Theatre: ಅಂಕಪರದೆ; ಭಿಕ್ಷಾಟನೆಯಿಂದ ಹೋರಾಟದವರೆಗೆ, ಇದು ‘ಅಕ್ಕಯ್’ ನಡೆದ ಹಾದಿ
Transgenders and Theatre : ‘ಅಕ್ಕಯ್ ನಮ್ಮ ಕಾಲದ ಬಹುಮುಖ್ಯ ಲೈಂಗಿಕ ಅಲ್ಪಸಂಖ್ಯಾತೆ. ಅವರ ಆತ್ಮಕಥನ ಪ್ರಕಟವಾಗುವ ಮೊದಲು ಅಕ್ಕಯ್, ಒಬಾಮಾರೊಂದಿಗೆ ಮಾತನಾಡಿದ ಮಾತುಗಳು ನಾಟಕ ನಿರ್ದೇಶಿಸಲು ಪ್ರೇರೇಪಿಸಿದವು.‘ ಡಾ. ಬೇಲೂರು ರಘುನಂದನ
ಅಂಕಪರದೆ | Ankaparade : ಭೂಮಿ ಮತ್ತು ರಕ್ತವರ್ಣೆ ನಾಟಕಗಳಲ್ಲಿ ಹಿಜ್ರಾ ಸಮುದಾಯ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಭಾವನೆಗಳನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದೇನೆ. ಅಲ್ಲಿಂದ ಇಲ್ಲಿಯ ತನಕ ಅಗತ್ಯಬಿದ್ದಾಗಲೆಲ್ಲಾ ನನ್ನ ರಂಗಭೂಮಿಯ ಪ್ರಯಾಣದಲ್ಲಿ ಟ್ರಾನ್ಸ್ಜೆಂಡರ್ ಕುರಿತಾದ ಆಯಾಮಗಳನ್ನು ನಾಟಕರೂಪದಲ್ಲಿ ವಸ್ತು ಮತ್ತು ವಿನ್ಯಾಸಕ್ಕನುಗುಣವಾಗಿ ತಂದಿದ್ದೇನೆ. ಸಾಮಾಜಿಕ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರ ಜೀವನಾಧಾರಿತ ಕಥನವನ್ನು ರಂಗಕ್ಕೆ ಪ್ರಸ್ತುತ ಅಳವಡಿಸಿದ್ದೇನೆ. ಕಾಜಾಣ ಮತ್ತು ರಂಗಪಯಣ ಎರಡೂ ರಂಗತಂಡಗಳು ಒಟ್ಟಾಗಿ ಸೇರಿ ಅಕ್ಕಯ್ ಏಕವ್ಯಕ್ತಿ ನಾಟಕವನ್ನು ಮುಂತೆಗೆದುಕೊಂಡು ಹೋಗುತ್ತಿದೆ. ಅಕ್ಕಯ್ ಪಾತ್ರವನ್ನು ಈಗಾಗಲೇ ರಂಗಭೂಮಿಯಲ್ಲಿ ಒಂದಷ್ಟು ಮಹತ್ವದ ಕೆಲಸಗಳನ್ನು ಮಾಡಿರುವ ಕಲಾವಿದೆ ನಯನ ಸೂಡ ಅನುಭವಿಸಿ ಅಭಿನಯಿಸುತ್ತಿದ್ದಾರೆ. ಡಾ. ಬೇಲೂರು ರಘುನಂದನ, ಕವಿ, ನಾಟಕಕಾರ (Dr. Beluru Ragunandhana)
*
(ಭಾಗ 1)
ಅಕ್ಕಯ್ ನಮ್ಮ ಕಾಲದ ಬಹಳ ಮುಖ್ಯಳಾದ ಲೈಂಗಿಕ ಅಲ್ಪಸಂಖ್ಯಾತ ಹೆಣ್ಣುಮಗಳು. ಅಕ್ಕಯ್ ಕುರಿತಾದ ನಾಟಕ ಮತ್ತು ಪುಸ್ತಕ ಬರುವ ಮೊದಲು ಅಕ್ಕಯ್ ಅವರು ಒಬಾಮಾ ಅವರ ಜೊತೆ ಮಾತನಾಡಿದ ಮಾತುಗಳು ನನ್ನನ್ನು ನಾಟಕ ಮಾಡಲು ಪ್ರೇರೇಪಿಸಿತು. ಈ ಪ್ರೇರೇಪಣೆಗೆ ಸಕಲವೂ ಒದಗಿ ಬಂದಂತೆ ಅವರ ಆತ್ಮಕಥೆಯೂ ದೊರಕಿತು. ಎರಡೂ ತಂಡಗಳು ಸೇರಿ ಅಕ್ಕಯ್ ಎನ್ನುವ ಜಗತ್ತನ್ನು ಕನ್ನಡ ರಂಗಭೂಮಿಯ ಮುಂದೆ ತಂದು ನಿಲ್ಲಿಸುವ ಪ್ರಯತ್ನ ಮಾಡಿದೆ.
