Hopscotch : ಅಮಾರೈಟ್ ; ‘…ಯಾರೋ ಚಂದಗೆ ಖಾರಹಚ್ಚಿದ ಚಾಕುವಿನಿಂದ ಬೆರಳ ತುದಿಗೆ ಗೀರಿದಂತೆ!’

|

Updated on: Jan 25, 2022 | 10:39 AM

Responsibility : ತಿಂಗಳ ಸುಮಾರೊಪ್ಪತ್ತು ದಿನಗಳು ‘ಮನೆಯಿಂದ ಮಕ್ಕಳಿಂದ ದೂರವೇ ಇರುವ ನಾನು’; ‘ನನ್ನಿಂದ ಗಂಡ-ಮಕ್ಕಳು ದೂರವಿದ್ದಾರೆ’ ಅನ್ನುವಂತೆ ವಾಕ್ಯ ಬದಲಿಸಿ ಹೇಳಿದರೆ ಯಾರು ಕೇಳುತ್ತಾರೆ? ಒಂದೊಂದೇ ಪುಕ್ಕಕಟ್ಟಿ ರೆಕ್ಕೆ ಮಾಡಿ, ಎಷ್ಟೊಂದು ಹಾದಿ ಸವೆಸಿ ಕಾಲು ತೆಳ್ಳಗಾಗಿಸಿಕೊಂಡು ಇನ್ನೇನು ಉದ್ದನೆ ದಾರಿಗೆ ಹಾರಿಕೊಳ್ಳಬೇಕೆಂದಿರುವಾಗ ತಟಕ್ಕನೇ ಕಾಲಿಗಂಟಿಕೊಳ್ಳುವ ಭಾರವಿರುತ್ತದಲ್ಲಾ...

Hopscotch : ಅಮಾರೈಟ್ ; ‘...ಯಾರೋ ಚಂದಗೆ ಖಾರಹಚ್ಚಿದ ಚಾಕುವಿನಿಂದ ಬೆರಳ ತುದಿಗೆ ಗೀರಿದಂತೆ!’
ಫೋಟೋ : ಡಾ. ಲೀಲಾ ಅಪ್ಪಾಜಿ
Follow us on

ಅಮಾರೈಟ್ | Amaright :ರಾತ್ರಿ ನಿದ್ದೆಗೆಟ್ಟು ಓದಿ-ಬರೆಯುವಾಗ ನೆನಪಾಗದ ಮಕ್ಕಳು ಬೆಳಗ್ಗೆ ಕ್ಯಾಂಪಸ್ಸಿನಲ್ಲಿ ಸ್ಟೂಡೆಂಟ್ ಒಬ್ಬ ಮಾಡಿದ ಜೋಕಿಗೆ ಮನಸಾರೆ ನಗಬೇಕೆನಿಸಿದಾಗ ನೆನಪಾಗುತ್ತಾರೆ. ಮಾಡಿಕೊಳ್ಳಲಾಗದ ಸಂಕಟಕ್ಕೆ (ದೇವರಾಣೆ ಡಯಟ್ ಅಂತೂ ಅಲ್ಲ) ರೂಮ್‌ಮೇಟ್ ಜೊತೆ ರಾಗಿ ಅಂಬಲಿ ಕುಡಿದು ಚಪ್ಪರಿಸುವಾಗ ನೆನಪಾಗದ ಗಂಡನ ಊಟ-ತಿಂಡಿ ಯಾರಾದರೂ ಕ್ಯಾಂಟೀನಿನಲ್ಲಿ ಚಾ-ಮಿರ್ಚಿ ಅಂತ ಕರೆದಾಗ ಪಟಕ್ಕನೆ ನೆನಪಾಗುತ್ತದೆ. ಭರ್ತಿ ಕೆಲಸ ಮಾಡುತ್ತಾ ಲ್ಯಾಪ್‌ಟಾಪ್ ಕುಟ್ಟುತ್ತಿರುವಾಗ ಮಕ್ಕಳು ಓದಿದರೋ, ಹೋಮ್‌ವರ್ಕ್ ಬರೆದರೋ ಅನ್ನುವುದು ಕಾಡುವುದೇ ಇಲ್ಲ, ಅದೇ ಯೂಟ್ಯೂಬಿನಲ್ಲಿ ಸೀರಿಯಲ್‌ನ ಐದೈದು ನಿಮಿಷದ ಎಪಿಸೋಡ್ ನೋಡುವಾಗ ಥಟಕ್ಕನೇ ಹಿಂಸೆಕೊಡುತ್ತದೆ. ‘ನಾವು ಖುಷಿಯಾಗಿಲ್ಲದೇ ಯಾರನ್ನೂ ಖುಷಿಯಾಗಿಡಲು ಸಾಧ್ಯವಿಲ್ಲ’ ಅನ್ನುವುದನ್ನು ಗೆಳತಿಯೊಟ್ಟಿಗೆ ಕೂತು ಗಂಟೆಗಟ್ಟಲೆ ಚರ್ಚೆ ಮಾಡಿಯೂ ನಾವು ಖುಷಿಯಾಗಿರುವುದೇ ಮಹಾಪಾಪ ಅನ್ನುವಂತಾದಾಗ ಖುಷಿಯೇ ಭಾರವಾಗುತ್ತದಲ್ಲಾ. ಆಗ ಹಗುರಾಗುವುದು ಹೇಗೆ? ಹಾರುವುದು ಹೇಗೆ?

