ಅಚ್ಚಿಗೂ ಮೊದಲು: ‘ಮಂಜಿನ ಮನೆ ಹೊಕ್ಕ ಮನ’ ಕವಿತಾ ಹೆಗಡೆ ಅಭಯಂ ಕವನ ಸಂಕಲನ ಸದ್ಯದಲ್ಲೇ

| Updated By: Digi Tech Desk

Updated on: Jun 06, 2022 | 11:52 AM

Poetry : ಅವಳು ಎಂಬುದು ಇಲ್ಲಿ ವ್ಯೋಮವೋ ಭೂಮವೋ ಏನೇ ಇರಲಿ, ಅದು ವ್ಯಕ್ತಿತ್ವದ ಅಹಮಿಕೆಯನ್ನು ಕೆಣಕುತ್ತದೆ ಮತ್ತು ನಿರಸನಗೊಳಿಸುತ್ತದೆ. ಈ ಕಾರಣದಿಂದಲೇ ಕವಿತಾ ಹೆಗಡೆ ಅಭಯಂ ಅವರು ನಿಸರ್ಗದ ಧಾತುಗಳನ್ನು ಮೂಲವಾಗಿಟ್ಟುಕೊಂಡು ಮುನ್ನಡೆಯುವುದು.

ಅಚ್ಚಿಗೂ ಮೊದಲು: ‘ಮಂಜಿನ ಮನೆ ಹೊಕ್ಕ ಮನ’ ಕವಿತಾ ಹೆಗಡೆ ಅಭಯಂ ಕವನ ಸಂಕಲನ ಸದ್ಯದಲ್ಲೇ
Follow us on

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

 

ಕೃತಿ: ಮಂಜಿನ ಮನೆ ಹೊಕ್ಕ ಮನ (ಕವನ ಸಂಕಲನ)

ಲೇಖಕಿ : ಕವಿತಾ ಹೆಗಡೆ ಅಭಯಂ

ಪುಟ : 106

ಬೆಲೆ : ರೂ. 110

ಪ್ರಕಾಶನ : ಅಕ್ಷರ ಮಂಟಪ, ಬೆಂಗಳೂರು

ಕವಿತೆಗಳು ಜನಿಸಬಹುದಾದ ಭಾವವೈವಿಧ್ಯಗಳನ್ನು ಅರಿವಿಲ್ಲದಂತೆಯೇ ಎದೆಯೊಳಗೆ ಬಿಟ್ಟುಕೊಳ್ಳುವುದು ಮತ್ತು ಅವು ಅಕ್ಷರರೂಪದಲ್ಲಿ ಹೊರಬೀಳುವ ಗಳಿಗೆಗಳಿಗೆ ಸ್ವಾಗತ ಕೋರುವುದು ಕವಿಗೆ ಬಹುಶಃ ಸಾಟಿಯಿಲ್ಲದ ಸಂಭ್ರಮ. ಕವಿತೆಯೊಂದು ಜನಿಸಿದ ಆ ಕ್ಷಣದ ಮಧುರ ಅನುಭೂತಿಗಿಂತ ಸೊಗಸಾದ ಅನುಭವ ಇಲ್ಲವಾದರೂ ಅದು ಇನ್ನೊಂದು ಎದೆಯನ್ನು ಸೇರಲಿ, ತನ್ನೆದೆಯ ಭಾವ ಹೊಸದೊಂದು ಹೃದಯವೇದಿಕೆಯಲ್ಲೂ ನರ್ತನಗೈಯಲೆಂಬ ಆಶಯ ಕವಿಗೆ ಸದಾ ಇದ್ದೇ ಇದೆ. ಕವಿತೆಗಳ ರಚನೆಗೆಂದು ಪಟ್ಟಾಗಿ ಕೂರದಿದ್ದರೂ ಯಾವುದೋ ಕೆಲಸದಲ್ಲಿ ಮಗ್ನಳಾಗಿದ್ದರೂ ಯಾವುದೋ ಗದ್ದಲ, ಅಪೂರ್ವ ಶಾಂತತೆ, ಅನನ್ಯ ಏಕಾಂತ ಹೀಗೆ ಯಾವುದೇ ವೇದಿಕೆ ಇರಲಿ, ನನಗೆ ಪೂರ್ವಸೂಚನೆಯೇ ಇಲ್ಲದೆ ಅಚಾನಕ್ಕಾಗಿ ಅಗಾಗ ಹೊರಹೊಮ್ಮಿದ ಭಾವತೀವ್ರತೆಯ ಮೊತ್ತವೇ ನನ್ನ ಕವಿತೆಗಳು. ಅವು ತಾನಾಗಿ ಅರಳುವಾಗ ಸಮ್ಯಕ್ ಸಮಯದಲ್ಲಿ ಅವನ್ನು ಬೊಗಸೆಯಲ್ಲಿ ಹಿಡಿದುಕೊಳ್ಳುವ ಕ್ಷಣ ಅನಿರ್ವಚನೀಯ ಆನಂದ ನನಗೆ. ಹಾಗೆ  ಬೊಗಸೆಗೆ ಬಿದ್ದ ಕವನ ಕೂಸನ್ನು ತುಸು ಬೆಳೆಸಿ ನಿಮ್ಮ ಬೆರಳುಗಳಿಗೆ ಜೋಡಿಸುವ ಹಂಬಲವೂ ನನ್ನದು.