ಸುಮಾರು ಒಂದು ತಿಂಗಳ ಕಾಲ ನಾಟಕದ ತಾಲೀಮು ಮುಗಿದಿದ್ದು, ಈಗ ಅಂದರೆ ಮಾರ್ಚ್ ಆರನೇ ತಾರೀಕು ರವೀಂದ್ರ ಕಲಾಕ್ಷೇತ್ರದಲ್ಲಿ “ಅಕ್ಕಯ್” ಹೋರಾಟದ ಬದುಕನ್ನು ಅನಾವರಣ ಮಾಡಲು ಎರಡೂ ತಂಡಗಳು ಸಿದ್ಧವಾಗಿವೆ. ನಾಟಕ ರಚನೆ, ನಾಟಕದ ಪ್ರಯೋಗ ಮತ್ತು ಫಲಿತಾಂಶಗಳಿಗಿಂತ ರಂಗಕೃತಿ, ಕಲಾವಿದರು, ನಾಟಕದ ತಾಲೀಮು ಮುಂತಾದ ತಾಂತ್ರಿಕ ಅಂಶಗಳ ಜೊತೆಗೆ ಮೂಡುವ ಒಡನಾಟದ ಪ್ರಕ್ರಿಯೆಯಲ್ಲಿ ನನಗೆ ನಂಬಿಕೆ ಮತ್ತು ಆಸಕ್ತಿ ಹೆಚ್ಚು. ಈ ಅರ್ಥದಲ್ಲಿ ಅಕ್ಕಯ್ ಪಾತ್ರವನ್ನು ನಯನ ಸೂಡ ಬಹಳ ಬದ್ಧತೆಯಿಂದ ಅಭಿನಯಿಸಲು ಸಿದ್ಧರಾಗಿದ್ದಾರೆ.
ಬೇಲೂರು ರಘುನಂದನ ಕವಿತೆಗಳನ್ನೂ ಓದಿ : Poetry : ಅವಿತಕವಿತೆ ; ‘ಸೋಲು ಗೆಲುವಿಲ್ಲದ ಪಂದ್ಯದಿಂದ ಹುಟ್ಟಿದವ ನೀನು ಮತ್ತೆ ಮತ್ತೆ ಪಂದ್ಯ ಕಟ್ಟುತ್ತೀ’
ಟ್ರಾನ್ಸ್ಜೆಂಡರ್ ವಿಷಯವನ್ನು ಆಧರಿಸಿ ಟ್ರಅನ್ಸ್ಜೆಂಡರೇ ಅಥವಾ ಪುರುಷರು ನಾಟಕ ಮಾಡುವ ಉದಾಹರಣೆಗಳು ಇವೆ. ಆದರೆ ಅಕ್ಕಯ್ ನಾಟಕದಲ್ಲಿ ಹೆಣ್ಣಾಗುವ ಸಂಭ್ರಮ ಮತ್ತು ಅದರ ವೈಭವೀಕರಣದ ಆಚೆಗೆ ಮಹಿಳೆಯೊಬ್ಬಳು ಪಾತ್ರವಾಗಿ ಅಭಿವ್ಯಕ್ತಿಸುತ್ತಿರುವುದು ಪ್ರಶಂಸನೀಯ. ರಂಗ ಭಾಷೆಗೆ ಸೂಕ್ತವಾದ ರಂಗಸಂಗೀತವನ್ನು ರಾಜಗುರು ಹೊಸಕೋಟೆ ಅವರು ಮಾಡಿದ್ದಾರೆ. ಇನ್ನುಳಿದಂತೆ ಎರಡೂ ತಂಡದ ಯುವ ಮನಸ್ಸುಗಳು ಸೇರಿ ನಾಟಕವನ್ನು ಸಮರ್ಥವಾಗಿ ತರಲು ರಂಗದ ಹಿಂದೆ ಕೆಲಸ ಮಾಡುತ್ತಿದ್ದಾರೆ.