ಭವ್ಯ ನವೀನ, ಕವಿ, ಲೇಖಕಿ, ಹಾಸನ (Bhavya Naveen)

*

(ಬಿಲ್ಲೆ- 2)

ಭಾರ – ಭಾರವೇ; ಏನಿರಬಹುದು, ಹೇಗಿರಬಹುದು, ಎಷ್ಟಿರಬಹುದು ಅನ್ನುವುದು ‘ಭಾರ’ವನ್ನು ಡಿಫೈನ್ ಮಾಡಬಲ್ಲದಾ ಅಂತ ಯೋಚಿಸುತ್ತಿದ್ದೆ. ಯಾವುದನ್ನು ಹೊರಲಾಗುವುದಿಲ್ಲವೋ ಅದು ಭಾರವೋ ಅಥವಾ ಯಾವುದನ್ನು ಹೊರಲಾಗದೆಯೂ ಹೊರುತ್ತೇವಲ್ಲ ಅದು ಭಾರವೋ…

*

ಭಾರದ ಬಗ್ಗೆ ಮಾತಾಡಲೇಬಾರದು ಅಂದುಕೊಳ್ಳುತ್ತೇನೆ. ಈ ಕಣ್‌ಭಾರ, ತಲೆಭಾರ, ಎದೆಭಾರ, ಸಂ…ಸಾರ ಭಾರ ಎಲ್ಲ ಮಾತಿಗೂ ದಕ್ಕದವು. ‘ಕತ್ತೆನೂ ಭಾರ ಹೊರ್ತಂತೆ’ ಆಗಾಗ ಕೇಳೋ ಮಾತು. ಆ ಪ್ರಕಾರ ‘ಭಾರ ಹೊತ್ತೆ’ ಎನ್ನುವುದು ಕ್ರಿಯಾವಾಕ್ಯವೇ ಹೊರತು, ಅದರಲ್ಲಿ ಭಾವ ವಿಶೇಷಣಗಳ ಹುಡುಕುವುದು, ಹೇರುವುದು ಸದ್ಯದ  ಕಾಲಮಾನದಲ್ಲಂತೂ ನಿಷಿದ್ಧ. ಹಾಗಿದ್ದೂ ಹೊರುತ್ತೇವಲ್ಲ… ಮಾತಿನ ಭಾರ, ಮೌನದ ಭಾರ, ಕೂಡಿಟ್ಟಿದ್ದರ ಭಾರ, ಕಳೆದದ್ದರ ಭಾರ ಇತ್ಯಾದಿತ್ಯಾದಿ ಎಲ್ಲಾ ಸೇರಿ ‘ನಾನೂ ಭಾರ ಹೊರುತ್ತಿದ್ದೇನೆ’ ಅನ್ನುವ ಸಾಲನ್ನು ಹೇಳದ, ಹೇಳದಿದ್ದರೂ ಅಂದುಕೊಳ್ಳದ, ಅಂದುಕೊಳ್ಳದಿದ್ದರೂ ಅನುಭವಿಸದ ಯಾರಾದರೂ ಈಗ ಈ ಬರಹವನ್ನು ಓದುತ್ತಿದ್ದರೆ ಅವರ ಆಶೀರ್ವಾದ ನಮ್ಮುಳಿದವರ ಮೇಲೆ ಸದಾ ಇರಲಿ ಅಂತ ಆಶಿಸುತ್ತೇನೆ.

