೇಳಿದರೆ ಸಾಕು ಆ ಚಣವೇ ಶುರುವಿಟ್ಟುಕೊಂಡು ಬಿಡುತ್ತಿತ್ತು. ಕಥೆ ಹೇಳುವ ಮುನ್ನ ಅಜ್ಜಿ ನಮ್ಮನ್ನೆಲ್ಲಾ ತನ್ನೆದುರಿಗೆ ಕಾಣುತ್ತಿದ್ದ ಕೊಪ್ಪಲಿನ ಬೇಲಿಯಲ್ಲಿದ್ದ ಹತ್ತಿಯ ಮರವನ್ನು ದಿಟ್ಟಿಸಲು ಹೇಳುತ್ತಿತ್ತು. ಅಜ್ಜಿಯೂ ಆ ಮರವನ್ನೇ ದಿಟ್ಟಿಸುತ್ತಾ ಅಗಾ ನೋಡು ಅಲ್ಲಿ ಅಂತ ಹೇಳಲು ಪ್ರಾರಂಭಿಸುತ್ತಿತ್ತು. ಮಕ್ಕಳಾದ ನಾವೆಲ್ಲಾ ಆ ಮರವನ್ನೇ ದಿಟ್ಟಿಸುತ್ತಿದ್ದೆವು. ಅಜ್ಜಿ ಹೇಳತೊಡಗುತ್ತಿದ್ದ ಪಾತ್ರಗಳೆಲ್ಲಾ ನಮಗಾಗ ಆ ಅತ್ತಿಯ ಮರದಿಂದ ಇಳಿದು ಬರುತ್ತಿರುವಂತೆ ಭಾಸವಾಗುತ್ತಿತ್ತು. ಅಜ್ಜಿಯ ಆ ರಂಗ ಸ್ಥಳದಿಂದ ಹುಟ್ಟಿ ಬರುತ್ತಿದ್ದ ಪಾತ್ರಗಳು ಅವುಗಳು ಹುಟ್ಟಿಸುತ್ತಿದ್ದ ಪುಳಕ ಅವುಗಳ ಮೂಲಕ ಹರವಿಕೊಳ್ಳುತ್ತಿದ್ದ ಕಥಾಲೋಕ ಈ ಚಣವೂ ರೋಮಾಂಚನ ಹುಟ್ಟಿಸುತ್ತದೆ.

ಇದೇ ರೀತಿ ನನ್ನನ್ನು ತನ್ನ ಕಥೆಗಳ ಮೂಲಕ ತದಿಗಾಲಲ್ಲಿ ಕೂರಿಸುತ್ತಿದ್ದ ಮತ್ತೊಂದು ಅಜ್ಜಿ ಇತ್ತು. ಆ ಅಜ್ಜಿ ಇದ್ದದ್ದು ನನ್ನ ಹಳ್ಳಿಗೆ ಹತ್ತಾರು ಮೈಲಿ ದೂರದಲ್ಲಿದ್ದ ನನ್ನ ಅಪ್ಪನ ತಂಗಿಯ ಮನೆಯಲ್ಲಿ. ಆ ಮನೆಯಲ್ಲಿ ನನ್ನ ವಾರಿಗೆಯವನೊಬ್ಬ ಹುಡುಗ ಇದ್ದದ್ದರಿಂದ ಬೇಸಿಗೆ ರಜೆ ಬಂತೆಂದರೆ ತಿಂಗಳುಟ್ಟಲೇ ಆ ಊರಿನಲ್ಲಿರುತ್ತಿದ್ದೆ. ಆ ಅಜ್ಜಿ ಆ ಕಂಬಸಾಲಿನ ಮನೆಯ ಜಗಲಿಯಲ್ಲೇ ಮಲಗುತ್ತಿತ್ತು. ನಾವಿಬ್ಬರೂ ಕಥೆಗಳನ್ನು ಕೇಳಿಕೊಂಡು ಅಜ್ಜಿಯ ಜೊತೆ ಅಲ್ಲಿಯೇ ಮಲಗಿಬಿಡುತ್ತಿದ್ದೆವು. ಬೆಳಗಾಗುತ್ತಿದ್ದಂತೆ ಅಜ್ಜಿ ಒಂದು ಹೊರೆ ಹಸಿಜೋಳದ ಕಡ್ಡಿಯನ್ನು ಹೋರಿ ಕರುಗಳಿಗೆ ತಿನ್ನಿಸತೊಡಗುತ್ತಿತ್ತು. ಆಗಲೂ ಅಜ್ಜಿಯೊಂದಿಗೇ ಏಳುತ್ತಿದ್ದ ನಾವು