ಅಕ್ಕಯ್ ಕೃತಿಯನ್ನು ರಂಗರೂಪಕ್ಕೆ ತಂದದ್ದು, ಅಲ್ಲಿನ ಸಂಕೀರ್ಣತೆಗಳನ್ನು ದೃಶ್ಯವಾಗಿಸಿದ್ದು, ಆ ದೃಶ್ಯಕ್ಕೆ ಬೇಕಾದ ರಂಗ ಸಾಧ್ಯತೆಗಳನ್ನು ಎಲ್ಲ ರೀತಿಯಲ್ಲಿ ದುಡಿಸಿಕೊಂಡಿದ್ದು ನನಗೊಂದು ರೀತಿಯ ಶೈಕ್ಷಣಿಕ ಪಠ್ಯ. ಸಾಹಿತ್ಯ, ಸಮಾಜ ಮತ್ತು ರಂಗಪಠ್ಯಗಳನ್ನು ಒಟ್ಟಾಗಿ ಬೆಸೆಯುತ್ತಾ ಅದರಿಂದ ಹುಟ್ಟುವ ಸೃಜನಶೀಲ ಕಲಾಭಿವ್ಯಕ್ತಿಯನ್ನು ಪ್ರೇಕ್ಷಕರ ಮುಂದೆ ಇಡುವ ತನಕ ಪ್ರೀತಿ, ಬದ್ಧತೆ, ಸಂಘರ್ಷ ಹಾಗೂ ಜವಾಬ್ದಾರಿಗಳು ನನ್ನನ್ನೂ ಒಳಗೊಂಡಂತೆ ಇಡೀ ತಂಡಕ್ಕೆ ಅತ್ಯಂತ ಸಕಾರಾತ್ಮಕ ಪರಿಣಾಮವನ್ನು ಬೀರಿದೆ. ಸಾಮಾಜಿಕ ಘನತೆ ಮತ್ತು ಸಮಾನತೆಯ ಕನಸುಗಳನ್ನು ಅಕ್ಕಯ್ ನಾಟಕ ಅತ್ಯಂತ ಸಮರ್ಥವಾಗಿ ನಿರೂಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಅಕ್ಕಯ್ ಹೆಣ್ಣು, ಹೆಣ್ತನ ಸಕಲ ರೀತಿಯಲ್ಲೂ ನಾಯಕಿಯಾಗಲು ಇರಬೇಕಾದ ಬಹುದೊಡ್ಡ ವಿಸ್ತಾರವನ್ನು ಪಡೆದುಕೊಂಡಿದೆ ಎಂದು ಸ್ಪಷ್ಟ ಪಡಿಸುತ್ತಲೆ ಪ್ರತೀ. ಹೆಣ್ಣು, ಹೆಣ್ತನ ಲಿಂಗತ್ವವನ್ನು ಮೀರಿ ನಾಯಕಿಯಾಗಲು ಸರ್ವತಾಸಮರ್ಥ ಎಂದು ಸಾಬೀತು ಪಡಿಸುತ್ತದೆ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಇದನ್ನೂ ಓದಿ : Play: ಅಂಕಪರದೆ; ಎಂಎಸ್ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ಇಂದು ಮೈಸೂರಿನ ‘ನಟನ’ಕ್ಕೆ ಬನ್ನಿ
Published On - 2:51 pm, Sat, 26 February 22