ಕವಿತಾ ಹೆಗಡೆ ಅಭಯಂ, ಕವಿ

‘ಅವ ಕೂತ  ಚರ್ಮದಲಿ ಜೀವ ತುಂಬಿದರೆ’ ಎನ್ನುವ ಪ್ರಶ್ನೆಗಳೆ ಇಡೀ ಸಂಕಲನವನ್ನು ರೂಪಿಸಿವೆ. ಕವಿಗೆ ಇದು ಅಗತ್ಯ ಕೂಡಾ. ಪ್ರಶ್ನೆಗಳನ್ನು ಕೇಳುವ ಕವಿತೆಗಳು ಯಾವತ್ತೂ ಗೆದ್ದಿವೆ. ಕವಿತೆಗಳು ಒಣ ವಿವರಗಳ ಭಾಷಣಗಳಾಗಬಾರದೆಂಬ ಎಚ್ಚರ ಕವಿತಾ ಅವರಿಗೆ ಇದೆ. ಈ ಕಾರಣಕ್ಕೆ ಅವರು ಆಯ್ದುಕೊಳ್ಳುವ ವಸ್ತು ಮತ್ತು ಸನ್ನಿವೇಶಗಳು ಹೊಸತನದ ಹುಡುಕಾಟದ ಹಾಗೆ ಗೋಚರಿಸುತ್ತವೆ. ಮಹಾಸಂಗಮದಂತಹ ಕವಿತೆಗಳ ವಿಸ್ತಾರಕ್ಕೂ ಈ ಹುಡುಕಾಟವೇ ಕಾರಣವಾಗಿದೆ. ಅವಳಲ್ಲಿ ಒಂದಾಗುವ ಮತ್ತು ಅವಳೇ ತಾನಾಗುವ ಈ ಕ್ರಿಯೆಯಲ್ಲಿ ಯಃಕಶ್ಚಿತ್ ಮನುಷ್ಯನ ಇರುವಿಕೆಯನ್ನು ಪ್ರಶ್ನಿಸಲಾಗಿದೆ. ಅವಳು ಎಂಬುದು ಇಲ್ಲಿ ವ್ಯೋಮವೋ ಭೂಮವೋ ಏನೇ ಇರಲಿ, ಅದು ವ್ಯಕ್ತಿತ್ವದ ಅಹಮಿಕೆಯನ್ನು ಕೆಣಕುತ್ತದೆ ಮತ್ತು ನಿರಸನಗೊಳಿಸುತ್ತದೆ. ಈ ಕಾರಣದಿಂದಲೇ ಕವಿತಾ ಹೆಗಡೆ ಅಭಯಂ ಅವರು ನಿಸರ್ಗದ ಧಾತುಗಳನ್ನು ಮೂಲವಾಗಿಟ್ಟುಕೊಂಡು ಮುನ್ನಡೆಯುವುದು.
ವಾಸುದೇವ ನಾಡಿಗ, ಕವಿ