ಮಗನ ಶಾಲೆಯ ಬ್ಯಾಗು ಮಗಳ ಬ್ಯಾಗಿಗಿಂತ ಸಿಕ್ಕಾಪಟ್ಟೆ ಜಾಸ್ತಿ ಅಂತ ಓಡಿ ಮೊದಲಿಗೆ ನಾನವನ ಬ್ಯಾಗು ಹಿಡಿದುಕೊಳ್ಳುತ್ತೇನೆ, ಮಗಳ ಬ್ಯಾಗು ಸೈಝಿನಲ್ಲಿ ಚಿಕ್ಕದೇ. ಆದರೆ, ಅವಳ ವಯಸ್ಸಿಗೆ ಅದು ಹೆಚ್ಚಾಯಿತಾ-ಕಡಿಮೆಯಾಯಿತಾ ಅಥವಾ ಅವಳು ಹೊರುವಷ್ಟಿದೆಯಾ ಅಂತ ಗಮನಹರಿಸದ ಮೇಲೆ ನಾನು ‘ಭಾರ’ದ ಸಮೀಕರಣವನ್ನು ಕೂತು ಬಿಡಿಸುವಷ್ಟು ಲಾಯಕ್ಕಿನವಳಾ ಅಂತ ಮುಜುಗರ. ತೂಕದಲ್ಲಿ ‘ತೂಗುವ ಬಟ್ಟು’ ‘ತೂಗಿಸಿಕೊಳ್ಳುವ ತಟ್ಟೆ’ಗೆ ಸಹನೀಯವಾಗಿರಬೇಕು ಅನ್ನುವುದನ್ನು ನಾನಂತಲ್ಲ, ಬಹಳಷ್ಟೂ ಸಲ ನೀವೂ ಯೋಚಿಸಿರಲಿಕ್ಕಿಲ್ಲ. ನಮ್ಮ ನಮ್ಮ ತಟ್ಟೆಗಳಿಗೂ ಮೀರಿ ಬಟ್ಟು ಜೋಡಿಸಿಟ್ಟಿರುವುದಕ್ಕೇ ಅಸಹನೀಯ ಸಂಕಟಗಳಿವೆ ನಮಗೆ.

ಊರಿನಲ್ಲಿ, ಮನೆಯ ಹಿಂಬದಿಯ ಜಗುಲಿಯಲ್ಲಿ ಕೂತರೆ ಪಕ್ಕದ ಹಟ್ಟಿಯಲ್ಲಿ ಕೋಳಿಗಳು ಕತ್ತು ಕೊಂಕಿಸುತ್ತಾ ಮಣ್ಣಮಧ್ಯೆ ಆದಾದು ತಿನ್ನುವುದು ಕಾಣಿಸುತ್ತಿತ್ತು. ಅವು ಹಾಗೆ ತಮ್ಮ ಪಾಡಿಗೆ ಓಡಾಡಿಕೊಂಡಿರುವಾಗ ರಾಜಾಹುಲಿ ನಾಯಿ ಅಟ್ಟಿಸಿಕೊಂಡು ಬಂದರೆ ಒಂದೆರೆಡು ರೆಕ್ಕೆ ಬಡಿದು ಮೇಲೋಗಿ ಮತ್ತೆ ಕೆಳಕ್ಕಿಳಿಯುತ್ತಿದ್ದವು. ‘ಪಾರ್ವತಮ್ಮನ ಬೆಟ್ಟದಲ್ಲಿ ಬೇಕಾದಷ್ಟು ನವಿಲುಗರಿ ಸಿಗತ್ತಲ್ಲ.. ಅಣ್ಣಾ, ಒಂದ್ ನವಿಲ್ನೇ ಹಿಡ್ಕಬಾರೋ.. ಅವ್ ಹಾರೋಗ್ತವಾ’ ಅಂತ ಕೇಳಿದ್ದೆ. ಅಣ್ಣ ‘ಹಾರಲ್ವೇ ಅವು.. ಪುಣ್ಕುಪುಣ್ಕು ಅಂತ ಓಡೋಯ್ತವೆ’ ಅಂದಿದ್ದ. ರೆಕ್ಕೆ ಇದ್ರೂ ಇವೆಲ್ಲಾ ಯಾಕ್ ಎತ್ತರಕ್ಕೆ ಹಾರೋದಿಲ್ಲ ಅಂತ ಬಹುಶಃ ಆರೇಳನೇ ಕ್ಲಾಸಿನವರೆಗೂ ನನಗೆ ಗೊತ್ತಿರಲೇ ಇಲ್ಲ. ಆಮೇಲೆ ಗೊತ್ತಾದರೂ ಮತ್ತೆ ಮೊನ್ನೆ ಮೊನ್ನೆಯವರೆಗೂ ನಾನದನ್ನ ಸಂಪೂರ್ಣ ಮರೆತೇಬಿಟ್ಟಿದ್ದೆ. ‘ಭಾರ’ – ನಾವು ನಮ್ಮ ಕಾಲಿಗೆ ಕಟ್ಟಿಕೊಂಡಿರುವ ಭಾರ, ಮೈತುಂಬಾ ಹೊದ್ದುಕೊಂಡಿರುವ ಭಾರ, ತಲೆತುಂಬಾ ಸುತ್ತಿಕೊಂಡಿರುವ ಭಾರ, ಎದೆತುಂಬಾ ಹಚ್ಚಿಕೊಂಡಿರುವ ಭಾರ ಇವೆಲ್ಲಾ ನಮ್ಮನ್ನೂ ಆ ಕೋಳಿ-ನವಿಲಿನ ಹಾಗೆ ಎತ್ತರಕ್ಕೆ ಹಾರಲು ಬಿಡುವುದಿಲ್ಲ ಅಂತ ಈಗ ಮತ್ತೊಮ್ಮೆ ನೆನಪಾಯಿತು.