ರಾತ್ರಿ ಅರ್ಧಂಬರ್ದ ಹೇಳಿದ್ದ ಕಥೆಯನ್ನು ಮುಗಿಸಲು ದುಂಬಾಲು ಬೀಳುತ್ತಿದ್ದೆವು. ಆ ಹೋರಿ ಕರುಗಳು ಒಂದೊಂದೇ ಜೋಳದ ಕಡ್ಡಿಯನ್ನು ನೊರನೊರನೆ ಜಗಿಯುತ್ತಿದ್ದರೆ ಅಜ್ಜಿ ಒಂದಾದ ಮೇಲೆ ಒಂದರಂತೆ ಇಡೀ ಹೊರೆ ಮುಗಿಯುವವರೆಗೂ ಅವುಗಳ ದವಡೆಗಳಿಗೆ ಗಿಡುಗುತ್ತಿತ್ತು. ಹಾಗೆಯೇ ನಮಗೆ ಕಥೆಯನ್ನೂ ಹೇಳುತ್ತಿತ್ತು. ಆ ಕಥೆಗಳು ಹಾಗೂ ಆ ಸಪ್ಪೆ ಕಡ್ಡಿಯ ಘಮಲು ಈಗಲೂ ನೆನಪಾಗಿ ಮೈ ಜುಮ್ಮೆನಿಸುತ್ತವೆ.

ಇವರಿಬ್ಬರಿಗಿಂತಲೂ ಭಿನ್ನವಾದ ಕಥಾ ಮಾಂತ್ರಿಕನೊಬ್ಬ ನನ್ನ ಹಳ್ಳಿಯಲ್ಲಿದ್ದ. ಅವನ ಹೆಸರು ಬುಡುಗೊಚ್ಚ ಅಂತ. ಅವನ ನಿಜವಾದ ಹೆಸರು ಈಗಲೂ ಗೊತ್ತಿಲ್ಲ. ಕುಳ್ಳಗೆ ದಡಿ ಕಣ್ಣುಗಳ ಹಣೆಗೆ ಸದಾ ಅಗಲ ಕುಂಕುಮವಿಟ್ಟುಕೊಳ್ಳುತ್ತಿದ್ದ ನೂರಾರು ತೇಪೆ ಹಾಕಿದ್ದ ಕೋಟು ಹಾಕಿಕೊಳ್ಳುತ್ತಿದ್ದ ಬುಡುಗೊಚ್ಚ ನಮಗೆ ನಿಜವಾಗಿಯೂ ಅವನು ಹೇಳುತ್ತಿದ್ದ ಕಥೆಗಳ ಮಂತ್ರವಾದಿಯ ಥರವೇ ಕಂಡು ಭಯ ಹುಟ್ಟಿಸುತ್ತಿದ. ಆ ಕಥೆಗಳನ್ನು ಈಗ ನೆನಪಿಸಿಕೊಂಡರೆ ಮಾರ್ಕ್ವೆಜ್‌ನ ಮಾಂತ್ರಿಕ ವಾಸ್ತವತೆಯ ಕಥೆಗಳು ನೆನಪಿಗೆ ಬರುತ್ತವೆ. ಅವನ ಕಥಾ ಲೋಕದ ವಿಶೇಷ ಅಂದರೆ ಅಲ್ಲಿ ರಾಜ ರಾಣಿ ಮಂತ್ರವಾದಿಗಳಿಗಿಂತಲೂ ಪ್ರಾಣಿ ಪಕ್ಷಿಗಳು ಕಾಡು ಮೇಡುಗಳು ಹೂ ಹಣ್ಣುಗಳು ಪಾತ್ರಗಳಾಗಿರುತ್ತಿದ್ದವು. ಅವನನ್ನ ಇದೇನು? ಇದ್ಯಾಕೆ ಹಿಂಗೆ? ಅಂತ ಕೇಳಿದರೆ ಸಾಕು ಅದಕ್ಕೊಂದು ಕಥೆಯನ್ನೇ ಹೇಳಿಬಿಡುತ್ತಿದ್ದ. ಒಮ್ಮೆ ಅಕಸ್ಮಾತ್ತಾಗಿ ಅವನ ಮನೆಯಲ್ಲಿ ಕುಂಭವೊಂದರ ತುಂಬಾ ಇದ ಬೆಳ್ಳಿ ರೂಪಾಯಿಗಳ ಬಗ್ಗೆ ಕೇಳಿದ್ದೆ. ತಗೋ ಅದಕ್ಕೊಂದು ಕಥೆ ಕಟ್ಟಿದ್ದ ಬುಡುಗೊಚ್ಚ.

