New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಒಂದು ಅಂಕ ಮುಗಿದು (ಕವನ ಸಂಕಲನ)
ಲೇಖಕರು : ಸ್ಮಿತಾ ಮಾಕಳ್ಳಿ
ಪುಟ : 106
ಬೆಲೆ : ರೂ. 120
ಮುಖಪುಟ ವಿನ್ಯಾಸ : ಎಸ್. ವಿಷ್ಣುಕುಮಾರ್
ಪ್ರಕಾಶನ : ಬಿಸಿಲಕೋಲು ಪ್ರಕಾಶನ, ತಿಪಟೂರು
*
ಈ ಹೊತ್ತಿನ ಮಹಿಳಾ ಕಾವ್ಯ ಸಿದ್ಧ ದಾರಿ ಅಥವಾ ಪೊರೆಸಲ್ಪಟ್ಟ ದಾರಿಯನ್ನು ವಿಸ್ತರಿಸಿಕೊಳ್ಳುವ ಸಂಧಿ ಕಾಲದಲ್ಲಿದೆ. ಮಹಿಳಾ ಕಾವ್ಯ ಹೀಗೇ ಇರಬೇಕು ಎಂಬ ಸಿದ್ಧ ಕಲ್ಪನೆಗಳನ್ನು ಮುರಿದು ಕಟ್ಟುವ ಕ್ರಮದೊಂದಿಗೆ ತಮ್ಮದೇ ದಾರಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿ ಹಲವು ಹೊಸ ತಲೆಮಾರಿನ ಲೇಖಕಿಯರು ಇಂದು ಭರವಸೆಯೊಂದಿಗೆ ಬರೆಯುತ್ತಿದ್ದಾರೆ. ಕೆಲವರು ಸ್ತ್ರೀ ಹಾಗೂ ಸ್ತ್ರೀವಾದದ ಫಲಿತಗಳ ಮುಂದುವರಿಕೆಯಂತೆ ಬರೆಯುತ್ತಿದ್ದರೆ, ಯಾವ ವಾದಗಳ ಹಂಗಿಲ್ಲದೆ ತಮ್ಮ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಮತ್ತೆ ಕೆಲವರಿದ್ದಾರೆ. ಹೆಣ್ಣುದೇಹ ಮತ್ತು ಹೆಣ್ಣುಭಾಷೆಯ ಕುರಿತಾಗಿ ಪ್ರಜ್ಞಾಪೂರ್ವಕವಾಗಿ ಬರೆಯುತ್ತಾ ಮಿಸ್‌ಇಂಟರ್‌ಪ್ರಿಟೇಷನ್‌ನಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ಆಲೋಚನಾ ಕ್ರಮವೊಂದು ಸಹ ಕನ್ನಡದ ಮಹಿಳಾ ಕಾವ್ಯದಲ್ಲಿ ಪ್ರಚಲಿತವಿದೆ. ಇಂತಹ ಕಾವ್ಯ ಸಂದರ್ಭದಲ್ಲಿ ಸ್ಮಿತಾ ಮಾಕಳ್ಳಿ ತನ್ನದೇ ಆದ ಆಪ್ತವಾದ ಭಾವಲೋಕವೊಂದನ್ನು ಅಭಿವ್ಯಕ್ತಿಸಹೊರಟಿರುವುದು ಗಮನಾರ್ಹವಾದ ಪ್ರಯತ್ನವಾಗಿದೆ.
ಡಾ. ಎಚ್. ಎಲ್. ಪುಷ್ಪ, ಕವಿ, ಲೇಖಕಿ
*
ಗಿಂಪೆಲ್ ಮತ್ತು ಪಿನೋಕಿಯೊ
ಮೊನ್ನೆ ಕೂಡ ಅವತ್ತಿನಂತೆ
ಗಿಂಪೆಲ್ ಹಾಗೂ ಪಿನೋಕಿಯೊ
ಕೈ ಹಿಡಿದು ದಂಡೆಯಲ್ಲಿ
ನಗುತ್ತಾ ಹೋಗುತ್ತಿದ್ದರು!
ಅವರಿಗೆ ಬೆಳಗ್ಗೆ ಬೆಳಗ್ಗೆಯೇ ಸಿಕ್ಕಿದ್ದಳು
ನೋಡಿ ಆ ಗೊಣಗುವ ಅಜ್ಜಿ!
ಅಲ್ಲಾ ಇವರಿಬ್ಬರ ತಮಾಷೆಗಳ
ಸೊಗಸ, ಕೇಕೆಗಳ ನೋಡಿದ್ದರೆ
ನೀವು ಏನನ್ನುತ್ತಿದ್ದಿರೋ!
ಶುದ್ದ ತಲೆಹರಟೆಗಳ
ಹಾಗೆ ಹಾಡು, ಕಥೆಗಳನ್ನ
ಆ ಮೀನು ಮಾರುವ ಅಜ್ಜಿಗೆ
ಹೇಳುತ್ತಲೇ
ಅಜ್ಜಿ ನಸುನಗುತ್ತಿದ್ದಾಳೆ!