ಫೋಟೋ : ಡಾ. ಲೀಲಾ ಅಪ್ಪಾಜಿ

ಹಾರುವುದು ಎಷ್ಟೊಂದು ಸುಂದರವಾದ ಕಲ್ಪನೆ. ಆದರೆ ಹಾರುವುದಕ್ಕೆ ರೆಕ್ಕೆಯಷ್ಟೇ ಮುಖ್ಯವಾಗುವುದು ಹಗುರಾಗಿರುವುದಲ್ಲವಾ? ಜಗತ್ತಿನ ಜಂಭರಗಳನ್ನೆಲ್ಲಾ ಎದೆಮೇಲೆ ಹೊತ್ತುಕೊಂಡು ಮಕಾಡೆಬಿದ್ದರೆ, ಹಾರುವುದಕ್ಕೆ ಎಷ್ಟು ದೊಡ್ಡರೆಕ್ಕೆ ಕಟ್ಟಿಕೊಟ್ಟರೂ ಸಾಲುವುದಿಲ್ಲ. ಭಾರಕ್ಕೇನೂ ಲಿಂಗಗಳಿಲ್ಲ ಅಂತ ನನಗೂ ಗೊತ್ತು. ಕಾಲಿಗೆ ಕಟ್ಟಿಬೀಳುವ ಕಲ್ಲುಗಳು ಯಾರಿಗಾದರೂ ಅಷ್ಟೇ ಭಾರ. ಭಯ, ಹಿಂಜರಿಕೆ, ಅಸಹನೆ, ಸಿಟ್ಟು, ಕೀಳರಿಮೆ, ಸೋಲು, ಗೆಲ್ಲುವ ಭಾರವೂ ಸೇರಿ ಎಲ್ಲವೂ ಎಲ್ಲರನ್ನೂ ಕಾಡುವವೇ. ಭಾರ – ಭಾರವೇ.. ಆದರೂ ಇಂಥ ಭಾರದ ಕತೆಯನ್ನು ನಾನೇ ಖುದ್ದು ಇಷ್ಟುದ್ದ ಹೇಳುವುದಕ್ಕೆ ಒಂದು ಕಾರಣ – ನಾನು ಬರೆಯಲು ಕೂತಿರುವ ಈ ಹೊತ್ತು ‘ಹೆಣ್ಣುಮಕ್ಕಳ ದಿನ’ ಅನುವುದಾರೆ, ನಿನ್ನೆ ನನ್ನ ಡಾಕ್ಟರ್ ‘ಎಷ್ಟು ಹಗುರಾಗ್ಬೇಕ್ರಿ ನೀವು’ ಅಂತ ನನಗೆ ಹೇಳಿದ್ದು ಇನ್ನೊಂದು ಕಾರಣ… ಕಾರಣ ನನ್ನವು ಅಂದಮೇಲೆ, ಕತೆಯೂ ನನ್ನದೇ ಆಗಬೇಕಲ್ಲ!