ಗಂಗಾಧರಯ್ಯನವರ ಕೃತಿಗಳು

ಒಂದು ದಿನ ಸಂಜೆ ಬುಡುಗೊಚ್ಚ ಕೊಪ್ಪಲಿನ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದನಂತೆ. ಆಗ ಆಕಾಶದ ಕಡೆಯಿಂದ ಬೆಳ್ಳನೆಯ ಬೆಳಕೊಂದು ಇಳುಕಂಡು ಬಂದು ಅವನೆದುರಿನ ಬೇಲಿಯನ್ನು ಹೊಕ್ಕಿತ್ತಂತೆ. ಕಣ್ಮುಚ್ಚಿ ಬಿಡುವುದರೊಳಗೆ ಆ ಬೆಳಕು ಬೆಲಿಯನ್ನೆಲ್ಲಾ ಆವರಿಸಿಕೊಂಡು ಆ ಇಡೀ ಬೇಲಿಯನ್ನು ಬೆಳಗಿಸತೊಡಗಿತ್ತಂತೆ. ಗಾಬರಿಗೊಂಡ ಬುಡುಗೊಚ್ಚ ಹುಲ್ಲು ಹಿರಿಯುವುದನ್ನು ಬಿಟ್ಟು ಬೇಲಿಯನ್ನೇ ದಿಟ್ಟಿಸತೊಡಗಿದ್ದನಂತೆ. ಆಗ ಆ ಬೆಳಕು ಕ್ರಮೇಣ ಮಂದವಾಗುತ್ತಾ ಹೋಗಿ ಕಡೆಗೆ ಪೂರಾ ಮಾಯವಾಗಿ ಮರು ಚಣವೇ ಆ ಬೇಲಿಯಲ್ಲಿ ಪುಟಾಣಿ ಹಸಿರು ಎಲೆಗಳು ಮೂಡತೊಡಗಿದ್ದವಂತೆ. ಮತ್ತೂ ಮುಂದುವರೆದು ಆ ಹಸಿರು ಎಲೆಗಳ ನಡುವೆ ಮಲ್ಲಿಗೆಯ ಮೊಗ್ಗುಗಳೂ ಮೂಡುತ್ತಾ ಅಗಾಇಗಾ ಅನ್ನುವುದರೊಳಗೆ ಆ ಇಡೀ ಬೇಲಿಯೇ ಮೊಗ್ಗಿನ ಹಾರದಂತಾಗಿತ್ತಂತೆ. ಮೆಲ್ಲಗೆ ಆ ಮೊಗ್ಗುಗಳೆಲ್ಲಾ ಪೂರಾ ಅರಳಿಬಿಟ್ಟಿದ್ದವಂತೆ. ಅದನ್ನೆಲ್ಲಾ ನೋಡುತ್ತಾ ಬೆದರಿ ನಿಂತಿದ್ದ ಬುಡುಗೊಚ್ಚನನ್ನು ಕಂಡು, ‘ಅಯ್ಯೋ ಯಾಕಿಂಗೆ ಹೆದರುತ್ತಿದ್ದೀಯಾ? ಇನ್ನು ಮುಂದೆ ನಾವು ಹಿಂಗೆ ಚಂದ್ರನ ಬೆಳಕಿನಲ್ಲಿ ಅರಳುತ್ತೇವೆ’ ಅಂದಿದ್ದವಂತೆ ಆ ಹೂಗಳು. ಹೀಗೆ ಹೂಗಳು ಮಾತನಾಡುವುದನ್ನು ಎಂದೂ ಕಾಣದಿದ್ದ ಕೇಳದಿದ್ದ ಬುಡುಗೊಚ್ಚ ಇದು ದೆವ್ವಗಳ ಆಟವೇ ಇರಬೇಕು ಅಂತ ಮತ್ತೂ ಹೆದರಿ ಗಡಗಡನೆ ನಡುಗತೊಡಗಿದ್ದನಂತೆ. ಅದನ್ನು ಕಂಡ ಹೂಗಳು ‘ನಾವು ದೆವ್ವ ರಾಕ್ಷಸ ಏನೂ ಅಲ್ಲ’ ಅನ್ನಲು ಬುಡುಗೊಚ್ಚ ‘ಹಾಗಾದಲ್ಲಿ ನೀವ್ಯಾರು?’ ಅಂದಿದ್ದನಂತೆ. ಆಗ ಆ ಹೂಗಳು, ‘ಒಂದು ದಿನ ಪಾರ್ವತಿ ಪರಮೇಶ್ವರರು ಆಕಾಶದಲ್ಲಿ ತಿರುಗಾಡುತ್ತಿರುವಾಗ ಪಾರ್ವತಿ ಮಾತೆಯ ಮುಡಿಯಂದ ಒಂದು ಹೂ ಕೆಳಕ್ಕೆ ಬೀಳುತ್ತದೆ. ಅದನ್ನು ಕಂಡ ಆ ದೇವಿ ಆ ಒಂದು ಹೂ ಸಾವಿರವಾಗಿ ಹೂವಾಗಿ ಸರತಿಯ ಪ್ರಕಾರ ಬಡವರ ಹಿತ್ತಲಿನ ಬೇಲಿಯಲ್ಲಿ ಅರಳುತ್ತಾ ಅವರನ್ನು ಸಂಪನ್ನರಾಗಿ ಮಾಡಬೇಕೆಂದು ಆಶೀರ್ವದಿಸುತ್ತಾಳೆ. ಅಲ್ಲದೆ ಅದೇ ತಾಯಿ ನಮಗೆ ಮಾತುಗಳನ್ನೂ ಕರುಣಿಸುತ್ತಾಳೆ,’ ಅಂದಿದ್ದವಂತೆ. ಅಂದಿನಿಂದ ತಿಂಗಳ ಬೆಳಕಿನ ರಾತ್ರಿಗಳಲ್ಲಿ ಬಡುಗೊಚ್ಚ ಆ ಹೂಗಳ ಜೊತೆ ಮಾತಾಡುತ್ತಿದ್ದನಂತೆ. ಹಿಂಗಿರುವಾಗ ಒಂದು ದಿನ ಆ ಹೂಗಳಿಗೆ ಬುಡುಗೊಚ್ಚನ ಮೇಲೆ ಅಪಾರ ಪ್ರೀತಿಯುಕ್ಕಿ, ‘ಎಲೈ ಮನುಜ, ನಿನಗೇನು ಬೇಕು ಕೇಳು ಈಗಿಂದೀಲೇ ಕೊಡುತ್ತೇವೆ,’ ಅಂದವಂತೆ. ಏನು ಕೇಳಬೇಕೆಂದು ಗೊಂದಲಕ್ಕೆ ಬಿದ್ದ ಬುಡುಗೊಚ್ಚನನ್ನು ಕಂಡು, ‘ನಿನ್ನ ಬೊಗಸೆಗೆ ಆನುವಷ್ಟು ನಮ್ಮಲ್ಲಿ ಯಾರನ್ನೇ ಆಗಲಿ ಹಿಡಿದು ‘ಮಾತಾಡ್ ಮಾತಾಡ್ ಮಲ್ಲಿಗೆ’ ಅಂದರೆ ಸಾಕು ನಿನ್ನ ಕೈಯ್ಯಲ್ಲಿರುವ ಹೂಗಳೆಲ್ಲಾ ಬೆಳ್ಳಿ ನಾಣ್ಯಗಳಾಗಿ ಬಿಡುತ್ತವೆ’ ಅಂದಿದ್ದವಂತೆ. ಅವತ್ತಿನಂದ ಬುಡುಗೊಚ್ಚ ತನಗೆ ಬೇಕಾದಾಗಲೆಲಾ ಹಾಗೆ ಅನ್ನುತ್ತಿದ್ದನಂತೆ. ಆಗ ಆ ಹೂಗಳೆಲ್ಲಾ ಬೆಳ್ಳಿ ನಾಣ್ಯಗಳಾಗುತ್ತಿದ್ದವಂತೆ! ಹಂಗೆ ಸಿಕ್ಕ ನಾಣ್ಯಗಳನ್ನೆಲ್ಲಾ ಕುಂಭಕ್ಕೆ ತುಂಬಿ ಇಟ್ಟಿದ್ದನಂತೆ! ಇಂಥ ಅದೆಷ್ಟೋ ಕಥೆಗಳನ್ನು ಅವನಿಂದ ಕೇಳಿದ್ದೇನೆ.