ಇಲ್ಲಿ ಇವಳು ಅವರಿಬ್ಬರ
ಹಿಂದೆ ಬಿದ್ದು ಅವರ
ನೆಲವ ಶೋಧಿಸಲೆತ್ನಿಸುತ್ತಿದ್ದಾಳೆ
ಅದನ್ನೆ ಕಾಯುತ್ತಿರುವವನಂತೆ
ಕುಳಿತ್ತಿದ್ದ
ಆ ಊರ ಹೈದನೊಬ್ಬ,
ನನ್ನಜ್ಜ ಹೇಳುತ್ತಿದ್ದ ಅಗೋ
ಅಲ್ಲಿ
ಈ ಗಿಂಪೆಲ್ ಇದ್ದಾನಲ್ಲ ಅವನೆ ಆ
ಉದ್ದ ಗಡ್ಡದವನು ಸುಳ್ಳನ್ನೇಳದ ಎಲ್ಲವನ್ನು
ನಂಬುವ ಶತದಡ್ಡನಂತೆ
ಇನ್ನಾ ಅರೆ ನೋಡಿ, ನೋಡಿ ಪಿಳಿಪಿಳಿ
ಕಣ್ಣಗಲಿಸಿ ಆ ಕ್ಷಣವ ನಂಬಿ
ನಿರುಪದ್ರವಿ ಸುಳ್ಳನಾಡುತ್ತಾ
ಇಂಚಿಂಚೆ ಮೂಗ ಬೆಳೆಸಿಕೊಳ್ಳುವ
ಮರದವ ಪಿನೋಕಿಯೋನಂತೆ
ಎಂದು ಮುಗಿಸುವ ವೇಳೆಗೆ
ಆ ಹೈದನಿಗೆ ಎಲ್ಲಾ ತಿಳಿದ ಠೀವಿ.
ಅದನ್ನ ಕೇಳಿದ ಇವರಿಬ್ಬರಿಗೆ
ಜೋರು ನಗು
ಯಾರು ಯಾವುದನ್ನಾದರೂ
ಏಕೆ ನಂಬಬಾರದು
ಇಲ್ಲಿ ಎಲ್ಲರೂ ಇರುವಂತೆ
ನಂಬಿಕೆಗಳೂ ಸಹ
ಹೌದು ನಂಬುತ್ತಲೇ
ಇರುವುದು ಎಂತಹ ಸೊಗಸು
ಕೇಡುಗಳ ಆಚೆಗಿನ ಆಮಂತ್ರಣ!
ತೊಟ್ಟಿಕ್ಕುತ್ತಲೇ ಇರುವ ಬೀದಿ ಕೊಳಾಯಿಯೋ
ಇಲ್ಲಾ ಜಾತ್ರೆಯ ಕಡಲೆ ಪುರಿಯ ಹಾಗೆ
ನಂಬಿಕೆಗಳೋ ಮಾರಾಟವಾಗುವಾಗ
ಬಟ್ಟೆಯಂತೆ ಅವುಗಳ ಆರಿಸುತ್ತಾ ನಿಲ್ಲುವುದ ನೋಡಲು
ದಡದಲಿ ನಿಂತ ಇವರಿಗೆ ಇನ್ನಿಲ್ಲದ ಮೋಜು !
ಹೀಗೆ ಸುಳ್ಳು ಸತ್ಯಗಳ
ಆ ಕ್ಷಣಗಳ ಹುಸಿತನಗಳ
ತರ್ಕವನ್ನೇ ಒಪ್ಪದ ಇವರಿಬ್ಬರು
ಕಾಲದ ಆಚೆಗೂ ಅಣಕಿಸಿ
ಮುಗುಳುನಗುತ್ತಾ
ಹಾದು ಹೋಗುತ್ತಲೇ ಇರುತ್ತಾರೆ.
ಮುಖಾ ಮುಖಿಯಾಗಿ
ಯಾರನ್ನೋ ಸಂಧಿಸಿ
ಮೆರೆಯಬೇಕೆಂಬ ಧಾರ್ಷ್ಟ್ಯವ
ಆಶಿಸುವ ನಿನ್ನ
ತಾಸುಗಟ್ಟಲ ಆಲೋಚನೆಗಳ
ಹುಳುಕ ಅಳಿಸಿ ನೋಡಿದರೆ
ಗಿಂಪೆಲ್ನಂತೆ ಕಥೆ ಹೇಳುವ
ಅಜ್ಜನೊಬ್ಬ ಕಂಡಾನು
ಅವನ ಬೆನ್ನಿಗೆ
ಜೊತು ಬಿದ್ದ ಪಿನೋಕಿಯೋನೂ
ಕ್ಷಣಗಳ ಆಚೆಗೂ ನಿನ್ನ ಮುದಗೊಳಿಸದಿದ್ದಲ್ಲಿ ಕೇಳು…
(ಗಿಂಪೆಲ್: ಬಾಷಿವಿಸ್ ಸಿಂಗರ್ ನ ‘Gimpel the fool’ ಕಥೆಯ ಒಂದು ಪಾತ್ರ. ಪಿನೋಕಿಯೊ : ಇಟಾಲಿಯ ಬರಹಗಾರ ಕಾರ್ಲೋ ಕೊಲ್ಲೋಡಿ ಯ ಕಾದಂಬರಿ ‘The Adventures of Pinochio’ ದ ಒಂದು ಪಾತ್ರ.)