*

ಅಮ್ಮನ ಕನಸೇನಿತ್ತು ಅಂತ ನಾನು ಈವರೆಗೂ ಕೂತು ವಿಚಾರಿಸಲೇ ಇಲ್ಲ, ಅಷ್ಟರಮಟ್ಟಿಗೆ ಅಮ್ಮ ತನ್ನ ಭಾರದ ಜಂಭರಗಳಲ್ಲಿ ಮುಳುಗಿಹೋಗಿದ್ದನ್ನು ‘ಅವಳಿಷ್ಟವೇ ಇರಬೇಕು’ ಅಂತ ಅಂದುಕೊಂಡಿದ್ದೆ. ಈಗ ಮಗಳು ಅಮ್ಮಮ್ಮನ ತಬ್ಬಿಕೊಂಡು ಮಲಗುವುದು ‘ಅವಳಿಷ್ಟವೇ ಇರಬೇಕು’ ಅಂದುಕೊಂಡು ಸುಮ್ಮನಿದ್ದೇನೆ. ಇಷ್ಟಗಳು ಮತ್ತು ಅನಿವಾರ್ಯಗಳು ಒಂದೇ ತೆರನಾದ ಗೆರೆ ಎಳೆದುಕೊಂಡು ಜೊತೆಗಿರುವಾಗ ಯಾವುದು ಇಷ್ಟ, ಏನು ಅನಿವಾರ್ಯ ಅಂತ ಗುರುತಿಸುವುದು ಎಷ್ಟು ಕಷ್ಟ ಗೊತ್ತಾ? ಹಾಗಾಗಿಯೇ ಅಂತಹ ಗೆರೆಗಳು ಎಷ್ಟೇ ಸಮಾನಾಂತರವಾಗಿದ್ದರೂ ಅಲ್ಲಿಂದ ಏನೇನೂ ಟೇಕ್‌ಆಫ್ ಆಗದೇ ಎಲ್ಲಾ ಅಲ್ಲೇ ಉಳಿದುಬಿಟ್ಟಿರುತ್ತವೆ. ಮತ್ತು ಅಲ್ಲುಳಿಯುವ ಟೇಕ್‌ಆಫ್ ಆಗದ ಸಂಗತಿಗಳಲ್ಲಿ ನಾನೊಬ್ಬಳಿರುತ್ತೇನೆ.

ನಾನೆಂದರೆ ನನ್ನಂತಹ ಸುಮಾರಿನ ಹಲವು ಹೆಣ್ಣೈಕಳು, ಹೆಂಗಸರು – ಎಲ್ಲರ ಕೆಲಸದ ಭಾರಗಳು, ಜವಾಬ್ದಾರಿಯ ಭಾರಗಳ ಬಗ್ಗೆ ಬರೆದರೆ ನಿಮಗೆ ಓದಿದ್ದನ್ನೇ ಓದಿದಂತಾಗುತ್ತದೆ ಅಂತ ಗೊತ್ತು ನನಗೆ. ಪುರಾಣ-ಇತಿಹಾಸ-ವರ್ತಮಾನ ಎಲ್ಲದರಲ್ಲೂ ಜವಾಬ್ದಾರಿಯುತವಾಗಿರುವುದು, ಆಗಿರಬೇಕಾದ್ದು (!) ಮೊದಲಿಂದಲೂ ನಾವೇ ಆಗಿರುವುದರಿಂದ; ಅವೆಲ್ಲಾ ಅನುಭಾವಗಳು ನಮ್ಮನ್ನು ಎಷ್ಟು ಹುರಿಗೊಳಿಸಿಟ್ಟಿದ್ದಾವೆಂದರೆ ಅವವೇ ಜವಾಬ್ದಾರಿಯ ಭಾರಗಳ ಜೊತೆಗೂ ನಾವು ಆಗೀಗ ಕೋಳಿಯಷ್ಟೋ-ನವಿಲಿನಷ್ಟೋ ಎತ್ತರಕ್ಕೆ ಹಾರಾರಿ ಮುಟ್ಟಬೇಕಾದ್ದನ್ನು ಮುಟ್ಟುವ ಪ್ರಯತ್ನದಲ್ಲಿ ನಿರಂತರ… ನಿರತರಾಗಿರುತ್ತೇವೆ. ಆದರೆ ಕೆಲವು ಭಾರಗಳಿರುತ್ತವೆ, ನಮ್ಮನ್ನು ಅಷ್ಟಕ್ಕೂ ಅವಕಾಶ ಮಾಡಿಕೊಡದಂತೆ ಕಾಡುತ್ತವೆ. ಅದು – ಜವಾಬ್ದಾರಿಯನ್ನು ತಪ್ಪಿಸಿಕೊಂಡೆವೇನೋ ಅನ್ನುವ ‘ಗಿಲ್ಟ್’ನ ಭಾರ. ಹೌದು, ಗಿಲ್ಟ್ ! ಬಹಳಷ್ಟು ಕಾಡಿರುತ್ತದೆ, ಬಹಳಷ್ಟು ಜನರಿಗೆ ಕಾಡಿರುತ್ತದೆ, ಹಾಗೇ ನನಗೂ…