ಈಗ ನೆನೆದರೆ ಅಕ್ಷರಗಳೇ ಗೊತ್ತಿಲ್ಲದ ಇವರುಗಳೊಳಗೆ ಅದೆಷ್ಟು ಕಥೆಗಳು ಗೂಡು ಕಟ್ಟಿದ್ದವು ಹಾಗೂ ನಾನು ಓದಿರುವ ಯಾವುದೇ ಶ್ರೇಷ್ಠ ಲೇಖಕನಿಗಿಂತ ಇವರುಗಳು ಯಾವುದರಲ್ಲಿ ಕಡಿಮೆ? ಅಂತ ಅನಿಸುತ್ತದೆ. ನಾನು ಮಿಡ್ಲ್ ಸ್ಕೂಲ್ ಮುಗಿಸುವ ಹೊತ್ತಿಗೆ ಈ ಮೂವರೂ ತೀರಿಕೊಂಡಿದ್ದರು. ಆದರೆ ಆ ಹೊತ್ತಿಗಾಗಲೇ ಕಥೆಗಳ ಬಗ್ಗೆ ಯಾವತ್ತಿಗೂ ಮಾಸದ ತುಡಿತವೊಂದನ್ನು ನನ್ನೊಳಗಿಟ್ಟು ಹೋಗಿದ್ದರು. ಇಂಥದ್ದೊಂದು ಲೋಕ ನನಗೆ ಸಿಗದೇ ಹೋಗಿದ್ದರೆ ಇವರುಗಳು ಕಥೆಯ ಮಾಂತ್ರಿಕ ಚಾಪೆಯಲ್ಲಿ ಕೂರಿಸಿಕೊಂಡು ನನ್ನನ್ನು ತೇಲಿಸದೇ ಹೋಗಿದ್ದರೆ ಬಹುಶಃ ನನ್ನೊಳಗೊಬ್ಬ ಕಥೆಗಾರ ಮುಖ ತೋರಿಸುತ್ತಿದ್ದನೋ ಇಲ್ಲವೋ ಗೊತ್ತಿಲ್ಲ. ಹೀಗೆ ಎಳವೆಯಲ್ಲಿ ನನ್ನನ್ನು ಕಥಾ ಕಣಿವೆಯಲ್ಲಿ ನಡೆದಾಡಿಸಿದ ಈ ಮನಸುಗಳಿಗೆ ನನ್ನ ಮೊದಲ ಪ್ರಣಾಮಗಳು ಸಲ್ಲುತ್ತವೆ. ಅಂತೆಯೇ ಮುಂದಿನ ದಿನಗಳಲ್ಲಿ ಓದಿನ ಗೀಳಿಗೆ ಬಿದ್ದ ನನ್ನನ್ನು ಅನುಗಾಲವೂ ಕೈ ಹಿಡಿದು ನಡೆಸುತ್ತಿರುವ ಈ ನೆಲದ ಹಾಗೂ ಲೋಕದ ಬೇರೆ ಬೇರೆ ಭಾಷೆಯ ಮಹಾ ಲೇಖಕರಿಗೂ ನಾನಿಲ್ಲಿ ಋಣಿಯಾಗಿದ್ದೇನೆ.