ಸಣ್ಣವರಾಗುವುದೆಂದರೆ

ಸಣ್ಣವರಾಗುವುದೆಂದರೆ
ಸುಲಭವಲ್ಲ
ಬೇಕು ಅಸಾಮಾನ್ಯ ಭಂಡತನ
ಕುಳಿತಲ್ಲಿಂದ ಕೆಳಗಿಳಿಯಲು
ಎಲ್ಲ ಪೂರ್ವಸಿದ್ಧತೆ

ಬದುಕ ಜೇನಗೂಡು
ಕಟ್ಟಿಕೊಂಡು ಜೀವರಾಣಿಯ
ಕಾಪಿಡುವ ಗೌರವ ಹೆಮ್ಮೆ
ಸುಖ ಸನ್ಮಾನ ತೃಪ್ತಿಗಳ

ಬೆಚ್ಚಗೆ ಹೊದ್ದು ಮಲಗಿದವನೆಡೆಗೆ
ಕುಯುಕ್ತಿಯ ಕವಣೆ ಹೂಡಿ
ಗುರಿಯಿಟ್ಟು ಕಟಕಿಯ
ಕಲ್ಲೆಸೆಯಬೇಕು

ಅವನ ಜೀವ ಜೇನ ಕಾವ ಸೈನಿಕರು
ನೋವು ನಿರಾಶೆ ಅವಮಾನ
ದುಃಖ ದುಮ್ಮಾನ ಸೇಡುಗಳ
ನಂಜು ಕಾರುವ ಹುಳುಗಳಾಗಿ

ನಿರಾಶ್ರಿತ ಭ್ರಮಣೆಗೊಳಗಾಗುವಂತೆ
ನೋಡಿಕೊಳ್ಳಬೇಕು
ಕೀರ್ತಿ ಕಿರೀಟ ದೊಡ್ಡದಿರುವವನ
ಹುಡುಕಿ ಮಣಿಗಳ ಕೀಳಬೇಕು

ಸಾಧನಾ ಶಿಖರದಿ
ತಲ್ಲೀನನಾದವನ ಮೂಲಾಧಾರವ
ಹುಚ್ಚು ಹೆಗ್ಗಣದಂತೆ
ಕೊರೆಯಬೇಕು

ತಾ ಪತನಗೊಳಿಸಿದ ಗಳಿಗೆ
ಶಾಶ್ವತವೆಂದು ಬೀಗುತ್ತ
ತನ್ನ ಹುಸಿ ಗಡಣದ
ಬಹುಪರಾಕಿಗೆ ಕುಣಿಯುತ

ಪುಕ್ಕಟೆ ಮನರಂಜನೆಯ
ಬಯಸುವ ನಿರ್ಲಜ್ಜ
ನಾಲಿಗೆಗಳಿಗೆ ಕೊಳೆತ
ಭಕ್ಷ್ಯಗಳ ಮೊಗೆದು
ಬಡಿಸುತಿರಬೇಕು 

ನೊಂದ ಜೀವದೆದೆ ಚುಚ್ಚುವ
ಮುಳ್ಳುಗಳು ಬೆಳೆಸಿ
ಶಪಿಸಿ ತಯಾರು ಮಾಡಿದ
ಚಪ್ಪಲಿಯ ಹಾರಕೆ ಕೊರಳ
ಚಾಚುತ ಕೂತಲ್ಲೇ ತನ್ನ
ಕುಣಿ ತೋಡಿಕೊಳ್ಳುತ್ತ
ಒಂದು ದಿನ ತನ್ನ ಮುಖ ತಾನೇ
ಮುಚ್ಚಿಕೊಳ್ಳಬೇಕು

ಪುಸ್ತಕದ ಖರೀದಿಗೆ ಸಂಪರ್ಕಿಸಿ: 99861 67684

ಅಚ್ಚಿಗೂ ಮೊದಲು ಅಂಕಣದಲ್ಲಿರುವ ಹೊಸ ಪುಸ್ತಕಗಳ ಬಗ್ಗೆ ಇಲ್ಲಿ ಓದಿ:
https://tv9kannada.com/tag/acchigoo-modhalu

 

 

Published On - 1:03 pm, Sat, 7 May 22