ರಾತ್ರಿ ನಿದ್ದೆಗೆಟ್ಟು ಓದಿ-ಬರೆಯುವಾಗ ನೆನಪಾಗದ ಮಕ್ಕಳು ಬೆಳಗ್ಗೆ ಕ್ಯಾಂಪಸ್ಸಿನಲ್ಲಿ ಸ್ಟೂಡೆಂಟ್ ಒಬ್ಬ ಮಾಡಿದ ಜೋಕಿಗೆ ಮನಸಾರೆ ನಗಬೇಕೆನಿಸಿದಾಗ ನೆನಪಾಗುತ್ತಾರೆ. ಮಾಡಿಕೊಳ್ಳಲಾಗದ ಸಂಕಟಕ್ಕೆ (ದೇವರಾಣೆ ಡಯಟ್ ಅಂತೂ ಅಲ್ಲ) ರೂಮ್‌ಮೇಟ್ ಜೊತೆ ರಾಗಿ ಅಂಬಲಿ ಕುಡಿದು ಚಪ್ಪರಿಸುವಾಗ ನೆನಪಾಗದ ಗಂಡನ ಊಟ-ತಿಂಡಿ ಯಾರಾದರೂ ಕ್ಯಾಂಟೀನಿನಲ್ಲಿ ಚಾ-ಮಿರ್ಚಿ ಅಂತ ಕರೆದಾಗ ಪಟಕ್ಕನೆ ನೆನಪಾಗುತ್ತದೆ. ಭರ್ತಿ ಕೆಲಸ ಮಾಡುತ್ತಾ ಲ್ಯಾಪ್‌ಟಾಪ್ ಕುಟ್ಟುತ್ತಿರುವಾಗ ಮಕ್ಕಳು ಓದಿದರೋ, ಹೋಮ್‌ವರ್ಕ್ ಬರೆದರೋ ಅನ್ನುವುದು ಕಾಡುವುದೇ ಇಲ್ಲ, ಅದೇ ಯೂಟ್ಯೂಬಿನಲ್ಲಿ ಸೀರಿಯಲ್‌ನ ಐದೈದು ನಿಮಿಷದ ಎಪಿಸೋಡ್ ನೋಡುವಾಗ ಥಟಕ್ಕನೇ ಹಿಂಸೆಕೊಡುತ್ತದೆ. ‘ನಾವು ಖುಷಿಯಾಗಿಲ್ಲದೇ ಯಾರನ್ನೂ ಖುಷಿಯಾಗಿಡಲು ಸಾಧ್ಯವಿಲ್ಲ’ ಅನ್ನುವುದನ್ನು ಗೆಳತಿಯೊಟ್ಟಿಗೆ ಕೂತು ಗಂಟೆಗಟ್ಟಲೆ ಚರ್ಚೆ ಮಾಡಿಯೂ ನಾವು ಖುಷಿಯಾಗಿರುವುದೇ ಮಹಾಪಾಪ ಅನ್ನುವಂತಾದಾಗ ಖುಷಿಯೇ ಭಾರವಾಗುತ್ತದಲ್ಲಾ. ಆಗ ಹಗುರಾಗುವುದು ಹೇಗೆ? ಹಾರುವುದು ಹೇಗೆ?

ಫೋಟೋ : ಡಾ. ಲೀಲಾ ಅಪ್ಪಾಜಿ

ತಿಂಗಳ ಸುಮಾರೊಪ್ಪತ್ತು ದಿನಗಳು ‘ಮನೆಯಿಂದ ಮಕ್ಕಳಿಂದ ದೂರವೇ ಇರುವ ನಾನು’; ‘ನನ್ನಿಂದ ಗಂಡ-ಮಕ್ಕಳು ದೂರವಿದ್ದಾರೆ’ ಅನ್ನುವಂತೆ ವಾಕ್ಯ ಬದಲಿಸಿ ಹೇಳಿದರೆ ಯಾರು ಕೇಳುತ್ತಾರೆ? ಒಂದೊಂದೇ ಪುಕ್ಕಕಟ್ಟಿ ರೆಕ್ಕೆ ಮಾಡಿ, ಎಷ್ಟೊಂದು ಹಾದಿ ಸವೆಸಿ ಕಾಲು ತೆಳ್ಳಗಾಗಿಸಿಕೊಂಡು ಇನ್ನೇನು ಉದ್ದನೆ ದಾರಿಗೆ ಹಾರಿಕೊಳ್ಳಬೇಕೆಂದಿರುವಾಗ ತಟಕ್ಕನೇ ಕಾಲಿಗಂಟಿಕೊಳ್ಳುವ ಭಾರವಿರುತ್ತದಲ್ಲಾ… ಅದೇ ನಾವು ಏನನ್ನೋ ತಪ್ಪಿಸಿಬಿಟ್ಟೆವಾ ಅನ್ನುವ ತಪ್ಪಿತಸ್ಥ ಭಾವನೆ. ಜಗತ್ತಿನ ಪರಮೋಚ್ಛ ವೃತ್ತಿಯಲ್ಲಿದ್ದರೂ ಮನೆ ಅನ್ನುವುದೇ ನಿಜವಾದ ಕರ್ಮಭೂಮಿ ಅಂದುಕೊಳ್ಳುವುದನ್ನು ನಿರಾಕರಿಸಲಾಗದೆ ಒದ್ದಾಡುವ ಎಷ್ಟೊಬ್ಬರಿಗೆ ಮನೆ-ಗಂಡ-ಮಕ್ಕಳು ಅಂದರೇನೇ ಜಗತ್ತು. ನನ್ನ ಪಾಲಿಗೂ ಅದೇ ಜಗತ್ತು ಅಂತ ಆಗಿಹೋಗಿರುವಾಗಲೂ ಆಗಾಗ ಸಾಬೀತು ಮಾಡಬೇಕಾದ, ಮಾಡಿಕೊಳ್ಳಬೇಕಾದ ಪರಿಸ್ಥಿತಿಗಳೂ ಬರುತ್ತವಲ್ಲಾ ಅವು ನಮ್ಮ ‘ಛಲಾಂಗ್’ನ್ನು ಅಲ್ಲಿಂದಲ್ಲಿಗೇ ನೆಲಮುಟ್ಟಿಸುತ್ತವೆ.