ಈ ಬಗೆಯ ಅಪರಿಮಿತ ಲೋಕವೊಂದನ್ನು ನನಗೆ ಕರುಣಿಸಿದ್ದ ಹಳ್ಳಿಗಳಿಂದು ಹಿಂದಿನ ಹಳ್ಳಿಗಳಾಗಿ ಉಳಿದಿಲ್ಲ. ಅವುಗಳೆಲ್ಲಾ ಈಗ ನಗರಗಳ ಆತ್ಮವನ್ನು ತೊಟ್ಟು ಕೂತಿವೆ. ಕೃಷಿ ಬದುಕು ಯಂತ್ರೀಕರಣಗೊಳ್ಳುತ್ತಲೇ ಆ ಬದುಕು ಆವರೆಗೂ ಎದೆಯಲ್ಲಿ ಕಾಪಿಟ್ಟುಕೊಂಡಿದ್ದ ಜಾನಪದ ಲೋಕ ಮೆಲ್ಲಗೆ ಮರೆಯಾಗುತ್ತಿದೆ. ಜೊತೆಗೆ ದೇಸೀ ಕಥನ, ಕುಂಬಾರಿಕೆ, ಬುಟ್ಟಿ ಹೆಣೆಯುವಿಕೆ, ಚಮ್ಮಾರಿಕೆ,ಕಮ್ಮಾರಿಕೆ, ದಲ್ಲಾಳಿಕೆ,ನಾಟಿ ವೈದ್ಯ ಪದ್ಧತಿ ಮುಂತಾದ ಹಳ್ಳಿಗಳ ಅಪ್ಪಟ ಸ್ವಾವಲಂಬನೆಯ ಕಸುಬುಗಳು ಕಣ್ಮರೆಯಾಗುವುದರೊಂದಿಗೆ ಅವುಗಳ ಜೊತೆಗಿದ್ದ ದೇಸೀ ಜ್ಞಾನ ಹಾಗೂ ಆ ಕಸುಬುಗಳು ಪೊರೆದ ನುಡಿ ಸಂಪತ್ತೂ ಅಳಿಯತೊಡಗಿದೆ. ಹಾಗಾಗಿ ನನಗೆ ಹಾಗೂ ನನ್ನ ವಾರಿಗೆಯರಿಗೆ ಸಿಗುತ್ತಿದ್ದ ಆ ಲೋಕ ಈಗಿನ ಮಕ್ಕಳಿಗೆ ಸಿಕ್ಕುತ್ತಿಲ್ಲ ಅನ್ನುವ ವಿಷಾದ ಯಾವಾಗಲೂ ಅನಿಸುವಂತೆ ಇದನ್ನು ಬರೆಯುತ್ತಿರುವ ಈ ಚಣದಲ್ಲೂ ಅನಿಸುತ್ತಿದೆ.

*

ಪರಿಚಯ : ಎಸ್. ಗಂಗಾಧರಯ್ಯನವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರು. ಕಥಾಸಂಲಕನಗಳು – ನವಿಲ ನೆಲ, ಒಂದು ಉದ್ದನೆಯ ನೆರಳು. ‘ಬಯಲ ಪರಿಮಳ’ ವ್ಯಕ್ತಿಚಿತ್ರ ಸಂಪುಟ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ- ಎರ್‍ಮಾ, ವಿವಿಧ ಲೇಖಕರ ಕಥೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ ಅನುವಾದಿತ ಕೃತಿಗಳು. ಕುವೆಂಪು ಭಾಷಾಭಾರತಿಗಾಗಿ ‘ಆಫ್ರಿಕನ್ ಸಾಹಿತ್ಯವಾಚಿಕೆ’ ಮತ್ತು ಡಾ. ರಾಮಮನೋಹರ ಲೋಹಿಯಾ ಮತ್ತು ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳನ್ನು ಅನುವಾದಿಸಿದ್ದಾರೆ. ‘ವೈಕಂ ಕಥೆಗಳು’ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಭಾಜನವಾಗಿದೆ.

(ಈ ಸಂಕಲನದ ಖರೀದಿಗೆ ಸಂಪರ್ಕಿಸಿ : 9448166990)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಹಜಾರೀಪ್ರಸಾದ ದ್ವಿವೇದಿಯವರ ‘ಅನಾಮದಾಸನ ಕಡತ’ವನ್ನು ಇಂದು ನಿಮಗೊಪ್ಪಿಸಲಿದೆ ‘ಬಹುವಚನ’