ಗದ್ಯವೊಂದೇ ನೆಚ್ಚು ಎಂದುಕೊಂಡವಳಿಗೆ ಕವಿತೆ ಕೈಬೀಸಿದ್ದರ ಗೆರೆಯ ಸ್ಪಷ್ಟತೆ ಇನ್ನೂ ತಿಳಿದಿಲ್ಲ, ಕವಿತೆಯೆಂದರೆ ಮೀಟರ್, ರೈಮ್, ಭಾವ ಅದೂ ಇದೂ ಎಂದು ನನ್ನ ಸಾಹಿತ್ಯದ ಕ್ಲಾಸ್‌ಗಳಲ್ಲಿ ಕೇಳಿದ್ದ ನನಗೆ ಮಾತ್ರ ಕವಿತೆ ನನ್ನ ಖಾಸಾ ದಾಖಲಾತಿಯಾಗಿಯೇ ಪರಿಚಿತವಾಗಿದ್ದು. ಹೀಗೇ ಬರೆಯಲೇಬೇಕೆಂದು ಬರೆದವು ಇವ್ಯಾವೂ ಅಲ್ಲ, ಬದಲಿಗೆ ನನ್ನೊಳಗೆ ಮಾತ್ರ ಮಾತನಾಡುವ, ಸುಮ್ಮನಿರುವ ಆಚೆಗೆ ಹೇಳಲು ತಿಳಿಯದ ಚಿತ್ರಗಳು ಇಲ್ಲಿ ಗೀಚಿ ಅಕ್ಷರಗಳಾಗಿವೆ. ಇದು ನಾನು ನಿತ್ಯ ನೋಡುವ, ವ್ಯವಹರಿಸುವ ಲೋಕದ ಒಂದು ಬಿಂದುವಷ್ಟೇ. ಇಲ್ಲಿರುವ ಕವಿತೆಗಳು ಕೆಲವು ನಾನು ಡಿಗ್ರಿ, ಮಾಸ್ಟರ್ಸ್ನಲ್ಲಿ ಇದ್ದಾಗ ಬರೆದವು. ಮತ್ತೊಂದಷ್ಟು ನಂತರದವು. ಇವು ಒಂದು ರೀತಿಯ ನನ್ನ ತಲ್ಲಣಗಳ ಅಭಿವ್ಯಕ್ತಿಗೆ ಊರುಗೋಲೂ ಹೌದು.
ಸ್ಮಿತಾ ಮಾಕಳ್ಳಿ, ಕವಿ
ಪರಿಚಯ : ಸ್ಮಿತಾ ಮಾಕಳ್ಳಿ ಹುಟ್ಟಿದ್ದು 1999ರಲ್ಲಿ. ಊರು ತಿಪಟೂರು. ವಾಸ ಬೆಂಗಳೂರು. ಪಿಯೂಸಿ ತಿಪಟೂರಿನಲ್ಲಿ. ಪದವಿ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಹಾಗೂ ಭಾಷಾಂತರ ಡಿಪ್ಲೊಮೊ ಪದವಿ. ಅಲ್ಲಿಯೇ ಕೆಲ ಕಾಲ ಅತಿಥಿ ಉಪನ್ಯಾಸಕ ವೃತ್ತಿ. ಸದ್ಯ ಅದೇ ವಿಶ್ವವಿದ್ಯಾನಿಲಯದಲ್ಲಿ ನೊಬೆಲ್ ಬಹುಮಾನ ಪುರಸ್ಕೃತ ಲೇಖಕ ಐಸಾಕ್ ಬಾಷಿವೀಸ್ ಸಿಂಗರ್ ಅವರ ಕಾದಂಬರಿಗಳ ಕುರಿತು ಪಿಎಚ್.ಡಿ ಅಧ್ಯಯನ.
ಮೊದಲ ಪುಸ್ತಕ ‘ಕೈಗೆಟಕುವ ಕೊಂಬೆ’ಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ. ‘ಪ್ರಜಾವಾಣಿ’ ದೀಪಾವಳಿ ಕಾವ್ಯ ಸ್ಪರ್ಧೆಯಲ್ಲಿ ಎರಡು ಬಾರಿ ಹಾಗೂ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ದ. ರಾ. ಬೇಂದ್ರೆ ಅಂತರ ಕಾಲೇಜು ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ.
(ಈ ಸಂಕಲನದ ಖರೀದಿಗೆ : 7974521881)
ಸ್ಮಿತಾ ಮಾಕಳ್ಳಿಯ ಇನ್ನಷ್ಟು ಕವಿತೆಗಳಿಗಾಗಿ ಓದಿ : Poetry ; ಅವಿತಕವಿತೆ : ಆವಿಯಾಗದ ಹೊರತು ತುಂಬಿಕೊಳ್ಳುವುದಾದರೂ ಹೇಗೆ?