‘ಅವ್ನ್ತಾನೇ ಏನ್‌ಮಾಡ್ತಾನೆ ಊಟ-ತಿಂಡಿ ಸರಿಹೋಗ್ತಿಲ್ಲ?’ ‘ಇಲ್‌ಬಂದ್ ನೋಡಿ ಮೇಡಮ್, ಸರ್ ಹೆಂಗಾಗಿದಾರೆ ಅಂತ’, ‘ಪಾಪ ಮಗಾ, ಅಮ್‌ನಿಂದ ದೂರ ಇದ್ಯಲ್ಲ ಅದ್ಕೆ ಹಿಂಗಾಗಿದೆ’ ‘ಮಕ್ಕಳನ್ನ ಅಟ್‌ಲೀಸ್ಟ್ ಫೋರ್ಥ್ ಸ್ಟಾಂಡರ್ಡ್ ತನಕನಾದ್ರೂ ಹೆಚ್ಚಿಗೆ ಕೇರ್ ಮಾಡ್ಬೇಕು’ ಹೀಗೇ ಎಲ್ಲವೂ ಅತ್ಯಂತ ಬೇಕಾದವರ ಅತ್ಯಂತ ಕಾಳಜಿಯ ಮಾತುಗಳೇ! ಆದರೂ ಏನು ಮಾಡಬೇಕೋ ಅದನ್ನ ಮಾಡುತ್ತಿರುವಾಗಲೂ ಚಡಪಡಿಸುವಂತೆ ಮಾಡಿಬಿಡುತ್ತವೆ. ಅದೆಲ್ಲಕ್ಕಿಂದ ಮಿಗಿಲಾಗಿ ‘ನೀನ್ ಬಿಡೇ…’ ‘ನಿಂದೇ ಆರಾಮು’ ಮಾತುಗಳಿರುತ್ತವಲ್ಲಾ, ಯಾರೋ ಚಂದಗೆ ಖಾರಹಚ್ಚಿದ ಚಾಕುವಿನಿಂದ ಬೆರಳ ತುದಿಗೆ ಗೀರಿದಂತೆ!

ಇವಿಷ್ಟು ನನಗೆ ಕೇಳಸಿಗುವ ಡೈಲಾಗ್‌ಗಳು… ನಿಮಗೆ ಕೇಳಿಸುವುವು ಬೇರೆಯೇ ಇರುತ್ತವೆ. ಆದರೆ ಖಂಡಿತವಾಗಿಯೂ ಇದ್ದೇ ಇರುತ್ತವೆ! ಇನ್‌ಬಿಲ್ಟ್ ಡಿಜಿಟಲ್ ಗಡಿಯಾರವೊಂದು ನಮ್ಮೆದೆಯೊಳಗೆ ಟಿಕ್ಕು-ಟಿಕ್ಕು ಅನ್ನುತ್ತಲೇ ಆಗಾಗ ಎಚ್ಚರಿಕೆಯ ಅಲಾರ್ಮ್ ಖುದ್ದು ಬಾರಿಸುತ್ತಿರುತ್ತದೆ ಅನ್ನುವುದನ್ನು ಗೊತ್ತಿದ್ದೂ… ಗೊತ್ತಿಲ್ಲದೆಯೂ ಕೆದಕುವ ಅಂತಹ ಡೈಲಾಗ್‌ಗಳು ಎಷ್ಟೋ ಬಾರಿ ತಲ್ಲಣಿಸುವಂತೆ ಮಾಡಿಬಿಡುತ್ತವೆ.

“ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ, ಸಿಕ್ಕದ್ದನ್ನ ತಿನ್ನಿ, ಎಷ್ಟಾಗತ್ತೋ ಅಷ್ಟು ಟೆನ್ಷನ್ ಕಡಿಮೆ ಮಾಡ್ಕೊಳಿ. ಮೈ ಭಾರದ ಬಗ್ಗೆ ಯೋಚ್ನೆ ಮಾಡ್ಬೇಡಿ… ಮನಸ್ಸಿಂದ ಹಗುರಾಗೀ… ಹಗುರಾದಷ್ಟು ಎತ್ತರಕ್ಕೆ ಹಾರ‍್ತೀರಾ” ಅಂತ ಡಾಕ್ಟರ್ ಕಣ್ಣುನೋವಿಗೆ ತರ್ಪಣ ಚಿಕಿತ್ಸೆ ಬರೆದುಕೊಡುತ್ತಾ ಹೇಳಿದರು. ಇಗ್ನೋರೆನ್ಸ್ ತಡೆದುಕೊಳ್ಳೋದು-ಗಿಲ್ಟ್ ಹೊತ್ತುಕೊಳ್ಳೋದು ಎಷ್ಟು ಕಷ್ಟ ಅಂತ ಅವರಿಗೆ ಅವರ ಹೆಂಡತಿಯ ಹೆಸರೆತ್ತಿ ಏನೋ ವಿವರಿಸಲು ನೋಡಿದೆ. ನಗುತ್ತಲೇ ‘ಅವಳ್ನ ಎಳಿಬೇಡ್ರಿ’ ಅಂದದ್ದು ನನಗೆ ‘ಟಾಂಟ್’ನಂತೆಯೇ ಕೇಳಿಸಿತು. ‘ನೀವು ತುಂಬಾ ತಿಳ್ಕೊಂಡಿದಿರಿ ಅದೇ ಪ್ರಾಬ್ಲಂ, ಸಮಸ್ಯೆಗಳನ್ನ ಮೈಮೇಲೆ ಎಳ್ಕೊಬೇಡಿ’ ಅಂದಾಗ ಅವರ ಜೊತೆ ನನ್ನ ಯಜಮಾನನೂ ಜೋರಾಗಿ ನಕ್ಕ. ಈಗ ಹೊಸಾತರಹದ ಗಿಲ್ಟ್!

ಫೋಟೋ : ಡಾ. ಲೀಲಾ ಅಪ್ಪಾಜಿ

ಹಗುರಾದರೆ ಹಾರಬಲ್ಲೆವು ಅಂತ ಅಂದುಕೊಳ್ಳುವಾಗಲೇ ಹಗುರಾಗಿದ್ದರೆ ತರಗೆಲೆಳಂತೆ ಹಾರಿಹೋಗುತ್ತೇವೇನೋ ಅಂದುಕೊಳ್ಳುವ ಭಯವೂ ಇದ್ದೇ ಇರುತ್ತದಲ್ಲ, ಅದನ್ನ ಯಾರಿಗಾದರೂ ಅರ್ಥ ಮಾಡಿಸುವುದು ಕಷ್ಟ. ಆದರೂ ಈ ಅರ್ಥವಾಗದ ಭಾರ ಮತ್ತೆ ಮೈ ಹತ್ತಿಸಿಕೊಂಡರೆ ಹಾರುವುದಾದರೂ ಹೇಗೆ? ಅಲ್ಲವಾ… ಭಾರಗಳನ್ನು ಇಳಿಸಿಕೊಳ್ಳುವುದಕ್ಕೆ ಏನಾದರೂ ಡ್ರಿಲ್ ಮಾಡಲೇಬೇಕಲ್ಲ… ಅಮಾರೈಟ್ !

ಲೆಟ್ಸ್ ಟ್ರೈ…

ಹಿಂದಿನ ಬಿಲ್ಲೆ : Hopscotch : ಅಮಾರೈಟ್ ; ಮಾತನಾಡಬೇಕಾ ಅಂಟು ಬಿಟ್ಟಿರುವ ‘ಸೋಲ್‘ ಮತ್ತು ಡಿಸೈನರ್ ದೇಹವನ್ನು ಅಂಟಿಸುವ ಬಗ್ಗೆ