Theatre: ಅಂಕಪರದೆ; ‘ಸಮಷ್ಟಿ’ ಯಿಂದ ‘ ಮಿಸ್ ಸದಾರಮೆ’ ನಾಟಕದ 50ನೇ ಪ್ರಯೋಗ ರಂಗಶಂಕರದಲ್ಲಿ

| Updated By: ಶ್ರೀದೇವಿ ಕಳಸದ

Updated on: Mar 10, 2022 | 3:39 PM

Kannada Play Sadaarame : ಈ ನಾಟಕದಲ್ಲಿ ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ.

Theatre: ಅಂಕಪರದೆ; ‘ಸಮಷ್ಟಿ’ ಯಿಂದ ‘ ಮಿಸ್ ಸದಾರಮೆ’ ನಾಟಕದ 50ನೇ ಪ್ರಯೋಗ ರಂಗಶಂಕರದಲ್ಲಿ
‘ಮಿಸ್ ಸದಾರಮೆ‘
Follow us on

ಅಂಕಪರದೆ | Ankaparade : ಮಿಸ್. ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ಮೂಲನಾಟಕ “ಸದಾರಮಾ ನಾಟಕಂ” ನ ಪರಿಷ್ಕೃತ ಆವೃತ್ತಿ. ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ಧವಾಗಿದೆ. ನಂತರ ಇದನ್ನು ಕೆ.ವಿ. ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ “ಮಿಸ್. ಸದಾರಮೆ” (Miss Sadarame) ಎಂದು ಹೆಸರಿಸಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ. ಇದೇ 12ರಂದು ರಂಗಶಂಕರದಲ್ಲಿ ಬೆಂಗಳೂರಿನ ಸಮಷ್ಟಿ ರಂಗತಂಡದಿಂದ ನಿರ್ದೇಶಕ ಮಂಜುನಾಥ ಎಲ್. ಬಡಿಗೇರ್ ನಿರ್ದೇಶನದಲ್ಲಿ 49 ಮತ್ತು 50 ಪ್ರಯೋಗಗಳು ಪ್ರದರ್ಶನಗೊಳ್ಳಲಿವೆ.

ಈ ನಾಟಕದಲ್ಲಿ ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಗೊಬ್ಬರು ಅಗಲಿ, ಮುಗ್ದೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.

ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕತೆಗೆ ಹೊಸ ವ್ಯಾಖ್ಯಾನವನ್ನು ನಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಇದನ್ನೂ ಓದಿ : Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್​ಸಿಂತ್’ ನಾಟಕ

ಈ ನಾಟಕದ ನಿರ್ದೇಶಕರು ಮಂಜುನಾಥ್ ಎಲ್. ಬಡಿಗೇರ. ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರಾದ ಇವರು ಪ್ರಸ್ತುತ ಬೆಂಗಳೂರಿನ ‘ಸಮಷ್ಟಿ’ ತಂಡದಲ್ಲಿ ನಟರಾಗಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಇವರು ಹರಿಣಾಭಿಸರಣ, ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕಥನ, ಸಾಫಲ್ಯ, ಪರಿತ್ಯಕ್ತ, ಕೈದಿ, ಪ್ರಮೀಳಾರ್ಜುನೀಯಂ, ಚಿತ್ರಪಟ ರಾಮಾಯಣ, ಸಂಗ್ಯಾಬಾಳ್ಯಾ, ಮುದಿದೊರೆ ಮತ್ತು ಮೂರು ಮಕ್ಕಳು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ನಾಟಕಗಳು- ಆಷಾಡದ ಒಂದು ದಿನ, ಸಾಂಬಶಿವ ಪ್ರಹಸನ, ನವಿಲು ನಿಂತಾವ, ಕಾರ್ಮುಗಿಲ ಮಿಂಚು, ಜಾತಕರಿಂಗಣ, ಊರುಭಂಗ, ಮಿಸ್. ಸದಾರಮೆ, ಅವಸ್ಥೆ, ಮೊದಲಗಿತ್ತಿ, ಅಮನಿ, ಹರಿಣಾಭಿಸರಣ, ಸಾಫಲ್ಯ, ಶಾಂಡಿಲ್ಯ ಪ್ರಹಸನ ಮುಂತಾದವು.

ನಾಟಕ : ಮಿಸ್ ಸದಾರಮೆ
ತಂಡ : ಸಮಷ್ಟಿ ರಂಗತಂಡ, ಬೆಂಗಳೂರು
ನಿರ್ದೇಶನ : ಮಂಜುನಾಥ ಎಲ್. ಬಡಿಗೇರ
ಪ್ರದರ್ಶನ : ಮಾರ್ಚ್ 12,
ಸ್ಥಳ : ರಂಗಶಂಕರ, ಜೆಪಿ ನಗರ, ಬೆಂಗಳೂರು
ಸಮಯ : ಮಧ್ಯಾಹ್ನ 3.30 ಮತ್ತು ಸಂಜೆ 7ಕ್ಕೆ.
ಟಿಕೆಟ್ : 9845163380

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ : tv9kannadadigital@gmail.com

ಇದನ್ನೂ ಓದಿ : Theatre: ಅಂಕಪರದೆ; ವೈಚಾರಿಕನು ಭಾವುಕನೊಳಗೆ, ಭಾವುಕನು ವೈಚಾರಿಕನೊಳಗೆ ಕುಳಿತು ತಳಮಳಿಸುವ ಹೊತ್ತಿನಲ್ಲಿ

ಇದನ್ನೂ ಓದಿ : Theatre: ಅಂಕಪರದೆ; ನಮ್ಮ ಕ್ಯಾಂಟೀನ್ ದಾಮು ಪೋಡಿ ತಗೊಂಡು ಕೆಂಡೋನಿಯಾಕ್ಕೆ ಹೋದಮೇಲೆ ಏನಾಯ್ತಂತೆ?

Published On - 3:37 pm, Thu, 10 March 22